ವೈದ್ಯರ ಸಲಹೆಯಿಲ್ಲದೆ ಎಂದಿಗೂ ಆಂಟಿಬಯೋಟಿಕ್‌ಗಳನ್ನು ಬಳಸಬೇಡಿ
ವೈದ್ಯರ ಸಲಹೆಯಿಲ್ಲದೆ ಎಂದಿಗೂ ಆಂಟಿಬಯೋಟಿಕ್‌ಗಳನ್ನು ಬಳಸಬೇಡಿPexels / pixabay.com

ಆಂಟಿಬಯೋಟಿಕ್‌‌ಗಳನ್ನು ಬಳಸುವ ಮುನ್ನ ಇದನ್ನೊಮ್ಮೆ ಓದಿ!

ಪ್ರತಿವರ್ಷ ನವೆಂಬರ್ 18ರಿಂದ 24ರವರೆಗೆ ಆಚರಿಸಲಾಗುವ 'ವಿಶ್ವ ಜೀವಿರೋಧಕ ಅರಿವು ಸಪ್ತಾಹ'ದ ಸಂದರ್ಭದಲ್ಲೊಂದು ವಿಶೇಷ ಲೇಖನ. ಆಂಟಿಬಯೋಟಿಕ್‌ಗಳ ಬಗ್ಗೆ ತಿಳಿಯಲು ನೀವು ಇದನ್ನು ಓದಲೇಬೇಕು!
ರಂಗಣ್ಣನಿಗೆ ಕೆಟ್ಟ ಚಟಗಳೇನೂ ಇಲ್ಲ. ಆತ ಧೂಮಪಾನ, ಮದ್ಯಪಾನ ಮಾಡುವುದಿಲ್ಲ; ಊಟ ತಪ್ಪಿಸುವುದಿಲ್ಲ; ನಿದ್ರೆಗೆಡುವುದಿಲ್ಲ. ಆದರೆ ಏನೇ ಸಣ್ಣ ಆರೋಗ್ಯ ಸಮಸ್ಯೆ ಆದರೂ ಸಮೀಪದ ಔಷಧ ಮಾರುವ ಫಾರ್ಮಸಿಗೆ ಹೋಗಿ ಅವರು ಕೊಟ್ಟ ಆಂಟಿಬಯೋಟಿಕ್ (ಪ್ರತಿಜೀವಕ) ಔಷಧ ಎರಡು, ಮೂರು ದಿನ ನುಂಗುತ್ತಾನೆ. ಡಾಕ್ಟರಿಗೆ ಕೊಡುವ ಫೀಸು ಉಳಿತಾಯ ಮಾಡಿದ ತೃಪ್ತಿ ಆತನದ್ದು! ಒಮ್ಮೆ ರಂಗಣ್ಣನಿಗೆ ಜ್ವರದ ಜೊತೆಗೆ ಉಸಿರಾಟದ ಸಮಸ್ಯೆ ಆಯಿತು. ಫಾರ್ಮಸಿಯ ಔಷಧ ಎರಡು ಮೂರು ದಿನ ನುಂಗಿದರೂ ಗುಣವಾಗಲಿಲ್ಲ. ಮನಸ್ಸಿಲ್ಲದಿದ್ದರೂ ವೈದ್ಯರ ಬಳಿ ಹೋಗಬೇಕಾಯಿತು. ಪರೀಕ್ಷೆ ಮಾಡಿದ ವೈದ್ಯರು ಆತನಿಗೆ ನ್ಯುಮೋನಿಯಾ ಆಗಿದೆಯೆಂದೂ, ಆಸ್ಪತ್ರೆಗೆ ದಾಖಲಾಗಬೇಕೆಂದೂ ತಿಳಿಸಿದರು. ಆಸ್ಪತ್ರೆಯಲ್ಲಿ ರಂಗಣ್ಣನನ್ನು ಚಿಕಿತ್ಸೆ ಮಾಡುತ್ತಿದ್ದ ವೈದ್ಯರು ಕಂಗಾಲಾದರು. ಸಾಮಾನ್ಯ ಬಳಕೆಯ ಔಷಧವೂ ರಂಗಣ್ಣನ ನ್ಯುಮೋನಿಯಾ ಮೇಲೆ ಪರಿಣಾಮ ಬೀರಲಿಲ್ಲ. ಆತನ ಕಫ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಕಂಡುಬಂದಿತು. ಆದರೆ ಸದ್ಯಕ್ಕೆ ಲಭ್ಯವಿರುವ ಯಾವುದೇ ಔಷಧವೂ ಆ ಬ್ಯಾಕ್ಟೀರಿಯಾ ಮೇಲೆ ಪರಿಣಾಮಕಾರಿಯಲ್ಲ ಎಂದು ತಿಳಿಯಿತು. ಸುಮಾರು ದಿನ ರಂಗಣ್ಣ ಆಸ್ಪತ್ರೆಯಲ್ಲಿ ನರಳಿ, ಬಿಡುಗಡೆ ಆಗುವ ವೇಳೆಗೆ ಸುಸ್ತಾಗಿ ಹೈರಾಣಾಗಬೇಕಾಯಿತು. ನಮ್ಮ ಸುತ್ತಮುತ್ತ ಇಂತಹ ನೂರಾರು ರಂಗಣ್ಣಗಳು ಇರುತ್ತಾರೆ. ಅವರಿಗೆ ವೈಜ್ಞಾನಿಕ ಚಿಕಿತ್ಸೆ ಬೇಕಿಲ್ಲ. ಅರೆಬರೆ ತಿಳಿದವರಿಂದ ಎಲ್ಲದ್ದಕ್ಕೂ ಪ್ರತಿಜೀವಕ ಔಷಧ ಪಡೆದು ಬಳಸುತ್ತಾರೆ. ಅವರ ಈ ದೌರ್ಬಲ್ಯಕ್ಕೆ ಇಡೀ ಸಮಾಜ ಬೆಲೆ ತೆರಬೇಕಾಗುತ್ತದೆ. ಹೀಗೇಕೆ? ಬೇಕಾಬಿಟ್ಟಿ ಆಂಟಿಬಯೋಟಿಕ್‌ ಬಳಸುವ ಮುನ್ನ ಈ ಲೇಖನವನ್ನೊಮ್ಮೆ ಓದಿ!

ಆಂಟಿಬಯೋಟಿಕ್ (ಪ್ರತಿಜೀವಕ) ಎಂಬ ಹೆಸರನ್ನು ಕೇಳದವರೇ ಇಲ್ಲ. ಹಳ್ಳಿಗರು, ನಗರವಾಸಿಗಳು, ಮಕ್ಕಳು, ಹಿರಿಯರು, ಓದದವರು, ಅತಿವಿದ್ಯಾವಂತರು ಎಲ್ಲರೂ ಇದನ್ನು ಬಲ್ಲರು. ಕೆಮ್ಮು, ಜ್ವರ, ವಾಂತಿ-ಬೇಧಿ, ಹುಣ್ಣು, ಗಾಯ, ಹಲ್ಲುನೋವು ಇತ್ಯಾದಿ ಯಾವುದೇ ಸಮಸ್ಯೆಯಿರಲಿ, ಮುಲಾಜಿಲ್ಲದೆ ಔಷಧಿ ಅಂಗಡಿಗೆ ಹೋಗಿ ಯಾವುದೋ ಒಂದು ಆಂಟಿಬಯೋಟಿಕ್ ಸೇವಿಸಿದರೆ ಆಯ್ತು, ರೋಗ ವಾಸಿಯಾದಂತೆಯೇ. ಇಷ್ಟಕ್ಕೆಲ್ಲಾ ವೈದ್ಯರು ಏಕೆ? ಸೀರಿಯಸ್ ಆದಾಗ ನೋಡಿದರಾಯ್ತು!

ಇದೊಂದು ಯಾವುದೇ ವಿಶೇಷ ಟಿಪ್ಪಣಿ ಬೇಕಿಲ್ಲದ ಸರ್ವೇಸಾಮಾನ್ಯ ಜನಾಭಿಪ್ರಾಯ. ಇಂತಹ ಅಭಿಪ್ರಾಯ ಬಹಳಷ್ಟು ಜನರಿಗಿದೆ. ಇಂತಹವರಿಗಾಗಿ ಒಂದು ಸುದ್ದಿ.

ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆ ಮುಂತಾದ ಅನೇಕ ಸಂಘಟನೆಗಳು ಸೇರಿ, ಪ್ರತಿವರ್ಷ ನವೆಂಬರ್ 18 - 24 ರವರೆಗೆ 'ವಿಶ್ವ ಜೀವಿರೋಧಕ ಅರಿವು ಸಪ್ತಾಹ'ವನ್ನು (World Antimicrobial Awareness Week) ಆಚರಿಸುತ್ತವೆ.

ಸೂಕ್ಷಜೀವಿಗಳ ಪೈಕಿ ಮನುಷ್ಯರ ಪಾಲಿಗೆ ಅತೀ ದೊಡ್ಡ ಸಮಸ್ಯೆಯಾಗಿರುವುದು ಬ್ಯಾಕ್ಟೀರಿಯಾ. ಜೀವಿರೋಧಕ ಔಷಧಗಳ ಶೋಧ ಮೊದಲಾದದ್ದೇ ಈ ಬ್ಯಾಕ್ಟೀರಿಯಾ ಸೋಂಕಿನ ವಿರುದ್ಧ. ಬ್ಯಾಕ್ಟೀರಿಯಾ ವಿರುದ್ಧ ಚಿಕಿತ್ಸೆಗೆ ಬಳಸುವ ಔಷಧಗಳನ್ನು ಆಂಟಿಬ್ಯಾಕ್ಟೀರಿಯಲ್ ಎನ್ನಬಹುದು. ಎಲ್ಲಾ ಬಗೆಯ ರೋಗಕಾರಕ ಸೂಕ್ಷ್ಮಜೀವಿಗಳ ನಿಗ್ರಹಕ್ಕೆ ಬಳಸುವ ಔಷಧಗಳನ್ನು ಸ್ಥೂಲವಾಗಿ ಜೀವಿರೋಧಕ (ಆಂಟಿಮೈಕ್ರೋಬಿಯಲ್) ಎನ್ನಬಹುದು. ಇದರ ಒಂದು ಪ್ರಮುಖ ಭಾಗ ಪ್ರತಿಜೀವಕ, ಅಂದರೆ ಆಂಟಿಬಯಾಟಿಕ್ ಔಷಧಗಳು.

ವಿಶ್ವ ಜೀವಿರೋಧಕ ಅರಿವು ಸಪ್ತಾಹದ ಏಳೂ ದಿನ ವಿಶ್ವದ ವಿವಿಧೆಡೆ ನಡೆಯುವ ಚಿಂತನ-ಮಂಥನ, ಚರ್ಚಾಗೋಷ್ಠಿ, ಸಭೆಗಳಲ್ಲಿ ಜೀವಿರೋಧಕಗಳ, ಅದರಲ್ಲೂ ವಿಶೇಷವಾಗಿ ಪ್ರತಿಜೀವಕಗಳ ಸದ್ಬಳಕೆಗೆ ಬೇಕಾದ ಮಾರ್ಗಸೂಚಿಗಳನ್ನು ನೀಡುವುದು, ದುರ್ಬಳಕೆಯ ಆಪತ್ತು-ವಿಪತ್ತುಗಳನ್ನು ತಡೆಯಲು ನೀತಿ-ನಿಯಮಗಳನ್ನು ರೂಪಿಸುವುದು, ಮಹಾಮಾರಿ ಸೋಂಕಿನ ಸಮಸ್ಯೆ - ಸವಾಲುಗಳ ವಿಶ್ಲೇಷಣೆ ಮುಂತಾದ ಚಟುವಟಿಕೆಗಳು ನಡೆಯುತ್ತವೆ.

ಆಂಟಿಬಯೋಟಿಕ್‌ಗಳ ದುರ್ಬಳಕೆಯಿಂದ ಆಪತ್ತು ಸಂಭವಿಸಬಹುದೇ? ಆಂಟಿಬಯೋಟಿಕ್ಸ್ ನಾವೆಲ್ಲ ಅಂದುಕೊಂಡಂತೆ ಸರಳ-ಸಾಮಾನ್ಯವಲ್ಲವೇ? ಈ ಪ್ರಶ್ನೆಗಳನ್ನು ಜನರ ಮನದಲ್ಲಿ ಮೂಡಿಸುವುದು ಈ ಸಪ್ತಾಹದ ಪ್ರಮುಖ ಉದ್ದೇಶ. ಈ ವಿಷಯ ಕುರಿತು ಜಾಗತಿಕ ಮಟ್ಟದಲ್ಲಿ ಇಷ್ಟೊಂದು ವಿಚಾರವಿನಿಮಯ ನಡೆಯುವುದು, ಮುಂಜಾಗರೂಕತೆ ವಹಿಸಲಾಗುವುದು ಕೂಡ ಇದೇ ಕಾರಣದಿಂದ.

ಆಂಟಿಬಯೋಟಿಕ್‌ಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸೋಂಕುಗಳನ್ನು ಗುಣಪಡಿಸಲು ಮಾತ್ರವಲ್ಲದೇ, ಪಶುಚಿಕಿತ್ಸೆ, ಆಹಾರೋದ್ಯಮ, ಕೃಷಿ ಸಂಬಂಧಿ ಹಾಗೂ ಕೃಷಿಯೇತರ ಇತರೇ ಉದ್ಯಮಗಳಲ್ಲೂ ಬಳಸಲಾಗುತ್ತದೆ. ಆದರೆ ಆಂಟಿಬಯೋಟಿಕ್‌ಗಳು ಎಲ್ಲ ರೀತಿಯ ಸೋಂಕುರೋಗಗಳಲ್ಲಿಯೂ ಉಪಯೋಗಕ್ಕೆ ಬರುವುದಿಲ್ಲ. ಸೋಂಕುಕಾರಕ ಸೂಕ್ಷ್ಮಾಣುಜೀವಿಗಳಲ್ಲಿ ಒಂದಾದ ಬ್ಯಾಕ್ಟೀರಿಯಾಗಳ ಮೇಲೆ ಮಾತ್ರ ಇದು ಪರಿಣಾಮಕಾರಿ. ಅಲ್ಲದೇ, ಎಲ್ಲಾ ಆಂಟಿಬಯೋಟಿಕ್‌ಗಳೂ ಎಲ್ಲ ಬ್ಯಾಕ್ಟೀರಿಯಾಗಳ ಮೇಲೆ ಸಮಾನ ಪ್ರಭಾವ ಹೊಂದಿರುವುದಿಲ್ಲ.

ಸೋಂಕಿಗೆ ತಕ್ಕುದಾದ ಔಷಧಿ, ನಿಯಮಿತ ಪ್ರಮಾಣ, ನಿಯಮಿತ ಕಾಲ ಹಾಗೂ ಶಿಸ್ತುಬದ್ಧವಾಗಿ ಬಳಕೆಯಾದಲ್ಲಿ ಮಾತ್ರ ಆಂಟಿಬಯೋಟಿಕ್‌ಗಳ ನಿರೀಕ್ಷಿತ ಫಲಿತಾಂಶ ಸಾಧ್ಯ. ಅರ್ಧಂಬರ್ಧ ಸೇವನೆ; ಅಸಂಬದ್ಧ ವಿಧಾನ; ವೈದ್ಯರ ಸಲಹೆಯಿಲ್ಲದೆ ಮನಬಂದಂತೆ ಔಷಧ ಬಳಕೆ; ವೈರಸ್, ಶಿಲೀಂಧ್ರ (fungus) ಹಾಗೂ ಪರಾವಲಂಬಿ (parasites) ಸೋಂಕುಗಳಲ್ಲಿ ಆಂಟಿಬಯೋಟಿಕ್‌ಗಳನ್ನು ಬಳಸುವುದು ನಿಷ್ಪ್ರಯೋಜಕ ಮಾತ್ರವಷ್ಟೇ ಅಲ್ಲ; ಸಾಕಷ್ಟು ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಲ್ಲದು.

ವ್ಯಕ್ತಿಗತವಾಗಿ ಶರೀರದ ಮೇಲಾಗಬಹುದಾದ ಅಡ್ಡ ಪರಿಣಾಮಗಳು; ಹಣ, ಔಷಧ, ಸಂಪನ್ಮೂಲದ ನಿರರ್ಥಕತೆ ಒಂದೆಡೆಯಾದರೆ, ಸೂಕ್ಷ್ಮಾಣುಜೀವಿಗಳಲ್ಲಿ ಕ್ರಮೇಣ ಸೃಷ್ಟಿಯಾಗುವ, ವಿಕಸಿತವಾಗುವ 'ಪ್ರತಿರೋಧಕತೆ' (ರೆಸಿಸ್ಟನ್ಸ್) ಆಂಟಿಬಯೋಟಿಕ್‌ಗಳ ಪೂರ್ಣ ಪರಿಣಾಮವನ್ನೇ ನಿಷ್ಕ್ರಿಯಗೊಳಿಸಬಲ್ಲದು. ಇಂತಹ ಸೋಂಕಿನ ಚಿಕಿತ್ಸೆ ವೈದ್ಯಲೋಕಕ್ಕೆ ಸವಾಲಾಗಿಯೂ ಪರಿಣಮಿಸಬಹುದು. ಸೋಂಕಿತ ರೋಗಿ ಕಣ್ಣೆದುರೇ ನರಳಾಡುತ್ತಿದ್ದರೂ, ಎಷ್ಟೇ ನುರಿತ ವಿಶೇಷಜ್ಞರಿದ್ದರೂ, ಅತ್ಯಾಧುನಿಕ ಉಪಕರಣಗಳಿದ್ದರೂ ಪ್ರತಿರೋಧಕ ಶಕ್ತಿ ಪಡೆದ ಬ್ಯಾಕ್ಟೀರಿಯಾದ ಎದುರು ಸೋಲದೆ ಬೇರೆ ದಾರಿಯೇ ಇರುವುದಿಲ್ಲ. ಪ್ರತಿರೋಧಕ ಶಕ್ತಿ ಪಡೆದ ಇಂತಹ ಬ್ಯಾಕ್ಟೀರಿಯಾ ಕ್ರಮೇಣ ವಿಶ್ವದ ಮೂಲೆ ಮೂಲೆಗೂ ಹರಡಿದಲ್ಲಿ ಪರಿಣಾಮ ಭಯಂಕರ. ನೂರಿನ್ನೂರು ವರ್ಷಗಳ ಹಿಂದೆ ಆಂಟಿ ಬಯೋಟಿಕ್‌ಗಳು ಇಲ್ಲದ ಸಮಯದಲ್ಲಿ ಮನುಕುಲ ಯಾವ ರೀತಿ ಸಾವು-ನೋವಿಗೆ ಸಾಕ್ಷಿಯಾಗಿತ್ತೋ ಅದೇ ದುರ್ಗತಿ ಮತ್ತೆ ಮರುಕಳಿಸುವ ಎಲ್ಲ ಸಾಧ್ಯತೆಯೂ ಇರುತ್ತದೆ.

ವಿಮಾನ ಸಂಚಾರದ ಈ ಯುಗದಲ್ಲಿ ಯಾವ ದೇಶವೂ ಅಪಾಯಕ್ಕೆ ಹೊರತಲ್ಲ; ಗಂಡಾಂತರದ ಮುನ್ಸೂಚನೆಯನ್ನು ಕಡೆಗಾಣುವಂತಿಲ್ಲ. ಇದೇ ಕಾರಣಕ್ಕಾಗಿಯೇ ವಿಶ್ವ ಜೀವಿರೋಧಕ ಅರಿವು ಸಪ್ತಾಹವು ವಿಶ್ವದೆಲ್ಲೆಡೆ ಆಂಟಿಬಯೋಟಿಕ್‌ಗಳ ಸದ್ಬಳಕೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತದೆ.

ನೂರಾರು ಬ್ಯಾಕ್ಟೀರಿಯಾ ಸಂಬಂಧಿತ ಸೋಂಕುಗಳ ಚಿಕಿತ್ಸೆಗಾಗಿ ನಮ್ಮ ಬಳಿ ಇರುವ ಸುರಕ್ಷಿತ ಹಾಗೂ ಕೈಗೆಟುಕುವ ಬೆಲೆಯ ಆಂಟಿಬಯೋಟಿಕ್‌ಗಳು ಕೇವಲ ಹತ್ತಾರು ಮಾತ್ರ. ಮತ್ಯಾವುದೇ ಹೊಸ ಬಳಕೆಯೋಗ್ಯ ಆಂಟಿಬಯೋಟಿಕ್‌ಗಳನ್ನು ಸಂಶೋಧಿಸಬೇಕೆಂದರೆ ಕೋಟ್ಯಂತರ ಹಣ, ವರ್ಷಾನುಗಟ್ಟಲೆ ಪ್ರಯತ್ನ ಬೇಕಾಗುವುದಲ್ಲದೇ ಅದರ ಮಾರುಕಟ್ಟೆಯ ಬೆಲೆಯೂ ಬಹಳ ದುಬಾರಿಯಾಗುತ್ತದೆ. ಹಾಗಾಗಿ ಈಗಿರುವ ಪ್ರತಿಯೊಂದು ಆಂಟಿಬಯೋಟಿಕ್ ಕೂಡ ಅತ್ಯಮೂಲ್ಯ. ನಮ್ಮ ಬೇಜವಾಬ್ದಾರಿ, ಅಸಡ್ಡೆಯಿಂದ ಯಾವುದಾದರು ಔಷಧಿಗೆ ಸೂಕ್ಷ್ಮಾಣುಜೀವಿಗಳು ಪ್ರತಿರೋಧಕತೆ ಬೆಳೆಸಿಕೊಂಡರೆ ಆಗಬಹುದಾದ ಅನಾಹುತ ಅಷ್ಟಿಷ್ಟಲ್ಲ. ಈ ನಿಟ್ಟಿನಲ್ಲಿ ಒಂದಿಷ್ಟು ಸಂಯಮ, ಶಿಸ್ತು, ಹಾಗೂ ಕೆಲವು ಸರಳ ನಿಯಮಗಳ ಪಾಲನೆಯಿಂದ ಇಂತಹ ದುರಂತವನ್ನು ಸುಲಭವಾಗಿ ತಡೆಯಬಹುದು:

  • ವೈದ್ಯರ ಸಲಹೆಯಿಲ್ಲದೆ ಎಂದಿಗೂ ಆಂಟಿಬಯೋಟಿಕ್‌ಗಳನ್ನು ಬಳಸಬೇಡಿ.

  • ವೈದ್ಯರ ಸಲಹೆಯಂತೆ ಆಂಟಿಬಯೋಟಿಕ್ ಬಳಸುವಾಗ ಕೊಟ್ಟ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ. ಹೇಳಿದಷ್ಟು ದಿನ, ಹೇಳಿದಷ್ಟು ಸಲ ನಿಯಮಿತ ಪ್ರಮಾಣದಲ್ಲಿ ಔಷಧಿಯನ್ನು ಸೇವಿಸಿ. ಯಾವುದಾದರೂ ಸಮಸ್ಯೆಯಾದಲ್ಲಿ ವೈದ್ಯರೊಂದಿಗೆ ಸಮಾಲೋಚಿಸದೆ ಅರ್ಧದಲ್ಲೇ ಚಿಕಿತ್ಸೆಯನ್ನು ನಿಲ್ಲಿಸಬೇಡಿ.

  • ಅವಧಿ ಮೀರಿದ ಔಷಧಿಗಳ ಬಗ್ಗೆ ಎಚ್ಚರಿಕೆ ವಹಿಸಿ.

  • ಹಿಂದೆ ಎಂದೋ ನೀಡಿದ್ದ ಚಿಕಿತ್ಸೆಯನ್ನು ಪ್ರಸ್ತುತ ಸೋಂಕಿನ ಸಮಸ್ಯೆಗೆ ಬಳಸದಿರಿ. ನಿಮ್ಮ ಸ್ನೇಹಿತರು, ಬಂಧುಗಳಿಗೆ ಫಲಕಾರಿಯಾಗಿದೆಯೆಂಬ ಕಾರಣಕ್ಕಾಗಿ ಅದೇ ಔಷಧಗಳನ್ನು ಸೇವಿಸಬೇಡಿ.

ಲೇಖಕರು ಭಾರತ ಸರ್ಕಾರದ ಕೇಂದ್ರೀಯ ಆರೋಗ್ಯ ಇಲಾಖೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳು

Related Stories

No stories found.
logo
ಇಜ್ಞಾನ Ejnana
www.ejnana.com