ಸೋಮವಾರ, ಆಗಸ್ಟ್ 21, 2017

ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು

ಇಜ್ಞಾನ ವಾರ್ತೆ 

ಕನ್ನಡದಲ್ಲಿ  ವಿಜ್ಞಾನ ಪುಸ್ತಕಗಳ ಪ್ರಕಟಣೆಗೆ ಹೆಸರುವಾಸಿಯಾದ ನವಕರ್ನಾಟಕ ಪ್ರಕಾಶನದಿಂದ ಇದೀಗ ಇನ್ನೊಂದು ವಿಶಿಷ್ಟ ಕೃತಿ ಪ್ರಕಟವಾಗುತ್ತಿದೆ. ವಿಜ್ಞಾನದ ವಿವಿಧ ಕ್ಷೇತ್ರಗಳ ಚಾರಿತ್ರಿಕ ಬೆಳವಣಿಗೆಯ ಹಾಗೂ ಆ ಹಾದಿಯಲ್ಲಿ ಅದು ಪಡೆದುಕೊಂಡ ಮಹಾತಿರುವುಗಳ ದಾಖಲೆಯಾದ 'ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು' ಎಂಬ ಈ ಪುಸ್ತಕ ೨೦೧೭ರ ಸೆಪ್ಟೆಂಬರ್ ೩ರಂದು ಬಿಡುಗಡೆಯಾಗಲಿದೆ.

ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ,  ವೈದ್ಯ ವಿಜ್ಞಾನ, ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ, ಎಂಜಿನಿಯರಿಂಗ್ ತಂತ್ರಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಒಟ್ಟು ೩೫ ಲೇಖನಗಳಿರುವ ಈ ಕೃತಿಯ ಸಂಪಾದಕರು ಡಾ. ಟಿ. ಆರ್. ಅನಂತರಾಮು.

ಡಾ. ನಾ. ಸೋಮೇಶ್ವರ, ಡಾ. ಸಿ. ಆರ್. ಸತ್ಯ, ಶ್ರೀ ನಾಗೇಶ ಹೆಗಡೆ, ಪ್ರೊ. ಎಂ. ಆರ್. ನಾಗರಾಜು, ಡಾ. ಎಚ್. ಆರ್. ಕೃಷ್ಣಮೂರ್ತಿ, ಡಾ. ಕೆ. ಎಸ್. ನಟರಾಜ್, ಡಾ. ಬಿ. ಎಸ್. ಶೈಲಜಾ, ಡಾ. ಪಾಲಹಳ್ಳಿ ವಿಶ್ವನಾಥ್, ಡಾ. ಶರಣಬಸವೇಶ್ವರ ಅಂಗಡಿ, ಡಾ. ಟಿ. ಎಸ್. ಚನ್ನೇಶ್ ಸೇರಿದಂತೆ ಹಲವು ಕ್ಷೇತ್ರಗಳ ವಿಷಯ ಪರಿಣತರು ಈ ಕೃತಿಯ ಲೇಖಕರ ಸಾಲಿನಲ್ಲಿದ್ದಾರೆ (ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅಂತರಜಾಲ ಕುರಿತ ಲೇಖನವನ್ನು ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಬರೆದಿದ್ದಾರೆ).

ಸಮಾಜದ ಮೇಲೆ ಅತ್ಯಂತ ಪ್ರಭಾವ ಬೀರಿರುವ ಅಪೂರ್ವ ಸಂಶೋಧನೆಗಳ ಮತ್ತು ಅನ್ವೇಷಣೆಗಳ ಸರಳ ನಿರೂಪಣೆ ನೀಡುವ ೫೬೮ ಪುಟಗಳ ಈ ಕೃತಿಯಲ್ಲಿ ಒಟ್ಟು ೮೩೫ ಚಿತ್ರಗಳೂ, ಆರ್ಟ್ ಕಾಗದದಲ್ಲಿ ಮುದ್ರಣವಾಗಿರುವ ೧೦೮ ಬಹುವರ್ಣದ ಪುಟಗಳೂ ಇವೆ. ೧/೪ ಕ್ರೌನ್ (೧೮x೨೪ ಸೆಂ.ಮೀ.) ಗಾತ್ರದ, ದಪ್ಪ ರಟ್ಟಿನ ರಕ್ಷಾಕವಚ ಮತ್ತು ಜಾಕೆಟ್‌ ಇರುವ ಪುಸ್ತಕವನ್ನು ಸೆಪ್ಟೆಂಬರ್ ೩ರ ಭಾನುವಾರ ಬೆಳಿಗ್ಗೆ ೧೦:೩೦ರಿಂದ ೧೨:೩೦ರವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಡಾ|| ಎ. ಎಸ್. ಕಿರಣ್‌ಕುಮಾರ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಕತೆಗಾರ ಶ್ರೀ ವಸುಧೇಂದ್ರ ಪುಸ್ತಕದ ಪರಿಚಯ ಮಾಡಿಕೊಡುತ್ತಾರೆ.

ಮುಂಗಡ ಬುಕಿಂಗ್‌ಗೆ ವಿಶೇಷ ರಿಯಾಯಿತಿ 
ವಿಜ್ಞಾನದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತ ಓದುಗರಿಗೆ ಉಪಯುಕ್ತವಾದ ಈ ಮಾಹಿತಿಪೂರ್ಣ ಆಕರ ಗ್ರಂಥಕ್ಕೆ ನವಕರ್ನಾಟಕ ವಿಶೇಷ ಪ್ರಕಟಣಪೂರ್ವ ರಿಯಾಯಿತಿ ಘೋಷಿಸಿದೆ. ಎಂಟುನೂರು ರೂಪಾಯಿ ಮುಖಬೆಲೆಯ ಈ ಕೃತಿಯನ್ನು ನವಕರ್ನಾಟಕ ಜಾಲತಾಣದಲ್ಲಿ (tinyurl.com/MTPreOrder) ರೂ. ೫೫೦ ಪಾವತಿಸಿ ಮುಂಗಡ ಕಾಯ್ದಿರಿಸುವ ಮೂಲಕ ಆಸಕ್ತ ಓದುಗರು ಈ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಬಹುದು.

ಕಾಮೆಂಟ್‌ಗಳಿಲ್ಲ:

badge