ಈ ಸರಣಿಯಲ್ಲಿ ಪ್ರಕಟವಾದ ಎಲ್ಲ ಬರಹಗಳನ್ನೂ ಒಂದೇ ಕಡೆ ಓದಲು ಅನುಕೂಲವಾಗುವಂತೆ ಅದರ ಇ-ಪುಸ್ತಕವನ್ನು ಸಿದ್ಧಪಡಿಸಲಾಗಿದೆ
ಈ ಸರಣಿಯಲ್ಲಿ ಪ್ರಕಟವಾದ ಎಲ್ಲ ಬರಹಗಳನ್ನೂ ಒಂದೇ ಕಡೆ ಓದಲು ಅನುಕೂಲವಾಗುವಂತೆ ಅದರ ಇ-ಪುಸ್ತಕವನ್ನು ಸಿದ್ಧಪಡಿಸಲಾಗಿದೆejnana.com

ಕೊರೊನಾಲಜಿ ಈಗ ಇ-ಪುಸ್ತಕ ರೂಪದಲ್ಲಿ!

ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ದೈನಿಕ ಅಂಕಣದ ಬರಹಗಳ ಸಂಕಲನವನ್ನು ಇದೀಗ ಉಚಿತ ಇ-ಪುಸ್ತಕವಾಗಿ ನಿಮ್ಮ ಮೊಬೈಲಿನಲ್ಲಿ ಓದಬಹುದು.

ಕಳೆದ ವರ್ಷ ಯಾರಾದರೂ "ವೈರಸ್ ಬಂತು" ಎಂದಿದ್ದರೆ ನಾವು "ಕಂಪ್ಯೂಟರಿಗೋ ಮೊಬೈಲಿಗೋ?" ಎಂದು ಕೇಳಿರುತ್ತಿದ್ದೆವೇನೋ. ಆದರೆ ಕೆಲವು ತಿಂಗಳುಗಳಿಂದ ಇಡೀ ವಿಶ್ವವನ್ನೇ ಕೊರೆಯುತ್ತಿರುವ ಕೊರೊನಾ ಚಿಂತೆ ನಮ್ಮ ಚಿಂತನೆಯಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಹುಷಾರಿಲ್ಲದ ಸಮಯ ಬಿಟ್ಟಂತೆ ನಾವು ಯಾವತ್ತಿಗೂ ಗಂಭೀರವಾಗಿ ತೆಗೆದುಕೊಳ್ಳದ, ಒಂದು ರೀತಿಯಲ್ಲಿ 'ಟೇಕನ್-ಫಾರ್-ಗ್ರಾಂಟೆಡ್' ಆಗಿದ್ದ ಜೀವಜಗತ್ತು ಕೂಡ ಇದೀಗ ನಮ್ಮಲ್ಲಿ ಕುತೂಹಲ ಮೂಡಿಸುತ್ತಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕಾಳಜಿ, ಪ್ರಪಂಚದಲ್ಲಿ ಇದೇನು ನಡೆಯುತ್ತಿದೆ ಎಂಬ ಆತಂಕ - ಹೀಗೆ ಕಾರಣ ಏನೇ ಇದ್ದರೂ, ಈ ಕುತೂಹಲ ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

ಕಣ್ಣಿಗೆ ಕಾಣದಷ್ಟು ಸಣ್ಣ ರೋಗಾಣುಗಳು ಇಷ್ಟೆಲ್ಲ ಅನಾಹುತ ಮಾಡುವುದು ಹೇಗೆ? ಅವು ದಾಳಿಯಿಟ್ಟಿರುವ ಬೆನ್ನಲ್ಲೇ ಸಾಲುಸಾಲಾಗಿ ಕೇಳಸಿಗುತ್ತಿರುವ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಸದ್ಯದ ಮತ್ತು ಮುಂದೆ ಬರಬಹುದಾದ ಇಂಥದ್ದೇ ಇನ್ನಿತರ ಆತಂಕಗಳನ್ನು ಎದುರಿಸಲು ನಾವು ಸಜ್ಜಾಗುವುದು ಹೇಗೆ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟವರಿಗೆ ಸಹಾಯವಾಗುವಂತೆ ಒಂದಷ್ಟು ಮಾಹಿತಿ ಸಿದ್ಧಪಡಿಸುವಂತೆ ವಿಜಯ ಕರ್ನಾಟಕ ಸಂಪಾದಕರಾದ ಶ್ರೀ ಹರಿಪ್ರಕಾಶ ಕೋಣೆಮನೆ ಮಾರ್ಚ್ ಕೊನೆಯಲ್ಲೊಂದು ದಿನ ನನಗೆ ಹೇಳಿದರು. ಮಾಹಿತಿಯ ಈ 'ಗುಳಿಗೆ'ಗಳನ್ನು ದಿನವೂ ಒಂದರಂತೆ ಪ್ರಕಟಿಸುವುದು ಅವರ ಉದ್ದೇಶವಾಗಿತ್ತು.

ಇದು ನನ್ನಿಂದ ಸಾಧ್ಯವೇ ಎಂದು ಯೋಚಿಸುತ್ತಿದ್ದಾಗ ಹಿರಿಯ ವಿಜ್ಞಾನ ಸಂವಹನಕಾರ ಶ್ರೀ ಕೊಳ್ಳೇಗಾಲ ಶರ್ಮ ಹಾಗೂ ವೈದ್ಯ-ಲೇಖಕ ಡಾ. ವಿ. ಎಸ್. ಕಿರಣ್‌ರಿಂದ ಸಹಾಯದ ಆಶ್ವಾಸನೆ ದೊರೆತು 'ಕೊರೊನಾಲಜಿ' ದೈನಿಕ ಅಂಕಣ ಶುರುವಾಯಿತು. ಏಪ್ರಿಲ್ ೧, ೨೦೨೦ರಂದು ಪ್ರಾರಂಭವಾದ ಈ ಅಂಕಣ ಸತತವಾಗಿ ನಲವತ್ತು ದಿನಗಳ ಕಾಲ ಪ್ರಕಟವಾಯಿತು. ಇದಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆಯೂ ಬಂತು. ಈಗ, ಈ ಸರಣಿಯಲ್ಲಿ ಪ್ರಕಟವಾದ ಎಲ್ಲ ಬರಹಗಳನ್ನೂ ಒಂದೇ ಕಡೆ ಓದಲು ಅನುಕೂಲವಾಗುವಂತೆ, ಅದರ ಇ-ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಗೂಗಲ್ ಪ್ಲೇ ಬುಕ್ಸ್ ಮೂಲಕ ನೀವು ಈ ಪುಸ್ತಕವನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಉಚಿತವಾಗಿ ಓದಬಹುದು.

ಪುಸ್ತಕ ಓದಲು ಇಲ್ಲಿ ಕ್ಲಿಕ್ ಮಾಡಿ: https://tinyurl.com/coronalogy

ಈ ಅಂಕಣವನ್ನು "ಬರೆದದ್ದು" ನಾನಾದರೂ ಅದರ ಪರಿಕಲ್ಪನೆ ಶ್ರೀ ಕೋಣೆಮನೆಯವರದ್ದು. ಬರಹಗಳಲ್ಲಿದ್ದ ಕುಂದುಕೊರತೆಗಳಿಗೆ ಔಷಧ ಕೊಟ್ಟು ಸರಿಮಾಡಿದ್ದು ಶ್ರೀ ಶರ್ಮ ಹಾಗೂ ಡಾ. ಕಿರಣ್. ಇ-ಪುಸ್ತಕದ ರೂಪದಲ್ಲಿ ಈ ಸಂಕಲನ ಹೊರಬರಲು ನೆರವಾಗಿದ್ದು ಇಜ್ಞಾನದ ಅಭಿಷೇಕ್. ಎಂದಿನಂತೆ ಬೆಂಬಲವಾಗಿ ನಿಂತವರು ಇಜ್ಞಾನ ಟ್ರಸ್ಟ್‌ನ ಎಲ್ಲ ಟ್ರಸ್ಟೀಗಳು. ಅವರೆಲ್ಲರಿಗೆ, ಹಾಗೂ ಅಂಕಣದ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಅದನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಸಹಾಯ ಮಾಡಿದ ಎಲ್ಲ ಓದುಗರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಮ್ಮ ಮುಂದಿನ ಪ್ರಯತ್ನಗಳಿಗೂ ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

ಕೊರೊನಾಲಜಿ ಸರಣಿಯ ಬಿಡಿ ಲೇಖನಗಳನ್ನು ನೀವು ಇಲ್ಲೂ ಓದಬಹುದು: https://www.ejnana.com/coronalogy

Related Stories

No stories found.
ಇಜ್ಞಾನ Ejnana
www.ejnana.com