ಸೋಮವಾರ, ಮಾರ್ಚ್ 13, 2017

ಅಪ್‌ಲೋಡ್ ಮತ್ತು ಡೌನ್‌ಲೋಡ್

ಟಿ. ಜಿ. ಶ್ರೀನಿಧಿ 

ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಾವು ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯಲ್ಲಿ ಮಾಹಿತಿಯನ್ನು ಬಳಸುತ್ತೇವೆ. ಬಹಳಷ್ಟು ಸಾರಿ ಇತರೆಡೆಗಳಿಂದ ಮಾಹಿತಿ ಪಡೆದುಕೊಂಡರೆ ಇನ್ನು ಕೆಲವೊಮ್ಮೆ ನಾವೇ ಮಾಹಿತಿಯನ್ನು ಇನ್ನೊಂದೆಡೆಗೆ ರವಾನಿಸುತ್ತೇವೆ. ಈ ಪೈಕಿ ಇತರೆಡೆಗಳಿಂದ ಮಾಹಿತಿ ಪಡೆದುಕೊಳ್ಳುವ ಪ್ರಕ್ರಿಯೆ 'ಡೌನ್‌ಲೋಡ್' ಎಂದು ಕರೆಸಿಕೊಂಡರೆ ನಾವು ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು 'ಅಪ್‌ಲೋಡ್' ಎಂದು ಗುರುತಿಸಲಾಗುತ್ತದೆ.

ಡೌನ್‌ಲೋಡ್ ಪ್ರಕ್ರಿಯೆಯಲ್ಲಿ ಬೇರೊಂದು ಕಡೆಯಲ್ಲಿರುವ ಮಾಹಿತಿಯ ಒಂದು ಪ್ರತಿ ನಮ್ಮ ಕಂಪ್ಯೂಟರ್, ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ಟಿಗೆ ಬರುತ್ತದೆ. ಇದೇರೀತಿ ನಮ್ಮ ಮಾಹಿತಿಯ ಒಂದು ಪ್ರತಿಯನ್ನು ಬೇರೊಂದು ಕಂಪ್ಯೂಟರಿಗೆ ವರ್ಗಾಯಿಸುವುದು ಅಪ್‌ಲೋಡ್ ಪ್ರಕ್ರಿಯೆಯ ಕೆಲಸ.

ಡೌನ್‌ಲೋಡ್‌ನಲ್ಲಿ ಹಲವು ವಿಧಗಳಿವೆ. ಯಾವುದೋ ಜಾಲತಾಣದಿಂದ ನಿರ್ದಿಷ್ಟ ಕಡತವನ್ನು (ತಂತ್ರಾಂಶ, ಅರ್ಜಿ ನಮೂನೆ, ಹಾಡು-ವೀಡಿಯೋ ಇತ್ಯಾದಿ) ನಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳುವ ಕೆಲಸವನ್ನಷ್ಟೇ ನಾವು ಡೌನ್‌ಲೋಡ್ ಎಂದು ಕರೆಯುತ್ತೇವೆ ನಿಜ. ಆದರೆ ಜಾಲತಾಣಗಳನ್ನು ವೀಕ್ಷಿಸುವಾಗ ಚಿತ್ರಗಳು - ಪಠ್ಯಗಳೆಲ್ಲ ನಮ್ಮ ಕಂಪ್ಯೂಟರಿಗೆ ಬರುತ್ತವಲ್ಲ, ಅದೂ ಡೌನ್‌ಲೋಡ್ ಎಂದೇ ಪರಿಗಣಿಸಲ್ಪಡುತ್ತದೆ.

ನಮ್ಮ ಕಡತವನ್ನು ಇತರರೊಡನೆ ಹಂಚಿಕೊಳ್ಳಲು ಗೂಗಲ್ ಡ್ರೈವ್‌ನಂತಹ ಜಾಲತಾಣಕ್ಕೆ ಸೇರಿಸುವುದು, ನಮ್ಮ ಜಾಲತಾಣದಲ್ಲಿರಬೇಕಾದ ಮಾಹಿತಿಯನ್ನು ತಾಣದ ಸರ್ವರ್‌ಗೆ ಏರಿಸುವುದು, ಇಮೇಲ್ ಸಂದೇಶದೊಡನೆ ಅಟ್ಯಾಚ್‌ಮೆಂಟ್ ಕಳುಹಿಸುವುದು - ಇವೆಲ್ಲ ಅಪ್‌ಲೋಡ್‌ಗೆ ಉದಾಹರಣೆಗಳು. ಇದೆಲ್ಲದರ ಜೊತೆಗೆ ನಾವು ಜಾಲತಾಣಗಳಿಗೆ ಮಾಹಿತಿ ಸೇರಿಸುವ ಯಾವುದೇ ಚಟುವಟಿಕೆಯನ್ನು ಅಪ್‌ಲೋಡ್ ಎಂದು ಕರೆಯಬಹುದು.

ಅಕ್ಟೋಬರ್ ೧೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge