ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ: 'ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!'

ಸೋಮವಾರ, ಡಿಸೆಂಬರ್ 11, 2017

ಡೂಪ್ಲಿಕೇಟ್ ಡಾಟ್ ಕಾಮ್!

ಟಿ. ಜಿ. ಶ್ರೀನಿಧಿ


ಬಹುಮಾನದ ಆಮಿಷವನ್ನೋ ಖಾತೆ ಸ್ಥಗಿತಗೊಳಿಸುವ ಬೆದರಿಕೆಯನ್ನೋ ಒಡ್ಡಿ ನಮ್ಮ ಖಾಸಗಿ ಮಾಹಿತಿ ಕದಿಯಲು ಪ್ರಯತ್ನಿಸುವವರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಇಂತಹ ಕುತಂತ್ರಿಗಳ ಗಾಳಕ್ಕೆ ಸಿಲುಕಿ ಮೋಸಹೋದವರ ಬಗೆಗೂ ಪತ್ರಿಕೆಗಳಲ್ಲಿ ಓದಿದ್ದೇವೆ.

ಇವರೆಲ್ಲ ಮೋಸಹೋದದ್ದು ಹೇಗೆಂದು ಹುಡುಕಿಕೊಂಡು ಹೊರಟರೆ ಸಿಗುವ ಉತ್ತರಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು - ಇಮೇಲ್ ಅಥವಾ ಎಸ್ಸೆಮ್ಮೆಸ್‌ನಲ್ಲಿ ಬಂದ ಕೊಂಡಿಯನ್ನು ಕ್ಲಿಕ್ ಮಾಡಿದ್ದು, ಆಗ ತೆರೆದುಕೊಂಡ ತಾಣದಲ್ಲಿ ಅದು ಕೇಳಿದ ಮಾಹಿತಿಯನ್ನೆಲ್ಲ ಭರ್ತಿಮಾಡಿದ್ದು!

ಗುರುವಾರ, ಡಿಸೆಂಬರ್ 7, 2017

ಇದ್ದರೆ ಕೊಂಚವೇ ಎಚ್ಚರ, ವೈ-ಫೈ ಬಳಕೆ ಬಲು ಸರಳ!

ಟಿ. ಜಿ. ಶ್ರೀನಿಧಿ

ನಮ್ಮ ದೇಶದಲ್ಲಿ ಅಂತರಜಾಲ ಬಳಕೆ ಕಳೆದೊಂದು ವರ್ಷದಲ್ಲಿ ಹೆಚ್ಚಾಗಿದೆಯಲ್ಲ, ಆ ಏರಿಕೆಯ ಪ್ರಮಾಣ ಬಹುಶಃ ಜಾಗತಿಕ ಮಟ್ಟದಲ್ಲೇ ಒಂದು ದಾಖಲೆಯಿರಬೇಕು. ಮೊಬೈಲ್ ಡೇಟಾ ಬಳಕೆಯ ಪ್ರಮಾಣದಲ್ಲಂತೂ ವಿಶ್ವದ ರಾಷ್ಟ್ರಗಳ ಪೈಕಿ ನೂರೈವತ್ತನೇ ಸ್ಥಾನದಲ್ಲಿದ್ದ ಭಾರತ ಕಳೆದ ಒಂದೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿದೆ.

ಸದ್ಯ ಅಂತರಜಾಲ ಬಳಕೆಯ ದೊಡ್ಡದೊಂದು ಪಾಲು ಮೊಬೈಲ್ ಫೋನುಗಳ ಮೂಲಕವೇ ಆಗುತ್ತದೆ, ನಿಜ. ಆದರೆ ವೈ-ಫೈ (ನಿಸ್ತಂತು ಅಂತರಜಾಲ) ಬಳಕೆಯ ಪ್ರಮಾಣವೂ ಸಣ್ಣದೇನಲ್ಲ. ಕಚೇರಿಯ ಲ್ಯಾಪ್‌ಟಾಪ್, ಮನೆಯ ಸ್ಮಾರ್ಟ್ ಟೀವಿ, ಡೆಸ್ಕ್‌ಟಾಪ್, ಟ್ಯಾಬ್ಲೆಟ್ ಸೇರಿದಂತೆ ಅದೆಷ್ಟೋ ಸಾಧನಗಳು ಅಂತರಜಾಲದೊಡನೆ ಬೆಸೆದುಕೊಳ್ಳಲು ವೈ-ಫೈ ಸಂಪರ್ಕವನ್ನೇ ಅವಲಂಬಿಸಿರುತ್ತವೆ.

ಸೋಮವಾರ, ಡಿಸೆಂಬರ್ 4, 2017

ಗ್ಯಾಜೆಟ್ ಜಗತ್ತಿಗೂ ಉಂಟು ಗಣಿಗಾರಿಕೆಯ ನಂಟು

ಟಿ. ಜಿ. ಶ್ರೀನಿಧಿ


ನೀವು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಪೀರಿಯಾಡಿಕ್ ಟೇಬಲ್, ಅರ್ಥಾತ್ ಆವರ್ತ ಕೋಷ್ಟಕವೆಂಬ ಹೆಸರು ನಿಮಗೆ ನೆನಪಿರುವುದು ಸಾಧ್ಯ. ಜಗತ್ತಿನಲ್ಲಿರುವ ಅಷ್ಟೂ ಧಾತುಗಳನ್ನು (ಎಲಿಮೆಂಟ್ಸ್) ಕ್ರಮಬದ್ಧವಾಗಿ ಜೋಡಿಸಿಟ್ಟು ಅವುಗಳೆಲ್ಲದರ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಈ ಕೋಷ್ಟಕದ ವೈಶಿಷ್ಟ್ಯ.

ಸಾಧಾರಣ ರಾಸಾಯನಿಕ ವಿಧಾನಗಳ ಮೂಲಕ ಇವನ್ನು ಇನ್ನಷ್ಟು ಸರಳ ಪದಾರ್ಥಗಳನ್ನಾಗಿ ವಿಭಜಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಧಾತುಗಳ ಪ್ರಮುಖ ಲಕ್ಷಣ. ಇವು ಲೋಹ, ಅಲೋಹ, ಅನಿಲ ಮುಂತಾದ ಹಲವಾರು ಗುಂಪುಗಳ ಪೈಕಿ ಯಾವುದಕ್ಕಾದರೂ ಸೇರಿರುವುದು ಸಾಧ್ಯ.

ಶುಕ್ರವಾರ, ಡಿಸೆಂಬರ್ 1, 2017

ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!

ಡಿಸೆಂಬರ್ ೧, ಪುಸ್ತಕಗಳನ್ನು ಇ-ಲೋಕಕ್ಕೆ ಕರೆತಂದ 'ಪ್ರಾಜೆಕ್ಟ್ ಗುಟನ್‌ಬರ್ಗ್' ಯೋಜನೆ ಪ್ರಾರಂಭವಾದ ದಿನ. ಇಂತಹ ಡಿಜಿಟಲ್ ಗ್ರಂಥಾಲಯಗಳ ಕುರಿತು ಇಜ್ಞಾನದಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಲೇಖನವನ್ನು ನಿಮ್ಮ ವಿರಾಮದ ಓದಿಗಾಗಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.

ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.

ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್‌ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.

ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್‌ಬರ್ಗ್ ಹೆಸರೇ ಇರುವುದು ವಿಶೇಷ.

ಭಾನುವಾರ, ನವೆಂಬರ್ 26, 2017

ಆಡಳಿತ, ತಂತ್ರಜ್ಞಾನ ಮತ್ತು ಕನ್ನಡ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ನವೆಂಬರ್ ೨೬, ೨೦೧೭ರಂದು ನಡೆದ 'ಕನ್ನಡ ತಂತ್ರಜ್ಞಾನ' ಗೋಷ್ಠಿಯಲ್ಲಿ ಇ-ಆಡಳಿತ ಅನುಷ್ಠಾನದ ಸಮಸ್ಯೆಗಳ ಕುರಿತು ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಕೆ. ಎ. ದಯಾನಂದ, ಕ.ಆ.ಸೇ.

ಕ್ಷೀರ ಸಾಗರದೊಳಗಿದ್ದು ಹಂಸ ಹಾಲ ಬಯಸಲುಂಟೆ
ಕಡಲೊಳಗಿದ್ದ ಕಪ್ಪೆ ಜಲವ ಬಯಸಲುಂಟೆ
ಪುಷ್ಪದೊಳಗಿದ್ದ ದುಂಬಿ ಪರಿಮಳವ ಅರಸಲುಂಟೆ
ಎದೆಂತಯ್ಯ ತಾ ಲಿಂಗದೊಳಗಿದ್ದು ಬೇರೆ ಇತರ
ಕಾವ್ಯದೊಳಗಿರ್ಪ ಭ್ರಾಂತರನೇನೆಂಬೆನಯ್ಯ ಗುಹೇಶ್ವರ

20ನೇ ಶತಮಾನದಲ್ಲಿ ಬಳಸುವ ಜನಸಂಖ್ಯೆ ನಶಿಸಿದ ಕಾರಣ ಅಥವ ಜನ ಭಾಷೆಯನ್ನು ಸಂವಹನಕ್ಕೆ ಬಳಸದೇ ಇರುವುರಿಂದ 110 ಭಾಷೆಗಳು ನಾಶವಾಗಿವೆ. ಆಧುನಿಕತೆಯ ವೇಗದಲ್ಲಿ ಈ ನಾಶದ ಪ್ರಕ್ರಿಯೆಯು ಕೂಡ ವೇಗ ಪಡೆದುಕೊಂಡಿದ್ದು 21ನೇ ಶತಮಾನದ ಮೊದಲ ಅವಧಿಯಲ್ಲಿನ ಕೇವಲ 16 ವರ್ಷಗಳಲ್ಲಿ 12 ಭಾಷೆಗಳು ನಾಶವಾಗಿವೆ.

ಭಾಷೆಯನ್ನು ಕೇವಲ ಜನರಾಡುವ ಭಾಷೆಯಾಗಿ ಹೆಚ್ಚು ಬಳಕೆ ಮಾಡಿದ ಮಾತ್ರಕ್ಕೆ ಭಾಷೆ ಉಳಿಯುವುದೂ ಇಲ್ಲ ಬೆಳೆಯುವುದೂ ಇಲ್ಲ. ಭಾಷೆಯನ್ನು ನಮ್ಮ ಸಂವಹನದ ಮತ್ತು ಆರ್ಥಿಕ ಬದುಕಿನ ಭಾಗವಾಗಿ ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡದ ಬಳಕೆ' ಗೋಷ್ಠಿಯಲ್ಲಿ ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಉದಯ ಶಂಕರ ಪುರಾಣಿಕ  

ನಿರಂತರ ಸಂಶೋಧನೆ ಮತ್ತು ಆವಿಷ್ಕಾರಗಳಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಹೇಗೆ
೧) ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು
೨) ಅರಣ್ಯ ಸಂರಕ್ಷಣೆ ಮಾಡಬಹುದು
೩) ದೀರ್ಘ ಕಾಲದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಬಹುದು
೪) ಮಳೆ, ಬೆಳೆ, ಪಶುರೋಗ ಮುನ್ಸೂಚನೆ ಮೊದಲಾದ ಮಾಹಿತಿಯನ್ನು ರೈತರಿಗೆ ನೀಡಬಹುದು
೫) ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವಂತೆ ಮಾಡಬಹುದು

ಈ ೫ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವ ಮೊದಲು, ಇದುವರೆಗೆ ತಂತ್ರಜ್ಞಾನ ಮತ್ತು ಸೇವೆಗಳಲ್ಲಿ ಕನ್ನಡದ ಸೌಲಭ್ಯ ಇರುವುದನ್ನು ಕುರಿತು ತಿಳಿದುಕೊಳ್ಳೋಣ.

ಗುರುವಾರ, ನವೆಂಬರ್ 23, 2017

ಈ ವಾರದ ವಿಶೇಷ: ಸೆಲ್ಫಿಗೆಂದೇ ಹೊಸ ಫೋನು

ಅಭಿಷೇಕ್ ಜಿ. ಎಸ್.

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನಿನ ಅತಿಮುಖ್ಯ ಉಪಯೋಗಗಳಲ್ಲಿ ಸ್ಥಾನಪಡೆದುಕೊಂಡಿರುವುದು ಸೆಲ್ಫಿ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ ಮಾಡುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಇದೀಗ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. [ಓದಿ: ಸೆಲ್ಫಿ ಸುತ್ತಮುತ್ತ]

ಸೆಲ್ಫಿ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ ಸೆಲ್ಫಿ ಛಾಯಾಗ್ರಹಣವನ್ನೇ ಪ್ರಮುಖಾಂಶವಾಗಿಟ್ಟುಕೊಂಡ ಮೊಬೈಲುಗಳೂ ಮಾರುಕಟ್ಟೆಗೆ ಬರುತ್ತಿವೆ. ತೈವಾನಿನ ಟೆಕ್ ದಿಗ್ಗಜ ಏಸುಸ್ ಇತ್ತೀಚೆಗೆ ಪರಿಚಯಿಸಿರುವ 'ಜೆನ್‌ಫೋನ್ ೪ ಸೆಲ್ಫಿ ಪ್ರೋ' ಇಂತಹ ಫೋನುಗಳಿಗೊಂದು ಉದಾಹರಣೆ.

ಶುಕ್ರವಾರ, ನವೆಂಬರ್ 17, 2017

ವಾರಾಂತ್ಯ ವಿಶೇಷ: ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಟೈಪಿಂಗ್ ಮಾತ್ರವೇ ಅಲ್ಲ!

ಟಿ. ಜಿ. ಶ್ರೀನಿಧಿ


ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡದ ನಾಳೆಗಳದೇ ಮಾತು. ನಮ್ಮ ಭಾಷೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು, ವಿಶ್ವದ ಇತರ ಭಾಷೆಗಳಲ್ಲಿ ಲಭ್ಯವಿರುವ ಸವಲತ್ತುಗಳು ನಮ್ಮ ಭಾಷೆಯಲ್ಲೂ ಸಿಗಬೇಕು ಎನ್ನುವಂತಹ ಹೇಳಿಕೆಗಳು ಅತಿಹೆಚ್ಚುಬಾರಿ ಕೇಳಸಿಗುವುದು ಬಹುಶಃ ಈ ತಿಂಗಳಲ್ಲೇ ಇರಬೇಕು.

ತಂತ್ರಜ್ಞಾನದಲ್ಲಿ ಕನ್ನಡ ಎಂದರೇನು?
badge