ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ
ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆMyriams-Fotos / pixabay.com

ಮಧುಮೇಹ ಅಂದರೆ ಏನು? ಅದಕ್ಕೆ ಪರಿಹಾರ ಏನು?

ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು; ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ತಿನ್ನುತ್ತಲೇ ಇರುವುದರಿಂದ ಹೆಚ್ಚು ಹೆಚ್ಚು ಗ್ಲುಕೋಸ್ ರಕ್ತವನ್ನು ಸೇರುತ್ತಲೇ ಇರುತ್ತದೆ. ಇದೊಂದು ವಿಷಮ ಆವರ್ತನ ಚಕ್ರ.

ರಕ್ತದೊಳಗಿನ ಗ್ಲುಕೋಸ್ ಅಂಶ ಇನ್ಸುಲಿನ್ ಎಂಬ ರಸದೂತದ (hormone) ನೆರವಿನಿಂದ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುತ್ತದೆ. ಇನ್ಸುಲಿನ್ ಜಠರದ ಅಡಿಭಾಗದಲ್ಲಿರುವ ಮೇದೋಜೀರಕ (pancreas) ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಅಳಿಲಿನ ಬಾಲದ ಆಕಾರದಲ್ಲಿರುವ ಈ ಮೇದೋಜೀರಕ ಗ್ರಂಥಿಯ ತುಟ್ಟತುದಿಯ ಭಾಗಗಲ್ಲಿ ಇರುವ ಬೀಟಾ-ಕೋಶಗಳೆಂಬ (beta-cells) ವಿಶಿಷ್ಟ ಕೋಶಗಳಿಂದ ಇನ್ಸುಲಿನ್ ರಸದೂತ ಬಿಡುಗಡೆಯಾಗಿ ನೇರವಾಗಿ ರಕ್ತವನ್ನು ಸೇರುತ್ತದೆ. ಒಂದು ವೇಳೆ ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ. ಆಗ ಜೀವಕೋಶಗಳಿಗೆ ಶಕ್ತಿಯ ಸಂಚಯ ಕಡಿಮೆಯಾಗಿ, ಅವು ಕಾರ್ಯವಿಮುಖವಾಗಿ, ಕಡೆಗೆ ನಶಿಸುತ್ತವೆ. ಹೀಗೆ ಇನ್ಸುಲಿನ್ ಕೊರತೆ ಉಂಟಾಗುವ ಶರೀರದ ಅವ್ಯವಸ್ಥೆಯೇ ಮಧುಮೇಹ (diabetes mellitus).

ಜೀವಕೋಶಗಳಿಗೆ ಗ್ಲುಕೋಸ್ ತಲುಪಿಸುವ ಪ್ರಕ್ರಿಯೆಯಲ್ಲಿ ಇನ್ಸುಲಿನ್ ಪಾತ್ರ
ಜೀವಕೋಶಗಳಿಗೆ ಗ್ಲುಕೋಸ್ ತಲುಪಿಸುವ ಪ್ರಕ್ರಿಯೆಯಲ್ಲಿ ಇನ್ಸುಲಿನ್ ಪಾತ್ರhttp://www.scientificanimations.com/, CC BY-SA 4.0, via Wikimedia Commons

ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಸಂಖ್ಯೆಯಲ್ಲಿ ಅಥವಾ ಕಾರ್ಯದಕ್ಷತೆಯಲ್ಲಿ ಕೊರತೆಯಾದರೆ, ಆಗ ಇನ್ಸುಲಿನ್ ಸ್ರವಿಸುವ ಪ್ರಮಾಣ ಕಡಿಮೆ ಆಗುತ್ತದೆ. ಇದನ್ನು ಎರಡನೇ ಮಾದರಿಯ ಮಧುಮೇಹ ಎನ್ನಬಹುದು (Type 2 Diabetes Mellitus). ಆಹಾರದಲ್ಲಿನ ಸಕ್ಕರೆಯ ಅಂಶವನ್ನು ಕರುಳಿನ ಲೋಳೆಪದರದ ಕೋಶಗಳು ಹೀರುತ್ತಲೇ ಇರುವುದರಿಂದ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಹೀಗಿದ್ದರೂ ಇನ್ಸುಲಿನ್ ಕೊರತೆಯ ಕಾರಣದಿಂದ ಆ ಗ್ಲುಕೋಸ್ ಅಂಗಾಂಗಗಳ ಜೀವಕೋಶಗಳಿಗೆ ತಲುಪುವುದಿಲ್ಲ. ಈ ಜೀವಕೋಶಗಳು “ನಾವು ಕೆಲಸ ಮಾಡಲು ನಮ್ಮಲ್ಲಿ ಗ್ಲುಕೋಸ್ ದಾಸ್ತಾನು ಇಲ್ಲ” ಎಂದು ಮೆದುಳಿಗೆ ಸಂದೇಶ ರವಾನಿಸುತ್ತವೆ. ಮೆದುಳು ಇದನ್ನು “ಜೀವಕೋಶಗಳಲ್ಲಿ ಗ್ಲುಕೋಸ್ ಇಲ್ಲ ಎಂದರೆ ಶರೀರಕ್ಕೆ ಆಹಾರದ ಅವಶ್ಯಕತೆ ಇದೆ” ಎಂದು ಅರ್ಥೈಸುತ್ತದೆ; ಹೊಟ್ಟೆಗೆ ಹಸಿವಿನ ಸಂಕೇತಗಳನ್ನು ರವಾನಿಸುತ್ತದೆ. ಹೀಗಾಗಿ ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು; ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ಹೆಚ್ಚಾಗಿ ತಿನ್ನುತ್ತಲೇ ಇರುವುದರಿಂದ ಹೆಚ್ಚು ಹೆಚ್ಚು ಗ್ಲುಕೋಸ್ ರಕ್ತವನ್ನು ಸೇರುತ್ತಲೇ ಇರುತ್ತದೆ. ಇದೊಂದು ವಿಷಮ ಆವರ್ತನ ಚಕ್ರ (vicious cycle). ಹೀಗೆ ರಕ್ತಕ್ಕೆ ಸೇರಿದ ಗ್ಲುಕೋಸ್ ನ ಅಧಿಕತರ ಅಂಶ ಜೀವಕೋಶಗಳ ಒಳಗೆ ಹೋಗಲು ಸಾಧ್ಯವಾಗದೆ ರಕ್ತದಲ್ಲೇ ಉಳಿದುಬಿಡುತ್ತದೆ. ರಕ್ತದಲ್ಲಿ ಗ್ಲುಕೋಸ್ ಅಂಶದ ಪ್ರಮಾಣವನ್ನು ಪರೀಕ್ಷಿಸಿದಾಗ ಅದು ಸಾಮಾನ್ಯಕ್ಕಿಂತ ಅಧಿಕವಾಗಿರುತ್ತದೆ. ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಒಂದು ಮೇಲ್ಮಿತಿಗಿಂತ ಹೆಚ್ಚಾಗಿ ಏರಿದಾಗ ಕಡೆಗೆ ಮೂತ್ರಪಿಂಡಗಳು (kidney) ಆ ಅಧಿಕ ಗ್ಲುಕೋಸ್ ಅಂಶವನ್ನು ಸೋಸಿ ಮೂತ್ರದಲ್ಲಿ ಹೊರಹಾಕುತ್ತವೆ. ಆ ಹಂತದಲ್ಲಿ ಮೂತ್ರವನ್ನು ಪರೀಕ್ಷಿಸಿದರೆ ಅದರಲ್ಲಿ ಗ್ಲುಕೋಸ್ ಅಂಶ ಪತ್ತೆಯಾಗುತ್ತದೆ. ಹೀಗೆ ಮೂತ್ರದಲ್ಲಿ ಹೊರಹೋಗುವ ಗ್ಲುಕೋಸ್ ತನ್ನೊಂದಿಗೆ ಸಾಕಷ್ಟು ಪ್ರಮಾಣದ ನೀರನ್ನೂ ಜೊತೆಗೆ ಒಯ್ಯುತ್ತದೆ. ಈ ಕಾರಣಕ್ಕೇ ಮಧುಮೇಹ ರೋಗಿಗಳಲ್ಲಿ ಅತಿಮೂತ್ರ ಸಮಸ್ಯೆ ಕಾಡುತ್ತದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗಿ ದಾಹ ಹೆಚ್ಚುತ್ತದೆ. ಸಾಕಷ್ಟು ನೀರು ಕುಡಿಯಲು ಸಿಗದೇ ಹೋದರೆ ಅಥವಾ ನೀರು ಸೇವನೆ ತಡವಾದರೆ ಶರೀರ ನಿತ್ರಾಣವಾಗುತ್ತದೆ. ಸುಸ್ತು, ತಲೆಸುತ್ತು, ಬವಳಿಕೆ ಕಾಡುತ್ತವೆ.

ಶರೀರದ ಕ್ರಿಯೆಗಳಿಗೆ ಅವಶ್ಯಕವಾದಷ್ಟು ಪ್ರಮಾಣದ ಇನ್ಸುಲಿನ್ ದೊರಕದೇ ಹೋದಾಗ ಮೇದೋಜೀರಕ ಗ್ರಂಥಿಯ ಅಳಿದುಳಿದ ಬೀಟಾ ಕೋಶಗಳಿಂದ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸಬಲ್ಲ ಔಷಧಗಳನ್ನು ಸೇವಿಸಿ ಶರೀರದ ಇನ್ಸುಲಿನ್ ಕೊರತೆಯನ್ನು ನೀಗಬೇಕಾಗುತ್ತದೆ. ಅಂದರೆ, ಮೇದೋಜೀರಕ ಗ್ರಂಥಿಯಲ್ಲಿ ಬೀಟಾ ಕೋಶಗಳ ಸಂಖ್ಯೆ ಕಡಿಮೆ ಇದ್ದರೂ ಈ ಔಷಧಗಳು ಇಂತಹ ಪ್ರತಿಯೊಂದು ಬೀಟಾ ಕೋಶವೂ ಹೆಚ್ಚಿಗೆ ಕೆಲಸ ಮಾಡುವಂತೆ ಪ್ರಚೋದಿಸಿ ಒಟ್ಟಾರೆ ಇನ್ಸುಲಿನ್ ಸ್ರವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೀಗಾಗಿ, ಇಂತಹ ಔಷಧಗಳು ಕೆಲಸ ಮಾಡಬೇಕೆಂದರೆ ಒಂದು ಕನಿಷ್ಠ ಸಂಖ್ಯೆಯ ಬೀಟಾ ಕೋಶಗಳು ಉಳಿದಿರಬೇಕು; ಹಾಗೂ, ಆ ಬೀಟಾ ಕೋಶಗಳು ಔಷಧಗಳ ಪ್ರಭಾವದಿಂದ ಹೆಚ್ಚಿನ ಇನ್ಸುಲಿನ್ ಸ್ರವಿಸಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು. ಇವೆರಡರಲ್ಲಿ ಯಾವುದೇ ಒಂದು ಇಲ್ಲವಾದರೂ ಇಂತಹ ಔಷಧಗಳು ನಿರುಪಯುಕ್ತವಾಗುತ್ತವೆ.

ಒಂದು ವೇಳೆ ಬೀಟಾ ಕೋಶಗಳು ಸಂಪೂರ್ಣವಾಗಿ ನಾಶವಾದರೆ, ಅಥವಾ ಯಾವುದಾದರೂ ವಿಷದ, ಕಾಯಿಲೆಯ, ಅಪಘಾತದ ಯಾ ಶಸ್ತ್ರಚಿಕಿತ್ಸೆಯ ಕಾರಣಗಳಿಂದ ಮೇದೋಜೀರಕ ಗ್ರಂಥಿಯ ಬಾಲದ ಭಾಗಕ್ಕೆ ಘಾಸಿಯಾದರೆ ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತವಾಗಬಹುದು. ಇನ್ನು ಕೆಲವರಲ್ಲಿ ಹುಟ್ಟಿನಿಂದಲೇ ಈ ಬೀಟಾ ಕೋಶಗಳ ಅನುಪಸ್ಥಿತಿ ಇರಬಹುದು. ಇದನ್ನು ಒಂದನೆಯ ಮಾದರಿಯ ಮಧುಮೇಹ ಎನ್ನಬಹುದು (Type 1 Diabetes Mellitus). ಇದು ಮಧುಮೇಹದ ಅತ್ಯಂತ ತೀವ್ರತಮ ಹಂತ. ದೇಹ ಬಹಳ ಬೇಗ ಪ್ರಜ್ಞಾಹೀನ ಸ್ಥಿತಿಯನ್ನು ತಲುಪುತ್ತದೆ. ಇಂತಹ ಎಲ್ಲಾ ಸಂದರ್ಭಗಳಲ್ಲೂ ಮೇಲೆ ಹೇಳಿದ ಔಷಧಗಳು ನಿರುಪಯುಕ್ತ. ಬೀಟಾ ಕೋಶಗಳೇ ಇಲ್ಲವೆಂದ ಮೇಲೆ ಔಷಧಗಳು ಏನನ್ನು ಪ್ರಚೋದಿಸಬೇಕು? ಇಂತಹ ಸಂದರ್ಭಗಳಲ್ಲಿ ಚುಚ್ಚುಮದ್ದಿನ ಮೂಲಕ ಕೃತಕ ಇನ್ಸುಲಿನ್ ಅನ್ನು ಶರೀರಕ್ಕೆ ನೀಡಬೇಕಾಗುತ್ತದೆ.

ಇಂಟರ್‌ನ್ಯಾಶನಲ್ ಡಯಾಬಿಟಿಸ್ ಫೆಡರೇಶನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರತಿವರ್ಷವೂ ನವೆಂಬರ್ 14ರಂದು ಅಂತಾರಾಷ್ಟ್ರೀಯ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. 1922ರಲ್ಲಿ ಚಾರ್ಲ್ಸ್ ಬೆಸ್ಟ್ ಎಂಬಾತನ ಜೊತೆಯಲ್ಲಿ ಇನ್ಸುಲಿನ್ ಅನ್ನು ಕಂಡುಹಿಡಿದ ಸರ್ ಫ್ರೆಡರಿಕ್ ಬ್ಯಾಂಟಿಂಗ್ ಅವರ ಜನ್ಮದಿನ ಎಂಬ ಕಾರಣದಿಂದ ನವೆಂಬರ್ 14ನ್ನು ಈ ದಿನಾಚರಣೆಗಾಗಿ ಆರಿಸಿಕೊಳ್ಳಲಾಗಿದೆ. ಈ ಸಂಶೋಧನೆಗಾಗಿ ಸರ್ ಫ್ರೆಡರಿಕ್ ಬಾಂಟಿಂಗ್ ಅವರಿಗೆ ನೊಬೆಲ್ ಪ್ರಶಸ್ತಿಯ ಗೌರವವೂ ದೊರಕಿದೆ. ಮೊತ್ತಮೊದಲ ಬಾರಿಗೆ ಇನ್ಸುಲಿನ್ ಚುಚ್ಚುಮದ್ದನ್ನು ಯಶಸ್ವಿಯಾಗಿ ನೀಡಲಾದ ದಿನಕ್ಕೆ (23 ಜನವರಿ 1922) ಬರುವ ವರ್ಷ ನೂರು ತುಂಬಲಿದ್ದು, 'Insulin at 100' ಎಂಬ ಕಾರ್ಯಕ್ರಮದೊಂದಿಗೆ ಈ ಸಂದರ್ಭವನ್ನು ಆಚರಿಸಲಾಗುತ್ತಿದೆ.
ಪ್ರತಿವರ್ಷವೂ ನವೆಂಬರ್ 14ರಂದು ಅಂತಾರಾಷ್ಟ್ರೀಯ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ
ಪ್ರತಿವರ್ಷವೂ ನವೆಂಬರ್ 14ರಂದು ಅಂತಾರಾಷ್ಟ್ರೀಯ ಮಧುಮೇಹ ದಿನವನ್ನು ಆಚರಿಸಲಾಗುತ್ತದೆworlddiabetesday.org

ಕೆಲವು ವರ್ಷಗಳ ಹಿಂದೆ ಪ್ರಾಣಿಗಳ (ಮುಖ್ಯವಾಗಿ ಹಂದಿ ಮತ್ತು ದನ) ಮೇದೋಜೀರಕ ಗ್ರಂಥಿಗಳಿಂದ ಇನ್ಸುಲಿನ್ ಅನ್ನು ತೆಗೆದು ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತಿತ್ತು. ಮನುಷ್ಯ ಶರೀರದ ಇನ್ಸುಲಿನ್‌ಗೂ ಪ್ರಾಣಿಜನ್ಯ ಇನ್ಸುಲಿನ್‌ಗೂ ಅತ್ಯಲ್ಪ ವ್ಯತ್ಯಾಸವಿರುತ್ತದೆ. ಇಂತಹ ಪ್ರಾಣಿಜನ್ಯ ಇನ್ಸುಲಿನ್ ಮಧುಮೇಹದ ಚಿಕಿತ್ಸೆಯಲ್ಲಿ ತಕ್ಕಮಟ್ಟಿಗೆ ಸಫಲವಾದರೂ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ಆದರೆ 1955 ನೆಯ ವರ್ಷದಲ್ಲಿ ಫ್ರೆಡ್ರಿಕ್ ಸ್ಯಾಂಗರ್ ಎಂಬ ವಿಜ್ಞಾನಿ ಮಾನವ ಇನ್ಸುಲಿನ್ ನ ರಾಸಾಯನಿಕ ರಚನೆಯನ್ನು ಕಂಡುಹಿಡಿದರು. ಇದನ್ನು ಉಪಯೋಗಿಸಿಕೊಂಡು ಆನಂತರದ ಅವಿಷ್ಕಾರಗಳು ಮಾನವ ಇನ್ಸುಲಿನ್ ಅನ್ನು ಕೃತಕವಾಗಿ ಯಥಾವತ್ತಾಗಿ ಪ್ರಯೋಗಶಾಲೆಗಳಲ್ಲಿ ತಯಾರಿಸಲು ಸಹಾಯ ಮಾಡಿದವು. ಇಂತಹ ಇನ್ಸುಲಿನ್ ನ ಅಡ್ಡ ಪರಿಣಾಮಗಳು ತೀರಾ ಕಡಿಮೆ. ಈ ರೀತಿಯ ಮಾನವ ಇನ್ಸುಲಿನ್ ನ ಕೃತಕ ತಯಾರಿಕೆ ಈಗ ಬೃಹತ್ ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ಆಗುತ್ತದೆ. ಇದರಿಂದ ನಿಖರ ರಚನೆಯ ಮಾನವ ಇನ್ಸುಲಿನ್ ಕಡಿಮೆ ಬೆಲೆಯಲ್ಲಿ ಸಿಗಲು ಆರಂಭವಾಗಿದೆ. ಪ್ರಪಂಚದಾದ್ಯಂತ ಮಧುಮೇಹ ರೋಗಿಗಳಿಗೆ ಇದು ವರದಾನವಾಗಿದೆ.

logo
ಇಜ್ಞಾನ Ejnana
www.ejnana.com