ನೂರೊಂದು ನೆನಪು ನ್ಯೂರಾನಿನಿಂದ
ನೂರೊಂದು ನೆನಪು ನ್ಯೂರಾನಿನಿಂದejnana.com (ಮುಖಪುಟ ವಿನ್ಯಾಸ: ಪ್ರದೀಪ್ ಬತ್ತೇರಿ)

ಪುಸ್ತಕ ಪರಿಚಯ: ನೂರೊಂದು ನೆನಪು ನ್ಯೂರಾನಿನಿಂದ

ಟಿ. ಜಿ. ಶ್ರೀನಿಧಿ ಬರೆದ 'ನೂರೊಂದು ನೆನಪು ನ್ಯೂರಾನಿನಿಂದ' ಕೃತಿ ಇದೀಗ ಮಾರುಕಟ್ಟೆಗೆ ಬಂದಿದೆ. ಈ ಪುಸ್ತಕದ ಕುರಿತು ಲೇಖಕರ ಮಾತುಗಳು ಇಲ್ಲಿವೆ.

ಕೊಡಗಿನ ಮಳೆಗಾಲಕ್ಕೂ ಬೆಂಗಳೂರಿನ ಹೋಟಲ್ ಚಟ್ನಿಗೂ ಅಂತರಜಾಲದ ಸಮಸ್ಯೆಗಳಿಗೂ ಏನು ಸಂಬಂಧ? ಹಳ್ಳಿಯಿಂದ ಬಂದ ಹುಡುಗ ಸಿಟಿ ಬಸ್ಸಿನಲ್ಲಿ ನಿದ್ದೆಮಾಡಿದ ಹಾಗೆ ವಿಮಾನದ ಪೈಲಟ್ಟುಗಳೇ ನಿದ್ದೆಮಾಡಿದರೆ ಏನಾಗುತ್ತದೆ? "ಈ ಪತ್ರವನ್ನು ಇಪ್ಪತ್ತೊಂದು ಜನಕ್ಕೆ ಕಳುಹಿಸಿ" ಎನ್ನುತ್ತಿದ್ದವರು ಈಗಲೂ ಇದ್ದಾರೆಯೇ? ಗೋಡೆಗೆ ಹಚ್ಚುತ್ತಿದ್ದ ಸುಣ್ಣ ಎಲ್ಲಿ, ಅಮೆರಿಕಾದಲ್ಲಿ ಕಂಡುಹಿಡಿದಿರುವ ಅಚ್ಚಬಿಳಿ ಬಣ್ಣ ಎಲ್ಲಿ?

ದಕ್ಷಿಣ ಕೊಡಗಿನ ಶ್ರೀಮಂಗಲ ಎಂಬ ಪುಟ್ಟ ಊರಿನಲ್ಲಿ ದಶಕಗಳ ಹಿಂದೆ ಕಳೆದ ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಇಂದಿನ ಬೆಳವಣಿಗೆಗಳನ್ನು ಪರಿಚಯಿಸುವ ಈ ಬರಹಗಳು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೊಂದು ವಿನೂತನ ಪ್ರಯೋಗ. ಇಲ್ಲಿನ ಬರಹಗಳನ್ನು ಓದುತ್ತಾ ಹೋದಂತೆ ನಿಮ್ಮೆದುರು ಹೊಸದೊಂದು ಜಗತ್ತೇ ತೆರೆದುಕೊಳ್ಳುತ್ತದೆ, ಮುಂದಿನ ರಜೆಯಲ್ಲಿ ಶ್ರೀಮಂಗಲವನ್ನೊಮ್ಮೆ ನೋಡಿ ಬರೋಣ ಎಂದೂ ಅನ್ನಿಸುತ್ತದೆ.

ಈ ಪುಸ್ತಕದ ಆಲೋಚನೆ ಬಂದಿದ್ದು ಹೇಗೆ? ಲೇಖಕ ಟಿ. ಜಿ. ಶ್ರೀನಿಧಿ ಹೇಳುವುದು ಹೀಗೆ...

"ನನ್ನ ಅಪ್ಪ-ಅಮ್ಮನಿಗೆ ಮೂರು ದಶಕಗಳಿಗೂ ಹೆಚ್ಚಿನ ಕಾಲ ನೆಲೆಯಾಗಿದ್ದ ಪುಟ್ಟ ಊರು ದಕ್ಷಿಣ ಕೊಡಗಿನ ಶ್ರೀಮಂಗಲ. ಪಶ್ಚಿಮ ಘಟ್ಟಗಳ ಬ್ರಹ್ಮಗಿರಿಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ನಮ್ಮೂರು ಬಹಳವೇ ಸಮೀಪ.

ಹತ್ತನೆಯ ತರಗತಿ ಮುಗಿಸುವವರೆಗೆ ನಾನೂ ಅಲ್ಲಿಯೇ ಇದ್ದೆ. ನಾನು ಬರವಣಿಗೆಯ ಹವ್ಯಾಸ ರೂಢಿಸಿಕೊಂಡಿದ್ದು, 'ಸುದ್ದಿ' ಎಂಬ ಕೈಬರಹದ ದಿನಪತ್ರಿಕೆಯ ಸ್ವಯಂಘೋಷಿತ ಸಂಪಾದಕನಾಗಿದ್ದು. ಅಪ್ಪನ ಸಹಾಯ ಪಡೆದು ಬರೆದ ಕತೆ 'ತುಷಾರ'ದಲ್ಲಿ ಪ್ರಕಟವಾಗಿದ್ದು - ಎಲ್ಲವೂ ಶ್ರೀಮಂಗಲದಲ್ಲಿದ್ದಾಗಲೇ.

ನಾನೊಬ್ಬ ವಿಜ್ಞಾನ-ತಂತ್ರಜ್ಞಾನ ಬರಹಗಾರನಾಗಿದ್ದು ಅನೇಕ ವರ್ಷಗಳ ನಂತರ. ವಿಜ್ಞಾನ ಬರಹಗಳು ಹೀಗೆಯೇ ಇರಬೇಕು ಎಂದು ಭಾವಿಸಿದ್ದರಿಂದಲೋ, ಯಾರಾದರೂ ಬೈದರೇನು ಗತಿ ಎಂಬ ಹಿಂಜರಿಕೆಯಿಂದಲೋ ಅಥವಾ ಪದಮಿತಿಯ ಕಾರಣದಿಂದಲೋ ಬಹುಸಮಯ ನಾನು ನನ್ನ ಲೇಖನಗಳಲ್ಲಿ ವೈಯಕ್ತಿಕ ವಿಷಯಗಳನ್ನು ಬರೆದಿರಲಿಲ್ಲ. ವಿಜ್ಞಾನ ಲೇಖನಗಳಲ್ಲಿ ಸ್ವಂತದ ಕತೆ ಕಡಿಮೆಯಿರಬೇಕು ಎಂದು ಅನೇಕ ಹಿರಿಯರು ಹೇಳಿದ್ದು ಕೂಡ ನನ್ನ ತಲೆಯಲ್ಲಿ ಗಟ್ಟಿಯಾಗಿ ಕುಳಿತಿತ್ತೆಂದು ಕಾಣುತ್ತದೆ.

೨೦೨೧ರಲ್ಲಿ, ಆಫೀಸ್ ಕೆಲಸದಿಂದ ಕೆಲ ತಿಂಗಳ ವಿರಾಮ ಪಡೆದುಕೊಂಡು ಆರಾಮವಾಗಿದ್ದಾಗ, ವಿಜಯ ಕರ್ನಾಟಕದಲ್ಲಿ 'ಟೆಕ್ ನೋಟ'ವೆಂಬ ಹೊಸ ಅಂಕಣವನ್ನು ಪ್ರಾರಂಭಿಸುವ ಕುರಿತು ಅಂದಿನ ಸಂಪಾದಕ ಶ್ರೀ ಹರಿಪ್ರಕಾಶ್ ಕೋಣೆಮನೆಯವರು ನನ್ನೊಡನೆ ಮಾತನಾಡಿದರು. ಅಂಕಣ ಹೇಗಿರಬೇಕು ಎಂದು ಯೋಚಿಸಿ ಯೋಜಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನೂ ಕೊಟ್ಟರು. ಅದಕ್ಕಿಂತ ಮುಖ್ಯವಾಗಿ, ನನ್ನ ಬರಹಗಳನ್ನು ಈವರೆಗೆ ಕಾಡಿದ್ದ ರಿಯಲ್ ಎಸ್ಟೇಟ್ ಸಮಸ್ಯೆಯನ್ನು ಪರಿಹರಿಸಿ ೭೫೦ ಪದಗಳ ಮಿತಿ ನಿಗದಿಪಡಿಸಿದರು!

'ಟೆಕ್ ನೋಟ'ದ ಮೊದಲ ಬರಹಕ್ಕೆ ನಾನು ನೆನಪಿನ ವಿಷಯವನ್ನು ಏಕೆ ಆರಿಸಿಕೊಂಡೆ ಎನ್ನುವುದು ನನಗೆ ನಿಜಕ್ಕೂ ನೆನಪಿಲ್ಲ. ಆ ಬರಹದ ಪೀಠಿಕೆಯಲ್ಲಿ ನಾನು ಶ್ರೀಮಂಗಲವನ್ನು - ಊರಿನ ಹೆಸರೇ ಹೇಳದೆ - ಪ್ರಸ್ತಾಪಿಸಿದ್ದೆ. ಅದೇ ಲಹರಿಯಲ್ಲಿ ಎರಡನೇ ಲೇಖನದಲ್ಲೂ ನಮ್ಮೂರಿನ ಪ್ರಸ್ತಾಪ ಮಾಡಿದೆ. ಈ ಎರಡು ಲೇಖನಗಳಿಗೆ ಬಂದ ಪ್ರತಿಕ್ರಿಯೆ ಸಾಕಷ್ಟು ಪ್ರೋತ್ಸಾಹದಾಯಕವಾಗಿತ್ತು. ಇದೇ ಪ್ರೋತ್ಸಾಹದ ಕಾರಣದಿಂದ 'ಟೆಕ್ ನೋಟ'ದ ಮೊದಲ ವರ್ಷದುದ್ದಕ್ಕೂ ಶ್ರೀಮಂಗಲ ನನ್ನ ಬರಹಗಳಲ್ಲಿ ಕಾಣಿಸಿಕೊಂಡಿತು.

ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂಭಿಸಿ ಆಕಾಶದಲ್ಲೆಲ್ಲೋ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದವರೆಗೆ ಅನೇಕ ವಿಷಯಗಳ ಪ್ರಸ್ತಾಪ ಈ ಲೇಖನಗಳಲ್ಲಿದೆ. ನನ್ನ ಬಾಲ್ಯಕಾಲದ ನೆನಪುಗಳನ್ನು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಇಂದಿನ ಬೆಳವಣಿಗೆಗಳೊಡನೆ ಜೋಡಿಸಿ ಬರೆದ ಲೇಖನಗಳು ಇದೀಗ ಈ ಸಂಕಲನದ ರೂಪದಲ್ಲಿ ನಿಮ್ಮ ಕೈಸೇರಿವೆ."

ನೂರೊಂದು ನೆನಪು ನ್ಯೂರಾನಿನಿಂದ

ಲೇಖಕರು: ಟಿ. ಜಿ. ಶ್ರೀನಿಧಿ

ಪ್ರಕಾಶಕರು: ಸಾವಣ್ಣ ಎಂಟರ್‌ಪ್ರೈಸಸ್, ಬೆಂಗಳೂರು

172 ಪುಟಗಳು, ಬೆಲೆ: ರೂ. 200

ಆನ್‍ಲೈನ್ ಖರೀದಿಗೆ: ಕನ್ನಡಲೋಕ

Related Stories

No stories found.
logo
ಇಜ್ಞಾನ Ejnana
www.ejnana.com