ಬುಧವಾರ, ಜುಲೈ 5, 2017

ವಿಜ್ಞಾನದ ಎರಡು ವಿಶಿಷ್ಟ ಕೃತಿಗಳು

ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ೨೦೧೬-೧೭ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿ ಪ್ರದಾನ ಸಮಾರಂಭ ಈ ಬುಧವಾರ (ಜುಲೈ ೫, ೨೦೧೭) ಬೆಂಗಳೂರಿನಲ್ಲಿ ನಡೆಯಲಿದೆ. ವಿಜ್ಞಾನ ವಿಭಾಗದಲ್ಲಿ ತಮ್ಮ ಲೇಖಕರಿಗೆ ಈ ಪ್ರಶಸ್ತಿ ತಂದುಕೊಟ್ಟಿರುವ ಎರಡು ಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.  

ಶತಮಾನಪುರುಷ ಐನ್‌ಸ್ಟೈನ್
ಲೇಖಕರು: ಪ್ರೊ. ಪಾಲಹಳ್ಳಿ ವಿಶ್ವನಾಥ್
ಬೆಲೆ: ರೂ ೧೫೦, ಪುಟಗಳು:  xxii + ೧೬೬
ಮೊದಲ ಮುದ್ರಣ: ೨೦೧೬
ಪ್ರಕಾಶಕರು: ಇಂಡಿಗೊ ಮಲ್ಟಿಮೀಡಿಯ, ಬೆಂಗಳೂರು
ಅನ್‌ಲೈನ್ ಖರೀದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆಲ್ಬರ್ಟ್ ಐನ್‌ಸ್ಟೈನ್ ಜೀವನಚರಿತ್ರೆ ಆಶ್ಚರ್ಯಕರ ಮತ್ತು ರಮ್ಯ. ಅಷ್ಟೇನೂ ಪ್ರತಿಭಾವಂತನಲ್ಲವೆಂದು ಶಾಲೆಯಲ್ಲಿ ಅವಗಣನೆಗೆ ಒಳಗಾಗಿದ್ದ ಒಬ್ಬ ಹುಡುಗ ಬೇರಾವ ಸಮಕಾಲೀನ ವಿಜ್ಞಾನಿಯೂ ಗಳಿಸಲಾಗದಿದ್ದ ಮಹೋನ್ನತ ಸ್ಥಾನವನ್ನು ಪಡೆದ. ಔಪಚಾರಿಕತೆಯ ಕಟ್ಟುನಿಟ್ಟು ವಿಧಿಗಳನ್ನು ಮೀರಿ ಅನೌಪಚಾರಿಕತೆಗೆ, ಮುಕ್ತ ಸಂಬಂಧ ಮತ್ತು ಸಂವಹನಗಳಿಗೆ ತೆರೆದುಕೊಂಡ ವ್ಯಕ್ತಿತ್ವ ಆತನದು. ಈ ವಿಜ್ಞಾನಿಯ ಜೀವನಗಾಥೆಯನ್ನು ವಿಹಂಗಮವಾಗಿ ಪ್ರಸ್ತುತಪಡಿಸಲಾಗಿರುವ ಈ ಗ್ರಂಥದ ಲೇಖಕರು ಹಿರಿಯ ವಿಜ್ಞಾನಿಗಳೂ ಸಂಶೋಧಕರೂ ಆದ ಪ್ರೊ. ಪಾಲಹಳ್ಳಿ ವಿಶ್ವನಾಥ್ ಅವರು. ಇಂತಹ ಗ್ರಂಥರಚನೆಗೆ ಕೈಹಾಕಲು ಅವರಿಗಿಂತಲೂ ಹೆಚ್ಚು ಸೂಕ್ತರಾದ ವ್ಯಕ್ತಿಗಳು ಅಲಭ್ಯವೆಂದೇ ಹೇಳಬೇಕು. ಏಕೆಂದರೆ ಅವರು ಭೌತವಿಜ್ಞಾನ ಕ್ಷೇತ್ರದಲ್ಲಿ ಪ್ರಬುದ್ಧರು ಮತ್ತು ಓದುಗರಿಗೆ ಕ್ಲಿಷ್ಟವಾದ ವಿಚಾರಗಳನ್ನು ಸುಲಭಗ್ರಾಹ್ಯವಾಗುವಂತೆ ಮುಟ್ಟಿಸುವುದರಲ್ಲಿ ನಿಷ್ಣಾತರು.  (ಮುನ್ನುಡಿಯಿಂದ)

ರಸಾಯನವಿಜ್ಞಾನ ಬೆಳೆದ ಹಾದಿ
ಲೇಖಕರು: ಪ್ರೊ. ಆರ್. ವೇಣುಗೋಪಾಲ್, ಡಾ. ಬಿ. ಎಸ್. ಜೈಪ್ರಕಾಶ್
ಪ್ರಕಾಶಕರು: ವನಸುಮ ಪ್ರಕಾಶನ, ಬೆಂಗಳೂರು
ವಿವರಗಳಿಗೆ: 9880912542 (ಪ್ರೊ. ವೇಣುಗೋಪಾಲ್)
ಕನ್ನಡದಲ್ಲಿ ರಸಾಯನವಿಜ್ಞಾನದ ಚರಿತ್ರೆಯ ಅತ್ಯುತ್ತಮ ಸಂಕಲನವನ್ನು ರಚಿಸಿ ಲೇಖಕರು ಹೊಸಪಥವನ್ನು ಸೃಷ್ಟಿಸಿದ್ದಾರೆ. ಅವರ ಬರಹದ ಶೈಲಿ ಮತ್ತು ಕನ್ನಡದ ಹಿತವಾದ ಬಳಕೆ ಪುಸ್ತಕವನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಮಾಡಿವೆ. ರಸಾಯನವಿಜ್ಞಾನದ ಉಗಮ ಮತ್ತು ಬೆಳವಣಿಗೆಯನ್ನು ಆಯಾ ಶತಮಾನದಡಿ ನಿರೂಪಿಸಿರುವುದು, ಆಯಾ ಕಾಲದ ಪ್ರಮುಖ ರಸಾಯನವಿಜ್ಞಾನಿಗಳು ಈ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿರುವುದು - ಇವೆಲ್ಲವೂ ರಸಾಯನವಿಜ್ಞಾನ ಬೆಳೆದುಬಂದ ಹಾದಿಯ ಮೇಲೆ ಬೆಳಕು ಚೆಲ್ಲಿವೆ. ಕಳೆದ ಮೂರು ಶತಮಾನಗಳಲ್ಲಿ ಇತರ ವೈಜ್ಞಾನಿಕ ಶಾಖೆಗಳೊಡನೆ ಸಂಪರ್ಕಹೊಂದಿ ೨೦ನೇ ಶತಮಾನದ ಅಂತಿಮ ದಶಕಗಳಲ್ಲಿ ಪ್ರಮುಖ ವೈಜ್ಞಾನಿಕ ಕ್ಷೇತ್ರವಾಗಿ ಅತ್ಯಂತ ವೇಗದಿಂದ ಹೇಗೆ ಬೆಳೆಯಿತು ಎನ್ನುವುದರ ಒಳನೋಟವನ್ನು ಈ ಸಂಕಲನ ಪ್ರತಿಫಲಿಸುತ್ತದೆ. (ಮುನ್ನುಡಿಯಿಂದ)

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಇತರ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರ ಕುರಿತು ತಿಳಿಯಲು ಅಕಾಡೆಮಿ ಜಾಲತಾಣಕ್ಕೆ ಭೇಟಿಕೊಡಬಹುದು.

ಕಾಮೆಂಟ್‌ಗಳಿಲ್ಲ:

badge