'Vigyan Vidushi', ನಮ್ಮ ದೇಶದ ಪ್ರಮುಖ ಮಹಿಳಾ ವಿಜ್ಞಾನಿಗಳ ಜೀವನ-ಸಾಧನೆಗಳನ್ನು ಕಟ್ಟಿಕೊಡುವ ಪುಸ್ತಕ
'Vigyan Vidushi', ನಮ್ಮ ದೇಶದ ಪ್ರಮುಖ ಮಹಿಳಾ ವಿಜ್ಞಾನಿಗಳ ಜೀವನ-ಸಾಧನೆಗಳನ್ನು ಕಟ್ಟಿಕೊಡುವ ಪುಸ್ತಕVigyan Prasar

ನಾನು ಓದಿದ ಪುಸ್ತಕ: ಸಾಧನೆಗೆ ಪ್ರೇರಣೆ ನೀಡುವ 'ವಿಜ್ಞಾನ ವಿದುಷಿ'

ಸ್ವಾತಂತ್ರ್ಯ ಬಂದ ಸಂದರ್ಭದಿಂದ ಈ ಕಾಲದವರೆಗೆ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಗಾಧವಾದದ್ದು. ಹೀಗೆ ಕೊಡುಗೆ ನೀಡಿದವರ ಪೈಕಿ ೭೫ ಜನರನ್ನು ಓದುಗರಿಗೆ ಪರಿಚಯಿಸುವುದು ವಿಜ್ಞಾನ ವಿದುಷಿಯ ಹೆಗ್ಗಳಿಕೆ.
Published on

ವಿಜ್ಞಾನದ ಜಗತ್ತು ವಿಸ್ಮಯಕಾರಿ. ಹಾಗಾಗಿಯೇ, ವಿಜ್ಞಾನದ ವಿದ್ಯಾರ್ಥಿಗಳಲ್ಲದವರಲ್ಲೂ ಆ ಕ್ಷೇತ್ರದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುತ್ತದೆ. ಅಷ್ಟೇ ಏಕೆ, ವಿಜ್ಞಾನ ಜಗತ್ತಿನ ವಿದ್ಯಮಾನಗಳನ್ನು ಕುರಿತ ಕುತೂಹಲ ಆ ಕ್ಷೇತ್ರದಲ್ಲಿ ಕೆಲಸಮಾಡುವ ಸಾಧಕರ ಕಡೆಗೂ ವಿಸ್ತರಿಸಿಕೊಂಡಿರುತ್ತದೆ. ವಿಜ್ಞಾನಿಗಳ ಬದುಕನ್ನು ಕುರಿತ ಪುಸ್ತಕಗಳು ಇಷ್ಟವಾಗುವುದು ಇದೇ ಕಾರಣಕ್ಕೆ.

ಯಾವುದೋ ದೇಶದಲ್ಲಿ ಯಾವುದೋ ಕಾಲದಲ್ಲಿ ಆಗಿಹೋದ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಅದರ ಬದಲು ನಮ್ಮದೇ ದೇಶದ ವಿಜ್ಞಾನಿಗಳ ಜೀವನ-ಸಾಧನೆಗಳ ಪರಿಚಯ ಮಾಡಿಕೊಳ್ಳುವಂತಿದ್ದರೆ? ಅಂತಹ ಪುಸ್ತಕಗಳು ನಮ್ಮ ಮನಸ್ಸಿಗೆ ಇನ್ನೂ ಹೆಚ್ಚು ಆಪ್ತವೆನಿಸುತ್ತವೆ.

ಭಾರತೀಯ ವಿಜ್ಞಾನಿಗಳ ಕುರಿತು 'Indian Scientists - The Saga of Inspired Minds'ನಂತಹ ಮಾಹಿತಿಪೂರ್ಣ ಕೃತಿಗಳನ್ನು ಪ್ರಕಟಿಸಿದ್ದ ವಿಜ್ಞಾನ್ ಪ್ರಸಾರ್ ಸಂಸ್ಥೆ, ೨೦೨೨ರಲ್ಲಿ ಅಂತಹುದೇ ಇನ್ನೊಂದು ವಿಶಿಷ್ಟ ಪುಸ್ತಕವನ್ನೂ ಪ್ರಕಟಿಸಿತ್ತು. ನಮ್ಮ ದೇಶದ ಪ್ರಮುಖ ಮಹಿಳಾ ವಿಜ್ಞಾನಿಗಳ ಜೀವನ-ಸಾಧನೆಗಳನ್ನು ಕಟ್ಟಿಕೊಡುವ ಆ ಪುಸ್ತಕವೇ 'Vigyan Vidushi.'

Vigyan Vidushi
Vigyan VidushiVigyan Prasar

ಸ್ವಾತಂತ್ರ್ಯ ಬಂದ ಸಂದರ್ಭದಿಂದ ಈ ಕಾಲದವರೆಗೆ ಭಾರತದ ವಿಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಗಾಧವಾದದ್ದು. ಹೀಗೆ ಕೊಡುಗೆ ನೀಡಿದವರ ಪೈಕಿ ೭೫ ಜನರನ್ನು ಓದುಗರಿಗೆ ಪರಿಚಯಿಸುವುದು ವಿಜ್ಞಾನ ವಿದುಷಿಯ ಹೆಗ್ಗಳಿಕೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ, ವೈದ್ಯಕೀಯ ಸೇರಿದಂತೆ ವಿಜ್ಞಾನದ ಎಲ್ಲ ಕ್ಷೇತ್ರಗಳ ಸಾಧಕಿಯರ ಬಗೆಗೂ ನಾವು ಈ ಕೃತಿಯಲ್ಲಿ ತಿಳಿದುಕೊಳ್ಳಬಹುದು. ತಮ್ಮ ಸಾಧನೆಯ ಹಾದಿಯಲ್ಲಿ ಎದುರಾದ ಅಡ್ಡಿ-ಆತಂಕಗಳನ್ನು ಅವರು ಹೇಗೆ ಎದುರಿಸಿ ಮುನ್ನಡೆದರು ಎನ್ನುವುದನ್ನು ಇಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ.

ವಿಶ್ವದೆಲ್ಲೆಡೆ ಸಕ್ರಿಯರಾಗಿರುವ ಮಹಿಳಾ ಸಂಶೋಧಕಿಯರ ಸಂಖ್ಯೆ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರ ಒಟ್ಟು ಸಂಖ್ಯೆಯ ಶೇ.೩೦ಕ್ಕೂ ಕಡಿಮೆ ಇದೆಯಂತೆ. ಭಾರತದಲ್ಲಿ ಈ ಪ್ರಮಾಣ ಶೇ. ೧೫-೨೦ ಇರಬಹುದು ಎನ್ನುವುದು ಒಂದು ಅಂದಾಜು. ಈ ಪರಿಸ್ಥಿತಿಯನ್ನು ಬದಲಾಯಿಸಲು ಮಾಡಬೇಕಿರುವ ಕೆಲಸ ಬೇಕಾದಷ್ಟಿದೆ. ಈ ಪೈಕಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ಮಾಡಬೇಕಿರುವ ಕೆಲಸ ಒಂದು ಕಡೆಯಾದರೆ ಕಿರಿಯರನ್ನು ಸಂಶೋಧನೆಯೆಡೆಗೆ ಪ್ರೇರೇಪಿಸಬೇಕಿರುವುದು ಇನ್ನೊಂದು ಮಹತ್ವದ ಕೆಲಸ. ಇಂತಹ ಕೆಲಸವನ್ನು ಹೇಗೆ ಮಾಡಬಹುದು ಎನ್ನುವುದಕ್ಕೆ ವಿಜ್ಞಾನ ವಿದುಷಿ ಒಂದು ಉತ್ತಮ ಉದಾಹರಣೆ.

ಉನ್ನತ ಶಿಕ್ಷಣಕ್ಕೆಂದು ವಿದೇಶಕ್ಕೆ ಹೋಗುವುದು ಇಂದಿಗೆ ವಿಶೇಷವೇನಲ್ಲ. ಆದರೆ ನೂರು ವರ್ಷಗಳ ಹಿಂದೆ ಅದು ಕಲ್ಪಿಸಿಕೊಳ್ಳಲೂ ಕಷ್ಟವೆನಿಸುವ ವಿಷಯವಾಗಿತ್ತು. ಅದೇರೀತಿ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮಹಿಳೆಯರು ಪ್ರವೇಶ ಪಡೆಯುವುದು ಕೂಡ ಒಂದು ಕಾಲದಲ್ಲಿ ಕಷ್ಟದ ಕೆಲಸವಾಗಿತ್ತು. ಅಂತಹ ಕಾಲಘಟ್ಟಗಳಲ್ಲೂ ಭಾರತೀಯ ಮಹಿಳೆಯರು ಸಾಧಿಸಿದ ವಿಕ್ರಮಗಳನ್ನು ಈ ಪುಸ್ತಕ ನಮಗೆ ಪರಿಚಯಿಸುತ್ತದೆ.

ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೆ ಭಾರತದ ವಿಜ್ಞಾನ ಕ್ಷೇತ್ರ ನಡೆದುಬಂದ ದಾರಿ ಹಾಗೂ ಈ ಯಾನದಲ್ಲಿ ಮಹಿಳೆಯರ ಪಾತ್ರವನ್ನು ಸಂಕ್ಷಿಪ್ತವಾದರೂ ಸಮರ್ಥವಾಗಿ ಪರಿಚಯಿಸುವಲ್ಲಿ ಈ ಕೃತಿಯ ಪೀಠಿಕೆ ಸಫಲವಾಗಿದೆ ಎನ್ನಬಹುದು. ಶಿಕ್ಷಣ, ಅದರಲ್ಲೂ ವಿಶೇಷವಾಗಿ ವಿಜ್ಞಾನದ ಶಿಕ್ಷಣ ನಮ್ಮ ದೇಶದಲ್ಲಿ ಹೆಚ್ಚು ವ್ಯಾಪಕವಾಗಿ ದೊರಕುವಂತೆ ಮಾಡಲು ಶ್ರಮಿಸಿದ ಸಾಧಕಿಯರನ್ನೂ ಇಲ್ಲಿ ನೆನಪಿಸಿಕೊಂಡಿರುವುದು ಮೆಚ್ಚುವಂತಹ ಸಂಗತಿ.

ಭಾರತದ ಮೊತ್ತಮೊದಲ ಪದವೀಧರೆ ಕಾದಂಬಿನಿ ಗಂಗೂಲಿ, ಮೊದಲ ವೈದ್ಯೆ ಆನಂದಿಬಾಯಿ ಜೋಶಿ, ತಿರುವಾಂಕೂರು ಸಂಸ್ಥಾನದ ಸರ್ಜನ್ ಜನರಲ್ ಆಗಿದ್ದ ಮೇರಿ ಲುಕೋಸ್, ಮೊದಲ ಮಹಿಳಾ ಸಸ್ಯವಿಜ್ಞಾನಿ ಜಾನಕಿ ಅಮ್ಮಾಳ್, ಲೇಖಕಿ-ಮಾನವವಿಜ್ಞಾನಿ ಇರಾವತಿ ಕರ್ವೆ ಮೊದಲಾದ ಸಾಧಕಿಯರ ಪರಿಚಯಗಳೊಂದಿಗೆ ವಿಜ್ಞಾನ ವಿದುಷಿಯ ಪಯಣ ಪ್ರಾರಂಭವಾಗುತ್ತದೆ. ಸ್ವಾತಂತ್ರ್ಯಪೂರ್ವ ಭಾರತದ ಈ ಸಾಧಕಿಯರನ್ನು ಕುರಿತ ಬರಹಗಳು ಆಶ್ಚರ್ಯವನ್ನೂ ಅವರ ಸಾಧನೆಯ ಬಗೆಗೆ ಗೌರವವನ್ನೂ ಏಕಕಾಲದಲ್ಲೇ ಮೂಡಿಸುತ್ತವೆ.

ಕಾಫಿ ಟೇಬಲ್ ಗಾತ್ರದ ಈ ಪುಸ್ತಕದಲ್ಲಿ ಪ್ರತಿಯೊಬ್ಬ ವಿಜ್ಞಾನಿಗೂ ಎರಡು ಪುಟಗಳನ್ನು ಮೀಸಲಿಡಲಾಗಿದ್ದು, ಒಂದು ಪುಟದಲ್ಲಿ ಅವರ ವರ್ಣಚಿತ್ರ ಹಾಗೂ ಮತ್ತೊಂದರಲ್ಲಿ ಪರಿಚಯವನ್ನು ನೀಡಲಾಗಿದೆ. ಈ ಪರಿಚಯ ಕೇವಲ ಸಾಧಕಿಯರ ಸ್ವವಿವರಕ್ಕೆ ಮಾತ್ರ ಸೀಮಿತವಾಗದಂತೆ ನೋಡಿಕೊಂಡಿರುವುದು ವಿಜ್ಞಾನ ವಿದುಷಿಯ ಹೆಚ್ಚುಗಾರಿಕೆ. ಕೌಟುಂಬಿಕ ಹಿನ್ನೆಲೆ, ಶೈಕ್ಷಣಿಕ ಸಾಧನೆಗಳ ಜೊತೆಗೆ ಆಯಾ ಕಾಲಘಟ್ಟದ ಆಗುಹೋಗುಗಳು ಹಾಗೂ ಸಾಧನೆಯ ಹಾದಿಯಲ್ಲಿ ಜೊತೆಯಾದವರ ಪರಿಚಯವನ್ನೂ ಇದು ಮಾಡಿಕೊಡುತ್ತದೆ. ಹಾಗಾಗಿ ಪುಸ್ತಕದ ಕೊನೆಯ ಬರಹವೂ ಮೊದಲ ಬರಹದಷ್ಟೇ ಆಸಕ್ತಿ ಮೂಡಿಸುತ್ತದೆ!

ಕರ್ನಾಟಕದ ಮೊದಲ ಎಂಜಿನಿಯರ್ ಎಂದು ಹೆಸರಾಗಿರುವ ರಾಜೇಶ್ವರಿ ಚಟರ್ಜಿಯವರ ಅಜ್ಜಿ ಕಮಲಮ್ಮ ದಾಸಪ್ಪನವರು ಮೈಸೂರು ರಾಜ್ಯದ ಮೊದಲ ಮಹಿಳಾ ಪದವೀಧರರಲ್ಲಿ ಒಬ್ಬರಾಗಿದ್ದರಂತೆ. ಇಂತಹ ಅನೇಕ ವಿಶೇಷ ಸಂಗತಿಗಳನ್ನು ಈ ಪುಸ್ತಕದಲ್ಲಿರುವ ಬರಹಗಳು ನಮಗೆ ತಿಳಿಸುತ್ತವೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉನ್ನತ ಅಧ್ಯಯನಕ್ಕಾಗಿ ಮಹಿಳೆಯರಿಗೆ ಪ್ರವೇಶ ನೀಡುವುದು ಸರ್ ಸಿ. ವಿ. ರಾಮನ್‌ರಿಗೆ ಇಷ್ಟವಿರಲಿಲ್ಲ, ಆ ಪರಿಸ್ಥಿತಿ ಬದಲಿಸಲು ಜೀವವಿಜ್ಞಾನಿ ಕಮಲಾ ಸೊಹೊನಿಯವರು ರಾಮನ್ ಕಚೇರಿಯೆದುರು ಧರಣಿ ನಡೆಸಬೇಕಾಗಿ ಬಂದಿತ್ತು ಎನ್ನುವಂತಹ ಸಂಗತಿಗಳೂ ಇಲ್ಲಿವೆ.

ಸ್ವಾತಂತ್ರ್ಯಾನಂತರದ ವರ್ಷಗಳ ಸಾಧಕಿಯರ ಪರಿಚಯ ಈ ಪುಸ್ತಕ ಎರಡನೇ ಭಾಗದಲ್ಲಿದೆ. ಸ್ವಾತಂತ್ರ್ಯಪೂರ್ವದಲ್ಲಿದ್ದ ಕೆಲ ಸಮಸ್ಯೆಗಳು ಈ ವೇಳೆಗೆ ನಿವಾರಣೆಯಾಗಿದ್ದವೆಂದು ನಾವು ಭಾವಿಸಿಕೊಳ್ಳುತ್ತೇವಾದರೂ, ಈ ತಲೆಮಾರಿನ ಸಾಧಕಿಯರೂ ಹಲವು ಸಮಸ್ಯೆಗಳನ್ನು ಎದುರಿಸಿ ಮುನ್ನಡೆದಿರುವುದನ್ನು ಈ ಭಾಗದ ಲೇಖನಗಳಲ್ಲಿ ನೋಡಬಹುದು. ಕೌಟುಂಬಿಕ ಹಾಗೂ ಸಾಮಾಜಿಕ ಒತ್ತಡಗಳು ಮುಂದುವರೆದಿರುವುದು ಒಂದು ಕಡೆಗಾದರೆ ವಿಜ್ಞಾನವನ್ನು ತಮ್ಮ ವೃತ್ತಿಯನ್ನಾಗಿಸಿಕೊಳ್ಳಲು ಹೊರಟ ಸಾಧಕಿಯರಿಗೆ ಹಿಂದಿಗಿಂತ ಹೆಚ್ಚು ಬೆಂಬಲ ದೊರಕಿರುವ ಉದಾಹರಣೆಗಳು ಇಲ್ಲಿವೆ ಎನ್ನುವುದಷ್ಟೇ ಸಮಾಧಾನದ ವಿಷಯ.

ಭಾರತದ ಮೂಲೆಮೂಲೆಗಳಿಂದ ಬಂದ ಸಾಧಕಿಯರೆಲ್ಲರ ನಡುವೆ ನಮ್ಮ ಕರ್ನಾಟಕದ ಅನೇಕರ ಹೆಸರುಗಳೂ ಇರುವುದು ಕನ್ನಡಿಗರಿಗೆ ಸಂತೋಷ ತರಬಲ್ಲ ವಿಷಯ. ಈ ಪೈಕಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್‌ನ ಮೊದಲ ಮಹಾನಿರ್ದೇಶಕಿ ಜಿ. ವಿ. ಸತ್ಯವತಿ, ಜೈವಿಕ ಭೌತವಿಜ್ಞಾನ ಕ್ಷೇತ್ರದ ಸಾಧಕಿ ಸರಸ್ವತಿ ವಿಶ್ವೇಶ್ವರ ('ಬ್ಲ್ಯಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ' ಸಿ. ವಿ. ವಿಶ್ವೇಶ್ವರರ ಪತ್ನಿ) ಮೊದಲಾದವರು ಕರ್ನಾಟಕ ಮೂಲದವರು; ಭೌತವಿಜ್ಞಾನಿ ರೋಹಿಣಿ ಗೋಡಬೋಲೆಯವರಂತಹವರು ಕರ್ನಾಟಕವನ್ನು ತಮ್ಮ ನೆಲೆಯನ್ನಾಗಿಸಿಕೊಂಡವರು!

ಸ್ವಾತಂತ್ರ್ಯದ ಅಮೃತಮಹೋತ್ಸವದ ನೆನಪಿನಲ್ಲಿ ಸಿದ್ಧವಾದ ಈ ಸಂಕಲನ ತನ್ನ ವ್ಯಾಪ್ತಿಯನ್ನು ಆ ಅವಧಿಗಷ್ಟೇ ಸೀಮಿತಗೊಳಿಸಿಕೊಂಡಿಲ್ಲ ಎನ್ನುವುದು ಇದರ ಇನ್ನೊಂದು ವೈಶಿಷ್ಟ್ಯ. 'ಭವಿಷ್ಯದ ಭರವಸೆಗಳು' ಎಂಬ ಹೆಸರಿನ ಕೊನೆಯ ಭಾಗದಲ್ಲಿ ಸದ್ಯ ಕಾರ್ಯನಿರತರಾಗಿರುವ, ಮುಂದೆ ಮಹತ್ವದ ಕೊಡುಗೆಗಳನ್ನು ನೀಡುವ ಭರವಸೆ ಮೂಡಿಸಿರುವ ೩೫ ವಿಜ್ಞಾನಿಗಳ ಸಂಕ್ಷಿಪ್ತ ಪರಿಚಯ ಇದೆ. ಈ ಭಾಗ ಆ ವಿಜ್ಞಾನಿಗಳಿಗಷ್ಟೇ ಅಲ್ಲದೆ, ಈ ಕ್ಷೇತ್ರಕ್ಕೆ ಹೊಸದಾಗಿ ಕಾಲಿಡುತ್ತಿರುವ ಯುವ ಪ್ರತಿಭೆಗಳಿಗೂ ಹೆಚ್ಚಿನ ಉತ್ಸಾಹ ನೀಡುವಂತಿದೆ.

ಎಪ್ಪತ್ತೈದು ಸಾಧಕಿಯರನ್ನು ಪರಿಚಯಿಸುವ ಈ ಸಂಕಲನವನ್ನು ಸಿದ್ಧಪಡಿಸಲು ೨೫೦ಕ್ಕೂ ಹೆಚ್ಚು ಮಹಿಳಾ ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಪಡಿಸಿ ಪರಿಶೀಲಿಸಲಾಗಿತ್ತು ಎಂದು ಈ ಪುಸ್ತಕದ ಪೀಠಿಕೆಯಲ್ಲಿ ಸಂಪಾದಕರು ಹೇಳಿದ್ದಾರೆ. ಯಾವುದೇ ಒಂದು ಸಂಕಲನ ಭಾರತದ ಎಲ್ಲ ವಿಜ್ಞಾನ ವಿದುಷಿಯರನ್ನೂ ಗೌರವಿಸಲು ಶಕ್ತವಾಗಲಾರದು ಎನ್ನುವ ಅಭಿಪ್ರಾಯವೂ ಅಲ್ಲಿದೆ. ಅದು ನಿಜವೆಂದು ಒಪ್ಪಿಕೊಳ್ಳುತ್ತಲೇ, ಇನ್ನಷ್ಟು ವಿಜ್ಞಾನ ವಿದುಷಿಯರ ಸಾಧನೆಗಳನ್ನು ಪರಿಚಯಿಸುವ ಕೃತಿಗಳಿಗೆ - ಮುಂದೆ ವಿಜ್ಞಾನ ವಿದುಷಿಯರಾಗಿ ಬೆಳೆಯಲಿರುವವರ ಸಾಧನೆಗೆ ಈ 'ವಿಜ್ಞಾನ ವಿದುಷಿ' ಉತ್ತಮ ಪ್ರೇರಣೆ ನೀಡಬಲ್ಲ ಕೃತಿ ಎಂದು ಖಂಡಿತವಾಗಿಯೂ ಹೇಳಬಹುದು.

ಕೃತಿಯ ವಿವರ:

  • Vigyan Vidushi - 75 Women Trailblazers of Science

  • ಮೊದಲ ಆವೃತ್ತಿ: ೨೦೨೨, ಬೆಲೆ: ರೂ. ೯೦೦

  • ಪ್ರಕಾಶಕರು: ವಿಜ್ಞಾನ್ ಪ್ರಸಾರ್, ನವದೆಹಲಿ

  • ಹೆಚ್ಚಿನ ಮಾಹಿತಿಗೆ: https://vigyanprasar.gov.in/product/vigyan-vidushi/

ವಿಜ್ಞಾನ್ ಪ್ರಸಾರ್ ಸಂಸ್ಥೆ ತನ್ನ ಚಟುವಟಿಕೆಗಳನ್ನು ನಿಲ್ಲಿಸಿದೆ ಎನ್ನಲಾಗುತ್ತಿರುವುದರಿಂದ, ಪುಸ್ತಕದ ಸದ್ಯದ ಲಭ್ಯತೆ ಬಗ್ಗೆ ಇಜ್ಞಾನ ತಂಡಕ್ಕೆ ಖಚಿತ ಮಾಹಿತಿ ಇಲ್ಲ. ಆನ್‌ಲೈನ್ ಆರ್ಡರ್ ಪ್ರಯತ್ನಿಸುವ ಮುನ್ನ ಈ ಅಂಶ ನಿಮ್ಮ ಗಮನದಲ್ಲಿರಲಿ.

logo
ಇಜ್ಞಾನ Ejnana
www.ejnana.com