ಸೋಮವಾರ, ಜನವರಿ 30, 2017

ಮೊಬೈಲ್ ಫೋನ್‍ಗೂ 'ಸೆಲ್'ಗೂ ಏನು ಸಂಬಂಧ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಇನ್ನು ಕೆಲವರು ಈ ಹೆಸರನ್ನು ಇನ್ನೂ ಹ್ರಸ್ವಗೊಳಿಸಿ 'ಸೆಲ್' ಎಂದಷ್ಟೇ ಕರೆಯುವುದೂ ಉಂಟು.

ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್‌ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ!

ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ 'ಕೋಶ', ಅಂದರೆ 'ಸೆಲ್'ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ 'ಸೆಲ್' ಫೋನ್ ಎಂದು ಹೆಸರು ಬರಲು ಕಾರಣ.

ನಾವು ಮಾತನಾಡುತ್ತಿರುವಾಗ ಒಂದು 'ಸೆಲ್'ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್‌ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್‌ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ.

ಹೀಗಿದ್ದರೂ ಕೂಡ ಎರಡನೆಯ ಸೆಲ್‌ನಲ್ಲಿ ಸೂಕ್ತ ಸಾಮರ್ಥ್ಯದ ಮೊಬೈಲ್ ಸಂಕೇತ ದೊರಕದಿದ್ದರೆ, ಅಥವಾ ಅದರ ಪೂರ್ಣ ಸಾಮರ್ಥ್ಯವನ್ನು ಇತರ ಬಳಕೆದಾರರು ಈಗಾಗಲೇ ಬಳಸುತ್ತಿದ್ದರೆ ನಮ್ಮ ಕರೆ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುತ್ತದೆ.

'ಕಾಲ್ ಡ್ರಾಪ್' ಎಂದು ಕರೆಯುವುದು ಇದನ್ನೇ. ಸೆಲ್‌ಗಳ ನಡುವೆ ಕರೆ ವರ್ಗಾವಣೆಯಾಗುವಾಗ, ನಾವಿರುವ ಸೆಲ್‌ನಲ್ಲಿ ಬಳಕೆದಾರರ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿಯಾದಾಗ, ಸಿಗ್ನಲ್ ದೊರಕದ ಕೋಣೆ / ಕಟ್ಟಡದ ಒಳಗೆ ಹೋದಾಗ, ಹ್ಯಾಂಡ್‌ಸೆಟ್ ಸಮಸ್ಯೆಯಿಂದ ಅಥವಾ ಬೇರೆ ಇನ್ನಾವುದೇ ಕಾರಣದಿಂದ ಮೊಬೈಲ್ ಸಂಕೇತಕ್ಕೆ ಅಡಚಣೆಯಾದಾಗಲೆಲ್ಲ ಕಾಲ್ ಡ್ರಾಪ್ ಆಗುವುದು ಸಾಧ್ಯ.
ಇದನ್ನೂ ಓದಿ: 'ಕಾಲ್ ಡ್ರಾಪ್' ಕಾಲ
ಆಗಸ್ಟ್ ೧೨, ೨೦೧೬ರ  ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge