ಸೋಮವಾರ, ಜುಲೈ 24, 2017

ಜಿಬಿ, ಟಿಬಿ ಆದಮೇಲೆ?

ಟಿ. ಜಿ. ಶ್ರೀನಿಧಿ


ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ.

ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಎಂಟು ಬಿಟ್‌ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್‌ನ ಗುಣಕಗಳು. ೧೦೨೪ ಬೈಟ್‌ಗಳು ಒಂದು ಕಿಲೋಬೈಟ್‌ಗೆ (ಕೆಬಿ), ೧೦೨೪ ಕೆಬಿ ಒಂದು ಮೆಗಾಬೈಟ್‌ಗೆ (ಎಂಬಿ), ೧೦೨೪ ಎಂಬಿ ಒಂದು ಗಿಗಾಬೈಟ್‌ಗೆ (ಜಿಬಿ) ಹಾಗೂ ೧೦೨೪ ಜಿಬಿ ಒಂದು ಟೆರಾಬೈಟ್‌ಗೆ (ಟಿಬಿ) ಸಮಾನ.

ಫ್ಲಾಪಿ ಡಿಸ್ಕ್ ಹಾಗೂ ಸಿ.ಡಿ.ಯಂತಹ ಸಾಧನಗಳ ಶೇಖರಣಾ ಸಾಮರ್ಥ್ಯ ಮೆಗಾಬೈಟ್‍ಗಳಲ್ಲಿರುತ್ತಿತ್ತು. ಈಗ ನಾವು ಬಳಸುವ ಪೆನ್‍ಡ್ರೈವ್ - ಮೆಮೊರಿ ಕಾರ್ಡುಗಳಲ್ಲಿ  ಉಳಿಸಿಡಬಹುದಾದ ದತ್ತಾಂಶದ ಪ್ರಮಾಣ ಗಿಗಾಬೈಟ್‍ಗಳಲ್ಲಿರುತ್ತದೆ. ಈ ಹಿಂದೆ ಗಿಗಾಬೈಟ್‍ಗಳಲ್ಲಿರುತ್ತಿದ್ದ ಹಾರ್ಡ್‍ಡಿಸ್ಕ್-ಗಳ ಸಾಮರ್ಥ್ಯ ಇದೀಗ ಟೆರಾಬೈಟ್ ಮಟ್ಟ ತಲುಪಿದೆ. ದತ್ತಾಂಶ ಶೇಖರಣೆಯ ಕುರಿತು ಹೇಳುವುದಾದರೆ ನಮಗೆ ಸದ್ಯ ಪರಿಚಿತವಾಗಿರುವ ಅತಿದೊಡ್ಡ ಏಕಮಾನ ಇದೇ: ಒಂದು ಟೆರಾಬೈಟ್ ಎನ್ನುವುದು ಒಂದು ಲಕ್ಷ ಕೋಟಿ ಬೈಟ್‌ಗಳಿಗೆ ಸಮ.

ಇದಿಷ್ಟು ವಿಷಯ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳಲ್ಲೇ ಇರುತ್ತದೆ. ಆದರೆ ಜಿಬಿ, ಟಿಬಿಗಳೆಲ್ಲ ಆದಮೇಲೆ ಯಾವ ಏಕಮಾನಗಳಿವೆ?

ಹೆಚ್ಚು ಪರಿಚಿತವಾಗಿಲ್ಲದಿದ್ದರೂ ಟೆರಾಬೈಟ್‌ಗಿಂತ ದೊಡ್ಡದಾದ ಹಲವು ಏಕಮಾನಗಳಿವೆ. ಸಾವಿರ ಟೆರಾಬೈಟ್‌ ಸೇರಿದಾಗ ಒಂದು ಪೆಟಾಬೈಟ್ ಆಗುತ್ತದೆ. ಅಂತರಜಾಲ ಜಗತ್ತಿನ ದೊಡ್ಡದೊಡ್ಡ ಸಂಸ್ಥೆಗಳು ನಿರ್ವಹಿಸುವ ದತ್ತಾಂಶದ ಪ್ರಮಾಣ ಪೆಟಾಬೈಟ್‌ಗಳಲ್ಲಿರುತ್ತದೆ. ಇದೇ ರೀತಿ ಸಾವಿರ ಪೆಟಾಬೈಟ್ ಒಂದು ಎಕ್ಸಾಬೈಟ್‍ಗೆ ಸಮ. ಒಂದು ವರ್ಷದಲ್ಲಿ ಅಂತರಜಾಲದ ಮೂಲಕ ಹಾದುಹೋಗುವ ದತ್ತಾಂಶದ ಪ್ರಮಾಣ ಎಕ್ಸಾಬೈಟ್‍ಗಳಲ್ಲಿರುವುದು ಸಾಧ್ಯ.

ಎಕ್ಸಾಬೈಟ್‌ಗಿಂತ ದೊಡ್ಡ ಏಕಮಾನಗಳೂ ಇವೆ: ಜ಼ೆಟ್ಟಾಬೈಟ್ (zettabyte) ಎನ್ನುವ ಇಂತಹುದೊಂದು ಏಕಮಾನ ಸಾವಿರ ಎಕ್ಸಾಬೈಟ್‌ಗಳಿಗೆ, ಅಂದರೆ ೧ರ ಮುಂದೆ ೨೧ ಸೊನ್ನೆ ಹಾಕಿದಷ್ಟು ಸಂಖ್ಯೆಯ ಬೈಟ್‍ಗಳಿಗೆ ಸಮ. ಸದ್ಯ ಪ್ರಪಂಚದಲ್ಲಿರುವ ಅಷ್ಟೂ ದತ್ತಾಂಶವನ್ನು ಒಂದೆಡೆ ಉಳಿಸಿಟ್ಟರೆ ಅದರ ಪ್ರಮಾಣವನ್ನು ಈ ಏಕಮಾನದಲ್ಲಿ ಅಳೆಯಬಹುದಂತೆ. ಸಾವಿರ ಜ಼ೆಟ್ಟಾಬೈಟ್‍ಗಳನ್ನು ಒಂದು ಯಾಟ್ಟಾಬೈಟ್ (yottabyte) ಎಂದು ಗುರುತಿಸುತ್ತಾರೆ.

ಜೂನ್ ೨೯, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

ಕಾಮೆಂಟ್‌ಗಳಿಲ್ಲ:

badge