ಶುಕ್ರವಾರ, ಏಪ್ರಿಲ್ 21, 2017

ಕಂಪ್ರೆಶನ್ ಕರಾಮತ್ತು

ಟಿ. ಜಿ. ಶ್ರೀನಿಧಿ

ಡಿಜಿಟಲ್ ರೂಪದ ಪ್ರತಿ ಕಡತಕ್ಕೂ ಅದರಲ್ಲಿರುವ ಮಾಹಿತಿಯ ಪ್ರಮಾಣಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಗಾತ್ರ ಇರುತ್ತದೆ. ಬಿಟ್-ಬೈಟ್‌ಗಳಲ್ಲಿ ಅಳೆಯುವುದು ಈ ಗಾತ್ರವನ್ನೇ. ಕಡತದ ಗಾತ್ರ ದೊಡ್ಡದಾದರೆ ಅದನ್ನು ಉಳಿಸಿಡಲು ಹೆಚ್ಚಿನ ಸ್ಥಳಾವಕಾಶ ಬೇಕು. ನಾವೇ ಉಳಿಸಿಟ್ಟುಕೊಳ್ಳುವುದಾದರೆ ಸರಿ; ಆದರೆ ಬೇರೆಯವರಿಗೆ ಕಳುಹಿಸಬೇಕೆಂದರೆ ತೀರಾ ದೊಡ್ಡ ಕಡತಗಳನ್ನು ಕಳುಹಿಸುವುದು ಕಷ್ಟ. ಇದಕ್ಕಾಗಿ ಬಳಕೆಯಾಗುವುದೇ ಕಡತದ ಗಾತ್ರವನ್ನು ಕಡಿಮೆಮಾಡುವ 'ಕಂಪ್ರೆಶನ್' ತಂತ್ರ. ಸಾಮಾನ್ಯ ಬಳಕೆಯಲ್ಲಿ "ಜಿಪ್ ಮಾಡುವುದು" ಎಂದು ಗುರುತಿಸುವುದು ಇದನ್ನೇ.

ಯಾವುದೇ ಕಡತ ಮೆಮೊರಿಯಲ್ಲಿ ಶೇಖರವಾಗುವುದು ಹೇಗೆ? ಅದು ಮೊದಲಿಗೆ ಕಂಪ್ಯೂಟರಿಗೆ ಅರ್ಥವಾಗುವ ಒಂದು-ಸೊನ್ನೆಗಳ ಬೈನರಿ ಭಾಷೆಗೆ ಬದಲಾಗುತ್ತದೆ. ಹೀಗೆ ಬದಲಾಗುವಾಗ ಅದರಲ್ಲಿ ಒಂದೇ ಮಾಹಿತಿ ಹಲವೆಡೆ ಪುನರಾವರ್ತನೆಯಾಗಿರುವುದು ಸಾಧ್ಯ. ಅದೇ ಮಾಹಿತಿಯನ್ನು ಮತ್ತೆಮತ್ತೆ ಉಳಿಸುವ ಬದಲು ಒಮ್ಮೆ ಮಾತ್ರ ಉಳಿಸಿಟ್ಟು ಅದೇ ಮಾಹಿತಿ ಎಲ್ಲೆಲ್ಲಿ ಬರಬೇಕು ಎನ್ನುವ ಲೆಕ್ಕ ಇಟ್ಟುಕೊಂಡರೆ ಕಡತದ ಗಾತ್ರ ಕಡಿಮೆಯಾಗುತ್ತದಲ್ಲ, "ಜಿಪ್ ಮಾಡಲು" ಬಳಕೆಯಾಗುವ ಹಲವು ತಂತ್ರಾಂಶಗಳು ಇದೇ ತಂತ್ರ ಬಳಸುತ್ತವೆ; ಮೂಲ ಕಡತವನ್ನು ಜಿಪ್ ಫೈಲಿನಿಂದ ಹೊರತೆಗೆಯುವಾಗ ಈ ಹಿಂದೆ ಉಳಿಸಿಟ್ಟುಕೊಂಡ ಮಾಹಿತಿ ಬಳಸಿ ಅದರ ಮರುಸೃಷ್ಟಿ ಮಾಡುತ್ತವೆ!

ಅಂದಹಾಗೆ ಈ ಸೂತ್ರ ಎಲ್ಲ ಸನ್ನಿವೇಶಗಳಲ್ಲೂ ಉಪಯೋಗಕ್ಕೆ ಬರಬೇಕು ಎಂದೇನೂ ಇಲ್ಲ. ಚಿತ್ರಗಳ ಉದಾಹರಣೆಯನ್ನು ತೆಗೆದುಕೊಂಡರೆ ಅವುಗಳ ಗಾತ್ರವನ್ನು ಕುಗ್ಗಿಸಲು ಬೇರೆಯದೇ ರೀತಿಯ ಕಂಪ್ರೆಶನ್ ವಿಧಾನಗಳು ಬಳಕೆಯಾಗುತ್ತವೆ.

ಡಿಜಿಟಲ್ ರೂಪದಲ್ಲಿರುವ ಯಾವುದೇ ಚಿತ್ರ ದೊಡ್ಡ ಸಂಖ್ಯೆಯ ಪಿಕ್ಸೆಲ್‌ಗಳು ಸೇರಿ ರೂಪುಗೊಂಡಿರುತ್ತದೆ. ಚಿತ್ರದ ಗುಣಮಟ್ಟ ಹೆಚ್ಚಿರಬೇಕು ಎಂದರೆ ಅದರಲ್ಲಿರುವ ಪಿಕ್ಸೆಲ್‌ಗಳ ಸಂಖ್ಯೆಯೂ ಜಾಸ್ತಿಯಾಗಬೇಕು. ಹಾಗಾದಾಗ ಮೆಮೊರಿಯಲ್ಲಿ ಚಿತ್ರವನ್ನು ಉಳಿಸಿಡಲು ಬೇಕಾದ ಸ್ಥಳಾವಕಾಶವೂ ಜಾಸ್ತಿಯಾಗುತ್ತದೆ.

ಇದನ್ನು ತಪ್ಪಿಸಲೆಂದೇ ಚಿತ್ರಗಳನ್ನು ಉಳಿಸಿಡುವಾಗ ಅದರಲ್ಲಿರುವ ಮಾಹಿತಿಯನ್ನು ಸಾಧ್ಯವಾದಷ್ಟೂ ಕುಗ್ಗಿಸಲಾಗುತ್ತದೆ. ಬಹುಭಾಗದಲ್ಲಿ ಒಂದೇ ಬಣ್ಣವಿರುವ ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅದಷ್ಟೂ ಭಾಗದಲ್ಲಿರುವ ಬಣ್ಣ ಯಾವುದು ಎಂಬ ಮಾಹಿತಿಯನ್ನು ಪ್ರತಿಯೊಂದು ಪಿಕ್ಸೆಲ್‌ಗೂ ಪ್ರತ್ಯೇಕವಾಗಿ ಉಳಿಸಿಡುವ ಅಗತ್ಯವಿಲ್ಲವಲ್ಲ!

ಹೀಗೆ ಕುಗ್ಗಿಸುವಾಗ ಚಿತ್ರದಲ್ಲಿರುವ ಮಾಹಿತಿಯ ಕೆಲವುಭಾಗ ಕಳೆದುಹೋದರೆ, ಅಂದರೆ ಲಾಸ್ ಆದರೆ, ಅದು 'ಲಾಸಿ' ಕಂಪ್ರೆಶನ್; ಎಲ್ಲ ಮಾಹಿತಿಯನ್ನೂ ಉಳಿಸಿಕೊಂಡೇ ಚಿತ್ರವನ್ನು ಕುಗ್ಗಿಸುವುದಾದರೆ ಅದರಲ್ಲಿ ಏನೂ ಲಾಸ್ ಇಲ್ಲವಲ್ಲ, ಹಾಗಾಗಿ ಅದು 'ಲಾಸ್‌ಲೆಸ್' ಕಂಪ್ರೆಶನ್.

ಡಿಜಿಟಲ್ ಚಿತ್ರಗಳ ವಿಷಯಕ್ಕೆ ಬಂದಾಗ 'ಜೆಪಿಜಿ' (ಅಥವಾ 'ಜೆಪೆಗ್'), 'ಪಿಎನ್‌ಜಿ' ಇತ್ಯಾದಿಗಳೆಲ್ಲ ನಮಗೆ ಪರಿಚಿತವಾದ ಹೆಸರುಗಳು. ಚಿತ್ರಗಳ ಗಾತ್ರವನ್ನು ಕುಗ್ಗಿಸಲು 'ಜಾಯಿಂಟ್ ಫೋಟೋಗ್ರಾಫಿಕ್ ಎಕ್ಸ್‌ಪರ್ಟ್ಸ್ ಗ್ರೂಪ್' ಎಂಬ ಸಂಸ್ಥೆ ರೂಪಿಸಿದ ವಿಧಾನವೇ ಜೆಪಿಜಿ ಅಥವಾ 'ಜೆಪೆಗ್'. ಇದು ಲಾಸಿ ಕಂಪ್ರೆಶನ್ ತಂತ್ರಕ್ಕೊಂದು ಉದಾಹರಣೆ. 'ಪೋರ್ಟಬಲ್ ನೆಟ್‌ವರ್ಕ್ ಗ್ರಾಫಿಕ್ಸ್' ಎಂಬ ಹೆಸರಿನ ಹ್ರಸ್ವರೂಪವಾದ ಪಿಎನ್‌ಜಿ ವಿಧಾನದಲ್ಲಿ ಚಿತ್ರಗಳ ಗಾತ್ರವನ್ನು ಲಾಸ್‌ಲೆಸ್ ಕಂಪ್ರೆಶನ್ ಮೂಲಕ ಕುಗ್ಗಿಸಲಾಗುತ್ತದೆ.

ಜುಲೈ ೬-೯, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನಗಳ ಸಂಯುಕ್ತರೂಪ

3 ಕಾಮೆಂಟ್‌ಗಳು:

Guruprasad K K ಹೇಳಿದರು...

ಉತ್ತಮ ಮಾಹಿತಿ

Unknown ಹೇಳಿದರು...

ಧನ್ಯವಾದಗಳು......,

sb raju ಹೇಳಿದರು...

ಲೇಖನ ತುಂಬಾ ಚೆನ್ನಾಗಿದೆ.ಧನ್ಯವಾದಗಳು

badge