ಇಂದಿನ ಡೇಟು ಮಾರ್ಚ್ ೧ ಆಗುವ ಬದಲು ಫೆಬ್ರುವರಿ ೨೯ ಆಗಿರುವುದು ಏಕೆ?
ಇಂದಿನ ಡೇಟು ಮಾರ್ಚ್ ೧ ಆಗುವ ಬದಲು ಫೆಬ್ರುವರಿ ೨೯ ಆಗಿರುವುದು ಏಕೆ?Image by Alexa from Pixabay

ಈ ವರ್ಷ ಫೆಬ್ರುವರಿಯಲ್ಲಿ ಇಪ್ಪತ್ತೊಂಬತ್ತು ದಿನ ಏಕೆ?

ಇಜ್ಞಾನದಲ್ಲಿ ಇಗೊಳ್ಳಿ, ಅಧಿಕವರ್ಷದ ಕತೆ!
Published on

ಲೆಕ್ಕಾಚಾರವನ್ನು ಸುಲಭಗೊಳಿಸುವ ಉದ್ದೇಶದಿಂದ ನಿರ್ದಿಷ್ಟ ಸಂಖ್ಯೆಗಳನ್ನು ಹತ್ತಿರದ, ಹೆಚ್ಚು ಅನುಕೂಲಕರವಾದ ಪೂರ್ಣಾಂಕಗಳಿಗೆ ಬದಲಿಸಿ ಬಳಸುವುದು ಬಹಳ ಸಾಮಾನ್ಯವಾದ ಅಭ್ಯಾಸ. ಇಂಗ್ಲಿಷಿನಲ್ಲಿ ಇದನ್ನು 'ರೌಂಡಿಂಗ್' ಎಂದು ಕರೆಯುತ್ತಾರೆ. ಒಂದು ಕೇಜಿ ತರಕಾರಿಗೆ ಹದಿನೆಂಟೂವರೆ ರೂಪಾಯಿಯೆಂದೋ ಇಪ್ಪತ್ತೊಂದೂಕಾಲು ರೂಪಾಯಿಯೆಂದೋ ಬೆಲೆ ನಿಗದಿಪಡಿಸುವ ಬದಲು ಇಪ್ಪತ್ತು ರೂಪಾಯಿಯೆಂದು ಸುಲಭಗೊಳಿಸುವುದು ಇದಕ್ಕೊಂದು ಉದಾಹರಣೆ. "ನೂರು ರೂಪಾಯಿಗೆ ಮೂರು ಕೇಜಿ ಈರುಳ್ಳಿ" ಎನ್ನುವಂತಹ ಆಫರ್‌ಗಳ ಹಿನ್ನೆಲೆಯಲ್ಲೂ ಈ ಪರಿಕಲ್ಪನೆ ಕೆಲಸಮಾಡುತ್ತದೆ. ಇಂದಿನ ಡೇಟು ಮಾರ್ಚ್ ೧ ಆಗುವ ಬದಲು ಫೆಬ್ರುವರಿ ೨೯ ಆಗಿರುವುದಕ್ಕೂ ಇದೇ ಕಾರಣ!

ಭೂಮಿ ಬುಗುರಿಯ ಹಾಗೆ ತಿರುಗುತ್ತಿರುತ್ತದೆ, ಹಾಗೆ ತಿರುಗುತ್ತಲೇ ಅದು ಸೂರ್ಯನನ್ನೂ ಸುತ್ತಿಕೊಂಡು ಬರುತ್ತದೆ. ತನ್ನ ಅಕ್ಷದ ಮೇಲೆ ಒಮ್ಮೆ ತಿರುಗಲು ಅದು ತೆಗೆದುಕೊಳ್ಳುವ ಸಮಯ ಒಂದು ದಿನ. ಸೂರ್ಯನನ್ನು ಒಮ್ಮೆ ಸುತ್ತಿ ಬರಲು ಬೇಕಾಗುವ ಸಮಯವೇ ಒಂದು ವರ್ಷ. ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣಿಸುವುದರಿಂದ ಇದು ಸೌರಮಾನ ಕ್ಯಾಲೆಂಡರು (ಚಂದ್ರನ ಚಲನೆಯನ್ನು ಗಣಿಸುವುದು ಚಾಂದ್ರಮಾನ).

ಸೌರಮಾನ ಕ್ಯಾಲೆಂಡರಿನ ಒಂದು ವರ್ಷದಲ್ಲಿ ೩೬೫ ದಿನಗಳಿರುತ್ತವೆ ಎನ್ನುವುದು ಮಕ್ಕಳಿಗೂ ಗೊತ್ತು. ಆದರೆ ಸೂರ್ಯನನ್ನು ಒಮ್ಮೆ ಸುತ್ತಿ ಬರಲು ಭೂಮಿಗೆ ಬೇಕಾಗುವ ಸಮಯ ಸುಮಾರು ೩೬೫.೨೪೨೨ ದಿನಗಳು. ಇದನ್ನು ತರಕಾರಿಯ ರೇಟಿನ ಹಾಗೆ ನಾವೇ ಸರಳೀಕರಿಸಿಕೊಂಡು ವರ್ಷಕ್ಕೆ ೩೬೫ ದಿನಗಳೆಂದು ತೀರ್ಮಾನಿಸಿಬಿಟ್ಟಿದ್ದೇವೆ!

ಮಾರಾಟಗಾರ ಹಾಗೂ ಗ್ರಾಹಕರ ಇಷ್ಟಕ್ಕೆ ತಕ್ಕಂತೆ ತರಕಾರಿಯ ರೇಟು ಬದಲಾದರೆ ಅದರಿಂದ ಬೇರೆಯವರಿಗೇನೂ ತೊಂದರೆ ಆಗಲಿಕ್ಕಿಲ್ಲ. ಹಾಗೆಂದು ವರ್ಷಕ್ಕೆಷ್ಟು ದಿನ ಎನ್ನುವುದನ್ನು ನಮ್ಮಿಷ್ಟಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದೇ? ಖಂಡಿತ ಇಲ್ಲ. ಒಂದು ವರ್ಷವೆಂದರೆ ಎಷ್ಟೆಂದು ನಮಗೆ ಬೇಕಾದಂತೆ ತೀರ್ಮಾನಿಸಿಕೊಂಡರೆ ಮುಂದೊಂದು ದಿನ ನಮ್ಮ ಕ್ಯಾಲೆಂಡರಿಗೂ ಭೂಮಿಯ ಚಲನೆಗೂ ಸಂಬಂಧವೇ ತಪ್ಪಿಹೋಗಬಹುದು. ಮಾರ್ಚಿನಲ್ಲಿ ಶುರುವಾಗಬೇಕಾದ ಮಾವಿನ ಋತು ಮೇ ಬಂದರೂ ಶುರುವಾಗದಿರಬಹುದು!

ಅಂತಹ ಪರಿಸ್ಥಿತಿಯನ್ನು ತಪ್ಪಿಸುವುದು ಹೇಗೆ? ಪ್ರತಿವರ್ಷವೂ ನಾವು ಉಪೇಕ್ಷಿಸಿಬಿಡುವ ೦.೨೪೨೨ ದಿನಗಳನ್ನು ಮತ್ತೆ ಲೆಕ್ಕಕ್ಕೆ ತೆಗೆದುಕೊಳ್ಳಲೆಂದೇ ನಾಲ್ಕು ವರ್ಷಗಳಿಗೊಮ್ಮೆ - ನಾಲ್ಕರಿಂದ ಭಾಗವಾಗುವ ಸಂಖ್ಯೆಯ ವರ್ಷಗಳ (ಉದಾಹರಣೆಗೆ, ೨೦೨೪) ಫೆಬ್ರುವರಿ ತಿಂಗಳಿನಲ್ಲಿ - ೨೯ನೇ ದಿನವನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಗುತ್ತದೆ. ಅಂತಹ ಅಧಿಕವರ್ಷಗಳಲ್ಲಿ ೩೬೫ರ ಬದಲು ೩೬೬ ದಿನಗಳಿರುತ್ತವೆ.

ಲೆಕ್ಕ ಅಲ್ಲಿಗೆ ಮುಗಿಯುವುದಿಲ್ಲ. ನಮ್ಮ ಗುಣಾಕಾರದಲ್ಲಿ ೦.೨೪೨೨ ದಿನಗಳನ್ನು ಕಾಲು ದಿನವೆಂದು (೦.೨೫) ಪರಿಗಣಿಸುವುದರಿಂದ, ನಾಲ್ಕು ವರ್ಷಗಳಿಗೊಮ್ಮೆ ನಾವು ಅಗತ್ಯಕ್ಕಿಂತ ಸುಮಾರು ಮುಕ್ಕಾಲು ಗಂಟೆಗಳಷ್ಟು ಹೆಚ್ಚು ಸಮಯವನ್ನು ನಮ್ಮ ಕ್ಯಾಲೆಂಡರುಗಳಿಗೆ ಸೇರಿಸಿಕೊಳ್ಳುತ್ತೇವೆ. ನಾಲ್ಕುನೂರು ವರ್ಷಗಳ ಅವಧಿಯಲ್ಲಿ ಈ ಹೆಚ್ಚುವರಿ ಸಮಯವೆಲ್ಲ ಸೇರಿ ಸುಮಾರು ೩.೧೨ ದಿನಗಳಷ್ಟಾಗಿಬಿಡುತ್ತದೆ!

ಈ ಮೂರು ದಿನಗಳನ್ನು ಕಳೆಯುವುದು ಹೇಗೆ? ಅದಕ್ಕೂ ಒಂದು ಉಪಾಯವಿದೆ. ನಿರ್ದಿಷ್ಟ ವರ್ಷ ನೂರರಿಂದ ಭಾಗವಾಗುವಂತಿದ್ದರೆ (ಉದಾಹರಣೆಗೆ, ೧೯೦೦) ಆ ವರ್ಷದ ಫೆಬ್ರುವರಿಯಲ್ಲಿ ೨೮ ದಿನಗಳಷ್ಟೇ ಇರುತ್ತವೆ. ನೂರರ ಜೊತೆ ನಾಲ್ಕುನೂರರಿಂದಲೂ ಭಾಗವಾಗುವಂತಿದ್ದರೆ (ಉದಾಹರಣೆಗೆ, ೨೦೦೦) ಆ ವರ್ಷ ಫೆಬ್ರುವರಿಯಲ್ಲಿ ೨೯ ದಿನ!

ಆದರೆ ಇಲ್ಲೂ ಒಂದು ಸಮಸ್ಯೆ ಇದೆ: ನಾಲ್ಕುನೂರು ವರ್ಷಗಳಲ್ಲಿ ನಾವು ಮೂರು ದಿನಗಳನ್ನು ಕಳೆದರೂ, ೦.೧೨ ದಿನಗಳಷ್ಟು ಹೆಚ್ಚುವರಿ ಸಮಯ ಇನ್ನೂ ನಮ್ಮ ಕ್ಯಾಲೆಂಡರುಗಳಲ್ಲಿ ಉಳಿದುಕೊಂಡಿರುತ್ತದೆ. ಆದಕ್ಕೇನು ಮಾಡುವುದು? ಆ ಬಗ್ಗೆ ತೀರಾ ಗಂಭೀರವಾಗಿ ತಲೆಕೆಡಿಸಿಕೊಳ್ಳುವ ಅಗತ್ಯವೇನೂ ಇಲ್ಲವೆಂದು ತಜ್ಞರು ಹೇಳುತ್ತಾರೆ. ಪ್ರತಿ ನಾಲ್ಕುನೂರು ವರ್ಷಗಳಿಗೊಮ್ಮೆ ಸೇರಿಕೊಳ್ಳುವ ೦.೧೨ ದಿನಗಳೆಲ್ಲ ಒಟ್ಟಾಗಿ ಒಂದು ಹೆಚ್ಚುವರಿ ದಿನವಾಗಬೇಕಾದರೆ ಕನಿಷ್ಠಪಕ್ಷ ೩೨೦೦ ವರ್ಷ ಬೇಕಾಗುತ್ತದೆ. ಆ ಸಮಯ ಬಂದಾಗ ನೋಡಿಕೊಂಡರಾಯಿತು, ಬಿಡಿ!

ಮೂರುಸಾವಿರ ವರ್ಷಗಳ ಮಾತು ಹಾಗಿರಲಿ, ಈಗಿರುವ ಅಧಿಕವರ್ಷದ ಲೆಕ್ಕಾಚಾರವೇ ಸಾಕಷ್ಟು ಜಟಿಲವಾದದ್ದು. ಜಟಿಲ ವಿಷಯಗಳನ್ನೆಲ್ಲ ಸಾಫ್ಟ್‌ವೇರಿಗೆ ವಹಿಸಿಕೊಡುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿದೆಯಲ್ಲ, ಅಧಿಕವರ್ಷದ ಸಂಕೀರ್ಣತೆಯನ್ನು ಸಾಫ್ಟ್‌ವೇರುಗಳು ಈವರೆಗೆ ಹೇಗೆ ನಿಭಾಯಿಸಿವೆ? ನೋಡಲು ಹೊರಟರೆ ಸಾಕಷ್ಟು ಎಡವಟ್ಟುಗಳು ನಮ್ಮನ್ನು ಎದುರುಗೊಳ್ಳುತ್ತವೆ.

ಮೈಕ್ರೋಸಾಫ್ಟ್ ಎಕ್ಸೆಲ್ ಇದೆಯಲ್ಲ, ಅದು ೧೯೦೦ನೇ ಇಸವಿಯನ್ನು ಅಧಿಕವರ್ಷವೆಂದು ಪರಿಗಣಿಸುತ್ತದೆ. ಇದೇಕೆ ಹೀಗೆ? ಎಕ್ಸೆಲ್‌ಗೂ ಹಿಂದಿನ ಕಾಲದಲ್ಲಿದ್ದ ಲೋಟಸ್ ೧-೨-೩ ಎಂಬ ಸ್ಪ್ರೆಡ್‌ಶೀಟ್ ತಂತ್ರಾಂಶದಲ್ಲಿ ಈ ತಪ್ಪು ಮೊದಲು ಕಾಣಿಸಿಕೊಂಡಿತ್ತಂತೆ. ಆಮೇಲೆ ಎಕ್ಸೆಲ್ ಬಂದಾಗ ಅದರತ್ತ ಬಂದ ಲೋಟಸ್ ೧-೨-೩ ಗ್ರಾಹಕರಿಗೆ ಅನನುಕೂಲವಾಗದಿರಲೆಂದು ಆ ತಪ್ಪನ್ನು ಇಲ್ಲಿಯೂ ಮುಂದುವರಿಸಲಾಗಿದೆ!

ಅಧಿಕವರ್ಷವನ್ನು ಸರಿಯಾಗಿ ನಿಭಾಯಿಸಲಾಗದ ತಂತ್ರಾಂಶಗಳು ಕೈಕೊಟ್ಟ ಇನ್ನೂ ಕೆಲ ಉದಾಹರಣೆಗಳು ಅಂತರಜಾಲದಲ್ಲಿ ಸಿಗುತ್ತವೆ. ಫೆಬ್ರುವರಿ ೨೯ ಬಂದಾಗ ತಂತ್ರಾಂಶಕ್ಕೆ ಗೊಂದಲವಾದ್ದರಿಂದ ವಿಮಾನಗಳಿಗೆ ಲಗೇಜ್ ಲೋಡ್ ಮಾಡಲಾಗದೆ ನೂರಾರು ಪ್ರಯಾಣಿಕರಿಗೆ ತೊಂದರೆಯಾದ ಘಟನೆ ೨೦೧೬ರಲ್ಲಿ ಜರ್ಮನಿಯಲ್ಲಿ ನಡೆದಿತ್ತಂತೆ. ಅಧಿಕವರ್ಷದ ಲೆಕ್ಕಾಚಾರವನ್ನು ಎಲ್ಲ ತಂತ್ರಾಂಶಗಳಲ್ಲೂ ಸರಿಯಾಗಿ ಅಳವಡಿಸದಿದ್ದರೆ ೨೧೦೦ನೇ ಇಸವಿಯಲ್ಲಿ ಸಾಕಷ್ಟು ಗೊಂದಲಗಳಾಗಬಹುದು ಎಂಬ ಊಹೆಯೂ ಇದೆ.

ಫೆಬ್ರುವರಿ ೨೭, ೨೦೨೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ (ಮೂಲ ಲೇಖನ 'ಟೆಕ್ ನೋಟ' ಅಂಕಣದ ೬೨ನೇ ಕಂತು)

logo
ಇಜ್ಞಾನ Ejnana
www.ejnana.com