ಸಾಮಾನ್ಯ ಥ್ರೀಡಿ ಪ್ರಿಂಟರು ತಟ್ಟೆ-ಬಟ್ಟಲುಗಳನ್ನು ಮುದ್ರಿಸುತ್ತದಲ್ಲ, ಥ್ರೀಡಿ ಫುಡ್ ಪ್ರಿಂಟರು ಅವುಗಳಲ್ಲಿ ಹಾಕಿಕೊಂಡು ತಿನ್ನುವ ಆಹಾರವನ್ನೇ ಪ್ರಿಂಟ್ ಮಾಡಬಲ್ಲದು!
ಸಾಮಾನ್ಯ ಥ್ರೀಡಿ ಪ್ರಿಂಟರು ತಟ್ಟೆ-ಬಟ್ಟಲುಗಳನ್ನು ಮುದ್ರಿಸುತ್ತದಲ್ಲ, ಥ್ರೀಡಿ ಫುಡ್ ಪ್ರಿಂಟರು ಅವುಗಳಲ್ಲಿ ಹಾಕಿಕೊಂಡು ತಿನ್ನುವ ಆಹಾರವನ್ನೇ ಪ್ರಿಂಟ್ ಮಾಡಬಲ್ಲದು!Drim Stokhuijzen / creativemachineslab.com

ಊಟ-ತಿಂಡಿಯನ್ನೂ ಪ್ರಿಂಟ್ ಮಾಡಿಕೊಳ್ಳಬಹುದೇ?

ಮನೆ ಕಂದಾಯವನ್ನು ಮನೆಯಲ್ಲೇ ಕೂತು ಪಾವತಿಸಿ ರಸೀತಿ ಪ್ರಿಂಟ್ ಮಾಡಿಟ್ಟುಕೊಳ್ಳುವ ನಮಗೆ, ಬೆಳಗಿನ ತಿಂಡಿಗೆಂದು ಒಂದು ಪ್ಲೇಟ್ ಇಡ್ಲಿ ಪ್ರಿಂಟ್ ಮಾಡಿಕೊಳ್ಳುವುದೇಕೆ ಸಾಧ್ಯವಾಗಿಲ್ಲ?
Published on

ನಾವು ಡಿಗ್ರಿ ಓದುತ್ತಿದ್ದ ಸಮಯ. ಮನೆಗಳಿಗೆ ಅಂತರಜಾಲ ಸಂಪರ್ಕ ಪಡೆದುಳ್ಳುವ ಅಭ್ಯಾಸ ಆಗಷ್ಟೇ ಜನಪ್ರಿಯವಾಗುತ್ತಿತ್ತು. ಹೊಸ ಕಂಪ್ಯೂಟರ್ ಕೊಂಡು, ಅದರ ಜೊತೆ ಅಂತರಜಾಲ ಸಂಪರ್ಕವನ್ನೂ ಪಡೆದಿದ್ದ ನನ್ನ ಗೆಳೆಯ "ಇನ್ನೇನು, ಎಲ್ಲ ಕೆಲಸಗಳನ್ನೂ ಇದರಲ್ಲೇ ಮಾಡಿಕೊಳ್ಳಬಹುದು!" ಅಂತ ಅವನ ತಾಯಿಗೆ ಹೇಳಿದನಂತೆ. ಅದಕ್ಕೆ ಉತ್ತರವಾಗಿ ಅವರು "ಸರಿ, ನಾಳೆಯಿಂದ ಊಟವನ್ನೂ ಅದರಲ್ಲೇ ಡೌನ್‌ಲೋಡ್ ಮಾಡಿಕೋ!" ಎಂದು ಹೇಳಿದ್ದು ನಮ್ಮ ಗೆಳೆಯರ ಗುಂಪಿನಲ್ಲೆಲ್ಲ ಸದ್ದುಮಾಡಿತ್ತು.

ಅಂದಿನಿಂದ ಇಂದಿನವರೆಗೆ ಕಂಪ್ಯೂಟರ್ ತಂತ್ರಜ್ಞಾನದಲ್ಲಿ, ಅಂತರಜಾಲ ಸಂಪರ್ಕಗಳಲ್ಲಿ ಅದೆಷ್ಟೋ ಬೆಳವಣಿಗೆಗಳಾಗಿವೆ. ನಮಗೆ ಬೇಕಾದ ಮಾಹಿತಿಯನ್ನೆಲ್ಲ ನಾವು ಕ್ಷಣಾರ್ಧದಲ್ಲೇ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೇವೆ. ನೂರೆಂಟು ಕೆಲಸಗಳನ್ನು ಕಂಪ್ಯೂಟರಿನಲ್ಲೇ ಮಾಡುತ್ತೇವೆ, ಅಗತ್ಯವೆನಿಸಿದ ಕಡತಗಳನ್ನು ಪ್ರಿಂಟ್ ಕೂಡ ಮಾಡಿಟ್ಟುಕೊಳ್ಳುತ್ತೇವೆ. ಅಡುಗೆ ಮಾಡಲು ಬೇಕಾದ ದಿನಸಿ ಪದಾರ್ಥಗಳನ್ನು, ಅಡುಗೆ ಮಾಡಲು ಇಷ್ಟವಿಲ್ಲದಿದ್ದರೆ ಊಟತಿಂಡಿಗಳನ್ನು ಮನೆಬಾಗಿಲಿಗೆ ಬರಮಾಡಿಕೊಳ್ಳುವುದಕ್ಕೂ ನಾವು ಅಂತರಜಾಲ ಸಂಪರ್ಕವನ್ನು ಬಳಸಿಕೊಳ್ಳುತ್ತೇವೆ.

ಆರ್ಡರ್ ಮಾಡುವುದು ಅಂತರಜಾಲದ ಮೂಲಕ ಎನ್ನುವುದು ನಿಜವಾದರೂ ಅವೆಲ್ಲ ನಮಗೆ ತಲುಪುವುದು ಯಾರಾದರೂ ಮನೆಬಾಗಿಲಿಗೆ ತಂದುಕೊಟ್ಟಾಗ ಮಾತ್ರ. ಇದೇಕೆ ಹೀಗೆ? ಮನೆ ಕಂದಾಯವನ್ನು ಮನೆಯಲ್ಲೇ ಕೂತು ಪಾವತಿಸಿ ರಸೀತಿ ಪ್ರಿಂಟ್ ಮಾಡಿಟ್ಟುಕೊಳ್ಳುವ ನಮಗೆ, ಬೆಳಗಿನ ತಿಂಡಿಗೆಂದು ಒಂದು ಪ್ಲೇಟ್ ಇಡ್ಲಿ ಪ್ರಿಂಟ್ ಮಾಡಿಕೊಳ್ಳುವುದೇಕೆ ಸಾಧ್ಯವಾಗಿಲ್ಲ?

ಇನ್ನೇನು ಏಪ್ರಿಲ್ ಮುಗಿಯಲು ಬಂತು, ಈಗ ಏಪ್ರಿಲ್ ಫೂಲ್ ಪ್ರಯತ್ನವೇ ಎಂದುಕೊಳ್ಳಬೇಡಿ. ಸದ್ಯಕ್ಕೆ ವಿಚಿತ್ರವೆನಿಸಿದರೂ ಇದು ಮುಂದೊಮ್ಮೆ ನಿಜವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗೆಂದಮಾತ್ರಕ್ಕೆ ಇಡ್ಲಿ ಪ್ರಿಂಟ್ ಮಾಡುವುದಕ್ಕೆಂದೇ ಹೊಸ ತಂತ್ರಜ್ಞಾನವೇನೂ ಬರುತ್ತಿಲ್ಲ, 'ಥ್ರೀಡಿ ಪ್ರಿಂಟಿಂಗ್' ಎಂಬ ಸುಪರಿಚಿತ ತಂತ್ರಜ್ಞಾನವೇ ಆಹಾರವನ್ನು ಬೇಕೆಂದಾಗ ಬೇಕಾದಕಡೆ ಪ್ರಿಂಟ್ ಮಾಡಿಕೊಳ್ಳುವ ಕನಸನ್ನು ನನಸಾಗಿಸುತ್ತಿದೆ!

ಥ್ರೀಡಿ ಪ್ರಿಂಟಿಂಗ್, ಅಂದರೆ ಮೂರು ಆಯಾಮದ ಮುದ್ರಣ, ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದ ತಂತ್ರಜ್ಞಾನ. ಸಾಮಾನ್ಯ ಪ್ರಿಂಟರ್ ಬಳಸಿ ಪಠ್ಯವನ್ನೋ ಚಿತ್ರವನ್ನೋ ಮುದ್ರಿಸಿಕೊಳ್ಳುವ ಹಾಗೆ ನಮಗೆ ಬೇಕಾದ ವಸ್ತುವನ್ನೇ ಮುದ್ರಿಸಿಕೊಳ್ಳುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ. ಯಾವುದೋ ಯಂತ್ರದ ಮುರಿದ ಭಾಗವನ್ನೋ ಹೊಸ ಉತ್ಪನ್ನದ ಮಾದರಿಯನ್ನೋ ನಾವು ಥ್ರೀಡಿ ಪ್ರಿಂಟಿಂಗ್ ಬಳಸಿ ಥಟ್ ಎಂದು ತಯಾರಿಸಿಕೊಂಡುಬಿಡಬಹುದು.

ಕಾಗದದ ಮೇಲೆ ಮುದ್ರಿಸುವ ಪ್ರಿಂಟರಿನಲ್ಲಿ ಇಂಕು ಬಳಕೆಯಾದಂತೆ ಥ್ರೀಡಿ ಪ್ರಿಂಟರುಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವುದು ಪ್ಲಾಸ್ಟಿಕ್. ಬಣ್ಣದ ಹನಿಗಳು ಕಾಗದದ ಮೇಲೆ ಅಕ್ಷರ-ಚಿತ್ರಗಳನ್ನೆಲ್ಲ ರೂಪಿಸಿದ ಹಾಗೆ ಥ್ರೀಡಿ ಪ್ರಿಂಟರಿನಿಂದ ಹೊರಬರುವ ಪ್ಲಾಸ್ಟಿಕ್ಕಿನ ಹನಿಗಳು ನಮಗೆ ಬೇಕಾದ ವಸ್ತುವನ್ನು ಮೂರು ಆಯಾಮಗಳಲ್ಲಿ ಮುದ್ರಿಸಿಕೊಡುತ್ತವೆ. ಅಂದರೆ, ಸಾಮಾನ್ಯ ಪ್ರಿಂಟರಿನಂತೆ ಎಡ-ಬಲಕ್ಕೆ ಮಾತ್ರವೇ ಅಲ್ಲದೆ ಮೇಲೆ-ಕೆಳಗೂ ಓಡಾಡಿಕೊಂಡು ಪ್ಲಾಸ್ಟಿಕ್ಕನ್ನು ಹೊರಸೂಸುವ ಥ್ರೀಡಿ ಪ್ರಿಂಟರಿನ ವ್ಯವಸ್ಥೆ ಹಲವು ಪದರಗಳಲ್ಲಿ ಮೂರು ಆಯಾಮದ ಆಕೃತಿಯನ್ನು ರೂಪಿಸುತ್ತದೆ. ಬಿಲ್ಡಿಂಗ್ ಬ್ಲಾಕ್ಸ್ ಬಳಸಿ ಆಡುವ ಮಕ್ಕಳು ಮನೆಕಟ್ಟಿ ತೋರಿಸುತ್ತಾರಲ್ಲ, ಹಾಗೆ!

ಥ್ರೀಡಿ ಪ್ರಿಂಟರ್ ಬಳಸಿ ಪ್ಲಾಸ್ಟಿಕ್ಕಿನ ಬಿಡಿಭಾಗವನ್ನೋ ಆಟಿಕೆಯನ್ನೋ ಮುದ್ರಿಸಿಕೊಳ್ಳಬಹುದು, ಸರಿ. ಅದರಲ್ಲಿ ಬೇರೆ ಯಾವುದಾದರೂ ವಸ್ತುವನ್ನು ಬಳಸಿದರೆ ಹೇಗೆ? ಈ ಪ್ರಶ್ನೆ ಹಲವು ಪ್ರಯೋಗಗಳಿಗೆ ಕಾರಣವಾಗಿದೆ. ಅಂತಹ ಪ್ರಯೋಗಗಳ ಫಲಿತಾಂಶವಾಗಿ ಥ್ರೀಡಿ ಪ್ರಿಂಟರ್ ಬಳಸಿ ಲೋಹದ ವಸ್ತುಗಳನ್ನೂ ಮುದ್ರಿಸಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಅಥವಾ ಲೋಹದ ಬದಲು ಆಹಾರಪದಾರ್ಥಗಳನ್ನು ಬಳಸುವ ಆಲೋಚನೆ 'ಥ್ರೀಡಿ ಫುಡ್ ಪ್ರಿಂಟಿಂಗ್' ಎಂಬ ಹೊಸ ಪ್ರಕ್ರಿಯೆಯ ಹುಟ್ಟಿಗೆ ಕಾರಣವಾಗಿದೆ. ಸಾಮಾನ್ಯ ಥ್ರೀಡಿ ಪ್ರಿಂಟರು ತಟ್ಟೆ-ಬಟ್ಟಲುಗಳನ್ನು ಮುದ್ರಿಸುತ್ತದಲ್ಲ, ಥ್ರೀಡಿ ಫುಡ್ ಪ್ರಿಂಟರು ಅವುಗಳಲ್ಲಿ ಹಾಕಿಕೊಂಡು ತಿನ್ನುವ ಆಹಾರವನ್ನೇ ಪ್ರಿಂಟ್ ಮಾಡಬಲ್ಲದು!

ಹೌದು, ಥ್ರೀಡಿ ಪ್ರಿಂಟರಿನಲ್ಲಿ ಪ್ಲಾಸ್ಟಿಕ್ಕಿನ ಬದಲು ಚಾಕಲೇಟನ್ನು ಬಳಸಿದರೆ ನಮಗೆ ಬೇಕಾದ ಆಕಾರದ ಚಾಕಲೇಟನ್ನು ಪ್ರಿಂಟ್ ಮಾಡಿಕೊಳ್ಳಬಹುದು. ಬೇಕಾದ ಬಗೆಯ ಬಿಸ್ಕತ್ತನ್ನು ತಯಾರಿಸಬಹುದು. ಸಕ್ಕರೆ ಬೊಂಬೆಗಳನ್ನು ಮುದ್ರಿಸಿ ಸಂಕ್ರಾಂತಿಯಲ್ಲಿ ಹಂಚಬಹುದು. ಕೋಡುಬಳೆ ಹೊಸೆಯಲು ಬಾರದವರೂ ಪರ್ಫೆಕ್ಟ್ ಕೋಡುಬಳೆಗಳನ್ನು ಹೊಸೆದಿಟ್ಟು ಭೇಷ್ ಎನ್ನಿಸಿಕೊಳ್ಳಬಹುದು. ನಾವು ಪ್ರಿಂಟ್ ಮಾಡಿರುವ ಬಿಸ್ಕತ್ತಿನಲ್ಲಿ ಏನೆಲ್ಲ ಇದೆ ಎಂದು ತಿಳಿಸುವ ಕ್ಯೂಆರ್ ಕೋಡನ್ನೂ ಆ ಬಿಸ್ಕತ್ತಿನ ಮೇಲೆಯೇ ಮುದ್ರಿಸಿಬಿಡಬಹುದು.

ಆದರೆ ಇಲ್ಲೊಂದು ಸಮಸ್ಯೆಯಿದೆ. ಕೆಲವೇ ಪದಾರ್ಥಗಳನ್ನು ಬಳಸುವ ಆಹಾರಗಳನ್ನೇನೋ ಪ್ರಿಂಟ್ ಮಾಡಿಕೊಂಡುಬಿಡಬಹುದು. ಆದರೆ ಪದಾರ್ಥಗಳ ಸಂಖ್ಯೆ ಹೆಚ್ಚಿದಂತೆ, ತಯಾರಿಸುವ ವಿಧಾನ ಸಂಕೀರ್ಣವಾದಂತೆ ಆಹಾರದ ಮುದ್ರಣ ಕಷ್ಟವಾಗುತ್ತದೆ. ಕೆಲವು ಸನ್ನಿವೇಶಗಳಲ್ಲಿ ಅಸಾಧ್ಯವೂ ಆಗಿಬಿಡಬಹುದು. ಚಾಕಲೇಟು-ಬಿಸ್ಕತ್ತುಗಳನ್ನು ಮುದ್ರಿಸಿಕೊಂಡು ಖುಷಿಯಾಗಿರುವ ಪ್ರಿಂಟರಿನ ಬಳಿ ಕರಿಗಡುಬು-ಹಾಲುಬಾಯಿ ಬೇಕೆಂದು ಕೇಳಿದರೆ ಅದು ಏನು ತಾನೇ ಮಾಡೀತು?

ಈ ಪರಿಸ್ಥಿತಿಯನ್ನು ಬದಲಿಸುವ ನಿಟ್ಟಿನಲ್ಲೂ ಪ್ರಯೋಗಗಳು ನಡೆದಿವೆ. ಇಂತಹ ಪ್ರಯೋಗವೊಂದರ ಭಾಗವಾಗಿ ಏಳು ಪದಾರ್ಥಗಳನ್ನು ಬಳಸುವ ಚೀಸ್‌ಕೇಕ್ ಎಂಬ ಸಿಹಿತಿಂಡಿಯನ್ನು ಥ್ರೀಡಿ ಪ್ರಿಂಟ್ ಮಾಡುವಲ್ಲಿ ಅಮೆರಿಕಾದ ಕೊಲಂಬಿಯಾ ವಿವಿ ತಂತ್ರಜ್ಞರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಥ್ರೀಡಿ ಪ್ರಿಂಟ್ ಮಾಡಿದ ಆಹಾರವನ್ನು ಬಿಸಿಮಾಡಲು-ಬೇಯಿಸಲು ಲೇಸರ್ ಕಿರಣಗಳನ್ನು ಬಳಸಬಹುದು ಎಂದೂ ಅವರು ತೋರಿಸಿದ್ದಾರೆ.

ಇಂತಹ ಪ್ರಯೋಗಗಳ ಫಲಿತಾಂಶವಾಗಿ ಮುಂದೊಂದು ದಿನ ಅಡುಗೆಮನೆಗಳಲ್ಲಿ ಮಿಕ್ಸರ್-ಮೈಕ್ರೋವೇವ್‌ಗಳಷ್ಟೇ ಸಾಮಾನ್ಯವಾಗಿ ಥ್ರೀಡಿ ಪ್ರಿಂಟರುಗಳೂ ಕಾಣಸಿಗಬಹುದು ಎನ್ನುವುದು ಅವರ ಆಶಯ. ನಿರ್ದಿಷ್ಟ ಪೌಷ್ಟಿಕಾಂಶಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿಯೇ ಪಡೆದುಕೊಳ್ಳಬೇಕು ಎನ್ನುವವರಿಗೆ ಇಂತಹ ಯಂತ್ರಗಳು ವರದಾನವಾಗುವ ನಿರೀಕ್ಷೆಯಿದೆ. ಅಂತರಜಾಲದಲ್ಲಿ ವೀಡಿಯೊ ನೋಡಿ ಸುಮ್ಮನಾಗುವ ಬದಲು ಹೊಸರುಚಿಯ ರೆಸಿಪಿ ಡೌನ್‌ಲೋಡ್ ಮಾಡಿ ಪ್ರಿಂಟ್ ಹಾಕಿಕೊಳ್ಳುವುದು, ಊಟ ಮಾಡಲು ಹಠಮಾಡುವ ಮಕ್ಕಳಿಗೆ ಆಕರ್ಷಕ ಆಹಾರ ತೋರಿಸಿ ಏಮಾರಿಸುವುದೂ ಸಾಧ್ಯವಾಗಬಹುದೋ ಏನೋ.

ಅಂದಹಾಗೆ ಥ್ರೀಡಿ ಫುಡ್ ಪ್ರಿಂಟಿಂಗಿನ ಪ್ರಯೋಜನ ಮನೆ ಅಥವಾ ಹೋಟಲಿನ ಬಳಕೆಗೆ ಮಾತ್ರವೇ ಸೀಮಿತವೇನಲ್ಲ. ಹೆಚ್ಚು ಪುಷ್ಟಿಕರವಾದ ಆಹಾರ ಒದಗಿಸುವ ನಿಟ್ಟಿನಲ್ಲೂ ಥ್ರೀಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸುವ ಪ್ರಯತ್ನಗಳು ನಡೆದಿವೆ. ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಸೇರಿಸಿರುವ ಅಕ್ಕಿ - 'ಡಿಸೈನರ್ ರೈಸ್' - ಉತ್ಪಾದನೆಯಲ್ಲಿ ಥ್ರೀಡಿ ಪ್ರಿಂಟಿಂಗ್ ಬಳಸುವ ಪ್ರಯೋಗ ಭಾರತದಲ್ಲಿಯೇ ನಡೆದಿರುವುದು ಗಮನಾರ್ಹ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ, ಇಡ್ಲಿ ಮುದ್ರಿಸಿಕೊಡುವ ಪ್ರಿಂಟರು ಇನ್ನೂ ಸಿದ್ಧವಾಗಿಲ್ಲವಾದರೂ ಮುಂದೊಂದು ದಿನ ಅದು ನಮಗೆ ದೊರಕಬಹುದೆಂಬ ಭರವಸೆಯಂತೂ ಮೂಡಿದೆ. ಅಲ್ಲಿಯವರೆಗೆ, ಮನೆಯಲ್ಲಿ-ಹೋಟಲಿನಲ್ಲಿ ತಿಂದುಕೊಂಡು ಹೇಗೋ ಅಡ್ಜಸ್ಟ್ ಮಾಡಿಕೊಳ್ಳೋಣ ಬಿಡಿ!

ಏಪ್ರಿಲ್ ೧೮, ೨೦೨೩ರ ವಿಜಯ ಕರ್ನಾಟಕ 'ಟೆಕ್‌ನೋಟ' ಅಂಕಣದಲ್ಲಿ ಪ್ರಕಟವಾದ ಬರಹ

logo
ಇಜ್ಞಾನ Ejnana
www.ejnana.com