ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು.
ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. geraldoswald62 / pixabay.com

ಹೃದಯದ ಕಾಳಜಿ ವಹಿಸುವುದು ಹೇಗೆ? ಏಕೆ?

ಹೃದಯದ ನಿರ್ವಹಣೆ ನಮ್ಮ ಜೀವನಶೈಲಿಗೆ ಸಂಬಂಧಿಸಿದ್ದು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತಲೂ ಕಾಯಿಲೆ ಬಾರದಂತೆ ನಿರ್ವಹಿಸುವುದು ಉತ್ತಮ.
Published on

ಹೃದಯದ ಆಂತರಿಕ ಸಮಸ್ಯೆಗಳು ಮತ್ತು ಇತರ ಅಂಗಗಳ ಕಾಯಿಲೆಯಿಂದ ಹೃದಯದ ಮೇಲೆ ಆಗುವ ಪರೋಕ್ಷ ಪರಿಣಾಮಗಳು - ಎರಡೂ ಅಪಾಯಕಾರಿ. ಆಂತರಿಕ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಕರೊನರಿ ರಕ್ತನಾಳಗಳ ಸಮಸ್ಯೆ. ಈ ರಕ್ತನಾಳಗಳು ಅಗತ್ಯ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಹೃದಯಕ್ಕೆ ತಲುಪಿಸುವ ಏಕೈಕ ಮಾರ್ಗ. ಯಾವುದೇ ಕಾರಣದಿಂದ ಈ ರಕ್ತನಾಳಗಳ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ, ಆಗ ಹೃದಯದ ಸ್ನಾಯುಗಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಸ್ನಾಯುಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಒಂದು ಹಂತ ತಲುಪಿದಾಗ ಹೃದಯದ ಕಾರ್ಯಕ್ಷಮತೆ ಹಠಾತ್ತಾಗಿ ಇಳಿದುಹೋಗುತ್ತದೆ. ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ; ಎಲ್ಲಾ ಅಂಗಗಳೂ ಘಾಸಿಗೊಳ್ಳುತ್ತವೆ. ಈ ಪ್ರಕ್ರಿಯೆಗೆ ಹೃದಯಾಘಾತ ಎಂದು ಹೆಸರು. ಹೃದಯದ ಎಡಭಾಗಕ್ಕೆ ರಕ್ತ ಪೂರೈಸುವ ಕರೊನರಿ ರಕ್ತನಾಳ ಸಂಪೂರ್ಣವಾಗಿ ಕಟ್ಟಿಕೊಂಡರೆ ಹೃದಯಾಘಾತದ ಪ್ರಕ್ರಿಯೆ ವೇಗವಾಗಿ ಆಗುತ್ತದೆ. ಹೀಗೆ ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಇದನ್ನು ತೀವ್ರ ಹೃದಯಾಘಾತ ಎನ್ನಬಹುದು.

ತೀವ್ರ ಹೃದಯಾಘಾತ
ತೀವ್ರ ಹೃದಯಾಘಾತhttps://www.myupchar.com/en, CC BY-SA 4.0, via Wikimedia Commons

ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಈ ರಕ್ತನಾಳಗಳು ಎಷ್ಟು ಪ್ರತಿಶತ ಕಟ್ಟಿಕೊಂಡಿವೆ; ವ್ಯಕ್ತಿ ಭೌತಿಕವಾಗಿ ಎಷ್ಟು ಸಕ್ರಿಯರಾಗಿದ್ದಾರೆ ಎನ್ನುವುದರ ಮೇಲೆ ಹೃದಯದ ಕಾರ್ಯಕ್ಷಮತೆಯ ನಿರ್ಧಾರವಾಗುತ್ತದೆ. ಇದನ್ನು ತಿಳಿಯಲು ಅಂಜಿಯೊಗ್ರಾಮ್ ಮೊದಲಾದ ಪರೀಕ್ಷೆಗಳು ನೆರವಾಗುತ್ತವೆ.

ಹೃದಯದ ಸ್ನಾಯುಗಳ ದೌರ್ಬಲ್ಯ, ಕವಾಟಗಳ ಸಾಮರ್ಥ್ಯ ಕುಂದುವಿಕೆ, ಹೃದಯದ ವಿದ್ಯುತ್ ಹರಿಯುವಿಕೆಯಲ್ಲಿನ ದೋಷಗಳು, ಹೃದಯದ ಕೋಣೆಗಳ ನಡುವಿನ ಗೋಡೆಗಳಲ್ಲಿ ಇರಬಹುದಾದ ರಂಧ್ರದಂತಹ ಜನ್ಮಜಾತ ಸಮಸ್ಯೆಗಳು, ಹೃದಯದಿಂದ ರಕ್ತವನ್ನು ಅಂಗಗಳಿಗೆ ಒಯ್ಯುವ ರಕ್ತನಾಳಗಳ ಸಮಸ್ಯೆಗಳು – ಇವೆಲ್ಲವೂ ಹೃದಯದ ಆರೋಗ್ಯವನ್ನು ಏರುಪೇರು ಮಾಡಬಲ್ಲವು. ಹೃದಯಾಘಾತದ ಪ್ರಮಾಣಕ್ಕೆ ಹೋಲಿಸಿದರೆ ಇಂತಹ ಸಮಸ್ಯೆಗಳು ಕಡಿಮೆ.

ಜನ್ಮಜಾತ ಹೃದ್ರೋಗ – ಕಕ್ಷೆಗಳ ನಡುವಿನ ಗೋಡೆಯ ರಂಧ್ರ
ಜನ್ಮಜಾತ ಹೃದ್ರೋಗ – ಕಕ್ಷೆಗಳ ನಡುವಿನ ಗೋಡೆಯ ರಂಧ್ರCenters for Disease Control and Prevention, CC0, via Wikimedia Commons

ಅಧಿಕ ರಕ್ತದೊತ್ತಡ ಅತ್ಯಂತ ಸಾಮಾನ್ಯವಾಗಿ ಕಾಣುವ ಸಮಸ್ಯೆ. ಇದು ಬಹುತೇಕ ಹೃದಯದ ಆಂತರಿಕ ಕಾರಣವಲ್ಲ. ಬದಲಿಗೆ, ರಕ್ತನಾಳಗಳು ಪೆಡಸುಗಟ್ಟುವಿಕೆ, ಯಾವುದೋ ಒಂದು ಅಂಗದ ರಕ್ತನಾಳಗಳು ಕಿರಿದಾಗಿ, ಅದಕ್ಕೆ ಸಾಕಷ್ಟು ಪ್ರಮಾಣದ ರಕ್ತ ಹರಿಯಲು ಆಗುವ ಅಡ್ಡಿ, ಶರೀರದ ಚೋದಕಗಳಲ್ಲಿನ ವ್ಯತ್ಯಾಸ ಮೊದಲಾದ ಕಾರಣಗಳಿವೆ. ಯಾವುದೇ ಕಾರಣದಿಂದ ಒಂದು ಅಂಗಕ್ಕೆ ರಕ್ತದ ಸರಬರಾಜು ಕಡಿಮೆಯಾದರೆ ಆ ಅಂಗ ಮಿದುಳಿಗೆ ಸೂಚನೆ ಕಳಿಸುತ್ತದೆ. ಕೂಡಲೇ ಮಿದುಳು ಹೃದಯಕ್ಕೆ ಸಂಕೇತಗಳನ್ನು ಕಳಿಸಿ, ಹೆಚ್ಚು ರಕ್ತವನ್ನು ಒತ್ತುವಂತೆ ತಿಳಿಸುತ್ತದೆ. ಆಗ ಹೃದಯದ ಸ್ನಾಯುಗಳು ಹೆಚ್ಚು ಕೆಲಸ ಮಾಡಿ ಅಧಿಕ ಒತ್ತಡವನ್ನು ನಿರ್ಮಿಸುತ್ತವೆ. ಈ ಒತ್ತಡ ಇತರ ರಕ್ತನಾಳಗಳಿಗೂ ಹರಿಯುತ್ತದೆ. ಈ ಮೂಲಕ ಇತರ ಅಂಗಗಳು ಅಗತ್ಯಕ್ಕಿಂತ ಹೆಚ್ಚು ರಕ್ತವನ್ನು ಅಧಿಕ ಒತ್ತಡದಲ್ಲಿ ಪಡೆಯುತ್ತವೆ. ಅವುಗಳ ಕೆಲಸದಲ್ಲೂ ವ್ಯತ್ಯಾಸ ಬರುತ್ತದೆ. ಅಧಿಕ ರಕ್ತದೊತ್ತಡ ತಂತಾನೇ ಒಂದು ಕಾಯಿಲೆಯಲ್ಲ; ಬದಲಿಗೆ ಶರೀರದಲ್ಲಿ ಆಗುತ್ತಿರುವ ವ್ಯತ್ಯಾಸಗಳ ಸೂಚಕ.

ಶರೀರದ ಅನೇಕ ಕಾಯಿಲೆಗಳು ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಯಾವುದೋ ಅಂಗದ ಕ್ಯಾನ್ಸರ್ ರಕ್ತದ ಮೂಲಕ ಹೃದಯಕ್ಕೆ ವ್ಯಾಪಿಸಬಹುದು. ಶರೀರದ ಸೋಂಕುಗಳು ರಕ್ತದ ಹಾದಿ ಹಿಡಿದು ಹೃದಯವನ್ನು ತಲುಪಿ, ಸೋಂಕು ಹರಡಬಹುದು. ಹೃದಯದ ಯಾವುದೇ ಭಾಗವನ್ನಾದರೂ ಬಾಧಿಸಬಲ್ಲ ಸಾಮರ್ಥ್ಯ ಇರುವ ಕಾಯಿಲೆಗಳಿವೆ.

ಹೃದಯದ ನಿರ್ವಹಣೆ ನಮ್ಮ ಜೀವನಶೈಲಿಗೆ ಸಂಬಂಧಿಸಿದ್ದು. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತಲೂ ಕಾಯಿಲೆ ಬಾರದಂತೆ ನಿರ್ವಹಿಸುವುದು ಉತ್ತಮ. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯಕರ ಹೃದಯಕ್ಕಾಗಿ ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು; ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸೂಕ್ತ. ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರ ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದು. ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. ನಿದ್ರಾಹೀನತೆಯಿಂದ ಹೃದ್ರೋಗಗಳ ಸಾಧ್ಯತೆ ಅಧಿಕವಾಗುತ್ತದೆ.

ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು.
ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?
logo
ಇಜ್ಞಾನ Ejnana
www.ejnana.com