ಸೋಮವಾರ, ಆಗಸ್ಟ್ 6, 2018

ಆಂಡ್ರಾಯ್ಡ್ ಹೊಸ ಆವೃತ್ತಿಗೆ ಹೂರಣದ ಕಡುಬಿನ ಹೆಸರು!

ಇಜ್ಞಾನ ವಿಶೇಷಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್‍) ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿ ಸದ್ಯದಲ್ಲೇ ಹೊರಬರಲಿದೆ ಎನ್ನುವುದು ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ.

ಆಂಡ್ರಾಯ್ಡ್‌ನ ಹೊಸ ಆವೃತ್ತಿ ಬಿಡುಗಡೆಯಾಗುವುದು ಅಪರೂಪದ ಸಂಗತಿಯೇನಲ್ಲ. ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಈ ಹೆಸರಿನ ಸರಣಿ ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳುತ್ತದೆ. ಹೀಗಾಗಿಯೇ ಪ್ರತಿಬಾರಿಯೂ ಹೊಸ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಅಂಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

ಈ ಬಾರಿಯ ಕುತೂಹಲ ಈಗಷ್ಟೇ ಅಂತ್ಯವಾಗಿದ್ದು ಸದ್ಯ ಹೊರಬರಲಿರುವ ಆಂಡ್ರಾಯ್ಡ್‌ನ ಒಂಬತ್ತನೇ ಆವೃತ್ತಿಗೆ 'ಪೈ' ಎಂದು ಹೆಸರಿಡಲಾಗಿದೆ. ಓದಲು-ಕೇಳಲು ಗಣಿತದ 'ಪೈ' ಹಾಗೆಯೇ ಕೇಳುವ ಈ ಪೈ ಒಂದು ಸಿಹಿತಿಂಡಿ: ಹಣ್ಣನ್ನು ಹುದುಗಿ ಬೇಯಿಸಿದ ಹೂರಣದ ಕಡುಬಿನಂಥದ್ದು.


ಅಂದಹಾಗೆ ಸಿಹಿತಿಂಡಿಯ ಹೆಸರಿಡುವ ಈ ಅಭ್ಯಾಸ ಶುರುವಾದದ್ದು ಆಂಡ್ರಾಯ್ಡ್‌ನ ಮೂರನೇ ಆವೃತ್ತಿಯಿಂದ; ಹಾಗಾಗಿ ಸಿಹಿತಿಂಡಿಗಳ ಪಟ್ಟಿ ಶುರುವಾಗುವುದು 'ಎ' ಬದಲು 'ಸಿ' ಅಕ್ಷರದಿಂದ ಎನ್ನುವುದು ವಿಶೇಷ. ಕಪ್‌ಕೇಕ್, ಡೋನಟ್, ಎಕ್ಲೇರ್, ಫ್ರೋಯೋ ('ಫ್ರೋಜನ್ ಯೋಗರ್ಟ್' ಎನ್ನುವುದರ ಹ್ರಸ್ವರೂಪ), ಜಿಂಜರ್‌ಬ್ರೆಡ್, ಹನಿಕೂಂಬ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಜೆಲ್ಲಿಬೀನ್, ಕಿಟ್‌ಕ್ಯಾಟ್, ಲಾಲಿಪಾಪ್, ಮಾರ್ಶ್‌ಮ್ಯಾಲೋ, ನೌಗಾಟ್‌ಗಳೆಲ್ಲ ಆದಮೇಲೆ ಆಂಡ್ರಾಯ್ಡ್‌ ಕಾರ್ಯಾಚರಣ ವ್ಯವಸ್ಥೆಯ ಎಂಟನೇ ಆವೃತ್ತಿಗೆ ಓರಿಯೋ ಕ್ರೀಮ್ ಬಿಸ್ಕತ್ತಿನ ಹೆಸರಿಡಲಾಗಿತ್ತು. ಇದೀಗ ಒಂಬತ್ತನೇ ಆವೃತ್ತಿಗೆ ಪೈ ಎಂಬ ಹೆಸರಿಡುವುದರ ಜೊತೆಗೆ ಆಂಡ್ರಾಯ್ಡ್ ಮತ್ತು ಸಿಹಿತಿಂಡಿಯ ನಂಟು ಮುಂದುವರೆದಂತಾಗಿದೆ.

ಗೂಗಲ್‌ ಸಂಸ್ಥೆಯ ಪಿಕ್ಸೆಲ್ ಸರಣಿಯ ಫೋನುಗಳಿಗೆ ಈ ಹೊಸ ಆವೃತ್ತಿ ಮೊದಲು ಲಭ್ಯವಾಗಲಿದ್ದು ಇನ್ನಿತರ ಸಾಧನಗಳು ಆನಂತರದಲ್ಲಿ ಪೈ ರುಚಿ ನೋಡಲಿವೆ.
badge