ದೇಹವನ್ನು ಕಾಣದಂತೆ ಮಾಯ ಮಾಡಬಹುದೇ?
ಸುಪ್ರಸಿದ್ಧ ಆಂಗ್ಲ ಕಥೆಗಾರ ಹೆಚ್. ಜಿ. ವೆಲ್ಸ್ ಸ್ವಾರಸ್ಯಕರ ವೈಜ್ಞಾನಿಕ ಕಲ್ಪನೆಗಳಿಗೆ ಹೆಸರುವಾಸಿ. ಈತ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ದಿ ಇನ್ವಿಸಿಬಲ್ ಮ್ಯಾನ್ ಎನ್ನುವ ವೈಜ್ಞಾನಿಕ ಕಥೆಯೊಂದನ್ನು ಬರೆದಿದ್ದ. ಆ ಕಥೆಯ ಹೀರೋ ಒಬ್ಬ ವಿಜ್ಞಾನಿ. ಆತ ಒಂದು ದ್ರವವನ್ನು ಸಂಶೋಧಿಸುತ್ತಾನೆ. ದ್ರವದ ವೈಶಿಷ್ಟ್ಯವೇನೆಂದರೆ ಅದನ್ನು ಕುಡಿದವರ ದೇಹದ ಎಲ್ಲ ಅಂಗಗಳೂ ಕೂಡ ಗಾಜಿನಂತೆ ಪಾರದರ್ಶಕವಾಗಿ ಬಿಡುತ್ತವೆ. ದೇಹದ ಎಲ್ಲ ಭಾಗಗಳ ವಕ್ರೀಭವನ ಸೂಚ್ಯಂಕ ಅಥವಾ ರಿಫ್ರಾಕ್ಟಿವ್ ಇಂಡೆಕ್ಸನ್ನು ಗಾಳಿಯದರಂತೆಯೇ ಮಾಡಿಬಿಟ್ಟರೆ ಆಗ ಗಾಳಿಯಿಂದ ದೇಹದೊಳಗೆ ಸಾಗುವ ಬೆಳಕು ಇದ್ದ ಹಾದಿಯಲ್ಲಿಯೇ ಸಾಗುತ್ತದೆ. ಇನ್ನೊಂದು ಬದಿಯಿಂದ ನೋಡುವವರಿಗೆ ಆ ದೇಹ ಅಲ್ಲಿ ಇದ್ದಂತೆ ತೋರುವುದೇ ಇಲ್ಲ. ಇದು ಆತನ ತಂತ್ರ. ಹೀಗೆ ಅದೃಶ್ಯನಾದ ಮನುಷ್ಯ ಏನೆಲ್ಲ ಮಾಡುತ್ತಾನೆ. ಕೊನೆಗೆ ಆ ಆವಿಷ್ಕಾರವೇ ಅವನಿಗೆ ಹೇಗೆ ಮುಳುವಾಗುತ್ತದೆ ಎನ್ನುವುದು ಕಥೆ.
ಮಾಯವಾಗುವ ಮನುಷ್ಯರ ಬಗೆಗಿನ ಕಲ್ಪನೆಗಳು ಬಹಳವಿವೆ. ಹಾಗೆಯೇ ಇದನ್ನು ಮಾಡುತ್ತೇವೆ ಎಂದು ಕಣ್ಕಟ್ಟು ವಿದ್ಯೆಯಿಂದ ಮೋಸ ಮಾಡುವ ಮಾಂತ್ರಿಕರೂ ಇದ್ದಾರೆನ್ನಿ. ನಮ್ಮ ಪುರಾಣಗಳಲ್ಲಿಯೂ ಬೇಕಿದ್ದಾಗ ಅದೃಶ್ಯವಾಗುವ ದೇವತೆಗಳ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಇವೆಲ್ಲ ಕಲ್ಪನೆಗಳಷ್ಟೆ. ನಿಜಕ್ಕೂ ಒಂದು ದೇಹವನ್ನು ನಾವು ಕಾಣದಂತೆ ಮಾಯ ಮಾಡಬಹುದೇ? ಪಾರದರ್ಶಕಗೊಳಿಸಬಹುದೇ? ಸಾಧ್ಯವೇ?
ನಿಮಗೆ ಇಂತಹ ಅನುಮಾನಗಳು ಇದ್ದಲ್ಲಿ ಬಹುಶಃ ಇತ್ತೀಚಿನ ಇಲೈಫ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ಬಹಳ ಸ್ವಾರಸ್ಯಕರವೆನ್ನಿಸಬಹುದು. ಅಮೆರಿಕೆಯ ಹ್ಯೂಸ್ಟನ್ ನಗರದಲ್ಲಿರುವ ಬೇಯರ್ ಕಾಲೇಜ್ ಆಫ್ ಮೆಡಿಸಿನ್ನಿನ ವೈದ್ಯ ವಿಜ್ಞಾನಿ ಜೊಶುವಾ ವೈಥ್ ಮತ್ತು ಸಂಗಡಿಗರು ಇಲಿಯ ಮಿದುಳನ್ನು ಸಂಪೂರ್ಣ ಪಾರದರ್ಶಕವನ್ನಾಗಿ ಮಾಡಿದ್ದಾರೆಂದು ಈ ಪತ್ರಿಕೆ ವರದಿ ಮಾಡಿದೆ. ಕೇವಲ ನಲವತ್ತೆಂಟು ಗಂಟೆಗಳಲ್ಲಿ, ಬೆಣ್ಣೆಯಂತೆ ಅರೆಪಾರದರ್ಶಕವಾದ ಮಿದುಳನ್ನು ಸಂಪೂರ್ಣ ಗಾಜಿನಂತೆ ಮಾಡಿ ಒಳಗಿನ ಅಂಗಾಂಗಗಳನ್ನು, ವಿಶೇಷವಾಗಿ ನರಜಾಲಗಳನ್ನು ಚಿತ್ರೀಕರಿಸಿದ್ದಾಗಿ ಈ ವರದಿ ತಿಳಿಸುತ್ತದೆ.
ವೈಥ್ ಮತ್ತು ಸಂಗಡಿಗರು ಜೀವಂತ ಇಲಿಯನ್ನು ಗಾಜಿನಂತಾಗಿಸಲಿಲ್ಲ. ಬದಲಿಗೆ ಸತ್ತ ಇಲಿಯ ಮಿದುಳನ್ನು ಹೀಗೆ ಪಾರವಾಗಿಸಿದ್ದಾರೆ. ಅದೇಕೆ ಎನ್ನುವ ಪ್ರಶ್ನೆಗೆ ಉತ್ತರ ಸರಳ. ಈ ತಂತ್ರ ಯಾರನ್ನೂ ಅದೃಶ್ಯವನ್ನಾಗಿಸಲಲ್ಲ, ಬದಲಿಗೆ ಇಡಿ, ಇಡಿಯಾಗಿ ಅಂಗಗಳೊಳಗಿನ ರಚನೆಗಳನ್ನು ಅಧ್ಯಯನ ಮಾಡುವ ಪ್ರಯತ್ನದ ಒಂದು ಫಲವೆನ್ನಬಹುದು.
ನೂರಾರು ವರ್ಷಗಳಿಂದಲೂ ವಿಜ್ಞಾನಿಗಳು ವಿವಿಧ ಜೀವಿಗಳ ಒಳಾಂಗಗಳು ಹೇಗಿರಬಹುದು ಎಂಬ ಬಗ್ಗೆ ಕೌತುಕದಿಂದ ಅಧ್ಯಯನ ಮಾಡುತ್ತಿದ್ದಾರೆ. ಸುಶ್ರುತನ ಕಾಲದಲ್ಲಿಯೂ ಶವಗಳನ್ನು ಕತ್ತರಿಸಿ ಒಳಾಂಗಗಳನ್ನು ಅರಿಯುತ್ತಿದ್ದರು. ಬಹಳ ಹಿಂದೆ ಹೀಗೆ ಕತ್ತರಿಸಿದ ದೇಹದಲ್ಲಿದ್ದ ಖಾಲಿ ರಕ್ತನಾಳಗಳನ್ನು ಕಂಡು, ಅದರೊಳಗೆ ನಾವು ಉಸಿರಾಡಿದ ಗಾಳಿಯಷ್ಟೆ ಸಂಚರಿಸುತ್ತದೆ ಎನ್ನುವ ನಂಬಿಕೆ ಇತ್ತು. ಹದಿನಾರನೆಯ ಶತಮಾನದಲ್ಲಿ ಇಂಗ್ಲೀಷ್ ವಿಜ್ಞಾನಿ ವಿಲಿಯಂ ಹಾರ್ವೆ ಅಧ್ಯಯನಗಳ ಮೂಲಕ ಈ ಖಾಲಿ ನಾಳಗಳು ರಕ್ತವನ್ನು ಕೊಂಡೊಯ್ಯುತ್ತವೆ ಎಂದು ನಿರೂಪಿಸಿದ.
ಸೂಕ್ಷ್ಮದರ್ಶಕದ ಆವಿಷ್ಕಾರವಾದ ಬಳಿಕ ದೇಹದೊಳಗಿನ ಅಂಗಗಳ ಅಧ್ಯಯನಕ್ಕೆ ಹೊಸತೊಂದು ಆಯಾಮವೇ ಸಿಕ್ಕಿತು. ಸಸ್ಯಗಳ ಎಲ್ಲ ಭಾಗಗಳನ್ನೂ, ಹಾಗೆಯೇ ಪ್ರಾಣಿಗಳ ಭಾಗಗಳನ್ನೂ ಕತ್ತರಿಸಿ, ತೆಳುವಾದ ಬಿಲ್ಲೆಗಳಾಗಿಸಿ ಸೂಕ್ಷ್ಮದರ್ಶಕಗಳ ಮೂಲಕದ ನೋಡುವ ಸೂಕ್ಷ್ಮ ವಿಜ್ಞಾನಿಗಳ ತಂಡವೇ ಸಿದ್ಧವಾಯಿತು. ಫಲವಾಗಿ ಎಲ್ಲ ಜೀವಿಗಳೂ ಕೂಡ ಜೀವಕೋಶಗಳೆನ್ನುವ ಪುಟ್ಟ, ಸೂಕ್ಷ್ಮ ಘಟಕಗಳಿಂದ ಕಟ್ಟಿದ ದೊಡ್ಡ ಕಟ್ಟಡ ಎಂಬುದು ಸಾಬೀತಾಯಿತು. ಹಾಗೆಯೇ ವಿಭಿನ್ನ ಅಂಗಗಳಲ್ಲಿರುವ ಜೀವಕೋಶಗಳು ವಿಭಿನ್ನವೆಂಬುದು ಅರ್ಥವಾಯಿತು.
ಈ ಎಲ್ಲ ಅರಿವು ದಕ್ಕುವುದಕ್ಕೆ ಸೂಕ್ಷ್ಮದರ್ಶಕದಲ್ಲಿ ಜೀವಕೋಶಗಳನ್ನು ಸ್ಪಷ್ಟವಾಗಿ ನೋಡುವ ಕಲೆ ಸಿದ್ಧಿಸಿದ್ದೇ ಕಾರಣವೆನ್ನಬಹುದು. ಇದು ಕಲೆ ಹಾಗೂ ಕೌಶಲವೆನ್ನಬೇಕು. ಏಕೆಂದರೆ ತೆಳುವಾಗಿ ತುಂಡರಿಸಿದ ಯಾವುದೇ ವಸ್ತುವಿನ ಬಣ್ಣವೂ ಗಾಜಿನಂತೆಯೇ ಇರುತ್ತದೆ. ಅದರೊಳಗಿಂದ ಬೆಳಕು ಹಾಯುವಾಗ ಯಾವ ಬಣ್ಣವೂ ಕಾಣುವುದಿಲ್ಲ. ಹೀಗಾಗಿ ಇಂತಹ ತೆಳು ಬಿಲ್ಲೆಗಳಲ್ಲಿ ಏನೇನಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಸೂಕ್ಷ್ಮದರ್ಶಕ ಆರಂಭವಾದ ಹೊಸತಿನಲ್ಲಿ ಅದನ್ನು ಬಳಸಿದ ಲ್ಯೂವೆನ್‌ಹಾಯಿಕ್ ಮತ್ತಿತರರು, ತಮಗೆ ಕಂಡ ರಚನೆಗಳ ಜೊತೆಗೆ ಅದ್ಭುತ ಕಲ್ಪನೆಯನ್ನೂ ಕೂಡಿಸಿ ಚಿತ್ರಗಳನ್ನು ರಚಿಸುತ್ತಿದ್ದರು. ಉದಾಹರಣೆಗೆ, ಕೇವಲ ಒಂದಿಷ್ಟು ಕೋಶಾಂಗ ಹಾಗೂ ಬಾಲವಷ್ಟೆ ಇರುವ ವೀರ್ಯದಲ್ಲಿ ಇಡೀ ಜೀವಿಯ ಕುಬ್ಜ ದೇಹವಿತ್ತು ಎಂದು ಕಲ್ಪಿಸಿದವರೂ ಇದ್ದರು.
ಇವೆಲ್ಲವೂ ಬದಲಾಗಿದ್ದು, ಅತಿ ಸೂಕ್ಷ್ಮವಾದ ಜೀವಕೋಶಗಳೊಳಗೆ ಇರುವ ವಿವಿಧ ಭಾಗಗಳಿಗೆ ವಿಭಿನ್ನ ಬಣ್ಣಗಳನ್ನು ಹಚ್ಚುವ ರಾಸಾಯನಿಕ ತಂತ್ರಗಳು ಕೈಗೆಟುಕಿದ ನಂತರ. ಕೋಶಕೇಂದ್ರಕ್ಕೆ ಬೇರೆ ಬಣ್ಣ, ಕೋಶರಸಕ್ಕೆ ಇನ್ನೊಂದು, ಉಸಿರಾಟದ ಕೋಶಾಂಗಗಳಾದ ಮೈಟೊಕಾಂಡ್ರಿಯಾಗೆ ಮತ್ತೊಂದು ಬಣ್ಣ, ಹೀಗೆ ಬೇರೆ, ಬೇರೆ ಬಣ್ಣಗಳನ್ನು ಕೊಟ್ಟು ಕೋಶಗಳನ್ನು ಹಾಗೂ ಅವುಗಳಿರುವ ಅಂಗಾಂಶಗಳನ್ನು ಅಧ್ಯಯನ ಮಾಡುವ ಕಲೆ ಬೆಳೆಯಿತು. ನಮ್ಮ ಅರಿವು ವಿಸ್ತಾರವಾಯಿತು.
ಅನಂತರ ಇನ್ನೂ ಸೂಕ್ಷ್ಮವಾಗಿ ಕೋಶಾಂಗಗಳನ್ನು ಗಮನಿಸುವ ಇಲೆಕ್ಟ್ರಾನ್ ಸೂಕ್ಷ್ಮದರ್ಶಕಗಳೂ ಬಂದುವೆನ್ನಿ. ಇದರೊಟ್ಟಿಗೇ ದೇಹದಲ್ಲಿರುವ ಹೃದಯ, ಮಿದುಳು, ಮೂತ್ರಜನಕಾಂಗ ಮೊದಲಾದ ಅಂಗಗಳನ್ನು ಇಡಿಯಾಗಿ ನೋಡುವ ತಂತ್ರಗಳೂ ಬೆಳೆದುವು. ಇವುಗಳಲ್ಲಿ ಅಂಗಗಳನ್ನು ಕಾದಿಡುವ ಹಾಗೂ ಅವುಗಳ ಒಳಗಿನ ರಚನೆಯನ್ನು ತೋರಿಸುವ ತಂತ್ರಗಳು ಒಂದು ಬಗೆ. ಉದಾಹರಣೆಗೆ, ಅಂಗಗಳ ರಕ್ತನಾಳಗಳೊಳಗೆ ಮಯಣದಂತಹ ವಸ್ತುವನ್ನು ಹರಿಸಿ, ಇಡೀ ಅಂಗವನ್ನು ಕೆಡದಂತೆ ಪ್ಲಾಸ್ಟಿಕ್ ರೂಪಕ್ಕೆ ಪರವರ್ತಿಸುವುದು ಒಂದು ಬಗೆಯ ತಂತ್ರ. ಇವೆಲ್ಲವೂ ನಮ್ಮ ದೇಹದ ಬಗೆಗೆ ವೈದ್ಯವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಲು ನೆರವಾಗಿವೆ. ಶಸ್ತ್ರವೈದ್ಯರಿಗೆ ಇಂತಹ ಅಧ್ಯಯನಗಳು ಅವಶ್ಯಕ.
ಹಾಗೆಯೇ ಎಂಆರ್‌ಐ, ಕ್ಯಾಟ್ ಸ್ಕ್ಯಾನ್ ಎನ್ನುವಂತಹ ಗಣಕ ತಂತ್ರಗಳು ಹಾಗೂ ವಿಕಿರಣ ತಂತ್ರಜ್ಞಾನಗಳನ್ನು ಆಧರಿಸಿದ ಸಾಧನಗಳೂ ಕೂಡ ದೇಹದ ಒಳ ರಚನೆಯನ್ನು ತಿಳಿಸಲು ನೆರವಾಗಿವೆ. ಆದರೂ ಇವು ಯಾವುವೂ ನೇರವಾಗಿ ಯಾವುದೇ ಅಂಗದೊಳಗಿನ ರಚನೆ ಹೇಗಿದೆ ಎಂದು ತಿಳಿಸುತ್ತಿರಲಿಲ್ಲ. ಉದಾಹರಣೆಗೆ ಎಂಆರ್‌ಐ ತಂತ್ರದಲ್ಲಿಯೂ ಯಾವುದೇ ಅಂಗದ ಒಂದು ತೆಳು ಬಿಲ್ಲೆಯನ್ನಷ್ಟೆ ಮೊದಲು ಪರಿಶೀಲಿಸಿ, ಈ ರೀತಿಯ ನೂರಾರು ಬಿಲ್ಲೆಗಳನ್ನು ಒಟ್ಟಾಗಿಸಿ, ಒಳಗೇನಿದೆ ಎಂದು ತಿಳಿಯುತ್ತಾರೆ. ಇದಕ್ಕೆ ಕಂಪ್ಯೂಟರಿನ ನೆರವು ಬೇಕು.
ಇನ್ನೂ ಹಲವು ತಂತ್ರಗಳಿವೆ. ಅಂಗಗಳೊಳಗೆ ಬೆಳಕು ಸ್ಫುರಿಸುವ ವಸ್ತುಗಳನ್ನು ಸೇರಿಸಿ, ಅವು ಎಲ್ಲೆಲ್ಲಿ ಇವೆ ಎಂಬುದನ್ನು ಪತ್ತೆ ಮಾಡುವ ತಂತ್ರಗಳಿವೆ. ನಿರ್ದಿಷ್ಟ ವಸ್ತುವಿನೊಂದಿಗೆ ಮಾತ್ರ ಈ ವಸ್ತು ಕೂಡಿಕೊಂಡರೆ ಆಗ ಆ ವಸ್ತುವಿರುವ ಸ್ಥಳವಷ್ಟೆ ನಮಗೆ ಗೋಚರಿಸುತ್ತದೆ. ಇಂತಹ ತಂತ್ರಗಳಿಂದ ಕೇವಲ ಡಿಎನ್‌ಎ ಇರುವಂತಹ ಸ್ಥಳ, ನಿರ್ದಿಷ್ಟ ಪ್ರೊಟೀನು ಉತ್ಪನ್ನವಾಗುವ ಜಾಗ ಅಥವಾ ನಿರ್ದಿಷ್ಟ ಬಗೆಯ ಕೋಶಗಳಷ್ಟೆ ಇರುವ ಜಾಗಗಳನ್ನು ತಿಳಿಯಬಹುದು. ಕೆಲವು ಮೀನುಗಳು ಹೊಳೆಯುವಂತೆ ಮಾಡುವ ಹಸಿರುಬಣ್ಣದ ಪ್ರೊಟೀನೊಂದನ್ನು ಹೀಗೆ ವಿವಿಧ ಪ್ರೊಟೀನುಗಳ ಜೊತೆಗೆ ಜೋಡಿಸಿ, ಜೀವಕೋಶಗಳ ಕೆಲಸ ಕಾರ್ಯಗಳ ಮೇಲೂ ಕಣ್ಣಿಡಬಹುದು. ಇವೆಲ್ಲವೂ ನಮಗೆ ಹೊಸ ಅರಿವನ್ನು ಮೂಡಿಸಿವೆ.
ಇದೀಗ ವೈಥ್ ತಂಡ ರೂಪಿಸಿರುವ ತಂತ್ರ ಇನ್ನೊಂದು ಹೆಜ್ಜೆ ಮುಂದೆ ನಡೆದಿದೆ. ಇಡೀ ಮಿದುಳಿನಲ್ಲಿ ಅಪಾರದರ್ಶಕವಾಗಿರುವ ವಸ್ತುಗಳನ್ನು ತೆಗೆದು, ಪಾರದರ್ಶಕವಾಗಿಸಿ, ಮೇಲಿನ ಕೆಲವು ತಂತ್ರಗಳ ಮೂಲಕ ಒಳಭಾಗಗಳನ್ನು ನೋಡಬಹುದೆನ್ನುವುದು ಈ ತಂತ್ರದ ಉದ್ದೇಶ. ಇದಕ್ಕಾಗಿ ಮೊದಲು ಇವರು ಇಲಿಯ ಮಿದುಳನ್ನು ಸಾಧಾರಣವಾಗಿ ಎಲ್ಲ ಅಂಗಗಳನ್ನೂ ಕಾದಿಡುವಂತೆ ಫಾರ್ಮಾಲಿನ್ ಅಥವಾ ಬೇರೆ ವಿಧಾನದಿಂದ ಕಾದಿಟ್ಟರು. ಅನಂತರ ಕೇವಲ ಕೊಬ್ಬನ್ನಷ್ಟೆ ಕರಗಿಸುವ ವಸ್ತುಗಳನ್ನು ಬಳಸಿ ಜೀವಕೋಶಗಳಲ್ಲಿರುವ ಕೊಬ್ಬನ್ನೆಲ್ಲ ಹೊರ ತೆಗೆದರು. ತದನಂತರ ಇವನ್ನು ಒಂದು ವಿಶೇಷ ದ್ರವದಲ್ಲಿ ಎರಡು ದಿನಗಳ ಕಾಲ ಇಟ್ಟರು. ಟೆಟ್ರಾಹೈಡ್ರೊಫ್ಯೂರಾನ್ ಎನ್ನುವ ರಾಸಾಯನಿಕವಿರುವ ಈ ದ್ರಾವಣದ ರೆಫ್ರಾಕ್ಟಿವ್ ಇಂಡೆಕ್ಸ್ ಅಥವಾ ವಕ್ರೀಭವನ ಸೂಚ್ಯಂಕ 1.518 ಇರುವ ಅಂದರೆ ಹೆಚ್ಚೂ ಕಡಿಮೆ ಗಾಜಿನಂತಹ ಪಾರದರ್ಶಕತೆ. ಹೀಗೆ ಪಾರದರ್ಶಕವಾದ ಮಿದುಳನ್ನು ಅನಂತರ ವಿಭಿನ್ನ ರೀತಿಯಲ್ಲಿ ನೋಡಿ ಪರೀಕ್ಷಿಸಿದ್ದಾರೆ. ಈ ತಂತ್ರವನ್ನು ಈಜೀ ಕ್ಲಿಯರ್ (EZ Clear) ಎಂದು ಹೆಸರಿಸಿದ್ದಾರೆ.
ಈಜೀ ಕ್ಲಿಯರ್ ತಂತ್ರದಿಂದ ಪಾರದರ್ಶಕವಾಗಿಸಿದ ಇಲಿಯ ಮಿದುಳಿನಲ್ಲಿ ಸಾಧಾರಣವಾಗಿ ಬಳಸುವ ಬೆಳಕನ್ನು ಸ್ಫುರಿಸುವ ವಸ್ತುಗಳನ್ನೂ ಸೇರಿಸಿದ್ದರೆ, ಅವು ಸ್ಪಷ್ಟವಾಗಿ ಬರಿಗಣ್ಣಿಗೇ ಗೋಚರಿಸುತ್ತವೆ. ನರಕೋಶಗಳಲ್ಲಿಯಷ್ಟೆ ಈ ವಸ್ತುಗಳಿದ್ದರೆ ಮಿದುಳಿನಲ್ಲಿರುವ ಇಡೀ ನರಮಂಡಲವನ್ನು ಕಾಣಬಹುದು. ಹೀಗೆ ಮೂರು ಆಯಾಮದಲ್ಲಿ ಇಲಿಯ ಮಿದುಳಿನಲ್ಲಿರುವ ನರಮಂಡಲದ ಚಿತ್ರ ಹಾಗೂ ಮೂರು ಆಯಾಮದ ವೀಡಿಯೋವನ್ನು ಇವರು ಸೆರೆಹಿಡಿದು ತಮ್ಮ ತಂತ್ರದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ವೆಲ್ಸ್ ಕಲ್ಪಿಸಿದಂತೆ ಜೀವಂತ ಪ್ರಾಣಿಯೊಂದನ್ನು ಹೀಗೆ ಪಾರದರ್ಶಕವಾಗಿಸುವುದು ಸದ್ಯಕ್ಕೆ ಸಾಧ್ಯವಿಲ್ಲದಿರಬಹುದು. ಆದರೆ ಜೀವಂತ ಅಂಗಗಳಲ್ಲಿಯೂ ಬಳಸಬಹುದಾದೊಂದು ವಸ್ತು ಸಿಕ್ಕರೆ ಬಹುಶಃ ಅವನ ಕಲ್ಪನೆಯೂ ಸತ್ಯವಾಗಬಹುದೇನೋ? ಅದುವರೆವಿಗೂ ಸತ್ತ ಜೀವಿಗಳ ಅಂಗಗಳೊಳಗೆ ಹೀಗೆ ಸುಲಭವಾಗಿ ಹಣುಕಬಹುದು.