ವಿಜ್ಞಾನಲೋಕ
ವಿಜ್ಞಾನಲೋಕejnana.com

ವಿಜ್ಞಾನ ಜಗತ್ತನ್ನು ಕನ್ನಡದಲ್ಲಿ ತೆರೆದಿಟ್ಟ 'ವಿಜ್ಞಾನಲೋಕ'

"ಉತ್ತಮ ವಿಜ್ಞಾನ ಶಿಕ್ಷಣದಿಂದ ಸಮೃದ್ಧ, ಸಾರಸ್ವತ ಭಾರತದ ನಿರ್ಮಾಣವೇ ನಮ್ಮ ಗುರಿ" ಎನ್ನುವ ಆಶಯ ವಿಜ್ಞಾನಲೋಕದ ಪ್ರತಿ ಸಂಚಿಕೆಯಲ್ಲಿಯೂ ಮುದ್ರಿತವಾಗಿರುತ್ತಿತ್ತು.

ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಸಾಕಷ್ಟಿಲ್ಲ ಎನ್ನುವುದು ಬಹುವರ್ಷಗಳ ಕೊರಗು. ಇಂದಿಗೆ ನೂರು ವರ್ಷಗಳ ಹಿಂದೆ ಬೆಳ್ಳಾವೆ ವೆಂಕಟನಾರಣಪ್ಪನವರು 'ವಿಜ್ಞಾನ' ಪತ್ರಿಕೆ ಪ್ರಾರಂಭಿಸಿದ ಕಾಲದಲ್ಲಿದ್ದ ಈ ಪರಿಸ್ಥಿತಿ ೧೯೬೦ರ ದಶಕದಲ್ಲೂ ಹೆಚ್ಚು ಬದಲಾಗಿರಲಿಲ್ಲ.

ಇಂತಹ ಪರಿಸ್ಥಿತಿ ಇದ್ದಾಗ, ೧೯೬೬ರಲ್ಲಿ, ದಕ್ಷಿಣ ಕನ್ನಡದ ಸುರತ್ಕಲ್‌ನ ಶ್ರೀನಿವಾಸನಗರದಲ್ಲಿ 'ವಿಜ್ಞಾನ ಸಂಘ' ಪ್ರಾರಂಭವಾಯಿತು. ವಿಜ್ಞಾನ ಪ್ರಸಾರದ ಕಾರ್ಯ ಹೆಚ್ಚು ಸಮರ್ಥವಾಗಿ ನಡೆಯಬೇಕು ಎಂಬ ವಿಚಾರದಿಂದ ಪ್ರೇರಿತರಾದ ಕೆಲ ಅಧ್ಯಾಪಕರು ಕಟ್ಟಿದ ಈ ಸಂಘಕ್ಕೆ ಶಿವರಾಮ ಕಾರಂತರ ಪ್ರೋತ್ಸಾಹವೂ ಇತ್ತು. ಮುಂದೆ 'ವಿಜ್ಞಾನ ಪ್ರತಿಷ್ಠಾನ'ವೆಂದು ಹೆಸರಾದ ಈ ಸಂಸ್ಥೆಯ ಕಾರ್ಯದರ್ಶಿಗಳಾಗಿದ್ದವರು ಸುರತ್ಕಲ್‌ನ ಕೆ.ಆರ್.ಇ.ಸಿ.ಯಲ್ಲಿ ಪ್ರಾಧ್ಯಾಪಕರಾಗಿದ್ದ ಪಾದೇಕಲ್ಲು ದೇವರಾಯರು. ವಿಜ್ಞಾನದ ವಿವಿಧ ಕ್ಷೇತ್ರಗಳ ಬಗ್ಗೆ, ವಿವಿಧ ಮಟ್ಟಗಳಲ್ಲಿರುವ ಓದುಗರಿಗೆ ಸೂಕ್ತವೆನಿಸುವ ಲೇಖನಗಳಿರುತ್ತಿದ್ದ 'ವಿಜ್ಞಾನಲೋಕ' ಎಂಬ ಪತ್ರಿಕೆಯನ್ನು ಸತತವಾಗಿ ಒಂದು ದಶಕಕ್ಕೂ ಹೆಚ್ಚಿನ ಕಾಲ ಪ್ರಕಟಿಸಿದ್ದು ಈ ಸಂಘದ ವಿಶಿಷ್ಟ ಸಾಧನೆ.

ಕನ್ನಡದ ಅಗ್ರಗಣ್ಯ ವಿಜ್ಞಾನ ಸಂವಹನಕಾರರಲ್ಲೊಬ್ಬರಾದ ಅಡ್ಯನಡ್ಕ ಕೃಷ್ಣಭಟ್ ಅವರು ಈ ಪತ್ರಿಕೆಯ ಮೊದಲ ಸಂಪಾದಕರಾಗಿ ಸೇವೆಸಲ್ಲಿಸಿದರು. ಇಂದಿಗೆ ೫೫ ವರ್ಷಗಳ ಹಿಂದೆ, ಅಕ್ಟೋಬರ್ ೧೯೬೬ರಲ್ಲಿ ಪ್ರಕಟವಾದ ಮೊದಲ ಸಂಚಿಕೆಯಲ್ಲಿ ಅವರು ವಿಜ್ಞಾನಲೋಕವನ್ನು "ನಮ್ಮ ಮಕ್ಕಳು, ನಮ್ಮ ಜನ ತಮಗೆ ಸಹಜವಾದ ವೈಜ್ಞಾನಿಕ ಪರಿಸರದಲ್ಲಿ ಬದುಕಿ ಬೆಳೆಯಬೇಕು ಎಂಬ ಆಶಯದ ದಿಸೆಯಲ್ಲಿ ಇಟ್ಟ ಒಂದು ಹೆಜ್ಜೆ"ಯೆಂದು ಕರೆದಿದ್ದರು. "ಉತ್ತಮ ವಿಜ್ಞಾನ ಶಿಕ್ಷಣದಿಂದ ಸಮೃದ್ಧ, ಸಾರಸ್ವತ ಭಾರತದ ನಿರ್ಮಾಣವೇ ನಮ್ಮ ಗುರಿ" ಎನ್ನುವ ಆಶಯ ವಿಜ್ಞಾನಲೋಕದ ಪ್ರತಿ ಸಂಚಿಕೆಯಲ್ಲಿಯೂ ಮುದ್ರಿತವಾಗಿರುತ್ತಿತ್ತು.

ವಿಜ್ಞಾನಲೋಕ, ತನ್ನ ಈ ಆಶಯಕ್ಕೆ ಪೂರಕವಾದ ಬರಹಗಳನ್ನೇ ಪ್ರಕಟಿಸುತ್ತಿತ್ತು. ವಿಜ್ಞಾನದ ವಿವಿಧ ಕ್ಷೇತ್ರಗಳ ಬಗ್ಗೆ ಅಲ್ಲಿ ಲೇಖನಗಳಿರುತ್ತಿದ್ದವು. 'ವಿಜ್ಞಾನಿ', 'ವಿಜ್ಞಾನ ದೇಗುಲ', 'ವಿಜ್ಞಾನದ ಮುನ್ನಡೆ' ಮುಂತಾದ ಸ್ಥಿರ ಶೀರ್ಷಿಕೆಗಳೂ ಇದ್ದವು. ಕಲಿಕೆಯ ಮಾಧ್ಯಮ ಬದಲಾಗುವ ಸಂದರ್ಭದಲ್ಲಿ ಹೈಸ್ಕೂಲಿನಿಂದ ಕಾಲೇಜಿಗೆ ಹೋದ ಅಥವಾ ಹೋಗಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಇಂಗ್ಲಿಷ್ ಲೇಖನಗಳನ್ನೂ ಪ್ರಕಟಿಸಲಾಗುತ್ತಿತ್ತು. ಲೇಖನಗಳಲ್ಲಿ ಉಪಯೋಗಿಸಿದ ಮುಖ್ಯ ಶಬ್ದಗಳ ಅರ್ಥವನ್ನು ಆಯಾ ಸಂಚಿಕೆಯ ಕೊನೆಯಲ್ಲೇ ಕೊಡಲಾಗುತ್ತಿತ್ತು. ಓದುಗರ ಸಂಶಯಗಳನ್ನು ತಿಳಿಸಿದ ಪತ್ರಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗುತ್ತಿತ್ತು. ಅಷ್ಟೇ ಅಲ್ಲ, ಟೀಕೆ-ಟಿಪ್ಪಣಿಗಳಿಗೂ ಸ್ವಾಗತವಿತ್ತು. "ಸಂವಹನವೇ ನಮ್ಮ ಮುಖ್ಯ ಉದ್ದೇಶವಾದ್ದರಿಂದ ಸಾಮಾನ್ಯ ಬಳಕೆಯ ಕನ್ನಡದಲ್ಲಿ ನಿರೂಪಣೆ ಇರುತ್ತಿತ್ತು. ಪಾರಿಭಾಷಿಕ ಶಬ್ದಗಳನ್ನು ಉಪಯೋಗಿಸುವಾಗ ಆವರಣದಲ್ಲಿ ಇಂಗ್ಲಿಷ್ ಶಬ್ದಗಳನ್ನು ಕೊಡುತ್ತಿದ್ದೆವು," ಎಂದು ಅಡ್ಯನಡ್ಕ ಕೃಷ್ಣಭಟ್ ಅವರು ತಮ್ಮ ಬರಹವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ವಿಜ್ಞಾನಲೋಕ ಪ್ರಾರಂಭವಾಗಿದ್ದು ತ್ರೈಮಾಸಿಕ ಪತ್ರಿಕೆಯಾಗಿ. "ಲೇಖಕರ, ಶಿಕ್ಷಣ ಸಂಸ್ಥೆಗಳ ಹಾಗೂ ಓದುಗರ ಸಹಕಾರದಿಂದ ಪತ್ರಿಕೆಯ ಪುಟಸಂಖ್ಯೆ ಬೆಳೆದಾಗ, ತ್ರೈಮಾಸಿಕದಿಂದ ಮಾಸಿಕವಾಗಿ ಪರಿವರ್ತನೆಗೊಂಡಾಗ ಇದರ ಅಸ್ತಿತ್ವಕ್ಕೆ ಹೆಚ್ಚಿನ ಅರ್ಥ ಬರಬಹುದು," ಎಂದು ಅಡ್ಯನಡ್ಕ ಕೃಷ್ಣಭಟ್ ಅವರು ತಮ್ಮ ಮೊದಲ ಸಂಪಾದಕೀಯದಲ್ಲಿ ಹೇಳಿದ್ದರು. ವಿಜ್ಞಾನಲೋಕ ತಂಡದ ಪ್ರಯತ್ನಗಳಿಂದಾಗಿ ಅದು ೧೯೬೮ರಲ್ಲಿ ಮಾಸಿಕವಾಗಿ ಬದಲಾಯಿತು. ೧೯೭೦ರಲ್ಲಿ ಅಡ್ಯನಡ್ಕ ಕೃಷ್ಣಭಟ್ ಅವರು 'ಜ್ಞಾನಗಂಗೋತ್ರಿ' ಕಿರಿಯರ ವಿಶ್ವಕೋಶದ ಸಹಸಂಪಾದಕರಾಗಿ ನಿಯೋಜಿತರಾದಾಗ, ವಿಜಯಕುಮಾರ್ ಶಾಸ್ತ್ರಿಯವರು ವಿಜ್ಞಾನಲೋಕದ ಸಂಪಾದಕರಾದರು. ಆನಂತರ, ಐ. ವಾಸುದೇವರಾಯರು ಹಾಗೂ ಪಾ. ದೇವರಾಯರು ಕೂಡ ವಿಜ್ಞಾನಲೋಕದ ಸಂಪಾದಕರಾಗಿ ಕೆಲಸಮಾಡಿದರು. ಜ್ಞಾನಗಂಗೋತ್ರಿಯ ಜವಾಬ್ದಾರಿ ಮುಗಿಸಿದ ಮೇಲೆ ಅಡ್ಯನಡ್ಕ ಕೃಷ್ಣಭಟ್ ಅವರೂ ವಿಜ್ಞಾನಲೋಕದ ಸಂಪಾದಕರಾಗಿ ಮರಳಿದರು.

ನವದೆಹಲಿಯ ಭಾರತೀಯ ವಿಜ್ಞಾನ ಪತ್ರಿಕಾ ಸಮಿತಿಯ ಸದಸ್ಯತ್ವ ಪಡೆದುಕೊಂಡಿದ್ದು ವಿಜ್ಞಾನಲೋಕದ ಇನ್ನೊಂದು ಹೆಗ್ಗಳಿಕೆ. ಮುಂದೆ, ೧೯೭೬ರಲ್ಲಿ ಸಿಎಸ್‌ಐಆರ್ ನೇಮಿಸಿದ ಅಖಿಲ ಭಾರತ ಭಾರತೀಯ ಭಾಷಾ ವಿಜ್ಞಾನ ಪತ್ರಿಕೆಗಳ ತಜ್ಞರ ಸಮಿತಿಯಲ್ಲಿ ವಿಜ್ಞಾನಲೋಕ ಸಂಪಾದಕ ಸಮಿತಿಯ ಪಾ. ದೇವರಾಯರೂ ಸದಸ್ಯರಾಗಿದ್ದರು.

ವಿಜ್ಞಾನಲೋಕದ ಮೊದಲ ಕೆಲ ಸಂಚಿಕೆಗಳಲ್ಲಿ ಹೆಚ್ಚಿನ ಬರಹಗಳನ್ನು ವಿಜ್ಞಾನ ಸಂಘದ ಸದಸ್ಯರೇ ಬರೆದಿದ್ದರು, ವಿದೇಶೀ ಲೇಖಕರ ಬರಹಗಳ ಅನುವಾದವನ್ನೂ ಪ್ರಕಟಿಸಿದ್ದರು. ಅದರ ಜೊತೆಗೆ ಹೊಸ ಲೇಖಕರಿಂದ - ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಂದ - ಲೇಖನಗಳನ್ನು ಬರೆಸುವ ಪ್ರಯತ್ನಗಳನ್ನೂ ವಿಜ್ಞಾನಲೋಕ ಮಾಡಿತ್ತು. ಈ ಪ್ರಯತ್ನಗಳ ಅಂಗವಾಗಿ ಅದು ಅನೇಕ ವೈಜ್ಞಾನಿಕ ಲೇಖನ ಸ್ಪರ್ಧೆಗಳನ್ನು ಆಯೋಜಿಸಿತ್ತು. ಉತ್ತಮ ಲೇಖಕರಿಗೆ ಬಹುಮಾನದ ಜೊತೆಗೆ ತಮ್ಮ ಬರಹವನ್ನು ವಿಜ್ಞಾನಲೋಕದಲ್ಲಿ ನೋಡುವ ಅವಕಾಶವೂ ಸಿಗುತ್ತಿತ್ತು!

ವಿಜ್ಞಾನ ಸಂವಹನದಲ್ಲಿ ಚಿತ್ರಗಳ ಮಹತ್ವವನ್ನು ಮನಗಂಡಿದ್ದ ವಿಜ್ಞಾನಲೋಕ ಪತ್ರಿಕೆ, ಮೊದಲಿನಿಂದಲೂ ಸಾಕಷ್ಟು ಚಿತ್ರಗಳನ್ನು - ಕೆಲವೊಮ್ಮೆ ಬಣ್ಣದಲ್ಲೂ - ಪ್ರಕಟಿಸುತ್ತಿತ್ತು. ಬ್ಲಾಕ್ ತಯಾರಿಸಿ ಮುದ್ರಿಸುವ ಖರ್ಚು ಹೆಚ್ಚಿದ್ದರೂ ಚಿತ್ರಗಳಿಗೆ ನೀಡುತ್ತಿದ್ದ ಮಹತ್ತ್ವ ಮಾತ್ರ ಕಡಿಮೆಯಾಗಲಿಲ್ಲ. ವಿದ್ಯಾರ್ಥಿಗಳಿಗೆ ವಿಜ್ಞಾನ ಕುರಿತ ಮಾಹಿತಿ ಹೆಚ್ಚುಹೆಚ್ಚಾಗಿ ಸಿಗಬೇಕೆನ್ನುವ ಉದ್ದೇಶದಿಂದ ೧೯೭೫ ಅಕ್ಟೋಬರ್ ತಿಂಗಳಿನಿಂದ ವಿಜ್ಞಾನಲೋಕದಲ್ಲಿ 'ವಿದ್ಯಾಲೋಕ' ಎನ್ನುವ ಹೊಸ ವಿಭಾಗವೂ ಪ್ರಾರಂಭವಾಯಿತು. 'ಅಣ್ಣ'ನೆಂಬ ಪಾತ್ರವನ್ನು ರೂಪಿಸಿ ಆತ ಬರೆದ ಪತ್ರಗಳ ಮೂಲಕ ಮಕ್ಕಳಲ್ಲಿ ವಿಜ್ಞಾನ ಕುರಿತು ಆಸಕ್ತಿ ಮೂಡಿಸಲು ಈ ಪ್ರಯೋಗದ ಮೂಲಕ ಪ್ರಯತ್ನಿಸಿದ್ದು ವಿಶೇಷ.

ಚಂದಾದಾರ ಜೊತೆಯಲ್ಲಿ ದಾನಿಗಳು ಹಾಗೂ ಜಾಹೀರಾತುದಾರರ ನೆರವನ್ನೂ ಪಡೆದು ಮುಂದುವರೆದಿದ್ದ ವಿಜ್ಞಾನಲೋಕಕ್ಕೆ ೧೯೭೫ರ ವೇಳೆಗೆ ಕರ್ನಾಟಕ ಸರಕಾರದ ಅನುದಾನ ದೊರಕಿತು. ಈ ಮೂಲಕ ಅದಕ್ಕೆ ಕೊಂಚ ಹೆಚ್ಚಿನ ಪ್ರೋತ್ಸಾಹ ಸಿಕ್ಕಂತಾದರೂ, ಆರ್ಥಿಕ ಹಾಗೂ ಮಾನವ ಸಂಪನ್ಮೂಲದ ಕೊರತೆ ಅದನ್ನು ಕಾಡುತ್ತಲೇ ಇದ್ದಂತೆ ತೋರುತ್ತದೆ. "ಕಾರ್ಯಕರ್ತರೆಲ್ಲರಿಗೂ ವರ್ಷ ಹೋದಂತೆ ಸಂಕಷ್ಟಗಳು ಹೆಚ್ಚು" ಎನ್ನುವ ಹೇಳಿಕೆಯೊಂದು ಸೆಪ್ಟೆಂಬರ್ ೧೯೭೭ರ ಸಂಪಾದಕೀಯದಲ್ಲೂ ಕಾಣಿಸಿಕೊಂಡಿತ್ತು. ತಮ್ಮ ಸಮಯವನ್ನು ವಿನಿಯೋಗಿಸುವುದು ಮಾತ್ರವಲ್ಲದೆ ಹಣಕಾಸಿನ ಹೊರೆಯನ್ನು ಕೂಡ ಕಾರ್ಯಕರ್ತರೇ ಹೊತ್ತುಕೊಳ್ಳಬೇಕಾಗಿ ಬಂದ ಸಂದರ್ಭಗಳೂ ಇದ್ದವೆಂದು ಪತ್ರಿಕೆಯ ಕಾರ್ಯಾಚರಣೆಯನ್ನು ಹತ್ತಿರದಿಂದ ಕಂಡವರು ಹೇಳುತ್ತಾರೆ. ಇಂತಹ ಸಂಕಷ್ಟಗಳು ಹೆಚ್ಚಾದುದರಿಂದಲೋ ಏನೋ ೧೯೭೮ರ ಕೊನೆಯ ವೇಳೆಗೆ ವಿಜ್ಞಾನಲೋಕದ ಪ್ರಕಟಣೆ ಸ್ಥಗಿತಗೊಂಡಿತು.

ಮಾಹಿತಿಯ ಲಭ್ಯತೆ ಇಂದಿನಷ್ಟು ಸುಲಭವಿರದಿದ್ದ ಕಾಲದಲ್ಲಿ, ತಮ್ಮದೇ ಆದ ಪೂರ್ಣಕಾಲಿಕ ವೃತ್ತಿಗಳಲ್ಲಿದ್ದ ಆಸಕ್ತರು ಇಂಥದ್ದೊಂದು ಪ್ರಯತ್ನ ಕೈಗೊಂಡು, ಅದನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಮುನ್ನಡೆಸಿದ್ದು ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದಲ್ಲಿ ನಿಜಕ್ಕೂ ಒಂದು ಮಹತ್ವದ ಮೈಲಿಗಲ್ಲು. ವಿಜ್ಞಾನಲೋಕ ಪತ್ರಿಕೆಯು ಐದು ದಶಕಗಳಷ್ಟು ಹಿಂದೆಯೇ ನಡೆಸಿದ ಅನೇಕ ಪ್ರಯೋಗಗಳು ಇಂದಿನ ವಿಜ್ಞಾನ ಪತ್ರಿಕೆಗಳಿಗೂ ಮಾದರಿಯಾಗಿ ನಿಲ್ಲಬಲ್ಲವು ಎಂದು ಹೇಳಿದರೆ, ಅದು ಖಂಡಿತಾ ಉತ್ಪ್ರೇಕ್ಷೆಯಾಗಲಾರದು.

ಅಕ್ಟೋಬರ್ ೨೦೨೧ರ 'ಕುತೂಹಲಿ' ಜಾಲಪತ್ರಿಕೆಯಲ್ಲಿ ಪ್ರಕಟವಾದ ಬರಹ. 'ವಿಜ್ಞಾನಲೋಕ'ದ ಸಂಚಿಕೆಗಳನ್ನು ಪರಾಮರ್ಶೆಗಾಗಿ ಒದಗಿಸಿದ ಪ್ರೊ. ಅಡ್ಯನಡ್ಕ ಕೃಷ್ಣಭಟ್ ಅವರ ಕುಟುಂಬಸ್ಥರಿಗೆ ನಮ್ಮ ವಿಶೇಷ ಧನ್ಯವಾದಗಳು.

Related Stories

No stories found.
logo
ಇಜ್ಞಾನ Ejnana
www.ejnana.com