ಬುಧವಾರ, ಅಕ್ಟೋಬರ್ 17, 2018

ಬದಲಾವಣೆಯ ಹಾದಿಯಲ್ಲಿ ಟೀವಿಯ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಎಂದಾಗ ಮೊಬೈಲ್ ಹಾಗೂ ಕಂಪ್ಯೂಟರು ನೆನಪಾಗುವಷ್ಟು ಬೇಗ ಟೀವಿ ನೆನಪಾಗುವುದಿಲ್ಲ, ನಿಜ. ಆದರೂ ನಮಗೆ ವಿಶೇಷ ಅನುಬಂಧವಿರುವ ತಂತ್ರಜ್ಞಾನದ ಸವಲತ್ತುಗಳ ಪೈಕಿ ಅದಕ್ಕೆ ಮಹತ್ವದ ಸ್ಥಾನವಿದೆ. ಸೋಮಾರಿಪೆಟ್ಟಿಗೆ ಎಂದು ಹೆಸರಿಟ್ಟರೂ, ಚಾನಲ್ಲುಗಳನ್ನು-ಕಾರ್ಯಕ್ರಮಗಳನ್ನು ಬೇಕಾದಷ್ಟು ಟೀಕಿಸಿದರೂ ನಾವು ಟೀವಿ ನೋಡುವುದನ್ನೇನೂ ಬಿಟ್ಟಿಲ್ಲ.

ಹಿಂದಿನ ಕಾಲದ ಟೀವಿಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನ ಬಹಳ ಸರಳವಾಗಿತ್ತು. ದಿವಾನಖಾನೆಯಲ್ಲೊಂದು ಟೀವಿ ಇಟ್ಟು ಅದಕ್ಕೆ ಆಂಟೆನಾ ಸಂಪರ್ಕವನ್ನು ಕಲ್ಪಿಸಿಕೊಟ್ಟರೆ, ಅಂದು ಅಸ್ತಿತ್ವದಲ್ಲಿದ್ದ ಏಕೈಕ ಚಾನೆಲ್ಲಿನ ಕಾರ್ಯಕ್ರಮಗಳನ್ನು ನೋಡುವುದು ಸಾಧ್ಯವಾಗುತ್ತಿತ್ತು.

ಆಗ ಬಳಕೆಯಾಗುತ್ತಿದ್ದದ್ದು ನೆಲದ ಮೇಲಿಂದಲೇ ಪ್ರಸಾರ ನಿರ್ವಹಿಸುವ 'ಟೆರೆಸ್ಟ್ರಿಯಲ್ ಟೆಲಿವಿಶನ್' ತಂತ್ರಜ್ಞಾನ. ರೇಡಿಯೋ ಅಲೆಗಳ ರೂಪದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳು ಪ್ರಸಾರಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲ ಟೀವಿಗಳನ್ನೂ ತಲುಪುತ್ತಿದ್ದವು. ಪ್ರಸಾರಕೇಂದ್ರ ಇದ್ದ ಬೆಂಗಳೂರಿನಲ್ಲಿ ಮೊಲದ ಕಿವಿಯಂತಹ ಪುಟ್ಟ ಆಂಟೆನಾ ಸಹಾಯದಿಂದಲೇ ಟೀವಿ ವೀಕ್ಷಣೆ ಸಾಧ್ಯವಾಗುತ್ತಿತ್ತು; ದೂರದಲ್ಲಿದ್ದ ನಾಗರಹೊಳೆಯಲ್ಲೋ ಶ್ರೀಮಂಗಲದಲ್ಲೋ ಟೀವಿ ನೋಡಬೇಕೆಂದರೆ ಮಾತ್ರ ಆಂಟೆನಾವನ್ನು ದೊಡ್ಡ ಕಂಬದ ಮೇಲಕ್ಕೆ ಏರಿಸುವುದು ಅನಿವಾರ್ಯವಾಗುತ್ತಿತ್ತು.

ಟೀವಿ ಪ್ರಸಾರ ತಂತ್ರಜ್ಞಾನ ನಿಜ ಅರ್ಥದಲ್ಲಿ ಗಗನಕ್ಕೇರಿದ್ದು ಉಪಗ್ರಹಗಳ ಬಳಕೆ ಪ್ರಾರಂಭವಾದಾಗ. ಪ್ರಸಾರಕೇಂದ್ರಗಳಿಂದ ಉಪಗ್ರಹ ತಲುಪಿದ ಸಂಕೇತಗಳು ದೊಡ್ಡ ಡಿಶ್ ಆಂಟೆನಾಗಳ ಮೂಲಕ ಕೇಬಲ್ ಟೀವಿ ಕೇಂದ್ರಗಳನ್ನೂ, ಅಲ್ಲಿಂದ ಹೊರಟ ಕೇಬಲ್ಲುಗಳ ಮೂಲಕ ಮನೆಯ ಟೀವಿಗಳನ್ನೂ ತಲುಪಿದವು. ಕೇಬಲ್ ಟೀವಿ ಇಲ್ಲದ ಸಣ್ಣ ಊರುಗಳಲ್ಲಿ ಮನೆಗೊಂದು ಡಿಶ್ ಆಂಟೆನಾ ಅಳವಡಿಸಿಕೊಂಡಿದ್ದೂ ಉಂಟು.

ಕೇಬಲ್ ಟೀವಿಯ ಜೊತೆಗೆ ಬಂದ ದೊಡ್ಡ ಬದಲಾವಣೆಯೆಂದರೆ ಟೀವಿ ವಾಹಿನಿಗಳ ಸಂಖ್ಯೆಯಲ್ಲಾದ ಹೆಚ್ಚಳ. ಒಂದೆರಡೇ ಚಾನಲ್ಲುಗಳನ್ನು ನೋಡಬೇಕಾದ ಪರಿಸ್ಥಿತಿ ಬದಲಾಗಿ ಬೇರೆಬೇರೆ ಕಾರ್ಯಕ್ರಮಗಳನ್ನು ಬೇರೆಬೇರೆ ವಾಹಿನಿಗಳಲ್ಲಿ ನೋಡಬಹುದಾದ ಆಯ್ಕೆ ಕೇಬಲ್ ಟೀವಿಯ ಮೂಲಕ ವೀಕ್ಷಕರಿಗೆ ದೊರಕಿತು. ಖಾಸಗಿ ಸಂಸ್ಥೆಗಳೂ ಈ ಉದ್ಯಮಕ್ಕೆ ಬಂದ ನಂತರ ಕೆಲವು ವಾಹಿನಿಗಳನ್ನು ಹಣ ನೀಡಿಯೇ ವೀಕ್ಷಿಸಬೇಕು ಎನ್ನುವ ವ್ಯವಸ್ಥೆಯೂ ಬಂತು.

ಬೇರೆಬೇರೆ ಪ್ರಸಾರ ಸಂಸ್ಥೆಗಳು ಬೇರೆಬೇರೆ ಉಪಗ್ರಹಗಳ ಮೂಲಕ ಪ್ರಸಾರ ಮಾಡುತ್ತಿದ್ದ ವಾಹಿನಿಗಳನ್ನೆಲ್ಲ ಕೇಬಲ್ ಟೀವಿ ವ್ಯವಸ್ಥೆಯಲ್ಲಿ ಒಟ್ಟಾಗಿ ಸೇರಿಸಿ ತಂತಿಗಳ (ಕೇಬಲ್) ಮೂಲಕ ಗ್ರಾಹಕರಿಗೆ ಒದಗಿಸಲಾಗುತ್ತಿತ್ತು. ಇದಕ್ಕಾಗಿ ಕೇಬಲ್ ಸಂಸ್ಥೆಗಳು ಹಲವು ಡಿಶ್ ಆಂಟೆನಾಗಳನ್ನು ಬಳಸುತ್ತಿದ್ದವು. ಮನೆಯಲ್ಲಿ ತಮ್ಮದೇ ಡಿಶ್ ಇಟ್ಟುಕೊಂಡವರಿಗೆ ಅವರ ಡಿಶ್ ಯಾವ ಉಪಗ್ರಹದತ್ತ ಮುಖಮಾಡಿದೆಯೋ ಆ ಉಪಗ್ರಹದ ಮೂಲಕ ಪ್ರಸಾರವಾಗುವ ವಾಹಿನಿಗಳು ಮಾತ್ರ ದೊರಕುತ್ತಿದ್ದವು. 

ಈ ಚಾನಲ್ಲುಗಳ ಪೈಕಿ ನಮಗೆ ಬೇಕಾದುದನ್ನು ಮಾತ್ರ ಆರಿಸಿಕೊಳ್ಳುವ, ಅಷ್ಟು ವಾಹಿನಿಗಳಿಗೆ ಮಾತ್ರ ಶುಲ್ಕ ಪಾವತಿಸುವ ಅವಕಾಶ ಗ್ರಾಹಕರಿಗೆ ದೊರೆತದ್ದು ಟೀವಿ ಪ್ರಸಾರ ಅನಲಾಗ್‌ನಿಂದ ಡಿಜಿಟಲ್ ರೂಪಕ್ಕೆ ಬದಲಾದ ನಂತರ. ಕೇಬಲ್ ಮೂಲಕ ಪ್ರಸಾರವಾಗುವ ಸಂಕೇತಗಳನ್ನು ಗೂಢಲಿಪಿಯಾಗಿಸಿ (ಎನ್‌ಕ್ರಿಪ್ಟ್ ಮಾಡಿ), ಆ ಕೇಬಲ್ಲಿಗೂ ಮನೆಯ ಟೀವಿಗೂ ಸಂಪರ್ಕ ಕಲ್ಪಿಸುವ ಸೆಟ್ ಟಾಪ್ ಬಾಕ್ಸ್ ಎಂಬ ಪೆಟ್ಟಿಗೆಯ ಮೂಲಕ ಅವನ್ನು ನಿಯಂತ್ರಿಸುವ ವ್ಯವಸ್ಥೆ ಈ ಮೂಲಕ ಸಾಧ್ಯವಾಯಿತು. ಇಲ್ಲಿ ನಮ್ಮ ಚಂದಾ ವಿವರಗಳನ್ನು ಪರಿಶೀಲಿಸಿ ನಮಗೆ ಬೇಕಾದ ಚಾನೆಲ್ಲುಗಳನ್ನು ಮಾತ್ರ ತೋರಿಸುವ ಕೆಲಸವನ್ನು ಸೆಟ್ ಟಾಪ್ ಬಾಕ್ಸಿನಲ್ಲಿರುವ ಸ್ಮಾರ್ಟ್ ಕಾರ್ಡು ಮಾಡುತ್ತದೆ.

ಟೆರೆಸ್ಟ್ರಿಯಲ್ ಟೆಲಿವಿಶನ್ ದಿನಗಳ ಹೋಲಿಕೆಯಲ್ಲಿ ಕೇಬಲ್ ಟೀವಿ ಹಲವು ಬದಲಾವಣೆಗಳನ್ನು ತಂದಿತು, ನಿಜ. ಆದರೆ ನಿಸ್ತಂತು (ವೈರ್‌ಲೆಸ್) ಸಂಪರ್ಕದ ಮೂಲಕ ಉಪಗ್ರಹಗಳಿಂದ ಬರುವ ಸಂಕೇತಗಳನ್ನು ತಂತಿಯ ಮೂಲಕ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳಲ್ಲಿ ನಿರ್ಮಿಸುವುದು ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿ ಬದಲಿಸಿದ್ದು ಡೈರೆಕ್ಟ್ ಟು ಹೋಮ್, ಅರ್ಥಾತ್ 'ಡಿಟಿಎಚ್' ವ್ಯವಸ್ಥೆಯ ಹೆಗ್ಗಳಿಕೆ.

ಡಿಟಿಎಚ್ ವ್ಯವಸ್ಥೆಯಲ್ಲಿ ದೊರಕುವ ಅಷ್ಟೂ ವಾಹಿನಿಗಳು ಒಂದೇ ವೇದಿಕೆಯಲ್ಲಿ, ಒಂದೇ ಸಂಸ್ಥೆಯ ಮೂಲಕ ದೊರಕುವುದರಿಂದ ಅದು ಕೆಲಸಮಾಡಲು ಒಂದೇ ಪುಟ್ಟ ಡಿಶ್ ಆಂಟೆನಾ ಸಾಕು. ಆ ಆಂಟೆನಾವನ್ನು ನಮ್ಮ ಮನೆಯಲ್ಲೇ ಸ್ಥಾಪಿಸಬಹುದಾದ್ದರಿಂದ, ಉಪಗ್ರಹದಿಂದ ರೇಡಿಯೋ ಅಲೆಗಳ ರೂಪದಲ್ಲಿ ಬರುವ ಸಂಕೇತ ನೇರವಾಗಿ ನಮ್ಮ ಮನೆಗೇ ಬರುತ್ತದೆ; ಹಾಗಾಗಿ ಬಹುದೂರಕ್ಕೆ ಕೇಬಲ್ ಎಳೆಯಬೇಕಾದ ತಾಪತ್ರಯವೂ ಇರುವುದಿಲ್ಲ. ಇಲ್ಲಿಯೂ ಸೆಟ್‌ಟಾಪ್ ಬಾಕ್ಸ್ ಹಾಗೂ ಅದರೊಳಗಿನ ಸ್ಮಾರ್ಟ್ ಕಾರ್ಡ್ ಕೆಲಸಮಾಡುವುದರಿಂದ ಬೇಕಾದ ಚಾನೆಲ್ಲುಗಳನ್ನು ಮಾತ್ರ ಆಯ್ದುಕೊಳ್ಳುವುದು, ಅದಕ್ಕೆ ಮಾತ್ರ ಶುಲ್ಕ ಪಾವತಿಸುವುದು ಸಾಧ್ಯವಾಗುತ್ತದೆ.

ಡಿಜಿಟಲ್ ರೂಪದ ಪ್ರಸಾರ ಹಲವಾರು ಸಂಕೀರ್ಣ ಅಗತ್ಯಗಳನ್ನೂ ಸುಲಭವಾಗಿ ನಿಭಾಯಿಸಬಲ್ಲದು. ಸದ್ಯ ಪ್ರಸಾರವಾಗುತ್ತಿರುವ, ಮುಂದೆ ಪ್ರಸಾರವಾಗಲಿರುವ ಕಾರ್ಯಕ್ರಮಗಳ ವಿವರಗಳನ್ನು ಟೀವಿ ಪರದೆಯ ಮೇಲೆಯೇ ಪ್ರದರ್ಶಿಸುವುದು ಇಂತಹ ಸವಲತ್ತುಗಳಲ್ಲೊಂದು. ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಧ್ವನಿಯನ್ನು ನಮ್ಮ ಆಯ್ಕೆಯ ಭಾಷೆಯಲ್ಲಿ ಕೇಳಿಸಿಕೊಳ್ಳುವುದು, ಆಮೇಲೆ ವೀಕ್ಷಿಸಲು ಅನುವಾಗುವಂತೆ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವುದೆಲ್ಲ ಇಂಥದ್ದೇ ಇನ್ನಷ್ಟು ಉದಾಹರಣೆಗಳು.

ಇಷ್ಟೆಲ್ಲ ಇದ್ದರೂ ಕಾರ್ಯಕ್ರಮಗಳನ್ನು ವೀಕ್ಷಿಸಲು ಟೀವಿಯ ಮುಂದೆಯೇ ಕುಳಿತುಕೊಳ್ಳಬೇಕಿತ್ತಲ್ಲ, ಆ ಪರಿಸ್ಥಿತಿ ಬದಲಾಗಿದ್ದು ಈಚೆಗೆ - ಮೊಬೈಲು, ಟ್ಯಾಬ್ಲೆಟ್ಟು ಸೇರಿ ಯಾವ ಪರದೆಯಲ್ಲಾದರೂ ಕಾರ್ಯಕ್ರಮಗಳನ್ನು ವೀಕ್ಷಿಸುವ ಸೌಲಭ್ಯ ದೊರೆತಮೇಲೆ. ಈ ಬದಲಾವಣೆಗೆ ಕಾರಣವಾದದ್ದು ಅಂತರಜಾಲ. ಬಹುತೇಕ ಎಲ್ಲ ಕೆಲಸಗಳಿಗೂ ಅಂತರಜಾಲವನ್ನು ಬಳಸಬಹುದಾದ ಈ ಕಾಲದಲ್ಲಿ ಟೀವಿ ಪ್ರಸಾರ ಮಾತ್ರ ಏಕೆ ಬೇರೆಯ ವ್ಯವಸ್ಥೆ ಬಳಸಬೇಕು? ಈ ಪ್ರಶ್ನೆಗೆ ಉತ್ತರರೂಪವಾಗಿ ದೊರೆತದ್ದೇ ಇಂಟರ್‌ನೆಟ್ ಪ್ರೋಟೋಕಾಲ್ ಟೆಲಿವಿಶನ್ (ಐಪಿಟಿವಿ) ಹಾಗೂ ಓವರ್ ದ ಟಾಪ್ (ಓಟಿಟಿ) ಸ್ಟ್ರೀಮಿಂಗ್ ತಂತ್ರಜ್ಞಾನಗಳು.

ಈ ಪೈಕಿ ಐಪಿಟಿವಿ ತಂತ್ರಜ್ಞಾನ ಹೆಚ್ಚು ಸಂಕೀರ್ಣ: ಇದನ್ನು ಬಳಸಲು ಪ್ರಸಾರ ಹಾಗೂ ವಿತರಣಾ ಸಂಸ್ಥೆಗಳು ತಮ್ಮದೇ ಪ್ರತ್ಯೇಕ ಜಾಲವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಓಟಿಟಿ ತಂತ್ರಜ್ಞಾನ ಹಾಗಲ್ಲ: ಇಮೇಲ್ ವಾಟ್ಸ್‌ಆಪ್ ಇತ್ಯಾದಿಗಳಿಗೆ ಬಳಸುವಂತೆ ಯಾವುದೇ ಅಂತರಜಾಲ ಸಂಪರ್ಕದ ಮೂಲಕ ವೀಕ್ಷಕರು ಟೀವಿ ಕಾರ್ಯಕ್ರಮಗಳನ್ನು ಪಡೆದುಕೊಳ್ಳಬಹುದು.

ಧಾರಾವಾಹಿ, ಸಿನಿಮಾ ಇತ್ಯಾದಿಗಳನ್ನು ವೀಕ್ಷಿಸಲು ಮೊಬೈಲ್ ಆಪ್‌ಗಳನ್ನು ಬಳಸುತ್ತೇವಲ್ಲ, ಅವೆಲ್ಲ ಬಳಸುವುದು ಓಟಿಟಿ ತಂತ್ರಜ್ಞಾನವನ್ನೇ. ನಮಗೆ ಬೇಕಾದ ಕಾರ್ಯಕ್ರಮವನ್ನು ಬೇಕಾದ ಸಮಯದಲ್ಲಿ ಬೇಕೆಂದ ಕಡೆ ನೋಡಲು ನೆರವಾಗುವ ಈ ಆಪ್‌ಗಳು ಮೊಬೈಲು-ಟ್ಯಾಬ್ಲೆಟ್ಟುಗಳನ್ನೇ ಟೀವಿಗಳಾಗಿ ಪರಿವರ್ತಿಸಿಬಿಟ್ಟಿವೆ. ಅಷ್ಟೇ ಅಲ್ಲ, ಅಂತರಜಾಲ ಸಂಪರ್ಕವಿರುವ ಸ್ಮಾರ್ಟ್ ಟೀವಿಗಳಲ್ಲೂ ಇವು ಕಾಣಿಸಿಕೊಂಡು ಸಾಂಪ್ರದಾಯಿಕ ಟೀವಿ ಪ್ರಸಾರದೊಡನೆ ಸ್ಪರ್ಧೆ ಶುರುಮಾಡಿವೆ.

ಸದ್ಯ ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಜೊತೆಗೆ ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನೂ ನಾವು ಈ ಆಪ್‌ಗಳ ಮೂಲಕ ನೋಡಬಹುದು. ಇತರ ವಾಹಿನಿಗಳ ಮಾತು ಹಾಗಿರಲಿ, ಓಟಿಟಿ ವ್ಯವಸ್ಥೆ ನಡೆಸುತ್ತಿರುವ ಹಲವು ಸಂಸ್ಥೆಗಳು ತಮ್ಮದೇ ಸ್ವಂತ ಕಾರ್ಯಕ್ರಮಗಳನ್ನೂ ರೂಪಿಸುತ್ತಿವೆ. 

ಐಪಿಟಿವಿ ತಂತ್ರಜ್ಞಾನ ಬಳಸುವ ವ್ಯವಸ್ಥೆಗಳೂ ಅಲ್ಲಲ್ಲಿ ಚಾಲ್ತಿಯಲ್ಲಿವೆ. ಸ್ಥಿರ ದೂರವಾಣಿ, ಅಂತರಜಾಲ ಹಾಗೂ ಡಿಟಿಎಚ್ ಸಂಪರ್ಕಗಳನ್ನು ಬೇರೆಬೇರೆಯಾಗಿ ಪಡೆದುಕೊಳ್ಳುವ ಬದಲಿಗೆ ಅವೆಲ್ಲವನ್ನೂ ಒಟ್ಟಾಗಿ ನೀಡುವಂತಹ ವ್ಯವಸ್ಥೆಗಳು ಸದ್ಯದಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎನ್ನುವುದು ಸದ್ಯದ ಸುದ್ದಿ. ಅತಿವೇಗದ ಅಂತರಜಾಲ ಸಂಪರ್ಕಗಳು ಚಾಲ್ತಿಗೆ ಬಂದಂತೆ, ಉಪಗ್ರಹ ಆಧಾರಿತ ಪ್ರಸಾರ ವ್ಯವಸ್ಥೆಗಳ ಸ್ಥಾನವನ್ನು ಇಂತಹ ವ್ಯವಸ್ಥೆಗಳೇ ತೆಗೆದುಕೊಳ್ಳಲಿವೆ ಎಂದು ತಜ್ಞರು ಹೇಳುತ್ತಾರೆ.

ಇಂತಹ ಹೊಸ ವ್ಯವಸ್ಥೆಗಳೆಲ್ಲ ಸೇರಿ ಟೀವಿ ವೀಕ್ಷಣೆಯ ಪರಿಕಲ್ಪನೆಯನ್ನೇ ಬದಲಿಸಲಿವೆಯೇ? ಕಾದುನೋಡಬೇಕಷ್ಟೇ.

ಅಕ್ಟೋಬರ್ ೩, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge