ಶುಕ್ರವಾರ, ಅಕ್ಟೋಬರ್ 13, 2017

ವೀಕೆಂಡ್ ಇಜ್ಞಾನ: ತಂತ್ರಾಂಶ ವಿಶ್ವದಲ್ಲಿ ರೋಬಾಟ್‌ಗಳ ಜಗತ್ತು

ಟಿ. ಜಿ. ಶ್ರೀನಿಧಿ

ಯಂತ್ರಮಾನವ, ಅಂದರೆ ರೋಬಾಟ್‌ಗಳ ಪರಿಕಲ್ಪನೆ ಬಹಳ ರೋಚಕವಾದದ್ದು. ಸಾಮಾನ್ಯ ಜನರಿಗೆ ರೋಬಾಟ್‌ಗಳ ಪರಿಚಯವಿರುವುದು ಹೆಚ್ಚಾಗಿ ಕತೆಗಳ-ಚಲನಚಿತ್ರಗಳ ಮೂಲಕವೇ ಇರಬಹುದು; ಆದರೆ ಈಚಿನ ವರ್ಷಗಳಲ್ಲಿ ನೈಜ ರೋಬಾಟ್‌ಗಳು ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ಇಂತಹ ರೋಬಾಟ್‌ಗಳ ಕಾರ್ಯಕ್ಷೇತ್ರ ಬಹಳ ವಿಸ್ತಾರವಾಗಿ ವ್ಯಾಪಿಸಿಕೊಂಡಿದೆ.

ಇಂತಹ ಎಲ್ಲ ರೋಬಾಟ್‌ಗಳೂ ಒಂದಲ್ಲ ಒಂದು ಬಗೆಯ ಯಂತ್ರಗಳೇ. ಸಿನಿಮಾಗಳಲ್ಲಿ ಕಾಣಸಿಗುವ ಮನುಷ್ಯರೂಪದ ಯಂತ್ರವಿರಲಿ, ಅತ್ತಿತ್ತ ಓಡಾಡುತ್ತ ಮನೆಯ ಕಸಗುಡಿಸುವ ಪುಟಾಣಿ ಪೆಟ್ಟಿಗೆಯಂತ ಯಂತ್ರವೇ ಇರಲಿ ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುವ ಶಕ್ತಿಯಿರುವುದು ರೋಬಾಟ್‌ಗಳ ವೈಶಿಷ್ಟ್ಯ.

ಯಂತ್ರಾಂಶದ (ಹಾರ್ಡ್‌ವೇರ್) ರೂಪದಲ್ಲಿ ಇಷ್ಟೆಲ್ಲ ಕೆಲಸಮಾಡಬಲ್ಲ ರೋಬಾಟ್‌ಗಳನ್ನು ತಂತ್ರಾಂಶಗಳ (ಸಾಫ್ಟ್‌ವೇರ್) ರೂಪದಲ್ಲಿ ಬಳಸಲು ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆ. ಭೌತಿಕ ಪ್ರಪಂಚದಲ್ಲಿರುವಂತೆ ತಂತ್ರಾಂಶಗಳ ವರ್ಚುಯಲ್ ವಿಶ್ವದಲ್ಲೂ ರೋಬಾಟ್‌ಗಳಿವೆ. ಕಣ್ಣಿಗೆ ಕಾಣುವ ರೋಬಾಟ್‌ಗಳು ಹಲವು ಯಂತ್ರಾಂಶಗಳ ಜೋಡಣೆಯಿಂದ ರೂಪುಗೊಂಡಿದ್ದರೆ ಜಾಲಜಗತ್ತಿನ ಈ ಅದೃಶ್ಯ ರೋಬಾಟ್‌ಗಳು ಬರಿಯ ತಂತ್ರಾಂಶಗಳಷ್ಟೇ ಆಗಿರುತ್ತವೆ ಎನ್ನುವುದೊಂದೇ ವ್ಯತ್ಯಾಸ.

ತಂತ್ರಾಂಶರೂಪಿ ರೋಬಾಟ್‌ಗಳನ್ನು 'ಬಾಟ್'ಗಳೆಂದು ಗುರುತಿಸುವುದು ಸಾಮಾನ್ಯ ಅಭ್ಯಾಸ. ಬಾಟ್ ಎನ್ನುವುದು 'ರೋಬಾಟ್' ಎಂಬ ಹೆಸರಿನ ಹ್ರಸ್ವರೂಪ.

ಮತ್ತೆಮತ್ತೆ ಮಾಡುವ ಯಾವುದೇ ನಿರ್ದಿಷ್ಟ ಕೆಲಸವನ್ನು ಅತ್ಯಂತ ನಿಖರವಾಗಿ, ಕ್ಷಿಪ್ರವಾಗಿ ಮಾಡಿ ಮುಗಿಸುವುದು ಬಾಟ್‌ಗಳ ವೈಶಿಷ್ಟ್ಯ. ಬೇರೆಬೇರೆ ತಾಣಗಳಿಂದ ಮಾಹಿತಿ ಸಂಗ್ರಹಿಸುವುದು, ಚಾಟ್ ಮೂಲಕ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು, ಟ್ಯಾಕ್ಸಿ ಬುಕಿಂಗ್ ಮಾಡುವುದು, ಉಡುಗೊರೆಗಳನ್ನು ಆರ್ಡರ್ ಮಾಡುವುದು, ಸ್ವಯಂಚಾಲಿತವಾಗಿ ಹಲವು ಬಗೆಯ ಮಾಹಿತಿಯನ್ನು ಸಂಸ್ಕರಿಸುವುದು - ಹೀಗೆ ಹಲವು ಉದ್ದೇಶಗಳಿಗಾಗಿ ಬಾಟ್‌ಗಳು ಇದೀಗ ಬಳಕೆಯಾಗುತ್ತಿವೆ.

ಈ ಪೈಕಿ ಚಾಟ್ ಮೂಲಕ ಬಳಕೆದಾರರೊಡನೆ ವ್ಯವಹರಿಸಬಲ್ಲ ಬಾಟ್‌‌ಗಳನ್ನು 'ಚಾಟ್‌ಬಾಟ್'ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಅನೇಕ ವಿಧಗಳಿರುವುದು ಸಾಧ್ಯ. ಗ್ರಾಹಕನ ಪ್ರಶ್ನೆಯಲ್ಲಿರುವ ಪದಗಳನ್ನು ವಿಶ್ಲೇಷಿಸಿ ಅದಕ್ಕೆ ಹೊಂದುವಂತಹ ಉತ್ತರವನ್ನು ತಮ್ಮ ಸಂಗ್ರಹದಿಂದ ಆಯ್ದು ಕೊಡುವುದು ಈ ಪೈಕಿ ಕೆಲವು ಚಾಟ್‌ಬಾಟ್‌ಗಳು ಬಳಸುವ ತಂತ್ರ. ನಮ್ಮ ನಿರ್ದೇಶನಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡಿಕೊಡುವ (ಉದಾ: ಟಿಕೇಟು ಕಾಯ್ದಿರಿಸುವುದು, ಟ್ಯಾಕ್ಸಿ ಕರೆಸುವುದು ಇತ್ಯಾದಿ) ಚಾಟ್‌ಬಾಟ್‌ಗಳೂ ಇವೆ. ಸಂಸ್ಥೆಯ ಬಗ್ಗೆ, ಅದು ಒದಗಿಸುವ ಸೇವೆಯ ಬಗ್ಗೆ ನಾವು ಕೇಳುವ ಪ್ರಶ್ನೆಗೆ ಥಟ್ಟನೆ ಉತ್ತರಿಸುವ ಸೌಲಭ್ಯ ಹಲವು ಜಾಲತಾಣಗಳಲ್ಲಿರುತ್ತದಲ್ಲ, ಅಂತಹ ಸೌಲಭ್ಯಗಳಲ್ಲೂ ಚಾಟ್‌ಬಾಟ್‌ಗಳೇ ಬಳಕೆಯಾಗುತ್ತವೆ. ಅಷ್ಟೇ ಏಕೆ, ಹಿಂದಿನ ಸಂವಾದಗಳ ಅನುಭವದ ಆಧಾರದಲ್ಲಿ ತಮ್ಮ ಮುಂದಿನ ಉತ್ತರಗಳನ್ನು ಉತ್ತಮಪಡಿಸಿಕೊಳ್ಳುವ ಚಾಟ್‌ಬಾಟ್‌ಗಳನ್ನೂ ರೂಪಿಸಲಾಗುತ್ತಿದೆ. ಇಂತಹ ಚಾಟ್‌ಬಾಟ್‌ಗಳು ಮುಂದೊಮ್ಮೆ ಗ್ರಾಹಕ ಸೇವಾ ವಿಭಾಗದ ಸಿಬ್ಬಂದಿಯ ಸ್ಥಾನ ತೆಗೆದುಕೊಳ್ಳುವ ಮಟ್ಟಕ್ಕೂ ಬೆಳೆಯಬಲ್ಲವು ಎಂದು ನಿರೀಕ್ಷಿಸಲಾಗಿದೆ.

ತಂತ್ರಾಂಶ ಬಳಸಿ ಮಾಡುವ ಎಲ್ಲ ಕೆಲಸಗಳಲ್ಲೂ ಬಳಕೆದಾರರೊಡನೆ ನೇರ ಸಂಭಾಷಣೆಯ ಅಗತ್ಯ ಇರುವುದಿಲ್ಲ. ಕಡತಗಳ ವಿಲೇವಾರಿ, ಮಾಹಿತಿ ಸಂಗ್ರಹಣೆ ಹಾಗೂ ಸಂಸ್ಕರಣೆ ಸೇರಿದಂತೆ ಈ ಬಗೆಯ ಹಲವು ಕೆಲಸಗಳಲ್ಲೂ ಬಾಟ್‌ಗಳು ಬಳಕೆಯಾಗುತ್ತವೆ.

ತಂತ್ರಜ್ಞಾನದ ಸಹಾಯದಿಂದ ಯಾವುದೇ ಪ್ರಕ್ರಿಯೆಯನ್ನು ಸ್ವಯಂಚಾಲಿತವನ್ನಾಗಿಸುವುದಕ್ಕೆ 'ಆಟೋಮೇಶನ್' ಎಂದು ಹೆಸರು. ಸ್ವಯಂಚಾಲನೆ ಅಥವಾ ಯಾಂತ್ರೀಕರಣ ಎನ್ನುವುದು ಈ ಹೆಸರಿನ ಅರ್ಥ.

ಇದು ಮೂಲತಃ ಕಾರ್ಖಾನೆಗಳಲ್ಲಿ ರೂಪುಗೊಂಡ ಪರಿಕಲ್ಪನೆಯಾದರೂ ಈಚಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಪದೇಪದೇ ಮಾಡಬೇಕಾದ ಪ್ರಕ್ರಿಯೆಗಳನ್ನು ('ಪ್ರಾಸೆಸ್') ಸ್ವಯಂಚಾಲಿತವಾಗಿ ನಡೆಯುವಂತೆ ಮಾಡುವುದು ಇದರ ವೈಶಿಷ್ಟ್ಯ. ವರದಿ ತಯಾರಿಕೆ, ಮಾಹಿತಿ ಸಂಗ್ರಹ-ವಿತರಣೆ ಮುಂತಾದ ಅನೇಕ ಕೆಲಸಗಳು ಅತ್ಯಂತ ಕಡಿಮೆ ಮಾನವ ಹಸ್ತಕ್ಷೇಪದೊಡನೆ ನಡೆಯಲು ಸಾಧ್ಯವಾಗಿರುವುದು ಇದರಿಂದಾಗಿಯೇ. ಎಕ್ಸೆಲ್ ತಂತ್ರಾಂಶದಲ್ಲಿ ಮತ್ತೆಮತ್ತೆ ಮಾಡಬೇಕಾದ ಲೆಕ್ಕಾಚಾರಗಳನ್ನು ಫಾರ್ಮ್ಯುಲಾ ಹಾಗೂ ಮ್ಯಾಕ್ರೋಗಳ ನೆರವಿನಿಂದ ಸುಲಭಮಾಡಿಕೊಳ್ಳುತ್ತೇವಲ್ಲ, ಅದು ಆಟೋಮೇಶನ್‌ನದೇ ಉದಾಹರಣೆ.

ಬಾಟ್‌ಗಳನ್ನು ಬಳಸುವ ಅಭ್ಯಾಸ ಇದೀಗ 'ರೋಬಾಟಿಕ್ ಪ್ರಾಸೆಸ್ ಆಟೋಮೇಶನ್' (ಆರ್‌ಪಿಎ) ಎಂಬ ಹೆಸರಿನೊಡನೆ ಇಲ್ಲಿಯೂ ಕಾಣಿಸಿಕೊಂಡಿದೆ. ಯಾವುದೇ ಬಳಕೆದಾರ ಕಂಪ್ಯೂಟರಿನಲ್ಲಿ ನಿರ್ದಿಷ್ಟ ಕೆಲಸವನ್ನು ಪೂರೈಸಲು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಗಮನಿಸಿ ಆ ಕೆಲಸವಷ್ಟನ್ನೂ ತಂತ್ರಾಂಶದಿಂದಲೇ ಮಾಡಿಸಿಕೊಳ್ಳುವುದು ಇದರ ಹೆಚ್ಚುಗಾರಿಕೆ. ಕಚೇರಿಗಳಲ್ಲಿ ಬಿಲ್ಲುಗಳನ್ನು ನಿರ್ವಹಿಸುವುದು, ಐಟಿ ಕೋರಿಕೆಗಳನ್ನು ಪೂರೈಸುವುದು, ವರದಿಗಳನ್ನು ತಯಾರಿಸಿ ಕಳಿಸಿಕೊಡುವುದು ಮುಂತಾದ ಎಲ್ಲ ಕೆಲಸಗಳನ್ನೂ ಆರ್‌ಪಿಎ ವ್ಯವಸ್ಥೆಯ ಬಾಟ್‌ಗಳು ಮಾನವರಿಗಿಂತ ಹೆಚ್ಚು ವೇಗವಾಗಿ, ಸಮರ್ಥವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ನಿಭಾಯಿಸಬಲ್ಲವು.  ಬಹು ಬೇಗ ಜನಪ್ರಿಯವಾಗುತ್ತಿರುವ ಈ ಹೊಸ ಅಭ್ಯಾಸ ವ್ಯವಹಾರ ಪ್ರಕ್ರಿಯೆಗಳ ಹೊರಗುತ್ತಿಗೆಯಂತಹ (ಬಿಪಿಓ) ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ತರಲಿದೆ ಎಂದು ನಿರೀಕ್ಷಿಸಲಾಗಿದೆ.

ಸೆಪ್ಟೆಂಬರ್ ೩, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge