'ಕೊರೊನಾಲಜಿ' ಅಂಕಣಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯಲ್ಲಿ ಕನ್ನಡದ 'ಕೊರೊನಾಲಜಿ' ಅಂಕಣ ಸ್ಥಾನಪಡೆದಿದೆ.

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ (Falling Walls Science Breakthroughs of the Year) ಪಟ್ಟಿಯಲ್ಲಿ ಕನ್ನಡದ 'ಕೊರೊನಾಲಜಿ' ಅಂಕಣ ಸ್ಥಾನಪಡೆದಿದೆ. ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ವಿಜ್ಞಾನ ಸಂವಹನಕಾರ ಟಿ. ಜಿ. ಶ್ರೀನಿಧಿ ಈ ಅಂಕಣವನ್ನು ಬರೆದಿದ್ದರು.

ಜರ್ಮನಿಯಲ್ಲಿ ನಡೆಯುವ ಪ್ರತಿಷ್ಠಿತ ಫಾಲಿಂಗ್ ವಾಲ್ಸ್ ವಾರ್ಷಿಕ ಸಮ್ಮೇಳನದ ಅಂಗವಾಗಿ ಈ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕೊರೊನಾವೈರಸ್ ಜಾಗತಿಕ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷದ ಸಮ್ಮೇಳನವನ್ನು ನ.೧ರಿಂದ ೧೦ರವರೆಗೆ ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ. ಜರ್ಮನಿಯ ಬರ್ಲಿನ್ ಗೋಡೆಯನ್ನು ಕೆಡವಲಾಗಿದ್ದರ ನೆನಪಿನಲ್ಲಿ ನಡೆಯುವ ಈ ಸಮ್ಮೇಳನವು ವಿಜ್ಞಾನ ಪ್ರಸಾರಕ್ಕಿರುವ ಅಡ್ಡಗೋಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಈ ಸಮ್ಮೇಳನದ ಅಂಗವಾಗಿ ವರ್ಷದ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು ವಿಶ್ವದೆಲ್ಲೆಡೆಯ ಹಲವು ವಿಜ್ಞಾನಿಗಳು, ತಂತ್ರಜ್ಞರು, ವಿಜ್ಞಾನ ಸಂವಹನಕಾರರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಅಂತಿಮ ಸುತ್ತಿನ ಈ ಪಟ್ಟಿಯಿಂದ ೧೦ ವಿಜೇತರನ್ನು ಆಯ್ಕೆಮಾಡಿ ನವೆಂಬರ್ ೮ರಂದು ಪ್ರಕಟಿಸಲಾಗುವುದು.

೨೦೨೦ರ ಪ್ರಾರಂಭದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಕೋವಿಡ್-೧೯ ಕುರಿತ ಅನೇಕ ಪ್ರಶ್ನೆಗಳು ನಮ್ಮೆಲ್ಲರ ಮನದಲ್ಲೂ ಇದ್ದವು. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರನೀಡುವ ಹಾಗೂ ಸಾಧ್ಯವಾದಷ್ಟೂ ಅಧಿಕೃತ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ವಿಜಯ ಕರ್ನಾಟಕ ಪತ್ರಿಕೆಯು 'ಕೊರೊನಾಲಜಿ' ದೈನಿಕ ಅಂಕಣವನ್ನು ಪ್ರಾರಂಭಿಸಿತು. ಏಪ್ರಿಲ್ ೧, ೨೦೨೦ರಂದು ಪ್ರಾರಂಭವಾದ ಈ ಅಂಕಣವು ಸತತ ೪೦ ದಿನಗಳ ಕಾಲ ದಿನಕ್ಕೆ ಒಂದರಂತೆ ಕೋವಿಡ್-೧೯ ಕುರಿತ ವಿಷಯಗಳನ್ನು ಓದುಗರಿಗೆ ಪರಿಚಯಿಸಿತು. ವಿಜ್ಞಾನ ಲೇಖಕ ಟಿ. ಜಿ. ಶ್ರೀನಿಧಿ ಬರೆದ ಈ ಅಂಕಣಕ್ಕೆ ಹಿರಿಯ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮ ಹಾಗೂ ವೈದ್ಯ-ಲೇಖಕ ಡಾ. ವಿ. ಎಸ್. ಕಿರಣ್ ಮಾರ್ಗದರ್ಶನ ನೀಡಿದ್ದರು.

ಈ ಅಂಕಣ ಪ್ರಾರಂಭಿಸಿದ್ದರ ಹಿನ್ನೆಲೆಯ ಬಗ್ಗೆ ವಿಜಯ ಕರ್ನಾಟಕ ಸಂಪಾದಕ ಶ್ರೀ ಹರಿಪ್ರಕಾಶ್ ಕೋಣೆಮನೆ ಹೇಳುವುದು ಹೀಗೆ: "ಸುಳ್ಳುಸುದ್ದಿ ಹರಡುವುದು ಎಷ್ಟು ಸುಲಭ ಎಂಬುದು ವಾಟ್ಸಾಪ್‌, ಫೇಸ್‌ಬುಕ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಬಳಕೆ ಕಾರಣಕ್ಕೂ, ಅಂತಹ ಸುಳ್ಳುಸುದ್ದಿ ಎಷ್ಟು ಅಪಾಯಕಾರಿ ಎಂಬುದು ಕೊರೊನಾ ಕುರಿತು ಹುಟ್ಟಿರುವ ಭಯ ಮತ್ತು ಮಿಥ್ಯೆಗಳಿಂದಾಗಿಯೂ ಇತ್ತೀಚೆಗೆ ಎಲ್ಲರಿಗೆ ಮನವರಿಕೆ ಆಯಿತು. ವಿಶೇಷ ಎಂದರೆ ಕೊರೊನಾ ಕುರಿತು ಹುಟ್ಟಿಕೊಂಡ ಸುಳ್ಳುಸುದ್ದಿಗಳ ಸವಾಲು ಪತ್ರಿಕೆಗಳನ್ನೂ ಕಾಡದೆ ಬಿಡಲಿಲ್ಲ. ಪತ್ರಿಕೆಗಳಿಗೆ ಎದುರಾದ ಸಮಸ್ಯೆಯನ್ನು ನಾವು ಪ್ರಯಾಸಪಟ್ಟು ನಿವಾರಿಸಿಕೊಂಡೆವು. ಅದೇ ಕಾರಣಕ್ಕೆ ಪ್ರಿಂಟ್‌ ಈಸ್‌ ಪ್ರೂಫ್‌ ಎಂಬ ಅನುಭವ ಮಾತನ್ನು ಇನ್ನಷ್ಟು ಗಟ್ಟಿಗೊಳಿಸಲು ತೀರ್ಮಾನಿಸಿದೆವು. ಆಗ ಕೊರೊನಾ ಕುರಿತು ಹೆಚ್ಚು ಜವಾಬ್ದಾರಿಯಿಂದ ವರದಿ ಮಾಡಲು ವಿಜಯ ಕರ್ನಾಟಕ ಪತ್ರಿಕೆ ತೀರ್ಮಾನಿಸಿತು. ಕೊರೊನಾ ಸಂದರ್ಭವನ್ನು ನೆಪವಾಗಿಟ್ಟುಕೊಂಡು ನಮ್ಮ ಓದುಗರಿಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನಿಖರವಾಗಿ, ತಾರ್ಕಿಕವಾಗಿ ವಿಕದಲ್ಲಿ ನೀಡಲುತೀರ್ಮಾನಿಸಿದೆವು. ಆಗ ಹುಟ್ಟಿಕೊಂಡದ್ದು ಈ ಕೊರೊನಾಲಜಿ ಎಂಬ ಮಾಹಿತಿಪೂರ್ಣ, ಚಿಕ್ಕಚೊಕ್ಕ ದೈನಂದಿನ ಅಂಕಣದ ಕಲ್ಪನೆ. ಕೊರೊನಾಲಜಿ ನಿಜಾರ್ಥದಲ್ಲಿ ವೈರಸ್‌ಗಳ ವಿಧ, ಹುಟ್ಟು, ವ್ಯಾಪಕತೆ, ಗುಣಸ್ವಭಾವ, ಪ್ರಯೋಜನ, ಪರಿಣಾಮ, ಪರಿಹಾರದ ಉಪಕ್ರಮಗಳು, ಔಷಧೋಪಚಾರಗಳು, ವೈವಿಧ್ಯಮಯ ಚಿಕಿತ್ಸಾ ವಿಧಾನ ಇತ್ಯಾದಿಗಳ ಕ್ರೋನಾಲಜಿ ಎಂಬಂತಾಯಿತು."

ವಿಜಯ ಕರ್ನಾಟಕ ಮುದ್ರಿತ ಆವೃತ್ತಿಯಷ್ಟೇ ಅಲ್ಲದೆ ಪತ್ರಿಕೆಯ ಜಾಲತಾಣ ಹಾಗೂ ಇಜ್ಞಾನ ಡಾಟ್ ಕಾಮ್‌ನಲ್ಲೂ ಪ್ರಕಟವಾದ ಈ ಬರಹಗಳ ಸಂಕಲನವನ್ನು ಗೂಗಲ್ ಪ್ಲೇ ಬುಕ್ಸ್‌‌ನಲ್ಲಿ ಉಚಿತವಾಗಿ ಓದಬಹುದಾಗಿದೆ (ಕೊಂಡಿ).

'ಕೊರೊನಾಲಜಿ' ಅಂಕಣಕಾರ ಟಿ. ಜಿ. ಶ್ರೀನಿಧಿ ೨೦೦೭ರಲ್ಲಿ ಪ್ರಾರಂಭಿಸಿದ ಇಜ್ಞಾನ ಜಾಲತಾಣದ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ವಿಷಯಗಳನ್ನು ಕನ್ನಡದ ಓದುಗರಿಗೆ ತಲುಪಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪತ್ರಿಕಾ ಬರಹ ಹಾಗೂ ಪುಸ್ತಕಗಳ ಮೂಲಕವೂ ಪರಿಚಿತರಾಗಿರುವ ಅವರು ವಿಜ್ಞಾನ-ತಂತ್ರಜ್ಞಾನದ ಇ-ಪುಸ್ತಕಗಳು ಹಾಗೂ ವೀಡಿಯೋಗಳನ್ನು ಕೂಡ ಪ್ರಕಟಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಹಾಗೂ ಇಜ್ಞಾನ ಜಾಲತಾಣಕ್ಕಾಗಿ ಇಂಡಿಯನ್ ಬ್ಲಾಗರ್ ಅವಾರ್ಡ್ಸ್ ಗೌರವ ಪಡೆದಿದ್ದಾರೆ.

ಜರ್ಮನಿಯ ಫಾಲಿಂಗ್ ವಾಲ್ಸ್ ಪ್ರತಿಷ್ಠಾನ ಪ್ರಕಟಿಸುವ ಪ್ರಮುಖ ವೈಜ್ಞಾನಿಕ ಬೆಳವಣಿಗೆಗಳ ಪಟ್ಟಿಯಲ್ಲಿ ಕನ್ನಡದ 'ಕೊರೊನಾಲಜಿ' ಅಂಕಣ ಸ್ಥಾನಪಡೆದಿದೆ.
ಕೊರೊನಾಲಜಿ ಈಗ ಇ-ಪುಸ್ತಕ ರೂಪದಲ್ಲಿ!

Related Stories

No stories found.
ಇಜ್ಞಾನ Ejnana
www.ejnana.com