ಬುಧವಾರ, ಜನವರಿ 31, 2018

ಮೊಬೈಲ್ ಸಿಗ್ನಲ್ ಸುತ್ತಮುತ್ತ

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನ್ ಯಾರಿಗೆ ತಾನೇ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್‌ವರ್ಕ್) ವಿನ್ಯಾಸ.
ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ! ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ 'ಕೋಶ', ಅಂದರೆ 'ಸೆಲ್'ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ 'ಸೆಲ್' ಫೋನ್ ಎಂದು ಹೆಸರು ಬರಲು ಕಾರಣ.

ತಮ್ಮ ಸುತ್ತಲಿನ 'ಸೆಲ್'ನಲ್ಲಿರುವ ಗ್ರಾಹಕರಿಗೆ ಕರೆಮಾಡುವ, ಕರೆ ಸ್ವೀಕರಿಸುವ, ಅಂತರಜಾಲ ಬಳಸುವ ಸೌಲಭ್ಯಗಳನ್ನೆಲ್ಲ ಒದಗಿಸುವುದು ನಿರ್ದಿಷ್ಟ ಮೊಬೈಲ್ ಟವರ್‌ನ ಜವಾಬ್ದಾರಿ. ನಾವು ಮಾತನಾಡುತ್ತಿರುವಾಗ ಒಂದು 'ಸೆಲ್'ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್‌ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್‌ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ.

ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತಿದೆಯಲ್ಲ, ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್‌ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.

ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ (dBm) ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-೬೦, -೮೦, -೯೦ ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -೧೦೦ ಅಥವಾ ಅದಕ್ಕೂ ಕಡಿಮೆಯಾದಾಗ (-೧೧೦, -೧೨೦ ಹೀಗೆ) "ಮೊಬೈಲಿನಲ್ಲಿ ಸಿಗ್ನಲ್ ಇಲ್ಲ"ವೆಂದು ದೂರುವ ಪರಿಸ್ಥಿತಿ ಬರುತ್ತದೆ!

ಹಾಗೆಂದು ನಮ್ಮ ಮೊಬೈಲ್ ಬಳಕೆಯ ಅನುಭವದ ಮೇಲೆ ಪ್ರಭಾವ ಬೀರುವುದು ಇದೊಂದೇ ಅಂಶ ಎಂದೇನೂ ಹೇಳುವಂತಿಲ್ಲ. ಏಕೆಂದರೆ ಮೊಬೈಲ್ ಜಾಲಗಳ ಪ್ರಸಾರ ವ್ಯಾಪ್ತಿ (ಕವರೇಜ್) ಮತ್ತು ಧಾರಣಶಕ್ತಿ (ಕೆಪ್ಯಾಸಿಟಿ) ಕೂಡ ಮೊಬೈಲ್ ಸೇವೆಯ ಗುಣಮಟ್ಟವನ್ನು ಪ್ರಭಾವಿಸಬಲ್ಲವು.

ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ.

ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯವನ್ನು ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ. ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.

ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪ್ಯಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು - ಅಂತರಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

ಜನವರಿ ೧೦, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge