ಶುಕ್ರವಾರ, ಜೂನ್ 30, 2017

ವಿಜ್ಞಾನದ ಇಜ್ಞಾನ: ಎಲ್ಲವೂ ಹೊಟ್ಟೆಗಾಗಿ, ಕೊನೆಗೆ ಉಳಿವಿಗಾಗಿ

ಕೊಳ್ಳೇಗಾಲ ಶರ್ಮ

ದಾಸರು ಹೇಳಿದ್ದರಂತೆ. “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಬಹುಶಃ ಇದು ನಮ್ಮ ನಿತ್ಯ ಜೀವನಕ್ಕೆ ಹಿಡಿದ ಕನ್ನಡಿಯಾಗಿರಬಹುದು. ಆದರೆ ಜೀವಿಗಳ ಬದುಕಿನಲ್ಲಿ ತುಂಡು ಬಟ್ಟೆ, ಹೊಟ್ಟೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮರಿ ಮಾಡುವುದಕ್ಕೂ ಇದೆ ಎನ್ನುವುದು ವಿಜ್ಞಾನಿಗಳ ಅಂಬೋಣ. “ನಾವಿಬ್ಬರು, ನಮಗಿಬ್ಬರು” ಎನ್ನುವ ಧ್ಯೇಯ ವಾಕ್ಯವನ್ನೇ ಆದರ್ಶವಾಗಿಟ್ಟುಕೊಂಡಿರುವ ನಮಗೆ ಇದು ತುಸು ವಿಚಿತ್ರ ಎನ್ನಿಸಬಹುದು. ಆದರೆ ಉಂಡು, ತಿಂದು ಬದುಕುಳಿದರೆ ಸಾಲದು. ತಮ್ಮ ಸಂತತಿಯೂ ಬದುಕಿ ಉಳಿಯಬೇಕು ಎನ್ನುವುದೇ ‘ಜೀವ’ ಎನ್ನುವುದರ ಪರಮೋಚ್ಚ ಧ್ಯೇಯ ಎನ್ನುತ್ತದೆ ಡಾರ್ವಿನ್ನನ ವಿಕಾಸವಾದ. ಜೀವಿಗಳ ಎಲ್ಲ ಬಗೆಯ ಹೊಂದಾಣಿಕೆಗಳು ಹಾಗೂ ಹೋರಾಟಗಳೂ ತಾವೆಷ್ಟು ಸಂತಾನವನ್ನು ಉಳಿಸಿ ಹೋಗಬಲ್ಲೆವು ಎನ್ನುವುದಕ್ಕಾಗಿಯೇ ಆಗಿರುವುದಂತೆ.

ಇದನ್ನು ನಾವು ನಿತ್ಯ ಜೀವನದಲ್ಲಿ ಕಂಡೂ ಗಮನಿಸದೆಯೇ ಹೋಗುತ್ತೇವೆ. ರಣಬಿಸಿಲಿನಿಂದ ತಪ್ಪಿಸಿಕೊಳ್ಳಲು ಎಲೆಗಳನ್ನೆಲ್ಲ ಉದುರಿಸಿಕೊಳ್ಳುವ ಮರ-ಗಿಡಗಳು ಒಂದು ಮಳೆ ಬಿದ್ದರೆ ಸಾಕು ಚಿಗುರಿ, ಲಕ್ಷಾಂತರ ಹೂ ಬಿಡುತ್ತವೆ. ಒಂದು ಗಿಡ ಮೊಳೆಯಲು ಅಷ್ಟೊಂದು ಹೂ, ಬೀಜ ಬೇಕೇ ಎನ್ನುವ ನಮ್ಮ-ನಿಮ್ಮ ಲೆಕ್ಕಾಚಾರಕ್ಕಿಂತಲೂ ತಾವೆಷ್ಟು ಸಂತತಿಯನ್ನು ಉಳಿಸಬಲ್ಲೆವು ಎನ್ನುವ ಲೆಕ್ಕಾಚಾರವೇ ಜೀವಿಪ್ರಪಂಚದಲ್ಲಿ ಮುಖ್ಯವಾಗುತ್ತದೆ. ಬಹುಶಃ ಇದು ಇಲ್ಲದೆ ಇದ್ದಿದ್ದಲ್ಲಿ ನಾವು ಊಟ, ತಿನಿಸಿಗೂ ಪರದಾಡಬೇಕಿತ್ತೇನೋ? ಭತ್ತದ ಗಿಡ ಒಂದೇ ಒಂದು ಹೂ ಬಿಟ್ಟು, ಒಂದೇ ಒಂದು ಕಾಳು ಬಿಟ್ಟಿದ್ದಲ್ಲಿ ಏನಾಗುತ್ತಿತ್ತು ಆಲೋಚಿಸಿ. ಮಾವಿನ ಮರ, ಇಂದಿಗೊಂದು, ನಾಳೆಗೊಂದು ಸಾಕು ಎಂದು ಎರಡೇ ಹೂ ಬಿಟ್ಟು, ಅವು ಹಣ್ಣಾಗಿದ್ದರೆ ಈ ಬೇಸಗೆ ನಮಗೆ ರುಚಿಸುತ್ತಿತ್ತೇ?

ಇಷ್ಟೆಲ್ಲ ಚಿಂತನೆಗೆ ಮೂಲ ಇಂಗ್ಲೆಂಡಿನ ರಾಯಲ್ ಸೊಸೈಟಿ ಪ್ರಕಟಿಸಿರುವ ಒಂದು ವೀಡಿಯೊ.


ವಿಜ್ಞಾನಿಗಳ ಈ ಸಂಘ ಬ್ರಿಟನ್ನಿನ ಪ್ರತಿ ವರ್ಷವೂ ಛಾಯಾಚಿತ್ರಗಳ ಸ್ಪರ್ಧೆಯೊಂದನ್ನು ಏರ್ಪಡಿಸುತ್ತದೆ. ಜೀವಿವಿಜ್ಞಾನಕ್ಕೆ ಸಂಬಂಧಿಸಿದ ನಾಲ್ಕೈದು ವಿಷಯಗಳನ್ನು ಬಿಂಬಿಸುವ ಛಾಯಾಚಿತ್ರಗಳ ಸ್ಪರ್ಧೆ ಇದು. ಈ ವರ್ಷವೂ ಇದು ನಡೆಯಲಿದೆ. ಜಗತ್ತಿನ ಎಲ್ಲೆಡೆಯಿಂದ ಹವ್ಯಾಸಿಗಳೂ, ವೃತ್ತಿನಿರತರೂ ತಮ್ಮ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳಿಸುತ್ತಾರೆ. ಕಳೆದ ವರ್ಷ ನಡೆದ ಸ್ಪರ್ಧೆಯಲ್ಲಿ ಪ್ರಕಟವಾದ ಪಾಲಿಕೀಟ ಎನ್ನುವ ಜೀವಿಯ ಈ ಚಿತ್ರ ದಾಸರ ಪದವನ್ನು ನೆನಪಿಸಿತು. ಅನಿಯಮಿತ ಸಂತಾನಕ್ಕಾಗಿ ನಿಸರ್ಗದಲ್ಲಿ ಏನೆಲ್ಲ ಉಪಾಯಗಳಿವೆ!

ಅನಿಯಮಿತ ಸಂತಾನ ಬಹುತೇಕ ಜೀವಿಗಳಲ್ಲಿ ಸಹಜ. ಇದು ನಿಸರ್ಗದ ನಿಯಮವೂ ಕೂಡ. ಇದಕ್ಕಾಗಿ ವಿಭಿನ್ನ ಜೀವಿಗಳು ವಿಭಿನ್ನ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಂಡಿರುವುದನ್ನು ಕಾಣಬಹುದು. ಪಾಲಿಕೀಟವೂ ಕೂಡ ಇಂತಹುದೇ ಹೊಂದಾಣಿಕೆಯನ್ನು ಮಾಡಿಕೊಂಡಿದೆ. ಪಾಲಿಕೀಟಗಳು ಎರೆಹುಳುಗಳ ಜಾತಿಗೆ ಸೇರಿದ ಜಂತುಗಳು. ಎರೆಹುಳುಗಳಂತೆಯೇ ಉದ್ದ ದೇಹ. ಎರೆಹುಳುಗಳ ಕುಟುಂಬದಲ್ಲಿ ಒಟ್ಟು 9000 ಜೀವಿಗಳಿವೆಯಂತೆ. ಇವುಗಳಲ್ಲಿ ಸುಮಾರು 8000 ಪಾಲಿಕೀಟಗಳೇ ಅಂತೆ. ಆದರೆ ಎರೆಹುಳುಗಳಂತೆ ಇವು ಮಣ್ಣಿನಲ್ಲಿ ವಾಸಿಸವು. ಸಿಹಿನೀರಿನ ಕೊಳಗಳಲ್ಲೋ, ಸಮುದ್ರದ ತಳದಲ್ಲೋ ಇವನ್ನು ಕಾಣಬಹುದು. ಸುಮಾರು ಮೂರು ಕಿಲೋಮೀಟರು ಆಳದ ಸಮುದ್ರ ತಳದಲ್ಲಿಯೂ ಕೆಲವು ಪಾಲಿಕೀಟಗಳು ಬದುಕಿರುವುದನ್ನು ವಿಜ್ಞಾನಿಗಳು ಕಂಡಿದ್ದಾರೆ.

ಇದೋ ಫ್ರೆಡೆರಿಕ್ ಪ್ಲೀಯಲ್ (Fredrik Pleijel) ಎನ್ನುವ ಸಮುದ್ರ ವಿಜ್ಞಾನಿ ತೆಗೆದ ಈ ಚಿತ್ರ ಇಂಗ್ಲೆಂಡು, ಅಮೆರಿಕದ ಸುತ್ತಮುತ್ತಲಿನ ಸಮುದ್ರಗಳಲ್ಲಿ ಕಂಡು ಬರುವ ಮಿರಿಯಾನಿಡ ಪಿನ್ನಿಜೆರಾ ಎನ್ನುವ ಪಾಲಿಕೀಟ ಜೀವಿಯದ್ದು. ಸಮುದ್ರ ತಳದಲ್ಲಿ ಮಣ್ಣಿನಲ್ಲಿ ಹುದುಗಿರುತ್ತದೆ. ಇದನ್ನು ವಿಜ್ಞಾನಿಗಳು ‘ರೈಲು ಹುಳ’ (ಟ್ರೇನ್ ವರ್ಮ್) ಎಂದೂ ಕರೆಯುತ್ತಾರೆ. ಇದರ ರಚನೆಯೇ ಹಾಗಿದೆ. ದೇಹದ ಮುಂಭಾಗದಲ್ಲಿ ಒಂದು ಉದ್ದನೆಯ ಇಂಜಿನಿನಂತಹ ಭಾಗ. ಅದಕ್ಕೆ ಬೋಗಿಗಳು ಜೋಡಿಸಿದಂತೆ ಹಲವಾರು ಖಂಡಗಳು ಕೂಡಿಕೊಂಡಿರುತ್ತವೆ. ರೈಲಿನ ಕೊನೆಯಲ್ಲಿ ಗಾರ್ಡಿನ ಗಾಡಿಯಿದ್ದಂತೆ ಹುಳುವಿನ ಕೊನೆಯಲ್ಲೊಂದು ತುಸು ದೊಡ್ಡನೆಯ ಖಂಡ. ಎರೆಹುಳುವಿನಂತೆಯೇ ಈ ದೇಹವೂ ಖಂಡ-ಖಂಡವಾಗಿದ್ದರೂ ಒಂದು ವ್ಯತ್ಯಾಸವಿದೆ. ಈ ಜೀವಿಯ ಇಂಜಿನ್ನು ಮಾತ್ರ ಉಣಬಲ್ಲದು. ಉಳಿದವುಗಳು ಕೇವಲ ಉಸಿರಾಡಬಲ್ಲವು ಅಷ್ಟೆ.


ಅದರಲ್ಲೇನು ವಿಚಿತ್ರ ಎಂದಿರಾ? ಹೌದು. ಈ ರೈಲುಹುಳದ ಇಂಜಿನ್ನನ ಹೊರತಾಗಿ ಉಳಿದೆಲ್ಲವ ಖಂಡಗಳೂ ಕೇವಲ ಸಂತಾನೋತ್ಪತ್ತಿಗಾಗಿಯೇ ಮೀಸಲು. ಇಂಜಿನ್ನಿನಲ್ಲಿ ನಾಲ್ಕು ಕಣ್ಣುಗಳೂ, ಬಾಯಿ, ಬಾಯಿಯ ಸುತ್ತಲೂ ಪ್ರಪಂಚವನ್ನು ಗ್ರಹಿಸುವ ಮೀಸೆಯಂತಹ ರಚನೆಗಳೂ ಇವೆ. ಪ್ರತಿ ಖಂಡದಲ್ಲಿಯೂ ಕಾಲಿನಂತಿರುವ ರಚನೆಗಳು ಉಸಿರಾಟದ ಅಂಗಗಳು. ಚಲನೆಗೂ ನೆರವಾಗುವುವು. ಆದರೆ ಇಂಜಿನ್ನಿನ ಹೊರತಾಗಿ ಇನ್ಯಾವ ಭಾಗದಲ್ಲಿಯೂ ಆಹಾರ ಸೇವನೆಗೆ ಅವಕಾಶವಿಲ್ಲ. ಎಲ್ಲ ಗಾಡಿಗಳೂ ಸಂತಾನದ ಹೊರೆ ಹೊತ್ತ ಸರಕು-ಗಾಡಿಗಳಷ್ಟೆ.

ಪಾಲಿಕೀಟಗಳಲ್ಲಿ ಬಹುತೇಕ ವರ್ಷಕ್ಕೊಮ್ಮೆ ಮರಿ ಮಾಡುವ ಋತುಗಾಯಕರು. ಮಿರಿಯಾನಿಡ ಪಿನ್ನಿಜೆರಾ ಇದಕ್ಕೆ ಅಪವಾದವೇನಲ್ಲ. ಸಂತಾನೋತ್ಪತ್ತಿಯ ಕಾಲ ಬಂದಂತೆ ಇಂಜಿನ್ನಿನ ಹಿಂಭಾಗದಲ್ಲಿರುವ ಖಂಡಗಳು ಒಂದೊಂದಾಗಿ ಕಳಚಿಕೊಳ್ಳುತ್ತವೆ. ಮೊದಲಿಗೆ ಅತಿ ಕೊನೆಯಲ್ಲಿರುವುದು. ಅನಂತರ ಅದಕ್ಕಿಂತ ಮೊದಲಿನದ್ದು ಹೀಗೆ ಸರಕುಗಾಡಿಯ ಬೋಗಿಗಳನ್ನು ಒಂದೊಂದಾಗಿ ಕಳಚುವಂತೆ ಇವು ದೇಹದಿಂದ ಕಳಚಿಕೊಳ್ಳುತ್ತವೆ. ಉಣಲಾಗದಿದ್ದರೂ, ಉಸಿರಾಟವಿರುವುದರಿಂದ ತುಸು ಕಾಲ ಜೀವಂತವಾಗಿ ಉಳಿಯಬಲ್ಲವು. ಈಜಾಡಬಲ್ಲವು.

ಇಂಜಿನ್ನಿನಿಂದ ಕಳಚಿಕೊಂಡ ಇವು ನೇರವಾಗಿ ನೀರಿನ ಮೇಲ್ಮೈಯನ್ನು ತಲುಪುತ್ತವೆ. ಏಕಕಾಲದಲ್ಲಿ ಕೋಟ್ಯಂತರ ಪಿನ್ನಿಜೆರಾಗಳಿಂದ ಕಳಚಿಕೊಂಡ ಈ ಸಂತಾನ ಸರಕು ಗಾಡಿಗಳು ನೀರಿನ ಮೇಲ್ಮೈಗೆ ಬರುತ್ತವೆ. ಇವುಗಳಿಗಿರುವ ಒಂದೇ ಕಣ್ಣಿಗೆ ಬೆಳಕು ಇದೆಯೋ ಇಲ್ಲವೋ ಎನ್ನುವುದನ್ನು ಗ್ರಹಿಸುವುದಷ್ಟೆ ಸಾಧ್ಯ. ಮೇಲೆ ಬಂದ ಕೂಡಲೆ ಬೆಳಕು ಕಂಡು ದೇಹ ಬಿರಿಯುತ್ತದೆ. ಒಳಗಿರುವ ಮೊಟ್ಟೆಗಳನ್ನೋ, ವೀರ್ಯವನ್ನೋ ನೀರಿನಲ್ಲಿ ಚೆಲ್ಲಾಡಿ ಬಿಡುತ್ತದೆ. ಅನಂತರ ನಡೆಯುವುದು ಉಳಿದೆಲ್ಲ ಜೀವಿಗಳ ಸಂತಾನೋತ್ಪತ್ತಿಯಲ್ಲಿಯಂತೆಯೇ ಮೊಟ್ಟೆ-ವೀರ್ಯಗಳ ಮಿಲನ, ಹೊಸ ಜೀವಿಯ ಹುಟ್ಟು. ಮತ್ತೊಂದು ಪಿನ್ನಿಜೆರಾದ ಜೀವನ ಪಯಣ.

ದಾಸರು ಇವನ್ನು ಕಂಡಿದ್ದರೆ ಏನೆನ್ನುತ್ತಿದ್ದರೋ? ಹೊಟ್ಟೆಯೂ ಇಲ್ಲದ, ಬಟ್ಟೆಯೂ ಬೇಡದ ಕೇವಲ ಮೊಟ್ಟೆಯಿಡುವುದಕ್ಕಾಗಿಯಷ್ಟೆ ಇರುವ ಪಿನ್ನಿಜೆರಾದ ಸರಕುಗಾಡಿಗಳು “ಉದರಂಭರಣಂ ಬಹುಕೃತ ವೇಷಂ” ಎನ್ನುವ ಪದವನ್ನು ಅಣಕಿಸುತ್ತಿವೆ ಎನ್ನಿಸಿದರೂ ಜೀವಿವೈವಿಧ್ಯದ ಮತ್ತೊಂದು ಮಗ್ಗುಲನ್ನು ಎದುರಿಡುತ್ತವೆ. ತಮ್ಮ ವಂಶವನ್ನು ಉಳಿಸಿಹೋಗಲು ಎಷ್ಟೆಲ್ಲ ಪಾಡು? ಅಲ್ಲವೇ?

ಮೇ ೧೫, ೨೦೧೭ರಂದು ಲಭ್ಯವಿದ್ದ ಮಾಹಿತಿಯನ್ನು ಆಧರಿಸಿ ಬರೆದ ಲೇಖನ

2 ಕಾಮೆಂಟ್‌ಗಳು:

ನಾಗೇಶ ಹೆಗಡೆ ಹೇಳಿದರು...

ಕಂತು ಕಂತುಗಳಲ್ಲಿ ಇದು ತನ್ನ ವಂಶೋದ್ಧಾರಕರನನ್ನು ಸಮುದ್ರದ ಆಳದಿಂದ ಮೇಲ್ಮೈಗೆ ರವಾನಿಸುತ್ತದೆ ಸರಿ. ಕೊನೆಗೆ ತಳದಲ್ಲೇ ಉಳಿಯುವ ಆ 'ಕಂತುಪಿತ'ನ ಕತೆ ಮುಂದೇನಾಗುತ್ತದೊ? ಅದರ ಎಂಜಿನ್ನಿಗೆ ಮತ್ತೆ ಹೊಸದಾಗಿ ರೈಲುಡಬ್ಬಿಗಳು ಮೊಳೆಯುತ್ತವೆಯೆ ಅಥವಾ ಅದು ಇತರ ಜೀವಿಗಳಿಗೆ ಆಹಾರವಾಗಲೆಂದು ತನ್ನನ್ನೇ ತಲೆದಂಡ ಕೊಡುತ್ತದೆಯೆ?

Alemari ಹೇಳಿದರು...

ರೈಲು ಡಬ್ಬಿಗಳು ಮೊಳೆಯುತ್ತಿರುತ್ತವೆ ಪ್ರತಿ ಋತುವಿನಲ್ಲೂ, ಇಂಜಿನ್ನು ಸಾಯುವವರೆಗೆ ಅಥವಾ ಆಹಾರವಾಗುವವರೆಗೆ.

badge