ಶುಕ್ರವಾರ, ಆಗಸ್ಟ್ 18, 2017

ಏನಿದು ಬೆಜ಼ೆಲ್?

ಟಿ. ಜಿ. ಶ್ರೀನಿಧಿ


ದಿವಾನಖಾನೆಯ ಟೀವಿ, ಕಂಪ್ಯೂಟರಿನ ಮಾನಿಟರ್, ಅಂಗೈಯ ಸ್ಮಾರ್ಟ್‌ಫೋನ್ - ಹೀಗೆ ಒಂದಲ್ಲ ಒಂದು ರೀತಿಯ ಪ್ರದರ್ಶಕಗಳು (ಡಿಸ್ಪ್ಲೇ) ನಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಅವು ಬಳಸುವ ತಂತ್ರಜ್ಞಾನ ಬೇರೆಯದಿರಬಹುದು; ಆದರೆ ಅಂತಹ ಎಲ್ಲ ಪ್ರದರ್ಶಕಗಳಲ್ಲೂ ಪರದೆಯ ಸುತ್ತ ಒಂದು ಚೌಕಟ್ಟು ಇರುವುದು ಸರ್ವೇಸಾಮಾನ್ಯ.

ಈ ಚೌಕಟ್ಟನ್ನು ಬೆಜ಼ೆಲ್ (bezel) ಎಂದು ಗುರುತಿಸುತ್ತಾರೆ.

ಪ್ರದರ್ಶಕದ ಪರದೆಗೆ ಆಧಾರವಾಗಿರುವುದು, ಇಡೀ ಸಾಧನದ ವಿನ್ಯಾಸಕ್ಕೆ ಚೆಂದದ ರೂಪ ಕೊಡುವುದು, ಆಕಸ್ಮಿಕವಾಗಿ ಬೇರಾವುದೋ ವಸ್ತು ತಗುಲಿ ಪರದೆಯ ಅಂಚುಗಳು ಹಾಳಾಗದಂತೆ ನೋಡಿಕೊಳ್ಳುವುದು - ಹೀಗೆ ಬೆಜ಼ೆಲ್ ಬಳಕೆಯ ಹಿಂದೆ ಅನೇಕ ಉದ್ದೇಶಗಳಿರುವುದು ಸಾಧ್ಯ. ಅಷ್ಟೇ ಏಕೆ, ಸ್ಮಾರ್ಟ್‌ಫೋನು - ಟ್ಯಾಬ್ಲೆಟ್ಟುಗಳನ್ನು ಕೈಲಿ ಹಿಡಿದಾಗ ನಮ್ಮ ಬೆರಳುಗಳು ಟಚ್ ಸ್ಕ್ರೀನ್ ಅನ್ನು ಅನಪೇಕ್ಷಿತವಾಗಿ ಸ್ಪರ್ಶಿಸುವುದನ್ನೂ ಬೆಜ಼ೆಲ್ ತಡೆಯುತ್ತದೆ.

ಇಂಚುಗಟ್ಟಲೆ ಬೆಜ಼ೆಲ್ ಇರುತ್ತಿದ್ದ ಹಿಂದಿನ ಕಾಲದ ಟೀವಿಗಳಿಗೆ ಹೋಲಿಸಿದರೆ ಈಗ ವಿನ್ಯಾಸಗಳು ಗಮನಾರ್ಹವಾಗಿ ಬದಲಾಗಿವೆ. ಟೀವಿ ಇರಲಿ ಸ್ಮಾರ್ಟ್ ಫೋನ್ ಇರಲಿ ಎಲ್ಲ ಪ್ರದರ್ಶಕಗಳಲ್ಲೂ ಆದಷ್ಟೂ ಕಡಿಮೆ ಬೆಜ಼ೆಲ್ ಇರಬೇಕು ಎನ್ನುವುದು ಈಗಿನ ಫ್ಯಾಶನ್. ಈ ಬೇಡಿಕೆಯನ್ನು ಪೂರೈಸುವ ಅನೇಕ ಉತ್ಪನ್ನಗಳನ್ನು ನಾವೀಗ ಮಾರುಕಟ್ಟೆಯಲ್ಲಿ ನೋಡಬಹುದು. ಇಲ್ಲವೇ ಇಲ್ಲವೆನ್ನುವಷ್ಟು ತೆಳುವಾದ ಚೌಕಟ್ಟಿನ ಇಂತಹ ಉತ್ಪನ್ನಗಳನ್ನು 'ಬೆಜ಼ೆಲ್-ಲೆಸ್' ಎಂದು ಕರೆಯುವುದು ವಾಡಿಕೆ.

ಫೆಬ್ರುವರಿ ೪, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge