ಸೋಶಿಯಲ್ ಮೀಡಿಯಾ ಎನ್ನುವುದೊಂದು ಮಾಯಾಲೋಕ. ಹಾಗೆಂದು ಅಲ್ಲಿರುವುದೆಲ್ಲ ಚೆಂದ ಎನ್ನುವಂತಿಲ್ಲ!
ಸೋಶಿಯಲ್ ಮೀಡಿಯಾ ಎನ್ನುವುದೊಂದು ಮಾಯಾಲೋಕ. ಹಾಗೆಂದು ಅಲ್ಲಿರುವುದೆಲ್ಲ ಚೆಂದ ಎನ್ನುವಂತಿಲ್ಲ!Photo by Jeremy Levin

ಸೋಶಿಯಲ್ ಮೀಡಿಯಾ ಮಬ್ಬು ಕಳೆಯುವ ಮಳೆಯೂ ಬರಲಿ!

ನಮ್ಮ ಕಿರಿಯರು ಸೋಶಿಯಲ್ ಮೀಡಿಯಾದ ಅನುಕೂಲಗಳನ್ನು ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ಅದರ ಹೊರಗಿನ ಸಾಧ್ಯತೆಗಳನ್ನು ಅನ್ವೇಷಿಸುವುದೂ ಅಷ್ಟೇ ಮುಖ್ಯ.
Published on

"ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು" ಎನ್ನುವುದು 'ಕನ್ನಡದ ಕಣ್ವ' ಬಿ.ಎಂ.ಶ್ರೀ.ಯವರ ಪ್ರಸಿದ್ಧ ಕವಿತೆ. ೧೯ನೇ ಶತಮಾನದಲ್ಲಿ ಜಾನ್ ಹೆನ್ರಿ ನ್ಯೂಮನ್ ಎಂಬಾತ ಬರೆದ "Lead, Kindly Light, Amid the encircling gloom" ಎಂಬ ಇಂಗ್ಲಿಷ್ ಗೀತೆಯ ಅನುವಾದ ಎಂದು ಗೊತ್ತೇ ಆಗದಷ್ಟು, ಈ ನೆಲದ್ದೇ ಎನ್ನಿಸುವಷ್ಟು ಸೊಗಸಾದ ಕವಿತೆ ಇದು.

ಈ ನೆಲ, ಆ ನೆಲ ಯಾವುದೇ ಆದರೂ ಮಬ್ಬು ಮುಸುಕುವುದು ಅಪರೂಪವೇನಲ್ಲ. ವೈಯಕ್ತಿಕ ಮಟ್ಟದಲ್ಲಿ, ಒಂದು ಸಮಾಜವಾಗಿ ಅಂತಹ ಸನ್ನಿವೇಶಗಳು ಆಗಿಂದಾಗ್ಗೆ ಎದುರಾಗುತ್ತಲೇ ಇರುತ್ತವೆ. ಸಾಂಕೇತಿಕವಾಗಿಯೂ, ವಾಸ್ತವವಾಗಿಯೂ!

ದೆಹಲಿಯ ಮಾಲಿನ್ಯದ ಕತೆ, ವಾಸ್ತವವಾಗಿ ಮುಸುಕಿರುವ ಮಬ್ಬಿನ ಉದಾಹರಣೆ. ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಯಿತೋ, ಕಾರ್ಖಾನೆಗಳಿಂದ - ನಿರ್ಮಾಣ ಚಟುವಟಿಕೆಗಳಿಂದ ಬಂತೋ, ವಾಹನಗಳ ಮಾಲಿನ್ಯವೇ ಹೆಚ್ಚಿತೋ ಎನ್ನುವುದು ಕೂಡ ಗೊತ್ತಾಗದಷ್ಟು ದಟ್ಟವಾಗಿ ಮುಸುಕಿದ ಮಬ್ಬು ಅದು.

ಇದು ಈ ಜಗತ್ತಿನ ಉದಾಹರಣೆಯಾಯಿತು. ಈ ಜಗತ್ತಿನಾಚೆಗಿನ ಇ-ಜಗತ್ತಿನಲ್ಲೂ ಮಬ್ಬು ಮುಸುಕುವುದುಂಟು. ಅದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಸೋಶಿಯಲ್ ಮೀಡಿಯಾ.

ಸೋಶಿಯಲ್ ಮೀಡಿಯಾ ಜಗತ್ತಿನ ಸ್ಥಿತಿಯೂ ದೆಹಲಿಯ ಹಾಗೆಯೇ ಇದೆ. ಆದರೆ ದೆಹಲಿಯ ಹಾಗೆ ಇಲ್ಲಿನ ಮಬ್ಬು ತಾತ್ಕಾಲಿಕವಲ್ಲ, ಅದನ್ನು ಅನುಭವಿಸುವುದು ಅನಿವಾರ್ಯವೂ ಅಲ್ಲ. ಆದರೂ ಆ ಮಬ್ಬಿನಲ್ಲಿರುವುದನ್ನು ನಾವೆಲ್ಲರೂ ಸ್ವ-ಇಚ್ಛೆಯಿಂದಲೇ ಆಯ್ದುಕೊಳ್ಳುತ್ತೇವೆ ಎನ್ನುವುದು ತಮಾಷೆ.

ಸೋಶಿಯಲ್ ಮೀಡಿಯಾ ನಿಜಕ್ಕೂ ಒಂದು ಮಾಯಾಲೋಕ. ನಿಜ ಜಗತ್ತಿನಲ್ಲಿ ನಮಗೆ ಕಾಣಲು ಸಿಗದವರು, ನಮ್ಮ ಕೈಗೆಟುಕದವರು ಎಲ್ಲರೂ ಅಲ್ಲಿ ನಮ್ಮಂತೆಯೇ - ನಮ್ಮ ಜೊತೆಗೇ ಇರುತ್ತಾರೆ. ಹೊಸ ಅವಕಾಶಗಳೂ ಅಷ್ಟೇ, ನಮ್ಮ ಕೈಯಳತೆಯಲ್ಲಿಯೇ ಸಿಗುತ್ತವೆ. ಅಲ್ಲಿರುವಷ್ಟೂ ಕಾಲ ಏನಾದರೊಂದು ಹೊಸದು ನಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತದೆ.

ಇಷ್ಟೆಲ್ಲ ಇದ್ದರೂ ಸೋಶಿಯಲ್ ಮೀಡಿಯಾದ ಸ್ಥಿತಿಯನ್ನು ಮಬ್ಬು ಎಂದು ಕರೆಯುವುದಕ್ಕೆ ಅನೇಕ ಕಾರಣಗಳಿವೆ. ಅಲ್ಲಿರುವ ಅಗಾಧ ಪ್ರಮಾಣದ ಮಾಹಿತಿಯಲ್ಲಿ ನಮಗೆ ಬೇಕಾದದ್ದು - ಉಪಯುಕ್ತವಾದದ್ದು ಸುಲಭಕ್ಕೆ ಸಿಗುವುದಿಲ್ಲ; ಸಿಗುವ ಮಾಹಿತಿಯಲ್ಲಿ ನಿಜ ಯಾವುದು ಸುಳ್ಳು ಯಾವುದು ಎನ್ನುವುದು ಥಟ್ಟನೆ ತಿಳಿಯುವುದಿಲ್ಲ; ಇಲ್ಲಿ ಸ್ನೇಹಿತರಂತೆ ಕಾಣುವವರು ಸ್ನೇಹಿತರೋ ಅಲ್ಲವೋ ಎನ್ನುವುದು ಹೋಗಲಿ, ನಿಜಕ್ಕೂ ಅವರು ಯಾರು ಎನ್ನುವುದೂ ಗೊತ್ತಾಗುವುದಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ವ್ಯವಹರಿಸುವಾಗ ನಾವು ನಮ್ಮ ಎಚ್ಚರದಲ್ಲಿರಬೇಕು ಎನ್ನುವುದರ ಹಿನ್ನೆಲೆಯಲ್ಲಿರುವುದೂ ಇದೇ ಆತಂಕ. ಸೋಶಿಯಲ್ ಮೀಡಿಯಾದಲ್ಲಿ ವ್ಯವಹರಿಸುವುದು ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಗಾಡಿ ಓಡಿಸಿದಷ್ಟೇ ಕಷ್ಟದ ಕೆಲಸವಾದ್ದರಿಂದ, ಚಿಕ್ಕ ಮಕ್ಕಳು ಆ ಸಾಹಸ ಮಾಡುವುದೇ ಬೇಡ ಎನ್ನುವ ನಿಬಂಧನೆಗಳನ್ನು ರೂಪಿಸಲಾಗಿದೆ. ಸೋಶಿಯಲ್ ಮೀಡಿಯಾ ತಾಣಗಳಲ್ಲಿ ಖಾತೆ ತೆರೆಯಲು ಕನಿಷ್ಠ ೧೩ ವರ್ಷ ವಯಸ್ಸಾಗಿರಬೇಕು ಎನ್ನುವುದು ಇಂತಹ ನಿಬಂಧನೆಗಳಲ್ಲೊಂದು. ಹನ್ನೆರಡು ವರ್ಷ ತುಂಬುವ ವೇಳೆಗೆ ಮಕ್ಕಳ ಬೌದ್ಧಿಕ ಬೆಳವಣಿಗೆ ಒಂದು ಹಂತಕ್ಕೆ ಬಂದಿರುತ್ತದೆ ಎನ್ನುವುದು ಇದರ ಕಾರಣ.

ಹಾಗೆಂದಮಾತ್ರಕ್ಕೆ ಹದಿಮೂರು ವರ್ಷಕ್ಕೆ ಮೇಲ್ಪಟ್ಟವರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಜವಾಬ್ದಾರಿಯುತವಾಗಿ, ಸುರಕ್ಷಿತವಾಗಿ ಇರುತ್ತಾರೆ ಎನ್ನಬಹುದೇ? ಖಂಡಿತಾ ಇಲ್ಲ. ಸೋಶಿಯಲ್ ಮೀಡಿಯಾದ ಅಪಾಯಸಾಧ್ಯತೆಗಳು ಕಿರಿಯರಿಂದ ಹಿರಿಯರವರೆಗೆ ಎಲ್ಲರನ್ನೂ ಬಾಧಿಸುತ್ತವೆ. ಕಿರಿಯರಿಗೆ ಅಪಾಯವಾಗುವ ಸಾಧ್ಯತೆ ಕೊಂಚ ಹೆಚ್ಚೇ ಎಂದರೂ ಸರಿಯೇ.

ಕಿರಿಯರ ಖಾತೆಗಳಲ್ಲಿ ಅವರು ಏನೆಲ್ಲ ಪೋಸ್ಟ್ ಮಾಡುತ್ತಾರೆ, ಹಾಗೆ ಪೋಸ್ಟ್ ಮಾಡಿದ್ದನ್ನು ಯಾರು ನೋಡುತ್ತಾರೆ, ಅದಕ್ಕೆ ಏನೆಂದು ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದೆಲ್ಲವೂ ಈ ನಿಟ್ಟಿನಿಂದ ಮುಖ್ಯವಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಸುರಕ್ಷಿತರಾಗಿರಬೇಕೆಂದರೆ ಅವರ ಖಾಸಗಿತನವನ್ನು ಸೂಕ್ತ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕಾದ್ದು ಅತ್ಯಗತ್ಯ. ಪೋಸ್ಟುಗಳನ್ನು ಯಾರು ನೋಡಬಹುದು, ನೇರ ಸಂದೇಶಗಳ ಮೂಲಕ ಯಾರು ಸಂಪರ್ಕಿಸಬಹುದು ಎನ್ನುವುದನ್ನೆಲ್ಲ ಸ್ವತಃ ಮಕ್ಕಳು ಅಥವಾ ಅವರ ಪೋಷಕರೇ ತೀರ್ಮಾನಿಸಬಹುದಾದ ಆಯ್ಕೆಗಳನ್ನು ವಿವಿಧ ಸೋಶಿಯಲ್ ಮೀಡಿಯಾಗಳು ರೂಪಿಸಿವೆ. ಆನಂತರವೂ ಯಾವುದಾದರೂ ಸಂವಹನ ಆಕ್ಷೇಪಾರ್ಹವೆನಿಸಿದರೆ ಅದನ್ನು / ಅದಕ್ಕೆ ಕಾರಣರಾದವರನ್ನು ನಿರ್ಬಂಧಿಸುವ ಆಯ್ಕೆಯೂ ಇರುತ್ತದೆ. ನಾವು ನೋಡುವ ಪೋಸ್ಟುಗಳಲ್ಲಿ ತಪ್ಪು ಅಥವಾ ಪಕ್ಷಪಾತದಿಂದ ಕೂಡಿದ ಮಾಹಿತಿಯಿದ್ದರೆ ಅದನ್ನು ಗುರುತಿಸಿ ತೋರಿಸುವ ವ್ಯವಸ್ಥೆಯೂ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ಗಳ ಹಿಂದಿರುವ ಮೆಟಾ ಸಂಸ್ಥೆ ತನ್ನ ಬಳಕೆದಾರರ ಆನ್‌ಲೈನ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಳೆದ ಮೂರು ವರ್ಷಗಳಲ್ಲಿ ಮೂವತ್ತಕ್ಕೂ ಹೆಚ್ಚು ಸೌಲಭ್ಯಗಳನ್ನು ರೂಪಿಸಿದೆಯಂತೆ!

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ತಪ್ಪು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯದು ಒಂದು ಕತೆಯಾದರೆ, ಅದರ ಅತಿಬಳಕೆಯದ್ದು ಬೇರೆಯದೇ ಕತೆ. ಸೋಶಿಯಲ್ ಮೀಡಿಯಾ ತಾಣಗಳನ್ನು ಬಳಸುತ್ತಾ ಹೋದಂತೆ ಅವುಗಳನ್ನು ಬಿಟ್ಟಿರುವುದು ಕಷ್ಟವೆನಿಸುತ್ತಾ ಹೋಗುತ್ತದೆ. ಸ್ವಲ್ಪಹೊತ್ತು ಅದರಿಂದ ದೂರವಿದ್ದರೆ ಏನೋ ಕಳೆದುಕೊಳ್ಳುತ್ತೇವೇನೋ ಎನ್ನುವ ಭಾವನೆ ಕಾಡುತ್ತದೆ (ಇದಕ್ಕೆ ಫಿಯರ್ ಆಫ್ ಮಿಸ್ಸಿಂಗ್ ಔಟ್ ಎಂಬ ಹೆಸರಿದೆ). ಈ ಅಂಜಿಕೆಯಿಂದ ನಾವು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಲೇ ಹೋಗುತ್ತೇವೆ, ಅದೊಂದು ಚಟವಾಗಿಬಿಡುವ ಅಪಾಯವನ್ನೂ ಎದುರಿಸುತ್ತೇವೆ.

ಸೋಶಿಯಲ್ ಮೀಡಿಯಾದ ಅತಿಬಳಕೆ ಒಂದು ಚಟವೋ ಅಲ್ಲವೋ ಎನ್ನುವುದರ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಆದರೆ, ಸೋಶಿಯಲ್ ಮೀಡಿಯಾವನ್ನು ನಾವು ಹೆಚ್ಚುಹೆಚ್ಚಾಗಿ ಬಳಸುತ್ತಿರುವುದನ್ನು ತೋರಿಸುವ ಅಂಕಿಅಂಶಗಳು ಹೇರಳವಾಗಿವೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಭಾರತೀಯ ಬಳಕೆದಾರರು ಪ್ರತಿದಿನವೂ ಮೂರು ಗಂಟೆಗಳಿಗಿಂತ ಹೆಚ್ಚಿನ ಅವಧಿಯನ್ನು ಈ ವೇದಿಕೆಗಳಲ್ಲಿ ಕಳೆಯುತ್ತಿದ್ದೇವಂತೆ.

ನಾವು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೇವೆಂದು ಗಮನಿಸಿಕೊಳ್ಳುವ, ಅಗತ್ಯಬಿದ್ದರೆ ಸ್ವಯಂನಿರ್ಬಂಧಗಳನ್ನೂ ವಿಧಿಸಿಕೊಳ್ಳುವ ಆಯ್ಕೆಯನ್ನೂ ಹಲವು ವೇದಿಕೆಗಳು ಒದಗಿಸುತ್ತಿವೆ. ಮೆಟಾದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಕಿರಿಯ ಬಳಕೆದಾರರು ಇನ್‌ಸ್ಟಾ‌ಗ್ರಾಮಿನಲ್ಲಿ ಎಷ್ಟು ಸಮಯ ಕಳೆಯಬಹುದು ಎನ್ನುವುದನ್ನು ಅವರ ಪೋಷಕರೇ ತೀರ್ಮಾನಿಸುವ ಸೌಲಭ್ಯವನ್ನು ಅದು ಒದಗಿಸಿದೆ.

ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವುದರ ಜೊತೆಗೆ ಕಿರಿಯರನ್ನು ಹೊಸ ಸಾಧ್ಯತೆಗಳತ್ತ ಸೆಳೆಯುವುದು ಕೂಡ ಸೋಶಿಯಲ್ ಮೀಡಿಯಾ ಅತಿಬಳಕೆ ತಡೆಯುವ ಇನ್ನೊಂದು ವಿಧಾನ. ಈಚೆಗೆ ಇದೇ ವಿಷಯ ಕುರಿತು ಮಾತನಾಡುತ್ತಿದ್ದಾಗ, ಹಗರಿಬೊಮ್ಮನಹಳ್ಳಿಯ ಶಾಲಾ ಶಿಕ್ಷಣ ಇಲಾಖೆ ತನ್ನ ವಿದ್ಯಾರ್ಥಿಗಳ ಲೇಖನ ಪ್ರತಿಭೆಯನ್ನು ಪ್ರೋತ್ಸಾಹಿಸಲು ತ್ರೈಮಾಸಿಕ ಪತ್ರಿಕೆಯೊಂದನ್ನು ಹೊರತರುವ ಸಿದ್ಧತೆಯಲ್ಲಿದೆ ಎಂದು ಮಿತ್ರ ಡಾ. ಪರಮೇಶ್ವರಯ್ಯ ಸೊಪ್ಪಿಮಠ ಹೇಳಿದರು. ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಪುಸ್ತಕಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಅವರು ಆ ಪುಸ್ತಕಗಳನ್ನು ಓದಿ ಪ್ರತಿಕ್ರಿಯೆ ನೀಡುವಂತೆ ಪ್ರೇರೇಪಿಸುವ ಕೆಲಸವನ್ನೂ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಮಾಡುತ್ತಿರುವ ವಿಷಯ ಅದರ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರರ ಜೊತೆಗಿನ ಮಾತುಕತೆಯಲ್ಲಿ ಪ್ರಸ್ತಾಪವಾಯಿತು.

ಕಳೆದವಾರ ದೆಹಲಿಯಲ್ಲಿ ಬಂದ ಮಳೆ ಮಾಲಿನ್ಯದ ಮಬ್ಬನ್ನು ಕೊಂಚಮಟ್ಟಿಗೆ ಕಳೆಯಿತಂತೆ. ಸೋಶಿಯಲ್ ಮೀಡಿಯಾದ ಮಬ್ಬನ್ನು ಕಳೆಯುವ ನಿಟ್ಟಿನಲ್ಲಿ ಈ ಪ್ರಯತ್ನಗಳೂ ಆ ಮಳೆಯಷ್ಟೇ ತಂಪೆರೆಯುವ ಬೆಳವಣಿಗೆಗಳು. ನಮ್ಮ ಕಿರಿಯರು ಸೋಶಿಯಲ್ ಮೀಡಿಯಾದ ಅನುಕೂಲಗಳನ್ನು ಪಡೆದುಕೊಳ್ಳುವುದು ಎಷ್ಟು ಮುಖ್ಯವೋ, ಅದರ ಹೊರಗಿನ ಸಾಧ್ಯತೆಗಳನ್ನು ಅನ್ವೇಷಿಸುವುದೂ ಅಷ್ಟೇ ಮುಖ್ಯ. ಅದು ಸಾಧ್ಯವಾಗಬೇಕಾದರೆ ಇಂತಹ ಮಳೆ ಆಗಿಂದಾಗ್ಗೆ ಬೀಳುತ್ತಿರಬೇಕು, ಡಿಜಿಟಲ್ ಜಗತ್ತಿನ ಇಳೆಯೂ ತಂಪಾಗುತ್ತಿರಬೇಕು!

ನವೆಂಬರ್ ೧೪, ೨೦೨೩ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ೫೫ನೇ ಕಂತು

logo
ಇಜ್ಞಾನ Ejnana
www.ejnana.com