ಬೆನ್ನುಮೂಳೆ ಇರುವ ಎಲ್ಲಾ ಪ್ರಾಣಿಗಳಲ್ಲೂ ರಕ್ತದ ಬಣ್ಣವನ್ನು ಕೆಂಪು ಮಾಡುವ ಹಿಮೋಗ್ಲೋಬಿನ್ ಇದೆ. ಹಿಮೋಗ್ಲೋಬಿನ್ ಇಲ್ಲದ ರಕ್ತಕ್ಕೆ ಬಣ್ಣ ಇರುವುದಿಲ್ಲ.
ಬೆನ್ನುಮೂಳೆ ಇರುವ ಎಲ್ಲಾ ಪ್ರಾಣಿಗಳಲ್ಲೂ ರಕ್ತದ ಬಣ್ಣವನ್ನು ಕೆಂಪು ಮಾಡುವ ಹಿಮೋಗ್ಲೋಬಿನ್ ಇದೆ. ಹಿಮೋಗ್ಲೋಬಿನ್ ಇಲ್ಲದ ರಕ್ತಕ್ಕೆ ಬಣ್ಣ ಇರುವುದಿಲ್ಲ.Image by Arek Socha from Pixabay

ರಕ್ತ ಕೆಂಪು ಬಣ್ಣದಲ್ಲೇ ಇರಬೇಕೆ?

ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ನೇ ಏಕಿರಬೇಕು? ಬೇರೆ ಬಣ್ಣ ಕೊಡುವ ವಸ್ತುಗಳು ಏಕಿರಬಾರದು?

“ಬೆನ್ನುಮೂಳೆ ಇರುವ ಎಲ್ಲಾ ಪ್ರಾಣಿಗಳಲ್ಲೂ ರಕ್ತದ ಬಣ್ಣವನ್ನು ಕೆಂಪು ಮಾಡುವ ಹಿಮೋಗ್ಲೋಬಿನ್ ಇದೆ. ಹಿಮೋಗ್ಲೋಬಿನ್ ಇಲ್ಲದ ರಕ್ತಕ್ಕೆ ಬಣ್ಣ ಇರುವುದಿಲ್ಲ” ಎಂದು ಶಾಲೆಯ ಪುಸ್ತಕಗಳು ಹೇಳುತ್ತವೆ. ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ನೇ ಏಕಿರಬೇಕು? ಬೇರೆ ಬಣ್ಣ ಕೊಡುವ ವಸ್ತುಗಳು ಏಕಿರಬಾರದು? ಹೀಗೊಂದು ಕುತೂಹಲಕಾರಿ ಪ್ರಶ್ನೆ ಮೂಡಿದ್ದು ತೀರಾ ಇತ್ತೀಚೆಗೆ.

ದಕ್ಷಿಣಧ್ರುವದ ಅಂಟಾರ್ಕ್ಟಿಕಾದ ಅತ್ಯಂತ ಶೀತಲ ನೀರಿನಲ್ಲಿ ವಾಸಿಸುವ ಐಸ್-ಫಿಶ್ ಎಂಬ ಮೀನಿದೆ. ಸಾಮಾನ್ಯ ಮೀನುಗಳಿಗಿಂತ ಇವುಗಳ ಮೈ ಅತೀ ನುಣುಪು; ಮೂಳೆಗಳು ಪಾರದರ್ಶಕ. ಗಾಜಿನಬೊಂಬೆಯಂತಹ ಈ ಮೀನುಗಳ ರಕ್ತ ಸಂಪೂರ್ಣ ಬಿಳಿ. ಬೆನ್ನುಮೂಳೆ ಇರುವ ಪ್ರಾಣಿಗಳ ಪೈಕಿ ಕೆಂಪು ಬಣ್ಣದ ರಕ್ತ ಇಲ್ಲದ ಏಕೈಕ ಜೀವಿ ಈ ಐಸ್-ಫಿಶ್. ಇವುಗಳ ರಕ್ತದಲ್ಲಿ ಕೆಂಪು ರಕ್ತಕಣಗಳಾಗಲೀ, ಹಿಮೋಗ್ಲೋಬಿನ್ ಆಗಲೀ ಇಲ್ಲ. ಈ ವಿಶಿಷ್ಟ ಮೀನು ತನ್ನ ದೊಡ್ಡ ಗಾತ್ರದ ಕಿವಿರುಗಳಿಂದ, ನುಣುಪಾದ ಚರ್ಮದಿಂದ ಆಕ್ಸಿಜನ್ ಅನ್ನು ಸೀದಾ ಸೆಳೆದುಕೊಳ್ಳುತ್ತದೆ.

ಹಿಮೋಗ್ಲೋಬಿನ್ ಇಲ್ಲದೆ ಜೀವಿಸುವ ಸಾಮರ್ಥ್ಯ ಇದಕ್ಕೆ ಬಂದದ್ದಾದರೂ ಹೇಗೆ? ಹಿಮೋಗ್ಲೋಬಿನ್ ಜೀವವಿಕಾಸದ ಯಾವ ಹಂತದಲ್ಲಿ ಜೀವಿಗಳನ್ನು ಸೇರಿತು? ಇಂತಹ ಪ್ರಶ್ನೆಗಳನ್ನು ಐಸ್-ಫಿಶ್ ವಿಜ್ಞಾನಿಗಳಲ್ಲಿ ಹುಟ್ಟುಹಾಕಿತು! ಅವಕ್ಕೆ ವಿಜ್ಞಾನಿಗಳು ಕೆಲವು ರೋಚಕ ಉತ್ತರಗಳನ್ನೂ ಪಡೆದಿದ್ದಾರೆ.

ಮೊದಲು ವಿಜ್ಞಾನಿಗಳು ಐಸ್-ಫಿಶ್ ಜೆನೆಟಿಕ್ ರಚನೆಯನ್ನು ಗಮನಿಸಿದರು. ಕೆಂಪು ರಕ್ತ ಹೊಂದಿರುವ ಇತರ ಮೀನುಗಳ ಜೆನೆಟಿಕ್ ರಚನೆಯ ಜೊತೆಗೆ ಐಸ್-ಫಿಶ್ ಅನ್ನು ಹೋಲಿಸಿದಾಗ ಹೆಚ್ಚು ವ್ಯತ್ಯಾಸಗಳು ಕಂಡುಬರಲಿಲ್ಲ. ಆದರೆ, ಕೋಶಗಳಿಗೆ ಆಕ್ಸಿಜನ್ ಸುಲಭವಾಗಿ ಒಯ್ಯಬಲ್ಲ, ಮುಕ್ತ-ಆಕ್ಸಿಜನ್ ನಿಂದ ಆಗಬಹುದಾದ ಅಪಾಯ ತಡೆಯಬಲ್ಲ ಕೆಲವು ಕಿಣ್ವಗಳು ಐಸ್-ಫಿಶ್ ನಲ್ಲಿ ಅಧಿಕವಾಗಿದ್ದವು. ಅಂದರೆ, ಹಿಮೋಗ್ಲೋಬಿನ್ ತಯಾರಿಸಬಲ್ಲ ಜೀನ್ ಗಳು ಐಸ್-ಫಿಶ್ ನಲ್ಲಿ ಇದ್ದರೂ ನಿಷ್ಕ್ರಿಯವಾಗಿದ್ದವು. ಇನ್ಯಾವ ಜೀವಿಗಳಲ್ಲಿ ಹೀಗೆಯೇ ಇರಬಹುದು ಎಂದು ವಿಜ್ಞಾನಿಗಳು ಯೋಚಿಸಿದರು. ಬೆನ್ನುಮೂಳೆ ಇಲ್ಲದ, ಕೆಂಪು ರಕ್ತದ ಸುಳಿವೇ ಇಲ್ಲದ ಹಲವಾರು ಪ್ರಾಥಮಿಕ ಜೀವಿಗಳಲ್ಲಿ ಕೂಡ ಹಿಮೋಗ್ಲೋಬಿನ್ ತಯಾರಿಸಬಲ್ಲ ಜೀನ್ ಗಳು ಕಂಡುಬಂದವು. ಏಡಿಯಂತಹ ಕೆಲವು ಜೀವಿಗಳಲ್ಲಿ ಹೀಮೊಗ್ಲೋಬಿನ್ ಬದಲಿಗೆ ರಕ್ತಕ್ಕೆ ನೀಲಿ ಬಣ್ಣ ನೀಡುವ ಹೀಮೋಸೈನಿನ್ ಎಂಬ ವಸ್ತು ಇರುತ್ತದೆ. ಇಂತಹ ಜೀವಿಗಳಲ್ಲೂ ಹಿಮೋಗ್ಲೋಬಿನ್ ಉತ್ಪಾದಿಸಬಲ್ಲ ಜೀನ್ ಗಳು ಇದ್ದವು! ಬೇಕಿಲ್ಲದ ವಸ್ತುಗಳನ್ನು ಉತ್ಪಾದಿಸಬಲ್ಲ ಜೀನ್ ಗಳು ಏಕಿರಬೇಕು ಎಂಬುದು ವಿಜ್ಞಾನಿಗಳ ಕುತೂಹಲ.

ಉತ್ತರ ಹುಡುಕುತ್ತಾ ಹೊರಟ ವಿಜ್ಞಾನಿಗಳು ತಲುಪಿದ್ದು ಜೀವವಿಕಾಸದ ಆರಂಭದ ಹಂತಗಳನ್ನು. ಅಮೀಬಾದಂತಹ ಏಕಕೋಶಜೀವಿಗಳಲ್ಲಿ ಕೂಡ ಆಕ್ಸಿಜನ್ ಬಳಸಿಕೊಂಡು ಹಲವಾರು ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತವೆ. ಆಕ್ಸಿಜನ್ ಹಿಡಿದಿಟ್ಟುಕೊಳ್ಳಲು ಪಾರ್-ಫಯ್ರಿನ್ ಎಂಬ ವರ್ತುಲಾಕಾರದ ವಿಶಿಷ್ಟ ರಾಸಾಯನಿಕವನ್ನು ಏಕಾಣುಜೀವಿಗಳು ಸೇರಿಸಿಕೊಂಡವು. ಪಾರ್-ಫಯ್ರಿನ್ ವರ್ತುಲದ ಒಳಗೆ ಕಬ್ಬಿಣ ಅಥವಾ ತಾಮ್ರದಂತಹ ಖನಿಜ ಸೇರಿದಾಗ ಆಕ್ಸಿಜನ್ ಹಿಡಿದಿಟ್ಟುಕೊಳ್ಳುವ ಶಕ್ತಿ ತುಂಬಾ ಹೆಚ್ಚುತ್ತದೆ. ಇಂತಹ ಖನಿಜ-ಪಾರ್-ಫಯ್ರಿನ್ ಸಂಯುಕ್ತದಿಂದ ಏಕಕೋಶಜೀವಿಗಳಲ್ಲಿ ಆಕ್ಸಿಜನ್ ಬಳಕೆ ಹೆಚ್ಚಾಯಿತು. ಕಾಲ ಕಳೆಯುತ್ತಾ ಏಕಕೋಶಜೀವಿಗಳು ಬಹುಕೋಶಜೀವಿಗಳಾಗುವಲ್ಲಿ ಈ ಖನಿಜ-ಪಾರ್-ಫಯ್ರಿನ್ ಸಂಯುಕ್ತ ದೊಡ್ಡ ಪಾತ್ರ ವಹಿಸಿರಬೇಕು. ಆದರೆ ಪಾರ್-ಫಯ್ರಿನ್ ಗಳ ಕೆಲಸ ಒಂದಿಷ್ಟು ಏರುಪೇರಾದರೂ ಮುಕ್ತ ಆಕ್ಸಿಜನ್ ಬಿಡುಗಡೆಯಾಗಿ ಕೋಶದಲ್ಲಿ ಓಡಾಡಿ ಹಾವಳಿ ಮಾಡುತ್ತಿತ್ತು. ಹಾಗಾಗಿ, ಪಾರ್-ಫಯ್ರಿನ್ ಸುತ್ತ ಪ್ರೋಟೀನ್ ಗೋಡೆ ಬೆಳೆಯಿತು. ಹಿಮೋಗ್ಲೋಬಿನ್ ಕೂಡ ಇಂತಹ ಸಂಯುಕ್ತವೇ. ಇದರಲ್ಲಿ ಹೀಮ್ ಎನ್ನುವ ಕಬ್ಬಿಣ-ಪಾರ್-ಫಯ್ರಿನ್ ಸುತ್ತಾ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆಯಿದೆ. ಹಿಮೋಗ್ಲೋಬಿನ್ ಅಣುಗಳು ಒಂದರ ಜೊತೆಗೆ ಮತ್ತೊಂದು ಬೆಸೆದುಕೊಂಡು ಆಕ್ಸಿಜನ್ ಸರಬರಾಜನ್ನು ಮತ್ತಷ್ಟು ಸಮರ್ಥಗೊಳಿಸಬಲ್ಲವು. ಜೀವವಿಕಾಸದ ಆರಂಭದಿಂದ ಇದೊಂದು ಉಪಯುಕ್ತ ಸಂಯುಕ್ತ ಎಂದು ನಿಸರ್ಗಕ್ಕೆ ಅನಿಸಿರಬೇಕು. ಹಾಗಾಗಿ ಹಿಮೋಗ್ಲೋಬಿನ್ ತಯಾರಿ ಮಾಡುವ ಜೀನ್ ಗಳನ್ನು ಪ್ರಕೃತಿ ನಾಶ ಮಾಡದೇ ಅದನ್ನು ಎಲ್ಲಾ ರೀತಿಯ ಜೀವಿಗಳಲ್ಲೂ ಉಳಿಸಿರಬೇಕು ಎಂದು ವಿಜ್ಞಾನಿಗಳ ಅಂದಾಜು.

ಬಹುಕೋಶಜೀವಿಗಳ ವಿಕಾಸವಾದಂತೆಲ್ಲಾ ಹಲವಾರು ಪದರಗಳ ಕೋಶಗಳು ಬೆಳೆದವು. ಆಗ ಒಳಪದರಗಳ ಕೋಶಗಳಿಗೆ ವಾತಾವರಣದ ನೇರ ಸಂಪರ್ಕ ಇಲ್ಲದಾಯಿತು. ಅಂತಹ ಸಂದರ್ಭದಲ್ಲಿ ನೆರವಿಗೆ ಬಂದದ್ದು ಹಿಮೋಗ್ಲೋಬಿನ್. ತನ್ನ ಮಡಿಲಲ್ಲಿ ಆಕ್ಸಿಜನ್ ತುಂಬಿಕೊಂಡ ಹಿಮೋಗ್ಲೋಬಿನ್ ಅಂಚೆಯಣ್ಣನ ಹಾಗೆ ಒಳಪದರಗಳ ಕೋಶಗಳಿಗೆ ಅದನ್ನು ಒಯ್ಯುತ್ತಿತ್ತು. ಆಕ್ಸಿಜನ್ ಸಮಸ್ಯೆಗೆ ಪರಿಹಾರ ದೊರೆತದ್ದರಿಂದ ಕೋಶಗಳ ಸಂಖ್ಯೆ, ಪದರಗಳು ಹೆಚ್ಚುತ್ತಲೇ ಹೋದವು; ಅಂಗಾಂಗಗಳು ಬೆಳೆದವು; ಬಹುಕೋಶಜೀವಿಗಳು ಕಾಲಾಂತರದಲ್ಲಿ ಬಹು-ಅಂಗಗಳ ಜೀವಿಗಳಾದವು.

ಆಕ್ಸಿಜನ್ ಹೇರಳವಾಗಿದ್ದಾಗ ಮಾತ್ರ ಹಿಮೋಗ್ಲೋಬಿನ್ ಕೆಲಸದ ಸಾಮರ್ಥ್ಯ ಚೆನ್ನಾಗಿರುತ್ತದೆ. ಕಡಿಮೆ ಆಕ್ಸಿಜನ್ ಇರುವಲ್ಲಿ ಅದರ ಕೆಲಸ ಅಷ್ಟಕ್ಕಷ್ಟೇ! ಆಕ್ಸಿಜನ್ ಮಟ್ಟ ಕಡಿಮೆ ಇರುವ ಆಳಸಮುದ್ರದ ಪರಿಸ್ಥಿತಿಗಳಲ್ಲಿ ವಾಸಿಸುವ ಆಕ್ಟೋಪಸ್ ನಂತಹ ಜೀವಿಗಳಲ್ಲಿ ಹಿಮೋಗ್ಲೋಬಿನ್ ಬದಲಿಗೆ ರಕ್ತದಲ್ಲಿ ನೇರವಾಗಿ ಕರಗಬಲ್ಲ ನೀಲಿಬಣ್ಣದ ಹಿಮೋಸೈನಿನ್ ಇರುತ್ತದೆ. ಅನೇಕ ಬಗೆಯ ಕೀಟಗಳಂತೂ ಇವುಗಳ ಹಂಗೇ ಬೇಡ ಎನ್ನುವಂತೆ ಶರೀರದೊಳಗೆ ಗಾಳಿಕೊಳವೆಗಳನ್ನು ನಿರ್ಮಿಸಿಕೊಂಡು ಸೀದಾ ಅಂಗಾಂಗಗಳಿಗೆ ಆಕ್ಸಿಜನ್ ತಲುಪಿಸುತ್ತವೆ!

ಜೀವಿಗಳಿಗೆ ಎಷ್ಟೇ ಪ್ರಯೋಜನಕಾರಿಯಾದರೂ ಹಿಮೋಗ್ಲೋಬಿನ್ ಅಪಾಯಕಾರಿ ಸಂಯುಕ್ತ! ಪಾರ್-ಫಯ್ರಿನ್ ಮೂಲತಃ ಶರೀರದ ಸಹಜ ರಾಸಾಯನಿಕವಲ್ಲ. ನಿಸರ್ಗ ಪಾರ್-ಫಯ್ರಿನ್ ನ ಉಪಯುಕ್ತತೆ ಕಂಡು ಅದನ್ನು ಏಕಕೋಶಜೀವಿಯೊಳಗೆ ಸೇರಿಸಿದ್ದು. ಹಾಗಾಗಿ, ಪಾರ್-ಫಯ್ರಿನ್ ಅನ್ನು ಮುಕ್ತವಾಗಿ ಬಿಟ್ಟಾಗ ಅದು ಶರೀರದ ಅಂಗಗಳಿಗೆ ಘಾಸಿ ಮಾಡಬಹುದು. ಅದಕ್ಕೇ ನಮ್ಮ ಶರೀರ ಪಾರ್-ಫಯ್ರಿನ್ ಸುತ್ತಾ ಗ್ಲೋಬಿನ್ ಕೋಟೆ ಕಟ್ಟಿ, ಹಿಮೋಗ್ಲೋಬಿನ್ ಅನ್ನು ಕೆಂಪು ರಕ್ತಕಣಗಳ ಒಳಗೆ ಜೋಪಾನವಾಗಿ ಬಂಧಿಸಿಟ್ಟಿದೆ. ಕೆಂಪು ರಕ್ತಕಣಗಳು ಸುಮಾರು 120 ದಿನಗಳ ಕಾಲ ಕೆಲಸ ಮಾಡುತ್ತವೆ. ಅವು ಒಡೆದಾಗ ಹೀಮ್ ಮತ್ತು ಗ್ಲೋಬಿನ್ ಬೇರೆಬೇರೆ ಆಗುತ್ತವೆ. ಮುಕ್ತ ಹೀಮ್ ಅಪಾಯಕಾರಿಯಾದ್ದರಿಂದ ಯಕೃತ್ತು ಹ್ಯಾಪ್ಟೋಗ್ಲೋಬಿನ್ ಎಂಬ ವಿಶೇಷ ರಾಸಾಯನಿಕ ಬಳಸಿ ಹೀಮ್ ಅನ್ನು ಜೋಪಾನವಾಗಿ ಬಂಧಿಸಿ, ಅದನ್ನು ಬಿಲಿವರೆಡಿನ್ ಎಂಬ ಹಸಿರು ರಾಸಾಯನಿಕವನ್ನಾಗಿ ಬದಲಾಯಿಸಿ ಶರೀರದಿಂದ ಹೊರಹಾಕುತ್ತದೆ. ಈ ಕೆಲಸ ಏನಾದರೂ ಏರುಪೇರಾದರೆ ಮುಕ್ತ ಹೀಮ್ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗೆ, ಉಪಯುಕ್ತವಾದರೂ ಅಪಾಯಕಾರಿಯಾದ ಹೀಮ್ ಅನ್ನು ಪ್ರೋಟೀನ್ ಗೋಡೆಯೊಳಗೆ ಬಂಧಿಸಿ, ಅದನ್ನು ಕೆಂಪು ರಕ್ತಕಣಗಳ ಕೋಟೆಯಲ್ಲಿ ಸುರಕ್ಷಿತವಾಗಿ ಇಟ್ಟ ಪ್ರಕೃತಿಯ ವಿನ್ಯಾಸ ವಿಸ್ಮಯಕಾರಿ; ರಾಕ್ಷಸನನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದ ಮಂತ್ರವಾದಿಯ ಕತೆಯಂತೆ!

ನ್ಯೂಗಿನಿ ಪ್ರಾಂತದ ಕೆಲವು ಹಲ್ಲಿಗಳ ರಕ್ತದ ಬಣ್ಣ ಕಡುಹಸಿರು! ಅವುಗಳ ರಕ್ತದಲ್ಲಿ ಹಿಮೋಗ್ಲೋಬಿನ್ ಬದಲಿಗೆ ಬಿಲಿವರೆಡಿನ್ ಇರುವುದನ್ನು ಜೀವವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಬಿಲಿವರೆಡಿನ್ ಗೆ ಆಕ್ಸಿಜನ್ ಒಯ್ಯುವ ಸಾಮರ್ಥ್ಯವೇ ಇಲ್ಲ! ಹೀಗಿದ್ದರೂ ಬಿಲಿವರೆಡಿನ್ ಅನ್ನು ಅವುಗಳ ಶರೀರ ಏಕೆ ಉಳಿಸಿಕೊಂಡಿದೆ ಎಂದು ತಿಳಿಯದು! ಪ್ರಾಯಶಃ ಆ ಪ್ರಾಂತ್ಯದ ಯಾವುದೋ ಸೋಂಕಿನಿಂದ ಆ ಹಲ್ಲಿಗಳನ್ನು ಬಿಲಿವರೆಡಿನ್ ಕಾಪಾಡುತ್ತದೆ ಎಂದು ಅಂದಾಜು.

ಒಟ್ಟಿನಲ್ಲಿ, ಅಂಟಾರ್ಕ್ಟಿಕದ ಐಸ್-ಫಿಶ್ ರಕ್ತದಲ್ಲಿ ಹಿಮೋಗ್ಲೋಬಿನ್ ಏಕಿಲ್ಲ ಎಂಬ ಪ್ರಶ್ನೆಯ ಬೆನ್ನು ಹತ್ತಿದ ವಿಜ್ಞಾನಿಗಳು ಜೀವವಿಕಾಸದ ಪರ್ಯಟನೆ ಮಾಡಬೇಕಾಯಿತು. ಇಷ್ಟಾಗಿಯೂ, ಐಸ್-ಫಿಶ್ ನಲ್ಲಿ ಹಿಮೋಗ್ಲೋಬಿನ್ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರವಂತೂ ದೊರಕಲೇ ಇಲ್ಲ. ಪ್ರಾಯಶಃ ವಿಕಾಸದ ಯಾವುದೋ ಹಂತದಲ್ಲಿ ಜೆನೆಟಿಕ್ ಅಪಘಾತದಿಂದ ಐಸ್-ಫಿಶ್ ಗಳಲ್ಲಿ ಹಿಮೋಗ್ಲೋಬಿನ್ ಉತ್ಪಾದಿಸುವ ಪ್ರಕ್ರಿಯೆಗೆ ಅಡೆತಡೆ ಆಗಿದ್ದಿರಬಹುದು. ಆದರೆ, ಆ ಪ್ರದೇಶದ ಅತ್ಯಂತ ಶೀತಲ ನೀರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಆಕ್ಸಿಜನ್ ಕರಗಿರುತ್ತದೆ. ಹೀಗಾಗಿ, ಐಸ್-ಫಿಶ್ ಗಳು ಕಿವಿರುಗಳ ಗಾತ್ರವನ್ನು ಹಿಗ್ಗಿಸಿ, ಚರ್ಮವನ್ನು ಮತ್ತಷ್ಟು ನುಣುಪಾಗಿಸಿ ಅವುಗಳ ಮೂಲಕವೇ ಆಕ್ಸಿಜನ್ ಅನ್ನು ನೇರವಾಗಿ ಹೀರಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿರಬೇಕು. ಜೀವಿಯ ಒಡಲಿಗೆ ಆಕ್ಸಿಜನ್ ತಲುಪಿಸುವುದು ಪ್ರಕೃತಿಯ ಧ್ಯೇಯ. ಅದಕ್ಕೆ ಹೀಮ್ ಎಂಬ ಅಪಾಯಕಾರಿ ಸಂಯುಕ್ತದ ನೆರವು ಪಡೆಯಬೇಕಿತ್ತು. ಈ ಪ್ರಸಂಗದಲ್ಲಿ ಐಸ್-ಫಿಶ್ ಹೀಮ್ ನ ಹಂಗಿಲ್ಲದೇ ಆಕ್ಸಿಜನ್ ಸರಬರಾಜನ್ನು ಪೂರೈಸಿಕೊಂಡದ್ದು ನಿಸರ್ಗಕ್ಕೆ ಭಲೇ ಎನಿಸಿರಬೇಕು. ಅಧಿಕ ಸಾಮರ್ಥ್ಯದ ಅಪಾಯಕಾರಿ ಪ್ರಕ್ರಿಯೆ ಮತ್ತು ಕಡಿಮೆ ಸಾಮರ್ಥ್ಯದ ನಿರಪಾಯಕಾರಿ ಕೆಲಸಗಳ ನಡುವೆ ಪ್ರಕೃತಿ ಕಡಿಮೆ ಅಪಾಯವನ್ನೇ ಆಯ್ದುಕೊಳ್ಳುತ್ತದೆ ಎಂಬ ವಿಜ್ಞಾನಿಗಳ ವಾದಕ್ಕೆ ಐಸ್-ಫಿಶ್ ಮತ್ತಷ್ಟು ಇಂಬು ಕೊಟ್ಟಿದೆ. ಇಷ್ಟಾಗಿಯೂ, ನಿಸರ್ಗ ಅವುಗಳ ದೇಹದಿಂದ ಹಿಮೋಗ್ಲೋಬಿನ್ ಉತ್ಪಾದಿಸುವ ಜೀನ್ ಗಳನ್ನು ಮರೆ ಮಾಡಿಲ್ಲ. ಪ್ರಕೃತಿಯ ಆಲೋಚನೆಯನ್ನು ಮನುಷ್ಯ ಬುದ್ಧಿ ಅಲ್ಪಸ್ವಲ್ಪ ಅರ್ಥ ಮಾಡಿಕೊಳ್ಳಬಹುದು; ಆದರೆ, ಅದರ ಅಗಾಧ ಸಾಮರ್ಥ್ಯವನ್ನು ಸಂಪೂರ್ಣವಾಗಿ ಗ್ರಹಿಸಿವುದು ಸಾಧ್ಯವಿಲ್ಲದ ಮಾತು!

ಜನವರಿ ೧೩, ೨೦೨೦ರ ಹೊಸ ದಿಗಂತದಲ್ಲಿ ಪ್ರಕಟವಾದ ಲೇಖನ

Why should blood be red? Is there a reason why blood can not be of a different color? To find out, read this article in Kannada written by a doctor!

Related Stories

No stories found.
logo
ಇಜ್ಞಾನ Ejnana
www.ejnana.com