ಭಾನುವಾರ, ಜನವರಿ 15, 2017

ಜೆನ್‍ಫೋನ್ ಮ್ಯಾಕ್ಸ್‌ನ ಮೂರನೇ ಆವೃತ್ತಿ [ವೀಡಿಯೋ ಕೂಡ ಇದೆ!]

ಇಜ್ಞಾನ ವಿಶೇಷ


ತೈವಾನ್ ಮೂಲದ ತಂತ್ರಜ್ಞಾನ ಸಂಸ್ಥೆ ಏಸಸ್ ರೂಪಿಸುತ್ತಿರುವ ಜೆನ್‌ಫೋನ್ ಸರಣಿಯ ಸ್ಮಾರ್ಟ್‌ಫೋನುಗಳು ಕಳೆದ ಕೆಲವರ್ಷಗಳಿಂದ ನಮ್ಮ ದೇಶದಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿವೆ. ವಿವಿಧ ಬೆಲೆಗಳಲ್ಲಿ ವಿವಿಧ ವೈಶಿಷ್ಟ್ಯಗಳೊಡನೆ ದೊರಕುವ ಈ ಸರಣಿಯ ಫೋನುಗಳ ಪೈಕಿ ಜೆನ್‌ಫೋನ್ ಮ್ಯಾಕ್ಸ್‌ನದು ವಿಶೇಷ ಸ್ಥಾನ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯದಿಂದಲೇ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಬೇರೆ ಮೊಬೈಲುಗಳನ್ನು ಚಾರ್ಜ್ ಮಾಡುವ ತನ್ನ ವೈಶಿಷ್ಟ್ಯದಿಂದಲೂ ಸಾಕಷ್ಟು ಹೆಸರುಮಾಡಿದೆ.

ಸುಮಾರು ಹತ್ತುಸಾವಿರ ರೂಪಾಯಿಗಳ ಆಸುಪಾಸಿನ ದರದಲ್ಲಿ ಮಾರುಕಟ್ಟೆಗೆ ಬಂದಿದ್ದ ಜೆನ್‌ಫೋನ್ ಮ್ಯಾಕ್ಸ್‌ನ ಮೊದಲೆರಡು ಆವೃತ್ತಿಗಳನ್ನು ಈ ಹಿಂದೆ ಇಜ್ಞಾನದಲ್ಲಿ ಪರಿಚಯಿಸಲಾಗಿತ್ತು [ಓದಿ: ಜೆನ್‌ಫೋನ್ ಮ್ಯಾಕ್ಸ್ ಇದೀಗ ಇನ್ನಷ್ಟು ಶಕ್ತಿಶಾಲಿ!]. ಪ್ರಸ್ತುತ ಲೇಖನದ ವಸ್ತು ಇದೇ ಸರಣಿಯ ಹೊಸ ಪರಿಚಯವಾದ ಜೆನ್‍ಫೋನ್ ೩ ಮ್ಯಾಕ್ಸ್.

ಈ ಸರಣಿಯ ಹಿಂದಿನ ಎರಡು ಮಾದರಿಗಳಂತೆ ಹೆಚ್ಚು ಸಾಮರ್ಥ್ಯದ ಬ್ಯಾಟರಿಯೇ ಜೆನ್‍ಫೋನ್ ೩ ಮ್ಯಾಕ್ಸ್‌ನ ಮುಖ್ಯಾಂಶವೂ ಹೌದು. ಈ ಫೋನಿನಲ್ಲಿರುವ ೪೧೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಸುಮಾರು ೧೭ ಗಂಟೆಗಳ ಕಾಲದ ಥ್ರೀಜಿ ಸಂಭಾಷಣೆಗೆ ಸಾಕು ಎನ್ನುವುದು ಏಸಸ್‌ನ ಹೇಳಿಕೆ (ಗಮನಿಸಿ: ಜೆನ್‍ಫೋನ್ ಮ್ಯಾಕ್ಸ್ ಹಿಂದಿನ ಆವೃತ್ತಿಗಳಲ್ಲಿ ೫೦೦೦ ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇತ್ತು). ಹಿಂದಿನ ಮಾದರಿಗಳಂತೆ ಈ ಫೋನನ್ನೂ ಪವರ್‍‍ಬ್ಯಾಂಕ್‍ನಂತೆ ಬಳಸುವುದು, ಬೇರೆ ಮೊಬೈಲನ್ನು ಚಾರ್ಜ್ ಮಾಡುವುದು ಸಾಧ್ಯ.

ಜೆನ್‍ಫೋನ್ ೩ ಮ್ಯಾಕ್ಸ್‌ನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಫೋನಿನ ಆಕರ್ಷಕ ರಚನೆ. ಹಿಂದಿನ ಆವೃತ್ತಿಯಲ್ಲಿದ್ದ ಪ್ಲಾಸ್ಟಿಕ್ ಕವಚದ ಬದಲು ಈ ಮಾದರಿಯಲ್ಲಿ ಲೋಹವನ್ನು ಬಳಸಲಾಗಿದೆ. ಅಷ್ಟೇ ಅಲ್ಲ, ಅಂಚುಗಳಲ್ಲಿ ಬಾಗಿರುವ (ಕಾಂಟೂರ್ಡ್) ೨.೫ಡಿ ಗಾಜಿನ ಟಚ್ ಸ್ಕ್ರೀನ್ ಕೂಡ ಈ ಫೋನಿನ ಮೆರುಗನ್ನು ಹೆಚ್ಚಿಸಿದೆ. ೫.೫ ಇಂಚಿನ ಫುಲ್ ಎಚ್‍ಡಿ ಪರದೆಯಲ್ಲಿ ಚಿತ್ರಗಳು ಬಹಳ ಸ್ಪಷ್ಟವಾಗಿ ಮೂಡುತ್ತವೆ. ಪರದೆಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಹೆಚ್ಚಿನ ಸ್ಥಳ ವ್ಯರ್ಥವಾಗಿಲ್ಲದಿರುವುದೂ ವಿಶೇಷವೇ.


ಈ ಹಿಂದಿನ ಜೆನ್‍ಫೋನ್‍ಗಳ ಹೋಲಿಕೆಯಲ್ಲಿ ಜೆನ್‍ಫೋನ್ ೩ ಮ್ಯಾಕ್ಸ್‌ನ ಕ್ಯಾಮೆರಾ ಸಾಕಷ್ಟು ಉತ್ತಮವಾಗಿದೆ. ೧೬ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ೮ ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳಲ್ಲಿ ಚೆಂದದ ಚಿತ್ರ ಹಾಗೂ ವೀಡಿಯೋಗಳನ್ನು ಸೆರೆಹಿಡಿಯಬಹುದು. ಸಹಾಯಕ್ಕೆ ಎಲ್ಇಡಿ ಫ್ಲಾಶ್ ಹಾಗೂ ಲೇಸರ್ ಫೋಕಸ್ ಕೂಡ ಇದೆ. ಎಚ್‍ಡಿಆರ್ ಚಿತ್ರಗಳು ಹಿಂದಿನ ಮಾದರಿಗಳಿಗಿಂತ ಬಹಳ ಸೊಗಸಾಗಿ ಮೂಡುತ್ತವೆ. ಪೂರ್ವನಿರ್ಧಾರಿತ ಮೋಡ್‍ಗಳಷ್ಟೇ ಅಲ್ಲ, ಮ್ಯಾನ್ಯುಯಲ್ ಮೋಡ್ ಕಾರ್ಯಾಚರಣೆಯೂ ಉತ್ತಮವಾಗಿದೆ.

ನಾವು ಪರೀಕ್ಷಿಸಿದ ಮಾದರಿಯಲ್ಲಿ (ZC553KL) ೧.೪ ಗಿಗಾಹರ್ಟ್ಸ್ (ಕ್ವಾಲ್‍ಕಾಮ್ ಎಸ್೪೩೦) ಪ್ರಾಸೆಸರ್, ೩ ಜಿಬಿ ರ್‍ಯಾಮ್ ಹಾಗೂ ೩೨ ಜಿಬಿ ಶೇಖರಣಾ ಸಾಮರ್ಥ್ಯ ಇತ್ತು. ಹೈಬ್ರಿಡ್ ಸಿಮ್ ಸ್ಲಾಟ್ ಇರುವುದರಿಂದ ಮೆಮೊರಿ ಕಾರ್ಡ್ ಬಳಸುವುದಾದರೆ ಒಂದೇ ಸಿಮ್ ಉಪಯೋಗಿಸುವುದು ಸಾಧ್ಯ. ಇತರ ಜೆನ್‍ಫೋನ್‌ಗಳಂತೆ ಇಲ್ಲೂ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಹಾಗೂ ಜೆನ್ ಯುಐ ಮೇಲುಹೊದಿಕೆ ಬಳಕೆಯಾಗಿದೆ. ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ಇದೆ: ನಮ್ಮ ಪರೀಕ್ಷೆಯಲ್ಲಿ ಅದರ ಕಾರ್ಯನಿರ್ವಹಣೆ ಸಾಧಾರಣವಾಗಿತ್ತು.    

ಈ ಮಾದರಿಯ (ZC553KL) ಬೆಲೆ ರೂ. ೧೮,೯೯೯. ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯ (ಜ. ೧೫, ೨೦೧೭) ಶೇ. ೧೦ರ ರಿಯಾಯಿತಿಯೊಡನೆ ರೂ. ೧೬,೯೯೯ಕ್ಕೆ ದೊರಕುತ್ತಿದೆ. ನೋಡಲು, ಕೈಲಿ ಹಿಡಿಯಲು, ಬಳಸಲು ಉತ್ತಮವಾದ ಫೋನ್ ಆದರೂ ಅದರಲ್ಲಿರುವ ಸೌಲಭ್ಯಗಳಿಗೆ ಬೆಲೆ ಕೊಂಚ ಜಾಸ್ತಿಯಾಯಿತು ಎನಿಸುತ್ತದೆ.

ಕಾಮೆಂಟ್‌ಗಳಿಲ್ಲ:

badge