ಯಂತ್ರಾನುವಾದ ವ್ಯವಸ್ಥೆಗಳ ಮೂಲಕ ಯಾವುದೇ ಭಾಷೆಯ ಪಠ್ಯವನ್ನು ಬೇರೆ ಯಾವುದೇ ಭಾಷೆಗೆ ಅನುವಾದಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯ
ಯಂತ್ರಾನುವಾದ ವ್ಯವಸ್ಥೆಗಳ ಮೂಲಕ ಯಾವುದೇ ಭಾಷೆಯ ಪಠ್ಯವನ್ನು ಬೇರೆ ಯಾವುದೇ ಭಾಷೆಗೆ ಅನುವಾದಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯImage by 200 Degrees from Pixabay

ಭಾಷೆಯ ಬೆಳವಣಿಗೆಗೆ ಇರಲಿ ನಮ್ಮ ಹೊಸವರ್ಷದ ಕೊಡುಗೆ

ಯಂತ್ರಾನುವಾದ ಹಾಗೂ ಎಐ ವ್ಯವಸ್ಥೆಗಳಿಗೆ ನಮ್ಮ ಕೈಲಾದಷ್ಟು ಕನ್ನಡದ ಮಾಹಿತಿ ಸೇರಿಸುವುದಕ್ಕಾಗಿ ಕೊಂಚ ಸಮಯ ಮಾಡಿಕೊಳ್ಳಲು ಸಾಧ್ಯವಾದರೆ, ಅದು ನಿಜಕ್ಕೂ ಭಾಷೆಯ ಬೆಳವಣಿಗೆಗೆ ನಮ್ಮ ಹೊಸವರ್ಷದ ಕೊಡುಗೆಯಾಗಬಲ್ಲದು.

ಅನುವಾದ ಇಲ್ಲದಿದ್ದರೆ ನಾನು ನನ್ನ ದೇಶದ ಗಡಿಯೊಳಗೇ ಇರಬೇಕಾಗುತ್ತದೆ ಎಂದು ಇಟಾಲೊ ಕೆಲ್ವಿನೋ ಎಂಬ ಲೇಖಕ ಹೇಳಿದ್ದನಂತೆ. ಆತ ನಮ್ಮ ದೇಶದಲ್ಲೇನಾದರೂ ಇದ್ದಿದ್ದರೆ ರಾಜ್ಯದ ಗಡಿ ಎಂದು ಹೇಳಿರುತ್ತಿದ್ದನೋ ಏನೋ. ಶ್ರೀಮಂಗಲದಲ್ಲಾದರೆ ಜಿಲ್ಲೆಯ ಗಡಿ ಎಂದಿದ್ದರೂ ನಡೆಯುತ್ತಿತ್ತು: ಅಲ್ಲಿನ ಬಹುತೇಕ ವ್ಯವಹಾರಗಳು ಕೊಡವ ಭಾಷೆಯಲ್ಲಿ ನಡೆಯುತ್ತಿದ್ದವು. ಕೇರಳದ ಕಡೆ ತಿರುಗಿದರೆ ಮಲಯಾಳಂ ಕೇಳುತ್ತಿತ್ತು. ಮಂಗಳೂರಿನ ಕಡೆಯವರು ತುಳುವಿನಲ್ಲಿ, ಹುಣಸೂರಿನ ದಿಕ್ಕಿನವರು ಕನ್ನಡದಲ್ಲಿ ಮಾತನಾಡುತ್ತಿದ್ದೆವು!

ಅಲ್ಲಿನ ಆಪ್ತ ಪರಿಸರದಲ್ಲಿ ಭಾಷೆಗಳ ನಡುವಿನ ಕೊಡು-ಕೊಳ್ಳುವಿಕೆ ಬಹಳ ಸರಾಗವಾಗಿ ನಡೆಯುತ್ತಿತ್ತು. ಹಾಗಾಗಿ ಭಾಷೆಗಳ ಅರೆಬರೆ ಜ್ಞಾನವೂ ಅಂತಹ ದೊಡ್ಡ ಸಮಸ್ಯೆಯೆನ್ನಿಸುತ್ತಿರಲಿಲ್ಲ. ಯಾವುದಾದರೂ ಭಾಷೆ ಗೊತ್ತೇ ಇಲ್ಲ ಎನ್ನುವವರಿಗೂ ಅನುವಾದಕರ ಸಹಾಯ ಸುಲಭವಾಗಿ ಸಿಕ್ಕಿಬಿಡುತ್ತಿತ್ತು.

ಆದರೆ ಎಲ್ಲ ಸನ್ನಿವೇಶಗಳೂ ಇಷ್ಟು ಸರಾಗವಾಗಿರುವುದಿಲ್ಲ. ಶ್ರೀಮಂಗಲದ ಹುಡುಗ ಜರ್ಮನಿಯ ಯಾವುದೋ ಹಳ್ಳಿಗೆ ಹೋದರೆ ಅವನ ಕನ್ನಡ ಅಥವಾ ಇಂಗ್ಲಿಷನ್ನು ಜರ್ಮನ್ ಭಾಷೆಗೆ ಅನುವಾದಿಸುವುದು ಅನಿವಾರ್ಯವಾಗುತ್ತದೆ. ಲಿಪಿಯೂ ವಿಭಿನ್ನವಾಗಿರುವ ಚೀನಾದಂತಹ ದೇಶಗಳಲ್ಲಂತೂ ಅನುವಾದದ ನೆರವಿಲ್ಲದೆ ವ್ಯವಹರಿಸುವುದು ಹೆಚ್ಚೂಕಡಿಮೆ ಅಸಾಧ್ಯವೇ ಆಗಿಬಿಡುತ್ತದೆ. ಹೊರದೇಶಗಳ ಮಾತು ಹಾಗಿರಲಿ, ಹಿಂದಿಯಲ್ಲಿ ಮಾತ್ರವೇ ಇರುವ ಕೇಂದ್ರ ಸರಕಾರದ ಪ್ರಕಟಣೆ - ಅದೆಷ್ಟೇ ಮಹತ್ವದ್ದಾದರೂ - ಕನ್ನಡವನ್ನಷ್ಟೇ ಬಲ್ಲ ವ್ಯಕ್ತಿಗೆ ತಿಳಿಯುವುದೇ ಇಲ್ಲ!

ಉದಾತ್ತ ಚಿಂತನೆಗಳು ಎಲ್ಲ ದಿಕ್ಕುಗಳಿಂದಲೂ ನಮ್ಮ ಕಡೆಗೆ ಬರಲಿ ಎನ್ನುವುದು ಹಿರಿಯರ ಆಶಯ. ಎಲ್ಲ ಭಾಷೆಗಳಲ್ಲೂ ಬಂದರೆ ಇನ್ನೂ ಒಳ್ಳೆಯದೇ. ಆದರೆ ಹಾಗೆಂದ ತಕ್ಷಣ ಕೆಲವು ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. "ಎಲ್ಲ" ಭಾಷೆಗಳ ಪಟ್ಟಿಯಲ್ಲಿ ಯಾವೆಲ್ಲ ಭಾಷೆಗಳು ಸೇರಬೇಕು ಎನ್ನುವುದರಿಂದ ಮೊದಲುಗೊಂಡು ನಮ್ಮ ಮಾಹಿತಿಯನ್ನು ಆ ಎಲ್ಲ ಭಾಷೆಗಳಿಗೂ ಅನುವಾದಿಸುವುದು ಹೇಗೆ ಎನ್ನುವವರೆಗೆ ಈ ಸಮಸ್ಯೆಗಳಲ್ಲಿ ಹಲವು ವಿಧ. ಈ ಪೈಕಿ ಕೆಲ ಸಮಸ್ಯೆಗಳನ್ನು ಇಚ್ಛಾಶಕ್ತಿಯಿಂದ ಪರಿಹರಿಸಿಕೊಳ್ಳಬಹುದು, ಇನ್ನು ಕೆಲವನ್ನು ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಪರಿಹರಿಸಿಕೊಳ್ಳಬಹುದು.

ಇಚ್ಛಾಶಕ್ತಿಯನ್ನು ಎಲ್ಲಿಂದ ತರುವುದು? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಆದರೆ ಅನುವಾದಕ್ಕಾಗಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನಂತೂ ನಾವು ಬಳಸಿಕೊಳ್ಳಬಹುದು. "ಈ ಮಾಹಿತಿ ಇರುವುದು ಇದೇ ಭಾಷೆಯಲ್ಲಿ, ನಿಮಗೆ ಬೇಕಾದರೆ ತೆಗೆದುಕೊಳ್ಳಿ" ಎಂದು ನೂಕುವ ತಂತ್ರದ ಬದಲು "ಈ ಮಾಹಿತಿ ನನಗೆ ನನ್ನ ಭಾಷೆಯಲ್ಲೇ ಬೇಕು" ಎಂದು ನಾವೇ ಎಳೆದುಕೊಳ್ಳುವ ತಂತ್ರಕ್ಕೆ ಜಾಗಮಾಡಿಕೊಡುವುದು ಈ ಸವಲತ್ತುಗಳ ಹೆಚ್ಚುಗಾರಿಕೆ.

ಅನುವಾದಕ್ಕಾಗಿ ಮಾಹಿತಿ ತಂತ್ರಜ್ಞಾನದ ಸವಲತ್ತು ಎಂದ ತಕ್ಷಣ ನಮ್ಮಲ್ಲಿ ಅನೇಕರಿಗೆ ಗೂಗಲ್ ಟ್ರಾನ್ಸ್‌ಲೇಟ್ ನೆನಪಿಗೆ ಬರಬಹುದು. ಅದೊಂದು ಯಂತ್ರಾನುವಾದ (ಮಶೀನ್ ಟ್ರಾನ್ಸ್‌ಲೇಶನ್) ವ್ಯವಸ್ಥೆ. ಈಚೆಗೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದಿ ಭಾಷಣವನ್ನು ತಮಿಳಿಗೆ ಅನುವಾದಿಸಿಕೊಟ್ಟ 'ಭಾಷಿಣಿ'ಯೂ ಇಂತಹುದೇ ವ್ಯವಸ್ಥೆ. ಕೇಂದ್ರ ಸರಕಾರದ 'ಭಾರತೀಯ ಭಾಷೆಗಳಿಗೆ ತಂತ್ರಜ್ಞಾನ ಅಭಿವೃದ್ಧಿ' ಕಾರ್ಯಕ್ರಮದಡಿ ರೂಪಿಸಲಾಗಿರುವ ಈ ವ್ಯವಸ್ಥೆಯ ಪ್ರಯೋಜನವನ್ನು ಜಾಲತಾಣ ಹಾಗೂ ಮೊಬೈಲ್ ಆಪ್‌ಗಳ ಮೂಲಕ ನಾವೂ ಪಡೆದುಕೊಳ್ಳಬಹುದು (ಹೆಚ್ಚಿನ ವಿವರ ಇಲ್ಲಿದೆ: bhashini.gov.in).

ಇಂತಹ ವ್ಯವಸ್ಥೆಗಳ ಮೂಲಕ ಯಾವುದೇ ಭಾಷೆಯ ಪಠ್ಯವನ್ನು ಬೇರೆ ಯಾವುದೇ ಭಾಷೆಗೆ ಅನುವಾದಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯ. ಇದಕ್ಕಾಗಿ ಆಯಾ ಭಾಷೆಯ ವ್ಯಾಕರಣದ ನಿಯಮಗಳು ಯಂತ್ರಾನುವಾದ ವ್ಯವಸ್ಥೆಗೆ ತಿಳಿದಿರಬೇಕಾಗುತ್ತದೆ. ಜರ್ಮನ್ ಭಾಷೆಯಿಂದ ಇಂಗ್ಲಿಷಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವುದು ಹೇಗೆ ಎನ್ನುವುದು ಇಂತಹ ವ್ಯವಸ್ಥೆಯೊಂದಕ್ಕೆ ತಿಳಿದಿದ್ದರೆ ಅದು ಜರ್ಮನ್ ಪಠ್ಯವನ್ನು ಕನ್ನಡಕ್ಕೂ ತರಬಲ್ಲದು. ಇದರ ಜೊತೆಗೆ ಪಠ್ಯವನ್ನು ಧ್ವನಿಗೆ (ಟೆಕ್ಸ್ಟ್ ಟು ಸ್ಪೀಚ್) ಹಾಗೂ ಧ್ವನಿಯನ್ನು ಪಠ್ಯಕ್ಕೆ (ಸ್ಪೀಚ್ ಟು ಟೆಕ್ಸ್ಟ್) ಪರಿವರ್ತಿಸುವ ವ್ಯವಸ್ಥೆಗಳನ್ನೂ ಬಳಸಿಕೊಂಡರೆ ಒಂದು ಭಾಷೆಯಲ್ಲಿ ಆಡಿದ ಮಾತು ಇನ್ನೊಂದು ಭಾಷೆಯಲ್ಲಿ ಕಾಣಿಸುವಂತೆ, ಒಂದು ಭಾಷೆಯ ಪಠ್ಯ ಇನ್ನೊಂದು ಭಾಷೆಯಲ್ಲಿ ಕೇಳಿಸುವಂತೆ ಮಾಡಿಕೊಳ್ಳಬಹುದು. ಹಿಂದಿಯ ಭಾಷಣವನ್ನು ಕನ್ನಡದಲ್ಲೂ ಕೇಳಬಹುದು!

ಆದರೆ ಗಣಿತದಲ್ಲೋ ವಿಜ್ಞಾನದಲ್ಲೋ ಮಾಡಿದಂತೆ ಭಾಷೆಯ ನಿಯಮಗಳನ್ನೆಲ್ಲ ಇಂತಿಷ್ಟೇ ಸೂತ್ರಗಳಲ್ಲಿ ಬಂಧಿಸಿಡುವುದು ತೀರಾ ಕ್ಲಿಷ್ಟವಾದ ಕೆಲಸ. ಪದಗಳ ಅರ್ಥವೂ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದರಿಂದ ಯಂತ್ರಾನುವಾದ ವ್ಯವಸ್ಥೆಗಳಿಗೆ ಅದರ ಜ್ಞಾನವೂ ಇರಬೇಕಾಗುತ್ತದೆ. ಟೆಂಡರ್ ಎಂದರೆ ಕೋಮಲ, ಕೋಕೊನಟ್ ಎಂದರೆ ತೆಂಗಿನಕಾಯಿ ಎನ್ನುವುದೇನೋ ಸರಿ. ಅದಷ್ಟನ್ನು ಮಾತ್ರ ತಿಳಿದುಕೊಂಡ ವ್ಯವಸ್ಥೆ 'ಟೆಂಡರ್ ಕೋಕೊನಟ್' ಅನ್ನು 'ಕೋಮಲ ತೆಂಗಿನಕಾಯಿ'ಯೆಂದು ಅನುವಾದಿಸಿದರೆ ಮಾತ್ರ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.

ಇಂತಹ ತಪ್ಪುಗಳನ್ನು ಸಾಧ್ಯವಾದಷ್ಟೂ ಕಡಿಮೆಮಾಡುವುದು ಹೇಗೆ? ದೊಡ್ಡ ಪ್ರಮಾಣದ - ಯುನಿಕೋಡ್‌ನಲ್ಲಿರುವ - ಪಠ್ಯ ಹಾಗೂ ಅದರ ಅನುವಾದವನ್ನು ಯಂತ್ರಾನುವಾದ ವ್ಯವಸ್ಥೆಗೆ ಊಡಿಸುವುದು ಒಂದು ವಿಧಾನ. ಹೆಚ್ಚು ಹೆಚ್ಚು ಉದಾಹರಣೆಗಳನ್ನು ಗಮನಿಸುವ ಮೂಲಕ ಯಂತ್ರಾನುವಾದ ವ್ಯವಸ್ಥೆ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಮಶೀನ್ ಲರ್ನಿಂಗ್ ಪರಿಕಲ್ಪನೆಯನ್ನು ಬಳಸುವ ಮೂಲಕ ಈ ಕಲಿಕೆಯನ್ನು ಸಾಧ್ಯವಾಗಿಸಬಹುದು, ನಿಜ. ಆದರೆ ಕಲಿಕೆಗೆ ಬೇಕಾದ ಪಠ್ಯವನ್ನು ಯಾರಾದರೂ ಕೊಡಬೇಕಲ್ಲ!

ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಇಂಗ್ಲಿಷಿನಂತಹ ಭಾಷೆಗಳಿಗೆ ಹೋಲಿಸಿದಾಗ ಕನ್ನಡದಂತಹ ಭಾಷೆಗಳಲ್ಲಿ ಇಂತಹ ಕಲಿಕೆಗಾಗಿ ಲಭ್ಯವಿರುವ ಪಠ್ಯದ ಪ್ರಮಾಣ ಕಡಿಮೆ. ಇರುವ ಪಠ್ಯದಲ್ಲೂ ಯುನಿಕೋಡ್‌ನಲ್ಲಿರುವುದು ಇನ್ನೂ ಕಡಿಮೆ.

ಯಂತ್ರಾನುವಾದ ಮಾತ್ರವೇ ಅಲ್ಲ, ಚಾಟ್‌ಜಿಪಿಟಿ ಹಾಗೂ ಗೂಗಲ್ ಬಾರ್ಡ್‌ನಂತಹ ಸೌಲಭ್ಯಗಳು ಕನ್ನಡದಲ್ಲಿ ಹೆಚ್ಚು ಉಪಯುಕ್ತವಾಗಬೇಕಾದರೂ ಈ ಪ್ರಮಾಣ ಗಣನೀಯವಾಗಿ ಹೆಚ್ಚಬೇಕಿದೆ. ಸರಕಾರಿ ಸಂಸ್ಥೆಗಳು - ವಿಶ್ವವಿದ್ಯಾನಿಲಯಗಳು ಗಂಭೀರವಾಗಿ ತೆಗೆದುಕೊಂಡು ಮುನ್ನಡೆಸಬೇಕಿರುವ ಕೆಲಸ ಇದು (ಸದ್ಯ ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದಲ್ಲಿ ಇಂತಹುದೊಂದು ಚಟುವಟಿಕೆ ನಡೆದಿದೆ). ಖಾಸಗಿ ಸಂಸ್ಥೆಗಳು ಮಾಡಬಾರದು ಎಂಬ ನಿಯಮವೇನೂ ಇಲ್ಲವಾದರೂ, ಇಂತಹ ವ್ಯವಸ್ಥೆಗಳಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗುವವರೆಗೂ ಖಾಸಗಿ ಕ್ಷೇತ್ರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.

ಬೇರೆಯವರು ಮಾಡಲೆಂದು ಕಾಯುವ ಅವಧಿಯಲ್ಲಿ ನಾವು ಏನು ಮಾಡಬಹುದು? ಯಂತ್ರಾನುವಾದ ಹಾಗೂ ಎಐ ವ್ಯವಸ್ಥೆಗಳಿಗೆ ನಮ್ಮ ಕೈಲಾದಷ್ಟು ಕನ್ನಡದ ಮಾಹಿತಿ ಸೇರಿಸಬಹುದು! ಗೂಗಲ್ ಸಂಸ್ಥೆ 'ಕ್ರೌಡ್‌ಸೋರ್ಸ್ ಬೈ ಗೂಗಲ್' ಎಂಬ ಕಾರ್ಯಕ್ರಮದಡಿ ಹೀಗೆ ಮಾಹಿತಿ ಸಂಗ್ರಹಿಸುತ್ತಿದೆ. ಇದೀಗ ಕೇಂದ್ರ ಸರಕಾರದ 'ಭಾಷಿಣಿ'ಯಲ್ಲೂ 'ಭಾಷಾ ದಾನ' ಎಂಬ ಹೆಸರಿನಲ್ಲಿ ಸಾರ್ವಜನಿಕರ ನೆರವನ್ನು ಪಡೆದುಕೊಳ್ಳಲಾಗುತ್ತಿದೆ. ನಿರ್ದಿಷ್ಟ ಪಠ್ಯವನ್ನು ಧ್ವನಿಗೆ - ಧ್ವನಿಯನ್ನು ಪಠ್ಯಕ್ಕೆ ಬದಲಿಸಿಕೊಡುವುದು, ಚಿತ್ರದಲ್ಲಿರುವ ಪಠ್ಯವನ್ನು ಗುರುತಿಸುವುದು, ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದಿಸುವುದು - ಇವೆಲ್ಲ ಇಲ್ಲಿ ನಾವು ಮಾಡಬಹುದಾದ ಕೆಲಸಗಳು. ಈಗಷ್ಟೇ ಶುರುವಾಗಿರುವ ೨೦೨೪ರಲ್ಲಿ ಇಂತಹ ಕೆಲ ಚಟುವಟಿಕೆಗಳಿಗೂ ಸಮಯ ಮಾಡಿಕೊಳ್ಳಲು ಸಾಧ್ಯವಾದರೆ ಅದು ನಿಜಕ್ಕೂ ಭಾಷೆಯ ಬೆಳವಣಿಗೆಗೆ ನಮ್ಮ ಹೊಸವರ್ಷದ ಕೊಡುಗೆಯಾಗಬಲ್ಲದು.

ಜನವರಿ ೨, ೨೦೨೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ೫೮ನೇ ಕಂತು

logo
ಇಜ್ಞಾನ Ejnana
www.ejnana.com