ಬುಧವಾರ, ಫೆಬ್ರವರಿ 22, 2017

ಎಚ್ಚರ, ಇದು ರಾನ್ಸಮ್‌ವೇರ್!

ಟಿ. ಜಿ. ಶ್ರೀನಿಧಿ

ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!

ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು 'ರಾನ್ಸಮ್‌ವೇರ್' (Ransomware) ಎಂದು ಗುರುತಿಸಲಾಗುತ್ತದೆ ('ರಾನ್ಸಮ್‌' ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.

ತಂತ್ರಾಂಶಗಳನ್ನು - ಕಡತಗಳನ್ನು ಗೂಢಲಿಪೀಕರಣಗೊಳಿಸಿ (ಎನ್‌ಕ್ರಿಪ್ಟ್ ಮಾಡಿ) ಬಳಸಲಾಗದಂತೆ ಮಾಡುವುದು ರಾನ್ಸಮ್‌ವೇರ್ ಕಾರ್ಯವೈಖರಿ. ಕೆಡಿಸಿದ ಕಡತಗಳನ್ನು ಮತ್ತೆ ಸರಿಪಡಿಸಬೇಕಾದರೆ ನಾವು ಕೇಳಿದಷ್ಟು ದುಡ್ಡುಕೊಡಿ ಎಂದು ಈ ಕುತಂತ್ರಾಂಶ ರೂಪಿಸಿದವರು ಬೇಡಿಕೆಯಿಡುತ್ತಾರೆ. ಕಂಪ್ಯೂಟರಿಗೆ - ಅದರಲ್ಲಿನ ಕಡತಗಳಿಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿಟ್ಟು ಅದೇನೆಂದು ಹೇಳಲು ಹಣಕೇಳುವ ಉದಾಹರಣೆಗಳೂ ಇವೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಜೊತೆಗೆ ಸ್ಮಾರ್ಟ್ ಟೀವಿಗಳಲ್ಲೂ ರಾನ್ಸಮ್‌ವೇರ್ ಹಾವಳಿ ಕಂಡುಬಂದಿದೆಯಂತೆ.

ಈ ಕುತಂತ್ರಾಂಶದ ಬಲೆಗೆ ಬೀಳದಿರಲು ಕೆಲ ಸೂತ್ರಗಳಿವೆ. ಅಪರಿಚಿತರು ಕಳಿಸಿದ ಇಮೇಲ್-ಮೆಸೇಜುಗಳ ಮೂಲಕವಾಗಲಿ ಸಂಶಯಾಸ್ಪದ ಜಾಲತಾಣಗಳಿಂದಾಗಲಿ ಏನನ್ನೂ ಡೌನ್‌ಲೋಡ್ ಮಾಡದಿರುವುದು ರಾನ್ಸಮ್‌ವೇರ್ ನಿಂದ ಪಾರಾಗುವ ಮೊದಲ ಹೆಜ್ಜೆ. ನಮ್ಮ ಮಾಹಿತಿಯನ್ನು ಕಾಲಕಾಲಕ್ಕೆ ಬ್ಯಾಕಪ್ ಮಾಡಿಡುವುದು ಹಾಗೂ ಸೂಕ್ತ ಆಂಟಿವೈರಸ್ ತಂತ್ರಾಂಶ ಬಳಸುವುದು ಕೂಡ ಒಳ್ಳೆಯ ಯೋಚನೆಗಳೇ.

ಜುಲೈ ೨, ೨೦೧೬ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಪ್ರಕಾಶ. ಆರ್ ಹೇಳಿದರು...

SAR Value ಎಂದರೇನು ವಿವರಿಸಿ.

badge