ಗುರುವಾರ, ಜುಲೈ 27, 2017

ವಿಜ್ಞಾನದ ಇಜ್ಞಾನ: ಹೀಗೊಂದು ಅವಲಂಬನೆಯ ಕತೆ

ಕ್ಷಮಾ ವಿ. ಭಾನುಪ್ರಕಾಶ್


ಇಂದು ಇಡೀ ವಿಶ್ವವೇ ಒಂದು ಪುಟ್ಟ ಊರಿದ್ದಂತೆ. ಆದರೆ ಜಗತ್ತಿನ ಯಾವುದೋ ಮೂಲೆಯಲ್ಲಿರುವವರೊಡನೆ ಕ್ಷಣಮಾತ್ರದಲ್ಲೇ ಸಂಪರ್ಕ ಸಾಧಿಸಲು ಗೊತ್ತಿರುವ ನಮಗೆ ಪಕ್ಕದ ಮನೆಯಲ್ಲಿರುವವರ ಪರಿಚಯವೇ ಇರುವುದಿಲ್ಲ. ಪಠ್ಯಪುಸ್ತಕಗಳಲ್ಲಿ ಓದಿದ "ಮಾನವ ಸಂಘಜೀವಿ" ಎನ್ನುವ ಹೇಳಿಕೆ ನಿಜವೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿರುವ ಪರಿಸ್ಥಿತಿ ಇಂದಿನದು. 

ಹೀಗೆ ಸಹಜೀವನದ ಪರಿಕಲ್ಪನೆ ಮನುಷ್ಯರ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರಬಹುದು, ಆದರೆ ಪ್ರಾಣಿ ಪಕ್ಷಿ ಕೀಟ ಮತ್ತು ಸೂಕ್ಷ್ಮಾಣು ಜೀವಿಗಳ ಪ್ರಪಂಚದಲ್ಲಿ ಹಾಗೇನೂ ಆಗಿಲ್ಲ. ಅಲ್ಲಿನ ಸಸ್ಯಗಳ ನಡುವೆ, ಪ್ರಾಣಿಗಳ ನಡುವೆ, ಕೀಟಗಳ ನಡುವೆ ಅಥವಾ ಪ್ರಾಣಿ - ಸಸ್ಯ, ಸಸ್ಯ -  ಕೀಟ, ಕೀಟ - ಸೂಕ್ಷ್ಮಾಣು ಜೀವಿ ಮೊದಲಾದ ಬೇರೆಬೇರೆ ಜೋಡಿಗಳ ನಡುವೆ ಸಹಬಾಳ್ವೆ ಒಂದು ಸಹಜ ಪ್ರಕ್ರಿಯೆ.
ಸಹಬಾಳ್ವೆಗಳಲ್ಲಿ ಹಲವು ಪ್ರಕಾರಗಳಿವೆ. ಇಂತಹ ಪ್ರತಿಯೊಂದು ಬಗೆಯ ಸಹಬಾಳ್ವೆಯ ಉದ್ದೇಶವೂ ಎರಡೂ ಬಗೆಯ ಜೀವಿಗಳಿಗೆ ಪರಸ್ಪರ ಅನುಕೂಲ ಮಾಡಿಕೊಡುವುದೇ ಆಗಿರುತ್ತದೆ. 

ಸಹಬಾಳ್ವೆ ಅಥವಾ 'ಸಿಂಬಯೋಸಿಸ್'ನ ಒಂದು ಮುಖ್ಯ ಪ್ರಕಾರವೇ 'ಮ್ಯೂಚುವಾಲಿಸ್ಮ್' ಅಥವಾ ಪರಸ್ಪರಾವಲಂಬನೆ. ಅಂಜೂರದ ಹಣ್ಣು ಮತ್ತು ಕಣಜದ ನಡುವಿನ ಸಂಬಂಧ ಪರಸ್ಪರಾವಲಂಬನೆಯ ಒಂದು ಸುಂದರ ಉದಾಹರಣೆ. ' ಅಗವೊನಿಡೇ' ಎಂಬ ಕುಟುಂಬಕ್ಕೆ ಸೇರಿದ ಕಣಜ ಕೀಟ ಮತ್ತು 'ಫ಼ೀಕಸ್ ಕರಿಕ' ಎನ್ನುವ ಅಂಜೂರದ ಮರದ ನಡುವೆ ಕೋಟ್ಯಾಂತರ ವರ್ಷಗಳಿಂದ ಸಹಬಾಳ್ವೆ ನಡೆದುಬಂದಿದೆ. ಈ ಸಂಬಂಧದ ಅಸ್ತಿತ್ವಕ್ಕೆ ಇರುವ ಮುಖ್ಯ ಕಾರಣವೇ ಇವೆರಡು ಜೀವಿಗಳಿಗಿರುವ ಅನಿವಾರ್ಯತೆ. 

ಯಾವುದೇ ಗಿಡವು ತನ್ನ ಹೊಸ ಸಂತತಿಯನ್ನು ಹುಟ್ಟು ಹಾಕುವುದು ಬೀಜಗಳ ಉತ್ಪಾದನೆ ಮತ್ತು ಪ್ರಸರಣದಿಂದ. ಆದರೆ ಅಂಜೂರದ ಹಣ್ಣು ಸಂಪೂರ್ಣ ಮುಚ್ಚಿದ 'ಸೈಕೋನಿಯಮ್' ಎನ್ನುವ ಬಗೆಯ ಹಣ್ಣು. ಆದ್ದರಿಂದ ಅದು ತನ್ನೊಳಗೇ ಹೆಣ್ಣು ಮತ್ತು ಗಂಡು ಹೂಗಳನ್ನು ಹೊಂದಿರುತ್ತದೆ ಮತ್ತು ಅವು ಹೊರ ಜಗತ್ತಿನ ಸಂಪರ್ಕಕ್ಕೇ ಬಂದಿರುವುದಿಲ್ಲ.  ಹೆಣ್ಣು ಹೂಗಳ ಮೇಲೆ ಪರಾಗವನ್ನು ಸಿಂಪಡಿಸದೆ ಇದ್ದರೆ ಅವು ಹೊಸ ಬೀಜಗಳನ್ನು ಉತ್ಪಾದಿಸಲಾಗುವುದಿಲ್ಲ. ಆದರೆ ಆ ಹೂಗಳು ಅಪಕ್ವ ಅಂಜೂರ ಹಣ್ಣಿನ ಒಳಗೆ ಅಡಗಿರುವುದರಿಂದ, ಮತ್ತೊಂದು ಅಂಜೂರದ ಗಿಡದ ಗಂಡು ಪರಾಗವು ಇದರ ಸಂಪರ್ಕಕ್ಕೆ ಬರಲು ಸಾಧ್ಯವೇ ಇಲ್ಲ. 

ಇಂತಹ ಹಣ್ಣಿನ ಒಳಕ್ಕೇ ಪರಾಗವನ್ನು ಹೊತ್ತೊಯ್ಯುವ ಕೆಲಸವನ್ನು ಕಣಜ ಕೀಟವು ಮಾಡುತ್ತದೆ. ಅದರಲ್ಲೂ ಒಂದು ಹೆಣ್ಣು ಕಣಜ ಕೀಟವು ಒಂದು ಅಂಜೂರ ಹಣ್ಣಿನಲ್ಲಿರುವ ಗಂಡು ಪರಾಗವನ್ನು ತನ್ನ ಮೈಗೆ ಮೆತ್ತಿಕೊಂಡು ಇನ್ನೊಂದು ಅಂಜೂರ ಹಣ್ಣಿನ ಬಳಿಗೆ ಹೋಗುತ್ತದೆ. ಈ ಅಂಜೂರದ ಮೇಲ್ಮೈಯಲ್ಲಿರುವ 'ಓಸ್ಟಿಯೋಲ್' ಎಂಬ ರಂಧ್ರದ ಮೂಲಕ ಹಣ್ಣಿನ ಒಳಸೇರುತ್ತದೆ. ಈ ಒಳಹೋಗುವ ಪ್ರಕ್ರಿಯೆಯಲ್ಲಿ, 'ಓಸ್ಟಿಯೋಲ್' ರಂಧ್ರವು ಬಹಳ ಪುಟ್ಟದಾಗಿರುವುದರಿಂದ ಒಳಹೋಗುತ್ತಿರುವ ಕಣಜವು ತನ್ನ ಕೈ ಕಾಲು ಮತ್ತು ರೆಕ್ಕೆಯನ್ನು ಕಳೆದುಕೊಳ್ಳುತ್ತದೆ. ಒಳಸೇರಿದ ನಂತರ ತನ್ನ ಮೇಲಿದ್ದ ಗಂಡು ಪರಾಗವನ್ನು ಈ ಹಣ್ಣಿನೊಳಗಿರುವ ಹೆಣ್ಣು ಹೂವಿನ ಮೇಲೆ ಸಿಂಪಡಿಸುತ್ತದೆ. ತನ್ನ ಕೈ ಕಾಲು ರೆಕ್ಕೆಗಳನ್ನು ಕಳೆದುಕೊಂಡಿರುವುದರಿಂದ ಅದು ಮುಂದೆಲ್ಲೂ ಹೋಗಲಾರದೆ ಅಲ್ಲೇ ಸಾವನ್ನಪ್ಪುತ್ತದೆ. ಈಗ ಹೆಣ್ಣು ಹೂಗಳಿಗೆ ಪರಾಗ ದೊರೆತಿರುವುದರಿಂದ ಅವು ಬೀಜವನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.

ಕಣಜದ ಹುಳುವು ಅಂಜೂರದ ಗಿಡದ ಸಹಾಯವನ್ನೇನೋ ಮಾಡಿತು. ಜೊತೆಯಲ್ಲೇ ತನ್ನ ಸ್ವಕಾರ್ಯವನ್ನೂ ಮಾಡಿಕೊಂಡಿತು. ಅಂಜೂರದ ಹಣ್ಣಿನೊಳಗೆ ಸೇರುವ ಕಣಜದ ಹುಳುವು ತಾನು ಸಾಯುವ ಮುನ್ನ ಪರಾಗಸ್ಪರ್ಶದ ಜೊತೆಯಲ್ಲೇ ತನ್ನ ಮೊಟ್ಟೆಗಳನ್ನೂ ಆ ಹಣ್ಣಿನ ಒಡಲಲ್ಲಿ ಸೇರಿಸುತ್ತದೆ. ಹೀಗಾಗಿ ತಾನು ಅಸುನೀಗಿದರೂ ತನ್ನ ಸಂತತಿಗೆ ಹುಟ್ಟಲು ಮತ್ತು ಬೆಳೆಯಲು ಪ್ರಶಸ್ತವಾದ ತಾಣವನ್ನು ಆಯ್ದಿರುತ್ತದೆ. ಈ ಕಣಜದ ಮೊಟ್ಟೆಗಳಿಂದ ಹೊರಬರುವ ಹಲವಾರು ಹೆಣ್ಣು ಮತ್ತು ಗಂಡು ಕಣಜಗಳು ಮೊದಲು 'ಲಾರ್ವ' ಹಂತವನ್ನು ತಲುಪಿ, ನಂತರ 'ಪ್ಯೂಪ' ಹಂತವನ್ನು ಮುಗಿಸಿ ಪ್ರಬುದ್ಧವಾಗುತ್ತವೆ. ಹೀಗೆ ಬೇರೆ ಬೇರೆ ಕಣಜ ಹುಳುಗಳ ಸಂತತಿ ಆ ಹಣ್ಣಿನ ಒಡಲಲ್ಲಿರುತ್ತವೆ. ಅಲ್ಲಿ ಪ್ರಬುದ್ಧ ಹೆಣ್ಣು ಮತ್ತು ಗಂಡು ಕಣಜಗಳ ಮಿಲನವಾಗುತ್ತದೆ. ನಂತರ ಗಂಡು ಕಣಜಗಳು ಅಂಜೂರದ ಹಣ್ಣಿನ ಒಳಗಿನಿಂದ ಹೊರಕ್ಕೆ ಒಂದು ಸುರಂಗ ಮಾರ್ಗವನ್ನು ಕೊರೆದು, ಹೊರ ಹೋಗಿ , ಕೆಲವೇ ಕ್ಷಣಗಳಲ್ಲಿ ಸಾಯುತ್ತವೆ. ಆ ಸುರಂಗ ಮಾರ್ಗದಿಂದ ಹೆಣ್ಣು ಕಣಜಗಳು ಹೊರಹೋಗುತ್ತವೆ. ಹೀಗೆ ಹೊರ ಬಂದ ಹೆಣ್ಣು ಕಣಜಗಳು, ತಮ್ಮ ಮೈ ಮೇಲೆ ಅಂಜೂರದ ಹಣ್ಣಿನ ಗಂಡು ಪರಾಗವನ್ನು ಮೆತ್ತಿಕೊಂಡಿರುತ್ತವೆ. ಈ ಪರಾಗದೊಂದಿಗೆ ಅವು ಮುಂದಿನ ಅಂಜೂರದ ಗಿಡದತ್ತ ಪಯಣ ಬೆಳೆಸುತ್ತವೆ. 

ಹೀಗೆ ಪರಸ್ಪರಾವಲಂಬನೆಯಿಂದ ಕಣಜದ ಹುಳು ಮತ್ತು ಅಂಜೂರದ ಹಣ್ಣು ಒಂದಕ್ಕೊಂದು ಆಸರೆಯಾಗಿರುತ್ತವೆ ಮತ್ತು ಒಂದರ ಜೀವನ ಚಕ್ರದಲ್ಲಿ ಮತ್ತೊಂದು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ನಮ್ಮ ಪರಿಸರದಲ್ಲಿ ಇಂತಹ ಹಲವಾರು ಸಹಬಾಳ್ವೆಯ ಜೀವನಚಕ್ರಗಳಿರುವುದರಿಂದ, ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮಾನವ ಅವುಗಳಲ್ಲಿ ಮೂಗು ತೂರಿಸದೇ ಇದ್ದರೆ, ಪರಿಸರವ್ಯವಸ್ಥೆಯು ತನ್ನ ಪಾಡಿಗೆ ತಾನು ಸುಲಲಿತವಾಗಿ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

ಜೂನ್ ೩೦, ೨೦೧೩ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ; ಚಿತ್ರ: Nikhil More / Wikimedia Commons

1 ಕಾಮೆಂಟ್‌:

Chinnamma Baradhi ಹೇಳಿದರು...

ನಿಮ್ಮ ಈ ಲೇಖನ ಬಹಳ ಆಸಕ್ತಿದಾಯಕವಾಗಿತ್ತು.ಧನ್ಯವಾದಗಳು.

badge