ಅನನ್ಯ ಸಾಧನೆಯ ಎಕೆಬಿ
ಕನ್ನಡದ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಹಲವು ವೈಯಕ್ತಿಕ ಪ್ರಯತ್ನಗಳ ಮೂಲಕ ಪ್ರಾರಂಭವಾದ ಈ ಕ್ಷೇತ್ರದ ಪ್ರಾರಂಭಿಕ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯನವರಂತಹ ಮಾರ್ಗದರ್ಶಕರು ಹಾಗೂ ಬೆಳ್ಳಾವೆ ವೆಂಕಟನಾರಣಪ್ಪನವರಂತಹ ಮಾರ್ಗಪ್ರವರ್ತಕರ ನೆರವು ದೊರೆತಿತ್ತು. ಇಲ್ಲಿನ ಚಟುವಟಿಕೆಗಳಿಗೆ ವೇಗ ದೊರೆತದ್ದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದ ಕೆಲ ದಶಕಗಳಲ್ಲಿ. ಆ ಸಂದರ್ಭದಲ್ಲಿ ಪ್ರಾರಂಭವಾದ ಹಲವು ಪತ್ರಿಕೆಗಳು, ವಿಜ್ಞಾನ ಸಂವಹನಕ್ಕೆ ಸಂಬಂಧಿಸಿದ ಚಟುವಟಿಕೆಗಳು ಈ ಕ್ಷೇತ್ರದ ಫಸಲಿಗೆ ಸಮೃದ್ಧಿಯನ್ನೂ ವೈವಿಧ್ಯವನ್ನೂ ತಂದುಕೊಟ್ಟವು.
ಆ ಸಮಯದಲ್ಲಿ ಪ್ರಾರಂಭಿಸಿ ತಮ್ಮ ಜೀವಮಾನದುದ್ದಕ್ಕೂ ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರಲ್ಲೊಬ್ಬರು ಪ್ರೊ. ಅಡ್ಯನಡ್ಕ ಕೃಷ್ಣ ಭಟ್ - ವಿಜ್ಞಾನಾಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಪ್ರೀತಿಯ 'ಎಕೆಬಿ' ಸರ್. ವಿಜ್ಞಾನ ಸಾಹಿತ್ಯ ರಚನೆ ಹಾಗೂ ಸಂಪಾದನೆಯಲ್ಲಿ ಅವರದು ಅನನ್ಯ ಸಾಧನೆ. ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ೧೯೩೮ರಲ್ಲಿ ಜನಿಸಿದ ಎಕೆಬಿಯವರು ತವರು ಜಿಲ್ಲೆಯಲ್ಲೇ ಇಂಟರ್‌ಮೀಡಿಯಟ್‌ವರೆಗಿನ ಶಿಕ್ಷಣ ಮುಗಿಸಿದರು. ಭೌತವಿಜ್ಞಾನದಲ್ಲಿ ಉನ್ನತ ಶಿಕ್ಷಣವನ್ನು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದ ಅವರು ಅಧ್ಯಾಪಕರಾಗಿ ನೆಲೆನಿಂತದ್ದು ಮೂಲ್ಕಿಯ ವಿಜಯ ಕಾಲೇಜಿನಲ್ಲಿ. ವಿಜ್ಞಾನ ಅಧ್ಯಾಪನದ ಜೊತೆಜೊತೆಯಲ್ಲೇ ಎಕೆಬಿಯವರ ವಿಜ್ಞಾನ ಸಾಹಿತ್ಯ ಕೃಷಿಯೂ ಪ್ರಾರಂಭವಾಯಿತು. ೧೯೬೧ರಲ್ಲಿ ಯೂರಿ ಗಗಾರಿನ್‌ನ ಅಂತರಿಕ್ಷಯಾನ ಎಕೆಬಿಯವರ ಮೊದಲ ಕೃತಿ 'ಗಗನಯುಗ'ಕ್ಕೆ ಪ್ರೇರಣೆ ನೀಡಿತು. ಅಂದಿನಿಂದ ಪ್ರಾರಂಭಿಸಿ, ೨೦೧೬ರಲ್ಲಿ ನಮ್ಮನ್ನು ಅಗಲುವವರೆಗೂ ಅವರು ವಿಜ್ಞಾನದ ಅನೇಕ ಬರಹಗಳನ್ನು, ಪುಸ್ತಕಗಳನ್ನು ಕನ್ನಡದ ಓದುಗರಿಗೆ ಕೊಟ್ಟರು.
ವಿಜ್ಞಾನ ಸಂವಹನ ಎಂದರೆ ವಿಷಯವನ್ನು ತೀರಾ ಸರಳವಾಗಿ ಹೇಳಿ ಮುಗಿಸುವುದೋ ಬರಹವನ್ನು ಅತಿ ಕ್ಲಿಷ್ಟವಾಗಿಸಿ ಓದುಗರನ್ನು ಹೆದರಿಸುವುದೋ ಅಲ್ಲ. ಎಕೆಬಿಯವರ ಬರಹಗಳು ಅವುಗಳ ಉದ್ದೇಶಿತ ಓದುಗರ ಮಟ್ಟಕ್ಕೆ ಅತ್ಯಂತ ಸೂಕ್ತವಾಗಿರುತ್ತಿದ್ದವು. ಭಾರತ ಭಾರತಿ ಸರಣಿಯಲ್ಲಿ ಪ್ರಕಟವಾದ 'ಸಿ. ವಿ. ರಾಮನ್', ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ 'ಮನುಷ್ಯನ ಕತೆ' ಮುಂತಾದ ಪುಸ್ತಕಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೂ ಸುಲಭವಾಗಿ ಅರ್ಥವಾಗುವಂತೆ ಬರೆದ ಎಕೆಬಿಯವರು 'ನವ ವಿಜ್ಞಾನದ ಉದಯ' ಕೃತಿಯಲ್ಲಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಕಟಿಸುವ 'ವಿಜ್ಞಾನ ಲೋಕ'ದ ಸಂಚಿಕೆಗಳಲ್ಲಿ ಅತಿಕ್ಲಿಷ್ಟವೆನಿಸುವ ಪರಿಕಲ್ಪನೆಗಳನ್ನೂ ವಿವರಿಸಿದರು. "ಭೂಮಿ ಬಾನುಗಳ ಹರವಿನಲಿ, ಹನಿಮಣಿಗಳ ಚೆಲ್ಲಾಟದಲಿ ಕನ್ನಡ ಕೂಸೇ ಓಲಾಡು, ಅರಿವಿನ ಜಗವನು ಜಾಲಾಡು" ಎಂದು ಮಕ್ಕಳಿಗೆ ಹೇಳಿದ ಎಕೆಬಿ, ಪದವಿ ಮಟ್ಟದ ಪಠ್ಯಪುಸ್ತಕಗಳಲ್ಲಿ ನೇರವಾಗಿ ಬಳಸಬಹುದಾದಂತಹ ಪ್ರೌಢ ಪ್ರಬಂಧಗಳನ್ನೂ ಬರೆದರು ಎನ್ನುವುದು ಅವರ ಬರವಣಿಗೆಯ ಶಕ್ತಿಗೆ ಸಾಕ್ಷಿ.
ಭೌತವಿಜ್ಞಾನ ಎಕೆಬಿಯವರ ಪರಿಣತಿಯ ಕ್ಷೇತ್ರ. ಅವರ ಬರಹಗಳಲ್ಲಿ ಭೌತವಿಜ್ಞಾನಕ್ಕೆ ಸಂಬಂಧಪಟ್ಟವು ಜಾಸ್ತಿ ಎನ್ನಬಹುದಾದರೂ ಅವರು ವಿಜ್ಞಾನದ ಇನ್ನುಳಿದ ಕ್ಷೇತ್ರಗಳನ್ನು ಕುರಿತೂ ಸಾಕಷ್ಟು ಬರೆದಿದ್ದಾರೆ. ಲೇಖನಗಳನ್ನು ಬರೆದಿದ್ದಷ್ಟೇ ಅಲ್ಲ, ಅವರು 'ಜ್ಞಾನಗಂಗೋತ್ರಿ' ಕಿರಿಯರ ವಿಶ್ವಕೋಶದ ವಿಜ್ಞಾನ ಸಂಪುಟಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಈ ಸಂಪುಟಗಳಿಗೆಂದು ಅವರು ಬರೆದ ಸಮೀಕ್ಷೆಗಳೇ ಪ್ರತಿಯೊಂದೂ ಪ್ರತ್ಯೇಕ ಪುಸ್ತಕವಾಗುವಷ್ಟು ದೊಡ್ಡದು - ಗಾತ್ರದಲ್ಲೂ, ವಿಷಯವ್ಯಾಪ್ತಿಯಲ್ಲೂ.
'ಜ್ಞಾನಗಂಗೋತ್ರಿ'ಯ ವಿಜ್ಞಾನ ಸಂಪುಟಗಳ ಸಂಪಾದಕರಾಗಿ ಎಕೆಬಿಯವರ ಸಾಧನೆ ಅನನ್ಯವಾದದ್ದು. ವಿಷಯಪರಿಣತರ ಜೊತೆಗಿನ ಸಂವಾದ ಹಾಗೂ ಸತತ ಅಧ್ಯಯನಗಳ ಮೂಲಕ ಅವರು ತಮ್ಮ ಪರಿಣತಿಯಾಚೆಗಿನ ಕ್ಷೇತ್ರಗಳಲ್ಲೂ ಉತ್ತಮ ಲೇಖನಗಳು ರೂಪುಗೊಳ್ಳಲು ಕಾರಣರಾದರು. ಅಂದಹಾಗೆ ಎಕೆಬಿಯವರು ಸಂಪಾದಕರಾಗಿದ್ದದ್ದು ಜ್ಞಾನ ಗಂಗೋತ್ರಿಯಲ್ಲಿ ಮಾತ್ರವೇ ಅಲ್ಲ. ೧೯೬೦ರ ದಶಕದಲ್ಲಿ ಪ್ರಾರಂಭವಾದ 'ವಿಜ್ಞಾನ ಲೋಕ' ಹಾಗೂ ಆನಂತರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 'ಬಾಲವಿಜ್ಞಾನ' ಸಂಪಾದಕ ಮಂಡಲಿಗಳಲ್ಲಿಯೂ ಅವರು ಸುದೀರ್ಘ ಕಾಲ ಸೇವೆಸಲ್ಲಿಸಿದರು.
ತಮ್ಮ ಓದುಗರ ಅಗತ್ಯಗಳ ಬಗ್ಗೆ ಎಕೆಬಿಯವರಿಗೆ ಅಪಾರವಾದ ಕಾಳಜಿಯಿತ್ತು. "ಪ್ರಶ್ನಿಸುವವರು ನಿಜವಾಗಿ ಎಂಥ ಸಂಶಯವನ್ನು ತಾಳಿ ಪ್ರಶ್ನಿಸುತ್ತಾರೆ ಎಂದು ತಿಳಿಯುವುದಕ್ಕೂ ಕೆಲವೊಮ್ಮೆ ಚಿಂತಿಸಬೇಕಾಗುತ್ತದೆ. ಏಕೆಂದರೆ ಬರೆಯುವ ವಾಕ್ಯಗಳು ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗದಿರುವುದುಂಟು," ಎಂದು ಅವರು ಒಂದುಕಡೆ ಹೇಳಿದ್ದರು. ಹೀಗಾಗಿಯೇ ಅವರು ತಮ್ಮ ಓದುಗರಿಗೆ ಉಪಯುಕ್ತವೆನಿಸುವಂತಹ ಮಾಹಿತಿಯನ್ನು ಕೊಡಲು ಅನೇಕ ಪ್ರಯೋಗಗಳನ್ನು ಮಾಡಿದ್ದರು. ಸಮೂಹ ಮಾಧ್ಯಮಗಳ ವ್ಯಾಪ್ತಿ ಇಂದಿನಷ್ಟು ಇರದಿದ್ದ ದಿನಗಳಲ್ಲಿ ಅವರು ಬಾಲವಿಜ್ಞಾನದಲ್ಲಿ ಬರೆಯುತ್ತಿದ್ದ 'ವಿಜ್ಞಾನ ವಾರ್ತೆ'ಯಂತಹ ಅಂಕಣಗಳು ಓದುಗರ ಎದುರಿಗೆ ಹೊಸ ಪ್ರಪಂಚವನ್ನೇ ತೆರೆದಿಡುತ್ತಿದ್ದವು.
ಎಕೆಬಿಯವರು ವಿಜ್ಞಾನ ಸಂಘಟನೆಗಳು ಹಾಗೂ ಪತ್ರಿಕೆಗಳ ಜವಾಬ್ದಾರಿಯನ್ನು ಸುದೀರ್ಘಕಾಲ ಹೊತ್ತವರು. ಇಂತಹ ಜವಾಬ್ದಾರಿಗಳನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದರೆ ಅವರಿಂದ ಇನ್ನೂ ಮಹತ್ತರವಾದ ಕೊಡುಗೆಗಳು ಬರಬಹುದಿತ್ತು ಎನ್ನುವುದು ಅವರ ಆಪ್ತರು ಹಾಗೂ ಅಭಿಮಾನಿಗಳ ಅನಿಸಿಕೆ. ಹಿರಿಯ ವಿಜ್ಞಾನ ಸಂವಹನಕಾರರಾದ ಜಿ. ಟಿ. ನಾರಾಯಣರಾಯರು ಇದೇ ಅಭಿಪ್ರಾಯ ವ್ಯಕ್ತಪಡಿಸಿದಾಗ ಎಕೆಬಿಯವರು ಪ್ರತಿಕ್ರಿಯೆ ಕೊಟ್ಟಿದ್ದು ಹೀಗೆ - "ವೈಯಕ್ತಿಕವಾಗಿ ನಾನು ಮಹತ್ತ್ವಾಕಾಂಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ವಿಜ್ಞಾನ ಜನಪ್ರಿಯಕರಣ - ಅದು ಬರಹವೇ ಆಗಲಿ, ಕ್ಷೇತ್ರಕಾರ್ಯವೇ ಆಗಲಿ - ನನಗೆ ಉಲ್ಲಾಸಕೊಟ್ಟಾಗಲೆಲ್ಲ ತೃಪ್ತಿ ಪಡುತ್ತಿದ್ದೆ." ಎಕೆಬಿಯವರು ಇದ್ದದ್ದೇ ಹೀಗೆ!
ಹಿರಿಯರು ಕಿರಿಯರೆಂಬ ಭೇದವಿಲ್ಲದೆ ವಿಜ್ಞಾನ ಸಂವಹನದಲ್ಲಿ ಆಸಕ್ತಿಯಿದ್ದ ಎಲ್ಲರಿಗೂ ಎಕೆಬಿಯವರ ಮಾರ್ಗದರ್ಶನ ಧಾರಾಳವಾಗಿ ಸಿಗುತ್ತಿತ್ತು. ಪತ್ರ - ದೂರವಾಣಿ - ಇಮೇಲ್ ಮುಂತಾದವುಗಳ ಮೂಲಕ ಬಹಳ ತಾಳ್ಮೆಯಿಂದ ಮಾರ್ಗದರ್ಶನ ಮಾಡುತ್ತಿದ್ದದ್ದು ಮಾತ್ರವೇ ಅಲ್ಲ, ತಮ್ಮ ಲೇಖನಗಳು ಹಾಗೂ ಭಾಷಣಗಳ ಮೂಲಕವೂ ಅವರು ಸಂವಹನಕಾರರಿಗೆ ಮಹತ್ವಪೂರ್ಣ ಸಲಹೆಗಳನ್ನು ಕೊಟ್ಟಿದ್ದಾರೆ. ಭಾಷೆಯ ಬಳಕೆ ಹಾಗೂ ಲೇಖನಗಳ ಸಂಪಾದನೆಯ ಕುರಿತು ಅವರ ಬರಹಗಳು ನಿಜಕ್ಕೂ ಅಮೂಲ್ಯವಾದ ಆಕರ ಸಾಮಗ್ರಿಗಳು.
ಅಡ್ಯನಡ್ಕ ಕೃಷ್ಣ ಭಟ್ ಆಯ್ದ ಬರಹಗಳು
ಸಂಪಾದಕರು: ಟಿ. ಜಿ. ಶ್ರೀನಿಧಿ
ಪ್ರಕಾಶಕರು: ವಿಜ್ಞಾನ್ ಪ್ರಸಾರ್, ನವದೆಹಲಿ
124 ಪುಟಗಳು, ಬೆಲೆ ರೂ. 120