ಸೋಮವಾರ, ಮೇ 8, 2017

ಇದು ಜೂಮ್ ಸಮಾಚಾರ!

ಟಿ. ಜಿ. ಶ್ರೀನಿಧಿ


ಕ್ಯಾಮೆರಾಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಪ್ರಸ್ತಾಪವಾಗುವ ವಿಷಯ 'ಜೂಮ್'. ಕ್ಯಾಮೆರಾ ಮುಂದಿನ ದೃಶ್ಯದ ನಿರ್ದಿಷ್ಟ ಭಾಗವನ್ನು ಹಿಗ್ಗಿಸಿ ತೋರಿಸುವ ಸೌಲಭ್ಯ ಇದು.

ಜೂಮ್‌ನಲ್ಲಿ ಎರಡು ವಿಧ - ಆಪ್ಟಿಕಲ್ ಜೂಮ್ ಹಾಗೂ ಡಿಜಿಟಲ್ ಜೂಮ್.
ಆಪ್ಟಿಕಲ್ ಜೂಮ್‌ನಲ್ಲಿ ಕ್ಯಾಮೆರಾ ಲೆನ್ಸಿನ ಫೋಕಲ್ ಲೆಂತ್ ಬದಲಿಸುವ ಮೂಲಕ ಚಿತ್ರದ ವ್ಯಾಪ್ತಿಯನ್ನು ಹಿಗ್ಗಿಸುವುದು ಸಾಧ್ಯ. ಈ ಬಗೆಯ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಉತ್ತಮವಾಗಿರುತ್ತದೆ.

ಡಿಜಿಟಲ್ ಜೂಮ್‌ನಲ್ಲಿ ಹಾಗಲ್ಲ. ಅಲ್ಲಿ ಮೂಲ ಚಿತ್ರವನ್ನೇ ತೆಗೆದುಕೊಂಡು ನಿಮಗೆ ಬೇಕಾದ ಭಾಗವನ್ನು ಮಾತ್ರ ದೊಡ್ಡ ಗಾತ್ರಕ್ಕೆ ಹಿಗ್ಗಿಸಲಾಗುತ್ತದೆ. ಹೀಗಾಗಿ ಡಿಜಿಟಲ್ ಜೂಮ್ ಬಳಸಿ ತೆಗೆದ ಚಿತ್ರಗಳ ಗುಣಮಟ್ಟ ಅಷ್ಟೇನೂ ಚೆನ್ನಾಗಿರುವುದಿಲ್ಲ. ಅದೂ ಅಲ್ಲದೆ ಹೀಗೆ ಚಿತ್ರಗಳನ್ನು ಹಿಗ್ಗಿಸುವ ಕೆಲಸವನ್ನು ಡಿಜಿಟಲ್ ಜೂಮ್ ಬಳಸದಿದ್ದರೂ ಫೋಟೋ ಎಡಿಟಿಂಗ್ ತಂತ್ರಾಂಶಗಳನ್ನು ಬಳಸಿ ಸುಲಭವಾಗಿ ಮಾಡಿಕೊಳ್ಳಬಹುದು.

ಕ್ಯಾಮೆರಾದಲ್ಲಿ ಲಭ್ಯವಿರುವ ಜೂಮ್ ಸಾಮರ್ಥ್ಯವನ್ನು ಸೂಚಿಸಲು ೧x, ೨x, ೩x ಮುಂತಾದ ಸಂಕೇತಗಳನ್ನು ಬಳಸಲಾಗುತ್ತದೆ. ಇಲ್ಲಿ ೧x ಎನ್ನುವುದು ಮೂಲ ಚಿತ್ರದ ಗಾತ್ರವನ್ನು ಸೂಚಿಸಿದರೆ ೨x, ೩x ಇವೆಲ್ಲ ಚಿತ್ರವನ್ನು ಎಷ್ಟು ಪಟ್ಟು ಹಿಗ್ಗಿಸಲಾಗಿದೆ ಎಂದು ತೋರಿಸುತ್ತವೆ.

ಡಿಎಸ್‌ಎಲ್‌ಆರ್‌ಗಳಲ್ಲಿ ಜೂಮ್ ಅಳೆಯುವ ವಿಧಾನ ಬೇರೆ. ಅಲ್ಲಿ ಬೇರೆಬೇರೆ ಪ್ರಮಾಣದ ಜೂಮ್ ಪಡೆಯಲು ಬೇರೆಬೇರೆ ಫೋಕಲ್ ಲೆಂತ್ ಇರುವ ಲೆನ್ಸುಗಳನ್ನು ಬಳಸಬೇಕಾಗುತ್ತದೆ.
ಹೆಚ್ಚಿನ ವಿವರಗಳಿಗೆ ಈ ಲೇಖನ ಓದಿ: ಜೂಮ್ ಮಾಡಿ ನೋಡಿದ್ರಾ?
ಜುಲೈ ೩೧, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge