ಮಂಗಳವಾರ, ಮೇ 29, 2018

ಇಂಧನ ಸಮಸ್ಯೆಗೆ ಪರಿಹಾರ ಸೂರ್ಯ

ಕ್ಷಮಾ ವಿ. ಭಾನುಪ್ರಕಾಶ್


ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳಿಗೆ ಮತ್ತು ಇವುಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆಗೆ ಉತ್ತರವೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳು. ಅವುಗಳಲ್ಲಿ ಬಹಳ ಸಮರ್ಥವಾಗಿ ಮತ್ತು ಸುಲಭವಾಗಿ ಬಳಕೆಯಾಗಬಲ್ಲುದು ಸೌರಶಕ್ತಿ. ಸೌರಶಕ್ತಿಯನ್ನು ಶಾಖ ಉತ್ಪಾದಿಸಲು ಮತ್ತು ವಿದ್ಯುತ್ತನ್ನು ಉತ್ಪಾದಿಸಲು ಬಳಸಬಹುದು.

'ಸೋಲಾರ್ ಥರ್ಮಲ್ ಸೆಲ್'  ಅಥವಾ ಸೌರ ಉಷ್ಣ ಕೋಶದಿಂದ ಶಾಖವನ್ನು ಸುಲಭವಾಗಿ ಉತ್ಪಾದಿಸಬಹುದು. ಸೌರ ಉಷ್ಣ ಕೋಶದಲ್ಲಿ ಬಳಕೆಯಾಗಿರುವುದು ಬಹಳ ಸರಳ ವೈಜ್ಞಾನಿಕ ಸಿದ್ಧಾಂತ. ಥರ್ಮೋ ಡೈನಮಿಕ್ಸ್ ಅಥವಾ ಉಷ್ಣಬಲ ವಿಜ್ಞಾನದ ಮೂಲಭೂತ ತತ್ವದ ಆಧಾರದ ಮೇಲೆ ರಚಿತವಾಗಿರುವುದು ಈ ಸೌರ ಉಷ್ಣ ಕೋಶಗಳು. ಈ ಕೋಶಗಳಲ್ಲಿನ ಶಾಖ ವಾಹಕಗಳು ಸೂರ್ಯನ ಅತಿ ನೇರಳೆ ಕಿರಣಗಳನ್ನು ಹೀರಿಕೊಂಡು ಅದನ್ನು ಶಾಖವಾಗಿ ಪರಿವರ್ತಿಸುತ್ತವೆ. ಇಂತಹ ಹಲವಾರು 'ಸೋಲಾರ್ ಥರ್ಮಲ್ ಸೆಲ್'ಗಳ ಜೋಡಣೆಯಿಂದ ತಯಾರಾದ 'ಸೋಲಾರ್ ಥರ್ಮಲ್ ಪಾನೆಲ್'ಗಳು ಅಥವ ಸೌರ ಉಷ್ಣ ಫಲಕಗಳಿಂದ ಹೆಚ್ಚೆಚ್ಚು ಶಾಖವನ್ನು ಉತ್ಪಾದಿಸಬಹುದು. ಇಂತಹ ಸೌರ ಉಷ್ಣ ಫಲಕಗಳಿಗೆ ಹೊಂದಿಸಿದ ನೀರಿನ ಕೊಳವೆಗಳಲ್ಲಿ ನಿಮಿಷ ಮಾತ್ರದಲ್ಲಿ ನೀರು ಬಿಸಿ ಮಾಡಬಹುದು.ಇದರಿಂದ ಸಮಯದ ಉಳಿತಾಯವಶ್ಟೇ ಅಲ್ಲದೆ ಪರಿಸರದ ರಕ್ಷಣೆಯೂ ಸಾಧ್ಯ. ಏಕೆಂದರೆ ಇಲ್ಲಿ, ಇತರೆ ಪಳೆಯುಳಿಕೆ ಇಂಧನಗಳಿಂದ ಹೊರಬರುವ ಇಂಗಾಲದ ಡೈ ಆಕ್ಸೈಡ್ ನಂತಹ ಅನಿಲಗಳ ಉತ್ಪಾದನೆಯೇ ಇಲ್ಲ.

'ಸೋಲಾರ್ ಎಲೆಕ್ಟ್ರಿಕ್ ಸೆಲ್' ಅಥವಾ ಸೌರ ವಿದ್ಯುತ್ ಕೋಶಗಳ ಬಳಕೆಯಿಂದ ಸೌರ ಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸಬಹುದು. ಸೋಲಾರ್ ಎಲೆಕ್ಟ್ರಿಕ್ ಸೆಲ್‌ಗಳಲ್ಲಿ ಹಲವಾರು ಬಗೆಯ ಅರೆವಾಹಕಗಳು ಅಥವಾ 'ಸೆಮಿ ಕಂಡಕ್ಟರ್'ಗಳ ಬಳಕೆ ಮಾಡಲಾಗುತ್ತದೆ. ಈ ಸೆಲ್ ಗಳಲ್ಲಿ ಮೋನೋ ಕ್ರಿಸ್ಟಲೈನ್ ಸಿಲಿಕಾನ್, ಪಾಲಿ ಕ್ರಿಸ್ಟಲೈನ್ ಸಿಲಿಕಾನ್, ಕ್ಯಾಡ್ಮಿಯಮ್ ಟೆಲ್ಲುರೈಡ್, ಕಾಪರ್ ಇಂಡಿಯಮ್ ಸೆಲೆನೈಡ್‍ನಂತಹ ಅರೆವಾಹಕಗಳು ಮತ್ತು ಇತರೆ ರಾಸಾಯನಿಕಗಳನ್ನು ಒಂದು ಗಾಜಿನ, ಪ್ಲಾಸ್ಟಿಕ್ ನ ಅಥವಾ ಲೋಹದ ಹಾಳೆಯ ಮೇಲೆ ಪದರದಂತೆ ಸವರಲಾಗಿರುತ್ತದೆ.

ಸೌರ ವಿದ್ಯುತ್ ಕೋಶಗಳಲ್ಲಿನ ಅರೆವಾಹಕಗಳು, ತಮ್ಮಮೇಲೆ ಸೂರ್ಯನ ಕಿರಣಗಳು ಬಿದ್ದಾಗ, ಆ ಕಿರಣಗಳಲ್ಲಿನ 'ಫೋಟಾನ್'ಗಳನ್ನು ಹೀರಿಕೊಳ್ಳುತ್ತವೆ. ಬೆಳಕಿನ ಘಟಕಗಳಾದ ಈ ಫೋಟಾನ್‌ಗಳು, ಅರೆವಾಹಕಗಳ ಕಣಗಳಲ್ಲಿ ಇರುವ ಎಲೆಕ್ಟ್ರಾನ್‌ಗಳನ್ನು ಹೊರ ದೂಡುತ್ತವೆ. ಆಗ ಉಂಟಾದ ಸಂಭಾವ್ಯ ಅಸಮತೋಲನದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ.ಹೀಗೆ ಉತ್ಪಾದನೆಯಾದ ಏಕಮುಖ ಪ್ರವಾಹದ ವಿದ್ಯುತ್ತನ್ನು ಶೇಖರಿಸಿಡಬಹುದು ಮತ್ತು ಬಳಸಿಕೊಳ್ಳಬಹುದು.

ಹಲವು ಸೌರ ವಿದ್ಯುತ್ ಕೋಶಗಳನ್ನು ಜೋಡಿಸಿ ಸೌರ ವಿದ್ಯುತ್ ಫಲಕಗಳನ್ನು ತಯಾರಿಸಲಾಗುತ್ತದೆ. ಈ ಪಾನೆಲ್‌ಗಳನ್ನು ಬೀದಿ ದೀಪ ಬೆಳಗಿಸುವುದರಿಂದ ಹಿಡಿದು ಬಾಹ್ಯಾಕಾಶ ನಿಲ್ದಾಣದ ಅವಶ್ಯಕತೆಗಳನ್ನು ಪೂರೈಸುವವರೆಗೆ ನೂರಾರು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ನಮ್ಮ ಇಂಗಾಲದ ಹೆಜ್ಜೆಗುರುತು, ಅರ್ಥಾತ್ 'ಕಾರ್ಬನ್ ಫ಼ುಟ್ ಪ್ರಿಂಟ್' ಅನ್ನು ಕಡಿಮೆ ಮಾಡುವ ಸುಲಭೋಪಾಯವಾಗಿ ಪರಿಣಮಿಸಿದೆ.

ಡಿಸೆಂಬರ್ ೨೩, ೨೦೧೨ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹ

ಕಾಮೆಂಟ್‌ಗಳಿಲ್ಲ:

badge