ಗುರುವಾರ, ಜುಲೈ 20, 2017

ವಿಜ್ಞಾನದ ಇಜ್ಞಾನ: ಸಾರಾಯಿಯ ಚುಚ್ಚುಮದ್ದು ಜೀವರಕ್ಷಕ ಔಷಧವಾಗಬಹುದೇ?

ವಿನಾಯಕ ಕಾಮತ್

ಎಥೆನೋಲ್ ರಚನೆ
'ಸಾರಾಯಿಯ ಚುಚ್ಚುಮದ್ದು ಔಷಧವಾಗಬಹುದೇ?' ಎಂಬ ಪ್ರಶ್ನೆ ಯಾರಿಗಾದರೂ ಕೇಳಿದರೆ, ಎಂತಹ ನಿರಕ್ಷರಕುಕ್ಷಿಯೂ ನಕ್ಕಾನು. ಏಕೆಂದರೆ, ಹೆಂಡ-ಸಾರಾಯಿಗಳು ಎಂದಿಗೂ ಆರೋಗ್ಯಕ್ಕೆ ಹಾನಿಕರವೆಂಬುದು ಎಂಥವರಿಗೂ ಗೊತ್ತಿರುವ ಸತ್ಯ.  ಆದರೆ ಇಂತಹ ಸಾರಾಯಿಯಲ್ಲಿರುವ ಎಥೆನೋಲ್ (ethanol) ಎಂಬ ರಾಸಾಯನಿಕವೂ, ಸಂದರ್ಭಕ್ಕೆ ಜೀವರಕ್ಷಕ ಪ್ರತಿವಿಷವಾಗಬಹುದು ಎಂದರೆ ನೀವು ನಂಬಲೇಬೇಕು!

ನೀವು ಎಥೆನೋಲ್ ಕುಡಿದರೆ, ಬೇರೊಬ್ಬರ ಹೆಣದ ಮುಂದೆ ಡ್ಯಾನ್ಸ್ ಮಾಡುತ್ತೀರಿ, ಅದೇ ಮಿಥೆನೋಲ್ (methanol) ಕುಡಿದರೆ ನಿಮ್ಮ ಹೆಣದ ಮುಂದೆ ಬೇರೋಬ್ಬರು ಡ್ಯಾನ್ಸ್ ಮಾಡುತ್ತಾರೆ. ಎಂಬುದು ಸುಮಾರು ಕೆಮೆಸ್ಟ್ರಿಯಷ್ಟೇ ಹಳೆಯದಾದ ಜೋಕು. ಹಾಗೆಯೇ ಮಿಥೆನೋಲ್ ವಿಷಕ್ಕೆ ಎಥೆನೋಲ್ ಪ್ರತಿವಿಷವೆಂಬುದೂ ಅಷ್ಟೇ ಹಳೆಯ ವಿಚಾರ.

ವಾಸ್ತವದಲ್ಲಿ ಈ ಎಥೆನೋಲ್ ಮತ್ತು ಮಿಥೆನೋಲ್‌ಗಳ ಅಣುರಚನೆಯಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಇಬ್ಬರೂ ಒಂದೇ ರಾಸಾಯನಿಕ ಕುಟುಂಬವಾದ 'ಆಲ್ಕೋಹಾಲ್' ಕುಟುಂಬಕ್ಕೆ ಸೇರಿದ ಕಳ್ಳರು. ಆದರೂ ಎಥೆನೋಲ್ 'ಕಿಕ್' ಕೊಟ್ಟರೆ, ಮಿಥೆನೋಲ್ ನಮ್ಮನ್ನೇ ಈ ಲೋಕದಿಂದ 'ಕಿಕ್ ಔಟ್' ಮಾಡುತ್ತದೆ. ಇದೇ ಮೇಲೆ ಹೇಳಿದ ಜೋಕ್‌ನ ತಾತ್ಪರ್ಯ. ಹೀಗೆ ಒಂದೇ ಕುಟುಂಬ, ಹೆಚ್ಚು ಕಡಿಮೆ ಒಂದೇ ರೀತಿ ಇರುವ ಎರಡು ರಾಸಾಯನಿಕಗಳೂ, ದೇಹದಲ್ಲಿ ವಿರುದ್ಧವಾಗಿ ವರ್ತಿಸುವುದು ರಾಸಾಯನಿಕಗಳ ವಿಶೇಷ. ಈ ಎಥೆನೋಲ್-ಮಿಥೆನೋಲ್ ವಿಷಯದಲ್ಲಿ ಹೀಗಾಗುವುದಕ್ಕೆ ಕಾರಣ, ನಮ್ಮ ದೇಹದಲ್ಲಿರುವ ಕಿಣ್ವ 'ಆಲ್ಕೋಹೋಲ್ ಡಿ ಹೈಡ್ರೋಜಿನೇಸ್'.

ಮಿಥೆನೋಲ್ ರಚನೆ
ಈ ಕಿಣ್ವ ಆಲ್ಕೋಹೋಲ್ ಡಿ ಹೈಡ್ರೋಜಿನೇಸ್, ಎಥೆನೋಲ್‌ನಿಂದ ಮತ್ತನ್ನೂ ಮಿಥೆನೋಲ್‌ನಿಂದ ಸಾವನ್ನೂ ಹೇಗೆ ತರಿಸುತ್ತದೆ ಎಂಬುದು, ಅತ್ಯಂತ ಸ್ವಾರಸ್ಯಕರ. ಅದಕ್ಕೂ ಮೊದಲು ಈ ಆಲ್ಕೋಹೋಲ್‌ಗಳು ನಮ್ಮ ದೇಹವನ್ನು ಹೇಗೆ ಪ್ರವೇಶಿಸುತ್ತವೆ; ಪ್ರವೇಶಿಸಿದ ನಂತರ ಅವುಗಳ ಪಾಡು ಏನಾಗುತ್ತದೆಂಬುದನ್ನು ತಿಳಿದುಕೊಳ್ಳುವುದು ಲೇಸು.

ಎಥೆನೋಲ್, ಮದ್ಯಪಾನೀಯಗಳಲ್ಲಿರುವ ಮುಖ್ಯ ಘಟಕ. ಎಥೆನೋಲ್ ದೇಹ ಸೇರಲು ಮುಖ್ಯ ಕಾರಣ ಮದ್ಯಪಾನವೇ! ಬೀರ್-ವೈನ್‌ಗಳಲ್ಲಿ ಸುಮಾರು ೨ ರಿಂದ ೨೦ ಪ್ರತಿಶತದಷ್ಟಿರುವ ಎಥೆನೋಲ್, ವೋಡ್ಕಾ-ಬ್ರಾಂಡಿಗಳಲ್ಲಿ ೩೫ ರಿಂದ ೬೦ ಪ್ರತಿಶತದಷ್ಟೂ ಇರಬಹುದು. ಇನ್ನು ರಮ್-ವ್ಹಿಸ್ಕಿಗಳಲ್ಲಿ, ಇನ್ನೂ ಧಾರಾಳವಾಗಿಯೇ ಇರುವ ಎಥೆನೋಲ್‌ನ ಅಂಶ, ಶೇಕಡ ೮೦ ರವರೆಗೂ ಹೋಗಬಹುದು. ದೇಹ ಹೊಕ್ಕ ತಕ್ಷಣ ಎಥೆನೋಲ್‌ನ ಚಯಾಪಚಯ ಕ್ರಿಯೆಗಳು ಪ್ರಾರಂಭವಾಗುವುದೇನೋ ನಿಜ. ಆದರೆ ಈ ಎಥೆನೋಲ್‌ಗೆ ನೀರಿನೊಂದಿಗೆ ಬಹಳ ಸಲಿಗೆ. ಹೀಗಾಗಿ ಅದು ನೀರಿನೊಂದಿಗೆ ಸಂಪೂರ್ಣವಾಗಿ ಬೆರೆತುಬಿಡುತ್ತದೆ. ಆದ್ದರಿಂದ ಕುಡಿದ ಸ್ವಲ್ಪ ಹೊತ್ತಿನಲ್ಲೇ, ರಕ್ತದ ಮೂಲಕ ದೇಹವನ್ನೆಲ್ಲ ವ್ಯಾಪಿಸಿಬಿಡುತ್ತದೆ. ಎಲ್ಲಿಯವರೆಗೆಂದರೆ, ಕುಡಿದ ವ್ಯಕ್ತಿಯ ಬೆವರಿನಿಂದ ಹಿಡಿದು ಉಸಿರಿನವರೆಗೆ. ರಕ್ತದ ಮೂಲಕ ಎಥೆನೋಲ್ ಶ್ವಾಸಕೋಸಕ್ಕೂ ಬರುವುದರಿಂದ, ವ್ಯಕ್ತಿ ಎಷ್ಟರಮಟ್ಟಿಗೆ ಕುಡಿದಿದ್ದಾನೆಂಬುದನ್ನು ಅವನ ಉಸಿರಿನ ಮೂಲಕವೇ ಪತ್ತೆಮಾಡಬಹುದು!

ಹೀಗೆ ಕೇಂದ್ರ ನರಮಂಡಲವನ್ನೂ (CNS) ಅದು ತಲುಪುತ್ತದೆ. ಅಲ್ಲಿ ಈ ಎಥೆನೋಲ್ ಗಾಬಾ(GABA) ಎನ್ನುವ ರಿಸೆಪ್ಟಾರ್‌ಗಳನ್ನು ಉದ್ದೀಪಿಸುತ್ತದೆ. ಈ ಗಾಬಾಗಳು ಉದ್ದೀಪನಗೊಂಡರೆ, ಅದು ನರಮಂಡಲವನ್ನು ಶಾಂತ-ವಿಶ್ರಾಂತ ಸ್ಥಿತಿಗೆ ತರುತ್ತದೆ. ಇದೇ ಕಾರಣದಿಂದ ಅಮಲು ಹತ್ತಿದವರು ಚಿಂತೆಯೇ ಇಲ್ಲದವರಂತೆ ಬಡಬಡಿಸುತ್ತಿರುತ್ತಾರೆ. ದೇಹವನ್ನು ಹೊಕ್ಕ ಎಥೆನೋಲ್, ದೇಹದಲ್ಲಿ ಹಾಗೆಯೇ ಉಳಿದರೆ, ಒಮ್ಮೆ ಕುಡಿದರೆ ಸಾಯುವವರೆಗೂ ಅದರ ಅಮಲಿರುತ್ತಿತ್ತೇನೋ?! ಆದರೆ ಎಥೆನೋಲ್ ಜೀರ್ಣವ್ಯವಸ್ಥೆಯಲ್ಲಿ ಚಯಾಪಚಯಗೊಳ್ಳುವುದರಿಂದ, ಕುಡಿದವರ ಅಮಲು ಕೆಲ ಘಂಟೆಗಳ ನಂತರ ಇಳಿದಿರುತ್ತದೆ.

ದೇಹ ಹೊಕ್ಕ ಆಲ್ಕೋಹೋಲ್‌ನ್ನು ಜೀರ್ಣಗೊಳಿಸುವಲ್ಲಿ ಅತಿ ಮುಖ್ಯ ಪಾತ್ರವಹಿಸುವ ಕಿಣ್ವವೇ ಈ 'ಆಲ್ಕೋಹೋಲ್ ಡಿ ಹೈಡ್ರೋಜಿನೇಸ್'. ಇದು ಎಥೆನೋಲ್‌ನ್ನು, ಎಸಿಟಾಲ್ಡಿಹೈಡ್ ಆಗಿ ಬದಲಾಯಿಸಿದರೆ, ಮಿಥೆನೋಲ್‌ನ್ನು ಫೊರ್ಮಾಲ್ಡಿಹೈಡ್ ಆಗಿ ಬದಲಾಯಿಸುತ್ತದೆ. ಹೀಗೆ ಬದಲಾವಣೆಗೊಂಡ ಮದ್ಯವು ಬೇರೆ ಇನ್ನಿಷ್ಟು ಕಿಣ್ವಗಳ ಸಹಾಯದಿಂದ ಸರಳ ಅಣುಗಳಾಗಿ ಬದಲಾಗುತ್ತವೆ. ಮತ್ತು ಅಂತಿಮವಾಗಿ ದೇಹದಿಂದ ವಿಸರ್ಜಿಸಲ್ಪಡುತ್ತವೆ.

ನಮ್ಮ ದೇಹಕ್ಕೆ ಮಿಥೆನೋಲ್ ಅಷ್ಟೇನೂ ವಿಷವಲ್ಲ. ಆದ್ದರಿಂದ ಮಿಥೆನೋಲ್ ಸೇವನೆಯಿಂದ ಸಾವು ನಿರೀಕ್ಷಿತವಲ್ಲ. ಹೀಗಿದ್ದರೂ, ಮಿಥೆನೋಲ್ ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿದರೆ ಸಾವು ಖಚಿತ. ಕಳ್ಳಭಟ್ಟಿ ಪ್ರಕರಣಗಳಲ್ಲಿ, ಹೆಚ್ಚಿನ ಸಂದರ್ಭದಲ್ಲಿ ಈ ಮಿಥೆನೋಲ್‌ನ ಅಣುಗಳೇ ಸಾವಿನ ವ್ಯಾಪಾರ ನಡೆಸಿರುತ್ತವೆ. ಇದಕ್ಕೆ ಕಾರಣ ದೇಹದಲ್ಲಿರುವ ಅದೇ ಕಿಣ್ವ 'ಆಲ್ಕೋಹೋಲ್ ಡಿ ಹೈಡ್ರೋಜಿನೇಸ್'. ಇದು ಮಿಥೆನೋಲ್‌ನ್ನು ಫೊರ್ಮಾಲ್ಡಿಹೈಡ್ ಆಗಿ ಬದಲಾಯಿಸುತ್ತದೆ ಎಂದೆನಷ್ಟೇ?   ದೇಹಕ್ಕೆ ಮಿಥೆನೋಲ್ ವಿಷವಲ್ಲದಿದ್ದರೇನಂತೆ? ಅದು ಬದಲಾವಣೆಗೊಂಡು ಉತ್ಪತ್ತಿಯಾಗುವ ಈ  ಫೊರ್ಮಾಲ್ಡಿಹೈಡ್, ನಮ್ಮ ದೇಹಕ್ಕೆ ಭಯಂಕರ ವಿಷ. ಮತ್ತು ಸಂಭವಿಸುವ ಸಾವುಗಳಿಗೆಲ್ಲ ಇದೇ ಫೊರ್ಮಾಲ್ಡಿಹೈಡ್ ನೇರ ಕಾರಣವಾಗಿರುತ್ತದೆ.

ಹಾಗಿದ್ದರೆ ಮಿಥೆನೋಲ್‌ನಿಂದಾಗುವ ಸಾವಿಗೆ ಔಷಧಿ ಇಲ್ಲವೆ? ಖಂಡಿತ ಇದೆ. ಅದೇ ಮಿಥೆನೋಲ್ ವಿಷಕ್ಕೆ ಪ್ರತಿವಿಷವಾದ ಎಥೆನೋಲ್. ನಮ್ಮ ಕಿಣ್ವ ಆಲ್ಕೋಹೋಲ್ ಡಿ ಹೈಡ್ರೋಜಿನೇಸ್‌ಗೆ, ಮಿಥೆನೋಲ್‌ಗಿಂತ ಎಥೆನೋಲ್ ಮೇಲೆ ಸುಮಾರು ೨೫ ಪಟ್ಟು ಹೆಚ್ಚು ಪ್ರೀತಿ. ಈ ತತ್ವವನ್ನೇ ಉಪಯೋಗಿಸಿಕೊಂಡು, ಮಿಥೆನೋಲ್ ಕಲಬೆರಕೆಗೊಂಡ ಪಾನೀಯ ಸೇವಿಸಿದವರನ್ನು ಬದುಕಿಸಬಹುದು. ಅಂಥವರ ದೇಹ ಪ್ರವೇಶಿಸಿದ ಮಿಥನೋಲ್‌ನ ಮೇಲೆ ನಮ್ಮ ಕಿಣ್ವ ವರ್ತಿಸಿದರೆ ತಾನೆ ಅದು ವಿಷವಾಗುವುದು? ಅದಕ್ಕಿಂತ ಮೊದಲೇ ಈ ಕಿಣ್ವಕ್ಕೆ ಹೆಚ್ಚು ಪ್ರಿಯವಾಗಿರುವ ಎಥೆನೋಲ್‌ನ್ನು ನೀಡಿಬಿಟ್ಟರೆ? ಕಿಣ್ವ, ಮಿಥೆನೋಲ್ ಅಣುಗಳನ್ನು ಬಿಟ್ಟು ಎಥನೋಲ್‌ನ ಅಣುಗಳನ್ನು ತಬ್ಬಿಕೊಳ್ಳುತ್ತದೆ. ಕಿಣ್ವ ಎಲ್ಲ ಎಥೆನೋಲ್‌ನ ಅಣುಗಳನ್ನು ಎಸಿಟಾಲ್ಡಿಹೈಡ್ ಆಗಿ ಬದಲಾಯಿಸುವಷ್ಟರಲ್ಲಿ, ದೇಹದಿಂದ ಮಿಥೆನೋಲ್ ಹೊರದೂಡಲ್ಪಟ್ಟಿರುತ್ತದೆ.

ಹೀಗಾಗಿ ಮಿಥೆನೋಲ್ ವಿಷಪ್ರಾಶನವಾದರೆ ಕೊಡುವ ಔಷಧ ಎಥೆನೋಲ್‌ನ ಚುಚ್ಚುಮದ್ದು!  

ಲೇಖಕರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ  ರಸಾಯನವಿಜ್ಞಾನದ ಸಂಶೋಧನಾ ವಿದ್ಯಾರ್ಥಿ. ಅವರ ಈ ಲೇಖನ ಜೂನ್ ೨೭, ೨೦೧೫ರ ವಿಜಯವಾಣಿಯಲ್ಲಿ ಮೊದಲಿಗೆ ಪ್ರಕಟವಾಗಿತ್ತು.

4 ಕಾಮೆಂಟ್‌ಗಳು:

Bharath urs harthikote ಹೇಳಿದರು...

Wow wow keep writing

Kavya s koliwad ಹೇಳಿದರು...

ಚನ್ನಾಗಿದೆ ಲೇಖನ ... ಇಷ್ಟ ಆಯ್ತು ..

basavaraja gouda patil ಹೇಳಿದರು...

Super information sir....

Karthik Kumara ಹೇಳಿದರು...

Nice keep writing. All the best.

badge