ಬಾನಂಚಿನಿಂದ ಬಂದ ಬಾನುಲಿಯ ಮಿಂಚು
'ಬಿಸಿಲು ಬೆಳದಿಂಗಳು' ವಿಜಯ ಕರ್ನಾಟಕದಲ್ಲಿ ನನ್ನ ಅಚ್ಚುಮೆಚ್ಚಿನ ಅಂಕಣಗಳಲ್ಲೊಂದು. ಮುಂದಿನ ಅಂಕಣದಲ್ಲಿ ಏನು ಬರೆಯಬೇಕೆಂದು ಅಂಕಣಕಾರರ ಮನಸ್ಸಿನೊಳಗೆ ಸುಳಿದಾಡುತ್ತಲೇ ಇರುವ ಆಲೋಚನೆಯ ಬಗ್ಗೆ ಕಳೆದ ವಾರ (ಫೆ. ೮) ಆ ಅಂಕಣದಲ್ಲಿ ಸೊಗಸಾದ ಪ್ರಸ್ತಾಪವಿತ್ತು. ಅದನ್ನು ಓದುವ ವೇಳೆಗೆ ಈ ಅಂಕಣದಲ್ಲಿ ನಾನೇನು ಬರೆಯಬೇಕೆನ್ನುವ ಯೋಚನೆಯೂ ಶುರುವಾಗಿತ್ತು.
ಹತ್ತಿರದಲ್ಲಿ ಯಾವೆಲ್ಲ ದಿನಾಚರಣೆಗಳಿವೆ ಎಂದು ಒಮ್ಮೆ ಹುಡುಕಿದೆ. ಫೆಬ್ರುವರಿ ೧೨ರಂದು ಚಾರ್ಲ್ಸ್ ಡಾರ್ವಿನ್ನನ ೨೧೫ನೇ ಜನ್ಮದಿನ ಎಂದು ಗೂಗಲ್ ಹೇಳಿತು. ಫೆಬ್ರುವರಿ ೧೪ಕ್ಕೆ ವ್ಯಾಲೆಂಟೈನ್ ದಿನವಿರುವುದು ಗೂಗಲ್ ಹೇಳದೆಯೇ ಗೊತ್ತಿತ್ತು, ಬಿಡಿ. ಇವತ್ತಿನ ವಿಶೇಷಗಳ ಪೈಕಿ ನನ್ನ ಗಮನ ಸೆಳೆದದ್ದೇ ವಿಶ್ವ ರೇಡಿಯೋ ದಿನಾಚರಣೆ. ವಿಶ್ವಸಂಸ್ಥೆಯ ರೇಡಿಯೋ ವಾಹಿನಿ - ಯುಎನ್ ರೇಡಿಯೋ - ಪ್ರಾರಂಭವಾದ ದಿನದ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಈ ಜಗತ್ತಿನಲ್ಲಿ ಶಾಶ್ವತವಾದದ್ದು ಬದಲಾವಣೆ ಮಾತ್ರ ಎಂದು ತತ್ತ್ವಜ್ಞಾನಿಗಳು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರಂತೆ. ಆ ಕಾಲದ ಬದಲಾವಣೆಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದವೋ ಏನೋ. ಆದರೆ ಈ ಕಾಲದಲ್ಲಂತೂ ಬದಲಾವಣೆಗಳಿಗೆ ಬಿಡುವೇ ಇರುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಂತೂ ಪ್ರತಿದಿನವೂ ಬದಲಾವಣೆಯ ಸಮಯವೇ. ಹೀಗಿರುವಾಗಲೂ ರೇಡಿಯೋದಂತಹ ಕೆಲ ಮಾಧ್ಯಮಗಳು ಸುದೀರ್ಘ ಅವಧಿಯವರೆಗೆ ಹೆಚ್ಚು ಬದಲಾಗದೆ ಉಳಿದುಕೊಂಡುಬಿಡುತ್ತವೆ, ನಮ್ಮ ಅಚ್ಚರಿಗೆ ಕಾರಣವಾಗುತ್ತವೆ, ಜಾಗತಿಕ ದಿನಾಚರಣೆಗಳ ಗೌರವವನ್ನೂ ಪಡೆದುಕೊಳ್ಳುತ್ತವೆ!
ನನ್ನ ತಾತ ಪಂಡಿತ ತಿರು ಶ್ರೀನಿವಾಸಾಚಾರ್ಯರು ೧೯೪೮ರಲ್ಲಿ ಬರೆದ 'ಪ್ರೌಢಶಾಲಾ ವ್ಯಾಕರಣ ಮತ್ತು ಪ್ರಬಂಧಸಾರ' ಎನ್ನುವ ಪುಸ್ತಕದಲ್ಲಿ ರೇಡಿಯೋ ಕುರಿತ ಪ್ರಬಂಧವೊಂದಿದೆ. ಅದರಲ್ಲಿ ಅವರು ರೇಡಿಯೋವನ್ನು ಪರಿಚಯಿಸಿರುವುದು ಹೀಗೆ: "ಕರ್ಣಾನಂದಕರವಾದ ಸಂಗೀತ ಸುಧಾಪಾನವನ್ನು ಕೇಳಿದವರಿಗೆಲ್ಲರಿಗೂ ಇದು ಮಾಡಿಸುತ್ತದೆ. ಅಕ್ಷರಾಭ್ಯಾಸ ಮತ್ತು ಪ್ರಜಾ ಮತ್ತು ಗ್ರಾಮಾಭ್ಯುದಯ ಕಾರ್ಯಗಳಲ್ಲಿ ಇದರ ಪ್ರಯೋಜನವು ಬಹಳ."
ಮನುಕುಲಕ್ಕೆ ಮಾಹಿತಿ, ಮನರಂಜನೆ ಹಾಗೂ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿರುವುದು ರೇಡಿಯೋದ ಹೆಚ್ಚುಗಾರಿಕೆ. ಆಕಾಶವಾಣಿ ಪ್ರಸಾರ ಪ್ರಾರಂಭವಾದ ಹೊಸತರಲ್ಲಿ ಎಲ್ಲರೂ ಅದನ್ನು ಕೇಳುವುದಕ್ಕೆ ಅನುಕೂಲವಾಗುವಂತೆ ಮೈಸೂರಿನ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಏರ್ಪಾಟು ಮಾಡಲಾಗಿತ್ತಂತೆ. ಅಂತಹ ಸನ್ನಿವೇಶದಿಂದ ಪ್ರಾರಂಭಿಸಿ ಇವತ್ತಿನ ಮೊಬೈಲ್ ಫೋನ್ ಹಾಗೂ ಕಾರ್ ರೇಡಿಯೋಗಳವರೆಗೆ ಈ ಮಾಧ್ಯಮ ತನ್ನ ಕೇಳುಗರ ನಂಟನ್ನು ಹಾಗೆಯೇ ಉಳಿಸಿಕೊಂಡಿದೆ. ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ತಲುಪುವುದಕ್ಕೆ, ತುರ್ತುಸ್ಥಿತಿ ಹಾಗೂ ಪ್ರಕೃತಿವಿಕೋಪಗಳಂತಹ ಸನ್ನಿವೇಶಗಳಲ್ಲೂ ಸಂವಹನವನ್ನು ಸಾಧ್ಯವಾಗಿಸುವುದಕ್ಕೆ ರೇಡಿಯೋ ಇಂದಿಗೂ ವಿಶ್ವಾಸಾರ್ಹವಾದ ಆಯ್ಕೆ.
ಇಷ್ಟೆಲ್ಲ ಸಮೃದ್ಧವಾದ ಇತಿಹಾಸ, ಇಂದಿಗೂ ಉಳಿದಿರುವ ಪ್ರಸ್ತುತತೆ ಹಾಗೂ ಭರವಸೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು 'Radio: A century informing, entertaining and educating' ಎನ್ನುವುದನ್ನು ೨೦೨೪ರ ರೇಡಿಯೋ ದಿನದ ಕೇಂದ್ರವಿಷಯವನ್ನಾಗಿ ಆರಿಸಿಕೊಳ್ಳಲಾಗಿದೆ. ರೇಡಿಯೋದ ಇತಿಹಾಸ ಹಾಗೂ ವರ್ತಮಾನಗಳನ್ನು ಸಂಭ್ರಮಿಸುವುದರ ಜೊತೆಗೆ ಅದರ ಭವಿಷ್ಯದ ಬಗೆಗೂ ಆಲೋಚಿಸುವ ಅವಕಾಶವನ್ನು ಈ ದಿನ ತೆರೆದಿಟ್ಟಿದೆ.
ಶತಮಾನದ ನಂತರವೂ ಜನಪ್ರಿಯತೆ ಉಳಿಸಿಕೊಂಡಿದೆ ಎಂದಮಾತ್ರಕ್ಕೆ ರೇಡಿಯೋ ಮಾಧ್ಯಮದೆದುರು ಸವಾಲುಗಳೇ ಇಲ್ಲವೇ? ಖಂಡಿತಾ ಇವೆ. ಡಿಜಿಟಲ್ ವೇದಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಜೊತೆ ಸ್ಪರ್ಧಿಸಬೇಕಾದ ಅನಿವಾರ್ಯತೆಯಿಂದ ಪ್ರಾರಂಭಿಸಿ ವಾಹಿನಿಗಳನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗುವಲ್ಲಿನ ಕಷ್ಟಗಳವರೆಗೆ ಅನೇಕ ಸವಾಲುಗಳನ್ನು ರೇಡಿಯೋ ಇದೀಗ ಎದುರಿಸುತ್ತಿದೆ.
ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಹಲವು ಪ್ರಯತ್ನಗಳು ಈಗಾಗಲೇ ನಡೆದಿರುವುದು ಗಮನಾರ್ಹ. ದೊಡ್ಡ ವ್ಯಾಪ್ತಿಯ ರೇಡಿಯೋ ವಾಹಿನಿಗಳ ಜೊತೆಯಲ್ಲಿ ಸ್ಥಳೀಯ ಮಟ್ಟದ ಸಮುದಾಯ ಬಾನುಲಿ ಕೇಂದ್ರಗಳನ್ನೂ ಪ್ರೋತ್ಸಾಹಿಸುವುದು ಇಂತಹ ಪ್ರಯತ್ನಗಳಲ್ಲೊಂದು. ಸೀಮಿತ ಭೌಗೋಳಿಕ ವ್ಯಾಪ್ತಿಯ ಇಂತಹ ಕೇಂದ್ರಗಳು ಸ್ಥಳೀಯ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯ ಕೊಡುವುದು ಮಾತ್ರವಲ್ಲದೆ, ಸ್ಥಳೀಯ ಭಾಷೆಯ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುವ ಮೂಲಕ ಜನರನ್ನು ಹೆಚ್ಚು ಸಮರ್ಥವಾಗಿಯೂ ತಲುಪುತ್ತವೆ.
ಡಿಜಿಟಲ್ ವೇದಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಪ್ರತಿಸ್ಪರ್ಧಿಗಳಂತೆ ಪರಿಗಣಿಸುವ ಬದಲು ಅವನ್ನು ರೇಡಿಯೋ ಮಾಧ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳುವುದು ಇನ್ನೊಂದು ಪ್ರಯತ್ನ. ಈ ಪೈಕಿ ಸಾಂಪ್ರದಾಯಿಕ ರೇಡಿಯೋ ವಾಹಿನಿಗಳ ಪ್ರಸಾರವನ್ನು ಅಂತರಜಾಲದ ಮೂಲಕವೂ ಲಭ್ಯವಾಗಿಸುವ ವ್ಯವಸ್ಥೆ ಈಗಾಗಲೇ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದೇರೀತಿ ಅಂತರಜಾಲದಲ್ಲಿ ಮಾತ್ರವೇ ಅಸ್ತಿತ್ವದಲ್ಲಿರುವ ಇಂಟರ್‌ನೆಟ್ ರೇಡಿಯೋ ವಾಹಿನಿಗಳೂ ಇವೆ.
ಮಾಹಿತಿಯಿರಲಿ, ಮನರಂಜನೆಯಿರಲಿ, ನಮಗೆ ಬೇಕಾದ್ದು ಬೇಕೆಂದಾಗ ಸಿಗಬೇಕೆನ್ನುವುದು ಇಂದಿನ ಟ್ರೆಂಡು. ಇದನ್ನು ರೇಡಿಯೋಗೂ ಅನ್ವಯಿಸುವುದು ಹೇಗೆ?
ಬೇಕೆಂದಾಗ ಬೇಕಾದ್ದನ್ನು ಬರೆದುಕೊಡುವ ಚಾಟ್ ಜಿಪಿಟಿಯ ಹಾಗೆ ರೇಡಿಯೋ ಜಿಪಿಟಿ ಎನ್ನುವುದನ್ನೇನಾರೂ ಮಾಡಿದರೆ ಆಗಬಹುದು ಎಂದಿರಾ? ನಿಮ್ಮ ಅನಿಸಿಕೆ ಸರಿಯಾಗಿದೆ. ಆಧುನಿಕ ಜಗತ್ತಿನ ಇತರೆಲ್ಲ ಕ್ಷೇತ್ರಗಳಂತೆ ರೇಡಿಯೋ ಮಾಧ್ಯಮದಲ್ಲೂ ಬದಲಾವಣೆ ತರಲು ಎಐ ತಂತ್ರಜ್ಞಾನ ಈಗಾಗಲೇ ಸಿದ್ಧವಾಗಿದೆ. ಜನಪ್ರಿಯವಾಗಿರುವ ಹಾಡುಗಳನ್ನು ಹಾಕುವುದು, ವಿರಾಮದಲ್ಲಿ ಟ್ರಾಫಿಕ್ ಸ್ಥಿತಿಗತಿಯ ಬಗ್ಗೆ - ಹೊಸ ಸುದ್ದಿಗಳ ಬಗ್ಗೆ ಮಾಹಿತಿ ಕೊಡುವುದು - ಮುಂತಾದ ಕೆಲಸಗಳನ್ನೆಲ್ಲ ಈ ತಂತ್ರಜ್ಞಾನ ಮಾಡಬಲ್ಲದು ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಲಾಗಿದೆ. ತಂತ್ರಜ್ಞಾನ ಇನ್ನಷ್ಟು ಮುಂದುವರಿದಂತೆ, ಪ್ರತಿಯೊಬ್ಬರಿಗೂ ಯಾವ ಕಾರ್ಯಕ್ರಮ ಇಷ್ಟವೆನ್ನುವುದನ್ನು ಅರಿತುಕೊಂಡು ಅದನ್ನೇ ಕೇಳಿಸುವ ವ್ಯವಸ್ಥೆಗಳೂ ಸಿದ್ಧವಾಗುವ ನಿರೀಕ್ಷೆಯೂ ಇದೆ.
ಇದೆಲ್ಲ ಕಾರ್ಯಗತಗೊಳ್ಳುವವರೆಗೂ ಏನು ಮಾಡುವುದು ಎನ್ನುವವರಿಗೂ ಉತ್ತರ ಸಿದ್ಧವಾಗಿದೆ: ನಮ್ಮ ಇಷ್ಟದ ಕಾರ್ಯಕ್ರಮವನ್ನು ನಮಗೆ ಇಷ್ಟವಾದಾಗ ಕೇಳುವ ಸೌಲಭ್ಯವನ್ನು ಪಾಡ್‌ಕಾಸ್ಟ್‌ಗಳು ಈಗಾಗಲೇ ಒದಗಿಸಿಕೊಟ್ಟಿವೆಯಲ್ಲ!
ಯಾವುದೇ ವಿಷಯ ಕುರಿತ ಭಾಷಣ, ಸಂದರ್ಶನ, ಚರ್ಚೆ ಮುಂತಾದ ಮಾಹಿತಿಯನ್ನು ಅಂತರಜಾಲದಲ್ಲಿ ಪ್ರಕಟಿಸುವುದು, ಹಾಗೂ ಬೇಕೆಂದಾಗ ಕೇಳುವುದನ್ನು ಪಾಡ್‌ಕಾಸ್ಟಿಂಗ್ ಪರಿಕಲ್ಪನೆ ಸಾಧ್ಯವಾಗಿಸುತ್ತದೆ. ಬೇರೇನೋ ಕೆಲಸಮಾಡುವಾಗ, ಹೊರಗೆ ಪ್ರಯಾಣಿಸುವಾಗ, ಕಡೆಗೆ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಾಗಲೂ ಪಾಡ್‌ಕಾಸ್ಟ್‌ಗಳನ್ನು ನಮ್ಮ ಮೊಬೈಲಿನಲ್ಲೋ ಟ್ಯಾಬ್ಲೆಟ್ಟಿನಲ್ಲೋ ಬಹಳ ಸುಲಭವಾಗಿ ಕೇಳಬಹುದು.
ಮೊದಮೊದಲು ಇಂಗ್ಲಿಷಿನಲ್ಲೇ ಹೆಚ್ಚಾಗಿ ಪ್ರಕಟವಾಗುತ್ತಿದ್ದ ಪಾಡ್‌ಕಾಸ್ಟ್‌ಗಳು ಇದೀಗ ಕನ್ನಡವೂ ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಲಭ್ಯವಿವೆ. ವಿಜ್ಞಾನದ ಮಾಹಿತಿಯನ್ನು ಹಂಚಿಕೊಳ್ಳಲೆಂದು ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ರೂಪಿಸಿದ 'ಜಾಣಸುದ್ದಿ' ಕನ್ನಡ ಪಾಡ್‌ಕಾಸ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುಮಾಡಿರುವುದು ವಿಶೇಷ. ಪಾಡ್‌ಕಾಸ್ಟಿಂಗ್ ವೇದಿಕೆಗಳಷ್ಟೇ ಅಲ್ಲದೆ ವಾಟ್ಸಾಪನ್ನೂ ಪಾಡ್‌ಕಾಸ್ಟ್ ಪ್ರಸಾರಕ್ಕೆ ಬಳಸಿಕೊಳ್ಳುತ್ತಿರುವುದು ಅದರ ಹೆಚ್ಚುಗಾರಿಕೆ.
ಹೀಗೆ ರೇಡಿಯೋದ ಬ್ರಾಡ್‌ಕಾಸ್ಟ್ ಜೊತೆಗೆ ಅಂತರಜಾಲದ ಪಾಡ್‌ಕಾಸ್ಟ್ ಕೂಡ ಜನಪ್ರಿಯವಾಗುತ್ತಿರುವುದು ಖುಷಿಯ ವಿಷಯವೇ ಸರಿ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಸಾಗಿಬಂದಿರುವ ರೇಡಿಯೋ ಮಾಧ್ಯಮ ಮುಂದೆಯೂ ಹೀಗೆಯೇ ಮಿಂಚಿ ಇನ್ನಷ್ಟು ಮೈಲಿಗಲ್ಲುಗಳನ್ನು ಸಂಭ್ರಮಿಸುವಂತಾದರೆ ಅದೂ ಖುಷಿಯೇ!
ಫೆಬ್ರುವರಿ ೧೩, ೨೦೨೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ೬೧ನೇ ಕಂತು