ಶ್ರೀ ಕೆ. ಪಿ. ರಾಯರ ಜೊತೆಗೆ ಇಜ್ಞಾನ ಸಂಪಾದಕರ ಸೆಲ್ಫಿ!
ಶ್ರೀ ಕೆ. ಪಿ. ರಾಯರ ಜೊತೆಗೆ ಇಜ್ಞಾನ ಸಂಪಾದಕರ ಸೆಲ್ಫಿ!ejnana.com

ಕೆ. ಪಿ. ರಾವ್ @೮೪: ಕಂಪ್ಯೂಟರಿಗೆ ಕನ್ನಡ ಕಲಿಸಿದವರಿಗೆ ನಮ್ಮ ಶುಭಾಶಯಗಳು!

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ. ಪಿ. ರಾಯರಿಗೆ ಎಂಬತ್ತನಾಲ್ಕನೇ ಜನ್ಮದಿನದ ಹಾರ್ದಿಕ ಶುಭಾಶಯಗಳು!

ಕಂಪ್ಯೂಟರಿನಲ್ಲಾಗಲೀ ಮೊಬೈಲಿನಲ್ಲಾಗಲೀ ಕನ್ನಡ ಭಾಷೆಯನ್ನು ಬಳಸುವುದು ನಮಗೆ ಹೊಸ ವಿಷಯವೇನೂ ಅಲ್ಲ. ಇಂಗ್ಲಿಷನ್ನೋ ಬೇರಾವುದೋ ಭಾಷೆಯನ್ನೋ ಬಳಸಿದಷ್ಟೇ ಸರಾಗವಾಗಿ ನಾವು ಈ ಸಾಧನಗಳಲ್ಲಿ ಕನ್ನಡದಲ್ಲಿ ವ್ಯವಹರಿಸುತ್ತೇವೆ.

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಕಂಪ್ಯೂಟರಿನಲ್ಲಿ, ಮೊಬೈಲಿನಲ್ಲಿ ಕನ್ನಡವನ್ನು ಸರಾಗವಾಗಿ ಬಳಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.

ಭಾರತೀಯ ಭಾಷೆಗಳ ಮಟ್ಟಿಗೆ ಹೇಳುವುದಾದರೆ ಮುದ್ರಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳನ್ನು ತಂದದ್ದು ಕಳೆದ ಶತಮಾನದ ಉತ್ತರಾರ್ಧದ ಕೆಲ ದಶಕಗಳು. ಅಚ್ಚುಮೊಳೆಗಳನ್ನು ಜೋಡಿಸಿಯಷ್ಟೆ ಆಗುತ್ತಿದ್ದ ಮುದ್ರಣದ ಕ್ಷೇತ್ರಕ್ಕೆ ಕಂಪ್ಯೂಟರುಗಳು ಪ್ರವೇಶಿಸಿದ ಸಮಯ ಅದು.

ಭಾರತೀಯ ಲಿಪಿಗಳ ಈ ಹೊಸ ಪಯಣ ಮೊದಲಿಗೆ ಸಿಂಧೂ ಲಿಪಿಯಿಂದಲೇ ಪ್ರಾರಂಭವಾದದ್ದು ವಿಶೇಷ. ಅದು ೧೯೭೦ರ ದಶಕ, ಕೆ. ಪಿ. ರಾಯರು ಮುಂಬಯಿಯ ಟಾಟಾ ಪ್ರೆಸ್‌ನ ತಾಂತ್ರಿಕ ನಿರ್ದೇಶಕರಾಗಿದ್ದ ಸಮಯ. ಸಿಂಧೂ ಲಿಪಿ ಅಧ್ಯಯನ ಮಾಡಿ ತಮ್ಮ ಪುಸ್ತಕ ಬರೆದು ಮುಗಿಸಿದ್ದ ಶ್ರೀ ಇರಾವತಂ ಮಹಾದೇವನ್ ಅವರು ಅದರ ಮುದ್ರಣಕ್ಕಾಗಿ ಆಗ ಅಲ್ಲಿಗೆ ಬಂದಿದ್ದರು.

ಇಂಗ್ಲಿಷಿನ ಅಕ್ಷರಗಳಲ್ಲದೆ ಸಿಂಧೂ ಲಿಪಿಯನ್ನೂ ಮುದ್ರಿಸಲು ತಮ್ಮ ಯಂತ್ರಗಳನ್ನು ಸಿದ್ಧಗೊಳಿಸಬೇಕಾದ ಸವಾಲು ಕೆ. ಪಿ. ರಾಯರ ಮುಂದೆ ಬಂತು. ಅಲ್ಲಿ ಅವರ ಸತತ ಪ್ರಯತ್ನದಿಂದಾಗಿ ಕಂಪ್ಯೂಟರಿನಿಂದ ಮುದ್ರಿಸಲ್ಪಟ್ಟ ಭಾರತದ ಮೊದಲ ಲಿಪಿ ಎನ್ನುವ ವಿಶಿಷ್ಟ ಪಟ್ಟ ಸಿಂಧೂ ಲಿಪಿಗೆ ದೊರಕಿತು.

ಇದೇ ದೊಡ್ಡ ಸಾಧನೆ ಎಂದು ಸುಮ್ಮನಾಗಿದ್ದರೆ ಅಷ್ಟಕ್ಕೇ ಮುಗಿದುಹೋಗುತ್ತಿತ್ತೋ ಏನೋ. ಆದರೆ ಕೆ. ಪಿ. ರಾಯರಲ್ಲಿ ವೃತ್ತಿಯ ಕುರಿತಾದ ಆಸಕ್ತಿಯ ಜೊತೆಗೆ ಕನ್ನಡಕ್ಕೆ ಕೆಲಸ ಮಾಡುವ ಪ್ರವೃತ್ತಿಯೂ ಇತ್ತಲ್ಲ, ಹಾಗಾಗಿ ಅವರು ಸಿಂಧೂ ಲಿಪಿಗೆ ಉಪಯೋಗಿಸಿದ ವಿಧಾನವನ್ನೇ ಉಪಯೋಗಿಸಿ ಕನ್ನಡವನ್ನೂ ಮುದ್ರಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಸಿಂಧೂ ಲಿಪಿಗೆ ಉಪಯೋಗಿಸಿದ ಯಂತ್ರವನ್ನೇ ಉಪಯೋಗಿಸಿ ಕನ್ನಡವನ್ನೂ ಮುದ್ರಿಸುವಲ್ಲಿ ಯಶಸ್ವಿಯಾದರು.

ಈ ಪ್ರಯತ್ನದಲ್ಲಿ ಅವರನ್ನು ಕಾಡಿದ ಸಮಸ್ಯೆಗಳು ಹಲವಾರು. ಬೇರೆಲ್ಲ ಏಕೆ, ಇಂಗ್ಲಿಷ್ ಹಾಗೂ ಕನ್ನಡದಲ್ಲಿರುವ ಅಕ್ಷರಗಳ ಸಂಖ್ಯೆಯ ನಡುವಿನ ವ್ಯತ್ಯಾಸವೇ ಸಾಕಷ್ಟು ತೊಂದರೆಕೊಡುವ ವಿಷಯವಾಗಿತ್ತು. ಕನ್ನಡದ ಅಷ್ಟೂ ಅಕ್ಷರಗಳನ್ನು ಇಂಗ್ಲಿಷ್ ಕೀಬೋರ್ಡಿನಲ್ಲಿರುವಷ್ಟೇ ಅಕ್ಷರಗಳಲ್ಲಿ ಮೂಡಿಸಬೇಕಾದ ಅನಿವಾರ್ಯತೆಯೂ ಇತ್ತು; ತುಂಡುತುಂಡಾದ ಹಲವು ಭಾಗಗಳು ಸೇರಿ ಅಕ್ಷರ ರೂಪುಗೊಳ್ಳಬೇಕಾದ ಪರಿಸ್ಥಿತಿ, ಮೊಳೆಜೋಡಿಸುವ ಕಾಲದಲ್ಲಿ ರೂಪುಗೊಂಡದ್ದು, ಕಂಪ್ಯೂಟರ್ ಪ್ರಪಂಚದತ್ತಲೂ ಬಂದುಬಿಡುವುದರಲ್ಲಿತ್ತು.

ಯಾವ ತರ್ಕಕ್ಕೂ ನಿಲುಕದ, ನೆನಪಿಡಲೂ ಕಷ್ಟವಾದ ಇಂತಹ ವಿಚಿತ್ರ ಸನ್ನಿವೇಶವನ್ನು ಬದಲಿಸಹೊರಟವರ ಮುಂದೆ ಸುಲಭದ ದಾರಿಯೇನೂ ಇರಲಿಲ್ಲ. ಆದರೂ ಛಲಬಿಡದ ಅವರು ಭಾಷೆಯ ಉಚ್ಚಾರಣೆಯಲ್ಲಿರುವ ತರ್ಕವನ್ನೇ ಕಂಪ್ಯೂಟರಿನಲ್ಲೂ ಅಳವಡಿಸುವಲ್ಲಿ ಯಶಸ್ವಿಯಾದರು - ಇಂಗ್ಲಿಷಿನ 'k' ಕನ್ನಡದ 'ಕ' ಆಯಿತು, 'k' ಮತ್ತು 'a' ಸೇರಿ 'ಕಾ' ಆಯಿತು, 'k' ಮತ್ತು 'i' ಸೇರಿ 'ಕಿ' ಆಯಿತು!

ಈ ಹೊಸ ಕೀಲಿಮಣೆ ವಿನ್ಯಾಸದ ನೆರವಿನಿಂದ ಇಂಗ್ಲಿಷಿನ ಕೀಬೋರ್ಡಿನಲ್ಲಿರುವಷ್ಟೇ ಅಕ್ಷರಗಳಿಂದ ಕನ್ನಡವನ್ನು ಟೈಪಿಸುವುದು ಸಾಧ್ಯವಾಯಿತು; ಡಿಜಿಟಲ್ ಲೋಕದಲ್ಲಿ ಕನ್ನಡದ ಪಯಣವೂ ಪ್ರಾರಂಭವಾಯಿತು. ಅಕ್ಷರಗಳನ್ನು ಉಚ್ಚರಿಸುವ ಕ್ರಮದಂತೆಯೇ ಟೈಪಿಸಬಹುದಾದ ಈ ತರ್ಕಬದ್ಧ ಕ್ರಮದಿಂದಾಗಿ ಕೀಬೋರ್ಡ್ ವಿನ್ಯಾಸವನ್ನು ನೆನಪಿಟ್ಟುಕೊಳ್ಳುವುದು ಸುಲಭ; ಹಾಗಾಗಿ ಈ ವಿನ್ಯಾಸ ಬಹಳ ಬೇಗ ಜನಪ್ರಿಯವಾಯಿತು. ಇದೇ ವಿನ್ಯಾಸವನ್ನು ಕನ್ನಡ ಗಣಕ ಪರಿಷತ್ತು ಕೊಂಚ ಬದಲಿಸಿ ನುಡಿ ತಂತ್ರಾಂಶದಲ್ಲಿ ಅಳವಡಿಸಿಕೊಂಡಿತು. ಮುಂದೆ ಇದೇ ವಿನ್ಯಾಸ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂದು ವ್ಯಾಪಕವಾಗಿ ಬಳಕೆಗೆ ಬಂತು.

ಈ ವಿಶಿಷ್ಟ ಸಾಧನೆಯ ಮಹತ್ವವನ್ನು ಮನಗಂಡ ಇತರ ಭಾಷೆಗಳವರೂ ಇದರ ಉಪಯೋಗ ಪಡೆದುಕೊಳ್ಳಲು ಮುಂದಾದರು. ಈ ವಿನ್ಯಾಸ ಬಳಸಿ ರೂಪುಗೊಂಡ ತೆಲುಗು ಭಾಷೆಯ ಪುಸ್ತಕವೊಂದು ೧೯೮೫ರಷ್ಟು ಹಿಂದೆಯೇ ಮುದ್ರಣವೂ ಆಯಿತು.

ಅಷ್ಟೇ ಅಲ್ಲ, ಕನ್ನಡಕ್ಕೊಂದು ಕೀಬೋರ್ಡ್ ವಿನ್ಯಾಸ ರೂಪಿಸುತ್ತಿದ್ದ ಸಂದರ್ಭದಲ್ಲೇ ಕೆ. ಪಿ. ರಾಯರು ಸ್ವಂತಕ್ಕೂ ಒಂದು ಕಂಪ್ಯೂಟರ್ ಕೊಂಡು ಮನೆಯಲ್ಲಿ ಅದನ್ನು ಬಳಸಲು ಪ್ರಾರಂಭಿಸಿದರು. ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರಿನಲ್ಲಿ ಭಾರತೀಯ ಭಾಷೆಗಳನ್ನು ಮುದ್ರಿಸಲು ಪ್ರಯತ್ನಿಸಿದ್ದು ಅವರ ಮೊದಲ ಪ್ರಯೋಗವಾಗಿತ್ತು. ಈ ಪ್ರಯೋಗದ ಫಲವಾಗಿ ಹಲವು ಭಾರತೀಯ ಲಿಪಿಗಳಿಗೆ ಡಾಟ್‌ಮ್ಯಾಟ್ರಿಕ್ಸ್ ಫಾಂಟುಗಳನ್ನು ಸೃಷ್ಟಿಸುವುದು ಸಾಧ್ಯವಾಯಿತು.

ಬರಿಯ ಫಾಂಟುಗಳಷ್ಟೇ ಇದ್ದರೆ ಸಾಲುವುದಿಲ್ಲವಲ್ಲ, ಆ ಫಾಂಟುಗಳನ್ನು ಬಳಸಿ ಪಠ್ಯವನ್ನು ಸಿದ್ಧಪಡಿಸಲು ಪದಸಂಸ್ಕಾರಕ (ವರ್ಡ್‌ಪ್ರಾಸೆಸರ್) ತಂತ್ರಾಂಶವೂ ಬೇಕು. ಹಾಗೆ ಸಿದ್ಧವಾದದ್ದೇ 'ಸೇಡಿಯಾಪು' ತಂತ್ರಾಂಶ. ಸೇಡಿಯಾಪು ಕೃಷ್ಣಭಟ್ಟರು ಕೆ. ಪಿ. ರಾಯರ ಗುರುಗಳು, ಭಾಷಾವಿಜ್ಞಾನದ ಪಂಡಿತರು. ಅವರ ಬಗೆಗಿನ ಗೌರವಭಾವನೆಯಿಂದ ಕೆ. ಪಿ. ರಾಯರು ತಾವು ಸೃಷ್ಟಿಸಿದ ತಂತ್ರಾಂಶಕ್ಕೆ 'ಸೇಡಿಯಾಪು' ಎಂದೇ ಹೆಸರಿಟ್ಟರು.

೧೯೮೬ರಲ್ಲಿ, ಇನ್ನೂ ಕಂಪ್ಯೂಟರ್ ಬಳಕೆಯೇ ಅಷ್ಟೊಂದು ವ್ಯಾಪಕವಾಗಿಲ್ಲದ ಕಾಲದಲ್ಲೇ 'ಸೇಡಿಯಾಪು' ತಂತ್ರಾಂಶ ಪೂರ್ಣಗೊಂಡಿತು. ಅದರಿಂದ ಯಾವ ಲಾಭವನ್ನೂ ಅಪೇಕ್ಷಿಸದ ಶ್ರೀ ಕೆ. ಪಿ. ರಾಯರು ಅದನ್ನು ಉಚಿತವಾಗಿ ಹಂಚಿಬಿಟ್ಟರು. ಕೆ. ಪಿ. ರಾಯರ ಬಗೆಗೆ ಬರೆದಿರುವ ಲೇಖನವೊಂದರಲ್ಲಿ ಅಂಕಣಕಾರ ಶ್ರೀ ಮಹಾಲಿಂಗ ಭಟ್ ಹೇಳಿರುವ ಮಾತುಗಳನ್ನೇ ಉದ್ಧರಿಸುವುದಾದರೆ ಕೆ.ಪಿ. ರಾಯರು ಉಚಿತವಾಗಿ ಹಾರಬಿಟ್ಟಿದ್ದ ಸಾಫ್ಟ್‌ವೇರ್‌ಗೆ ಪೇಟೆಂಟೂ ಇರಲಿಲ್ಲ. ರಾಯರ ನಿರ್ಮೋಹ ನೆನೆದರೆ ಅವರೊಳಗೊಬ್ಬ ಇ-ಸಂತ ಇದ್ದಾನೋ ಅನಿಸಬೇಕು! ಯಾಕೆಂದರೆ ಆಗ ಫ್ರೀ ಸಾಫ್ಟ್‌ವೇರ್ ಚಳವಳಿ ಶುರುವಾಗಿರಲಿಲ್ಲ. ಬುದ್ಧಿವಂತರು ಅಂತರಜಾಲದಲ್ಲಿ ಹಾರಿಬರುತ್ತಿದ್ದ ಸಾಫ್ಟ್‌ವೇರನ್ನು ಹಿಡಿದು ಬೆಳೆಸಿದರು! ಭಾಷೆಗೆ ಸಂಸ್ಕೃತಿಗೆ ಹಾರಲು ಹೊಸ ರೆಕ್ಕೆಗಳು ಬಂದವು - ಸಾಮಾನ್ಯ ಜನತೆಯ ಬೆರಳಿಗೂ!

Summary

ಶ್ರೀ ಕೆ. ಪಿ. ರಾವ್ ಜೀವನ : ಸಾಧನೆ

ಜನನ: ೧೯೪೦ರ ಫೆಬ್ರುವರಿ ೨೯ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ.

ವಿದ್ಯಾಭ್ಯಾಸ: ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.

ಉದ್ಯೋಗ: ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. ೧೯೭೦ರ ದಶಕದಲ್ಲಿ ಟಾಟಾ ಪ್ರೆಸ್ ಸೇರಿದಾಗ ಅಕ್ಷರಗಳೊಡನೆ ಒಡನಾಟದ ಪ್ರಾರಂಭ. ಮುಂದೆ ಮಾನೋಟೈಪ್ ಸಂಸ್ಥೆಯ ನಿರ್ದೇಶಕರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರರಾಗಿ, ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಣೆ.

ಸಾಧನೆಗಳು: ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ. ಇದೇ ತರ್ಕ ಬಳಸಿ ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ. ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.

ಮಹತ್ವದ ಕೃತಿ: ವರ್ಣಕ

ಸಂದ ಗೌರವಗಳು: ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ. ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. ೨೦೧೩ರ ರಾಜ್ಯೋತ್ಸವ ಪ್ರಶಸ್ತಿ, ೨೦೨೧ರಲ್ಲಿ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ

ಕೆ. ಪಿ. ರಾವ್ ಅವರನ್ನು ಕುರಿತ ಪುಸ್ತಕಗಳು: 'ಕಂಪ್ಯೂಟರ್, ಕನ್ನಡ, ಕೆ. ಪಿ. ರಾವ್' (೨೦೧೩), 'ಭಾರತೀಯ ಭಾಷಾ ಗಣಕ ಪಿತಾಮಹ ನಾಡೋಜ ಕೆ. ಪಿ. ರಾವ್' (೨೦೨೦), 'ನಾಡೋಜ ಕೆ. ಪಿ. ರಾಯರ ನಾಡಿ, ನಡೆ, ನುಡಿ' (೨೦೨೦)

Related Stories

No stories found.
logo
ಇಜ್ಞಾನ Ejnana
www.ejnana.com