ಅಂತರಜಾಲದ ಮೂಲಕ ಮೊದಲ ಮೆಸೇಜನ್ನು ಕಳಿಸಲಾಗಿದ್ದು ೧೯೬೯ರಲ್ಲಿ!
ಅಂತರಜಾಲದ ಮೂಲಕ ಮೊದಲ ಮೆಸೇಜನ್ನು ಕಳಿಸಲಾಗಿದ್ದು ೧೯೬೯ರಲ್ಲಿ!Business vector created by pikisuperstar - www.freepik.com

ಮೊದಲ ಮೆಸೇಜು ಕಳಿಸಿದ್ದು ಯಾರು?

ಅಂತರಜಾಲ ಸಂಪರ್ಕ ಬಳಸಿಕೊಂಡು ಬೇಕಾದಷ್ಟು ಮೆಸೇಜು ಕಳಿಸುವುದನ್ನು ಕಲಿತ ಮೊದಲ ತಲೆಮಾರು ನಮ್ಮದು, ಸರಿ. ಆದರೆ ಅಂತರಜಾಲದಲ್ಲಿ ಮೊತ್ತಮೊದಲ ಬಾರಿಗೆ ಮೆಸೇಜು ಕಳಿಸಿದವರು ಯಾರು?

ವಾಟ್ಸ್‌ಆಪ್, ಟೆಲಿಗ್ರಾಂ ಮತ್ತಿತರ ಓವರ್-ದ-ಟಾಪ್ (ಓಟಿಟಿ) ಆಪ್‌ಗಳ ಸಹಾಯದಿಂದ, ಅಂತರಜಾಲ ಸಂಪರ್ಕ ಬಳಸಿಕೊಂಡು ಬೇಕಾದಷ್ಟು ಮೆಸೇಜು ಕಳಿಸುವುದನ್ನು ಕಲಿತ ಮೊದಲ ತಲೆಮಾರು ನಮ್ಮದು. ಒಂದು ಎಸ್ಸೆಮ್ಮೆಸ್‌ಗೆ ಇಷ್ಟು ಪೈಸೆ ಎನ್ನುವ ಕಾಲದಿಂದ ಡೇಟಾಗೆ ದುಡ್ಡು ಕೊಡಿ, ಎಷ್ಟಾದರೂ ಮೆಸೇಜ್ ಕಳಿಸಿಕೊಳ್ಳಿ ಎನ್ನುವ ಕಾಲಕ್ಕೆ ದಿಢೀರನೆ ಬಂದು ಖುಷಿಪಟ್ಟವರೂ ನಾವೇ. ಆದರೆ ನಮಗಿಂತ ಮೊದಲು ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?

ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ೧೯೬೯ರಷ್ಟು ಹಿಂದೆಯೇ ಅಂತರಜಾಲದ ಮೂಲಕ ಸಂದೇಶವೊಂದನ್ನು ಕಳಿಸಲಾಗಿತ್ತು!

ತಮಾಷೆಯ ವಿಷಯವೆಂದರೆ ಆಗಿನ್ನೂ ಅಂತರಜಾಲಕ್ಕೆ ಆ ಹೆಸರನ್ನೇ ಇಟ್ಟಿರಲಿಲ್ಲ. 'ಅಡ್ವಾನ್ಸ್ಡ್ ರೀಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ನೆಟ್ವರ್ಕ್' (ಆರ್ಪಾನೆಟ್) ಎಂಬ ಹೆಸರಿನಲ್ಲಿ ಅಂತರಜಾಲದ ಪರಿಕಲ್ಪನೆ ಆಗಿನ್ನೂ ರೂಪುಗೊಳ್ಳುತ್ತಿತ್ತು. ಅಮೆರಿಕಾದ ರಕ್ಷಣಾ ಇಲಾಖೆಯ ನೇತೃತ್ವದಲ್ಲಿ ಹಲವು ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈ ಪರಿಕಲ್ಪನೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿದ್ದವು.

ಇಂತಹ ಸಂಸ್ಥೆಗಳ ಪೈಕಿ ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವೂ (ಯುಸಿಎಲ್‌ಎ) ಒಂದು. ಆ ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅರ್ಪಾನೆಟ್ ಬಳಸಿ ಹಲವು ಚಟುವಟಿಕೆಗಳನ್ನು ನಡೆಸಿದ್ದರು. ೧೯೬೯ರ ಅಕ್ಟೋಬರ್ ೨೯ರಂದು ಅಲ್ಲಿನ ವಿದ್ಯಾರ್ಥಿ ಚಾರ್ಲಿ ಕ್ಲೈನ್ ಎಂಬಾತ, ಪ್ರಾಧ್ಯಾಪಕ ಲಿಯೊನಾರ್ಡ್ ಕ್ಲೈನ್‌ರಾಕ್ ಮಾರ್ಗದರ್ಶನದಲ್ಲಿ, ತನ್ನ ಕಂಪ್ಯೂಟರಿನಿಂದ ಒಂದು ಸಂದೇಶ ಕಳಿಸಲು ಪ್ರಯತ್ನಿಸಿದ. ೩೫೦ ಮೈಲಿ ದೂರದ ಸ್ಟಾನ್‌ಫರ್ಡ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನಲ್ಲಿದ್ದ ಇನ್ನೊಂದು ಕಂಪ್ಯೂಟರಿಗೆ ಆ ಸಂದೇಶ ತಲುಪಬೇಕು ಎನ್ನುವುದು ಅವನ ಗುರಿಯಾಗಿತ್ತು. ಬಿಲ್ ಡುವಲ್ ಎಂಬ ತಂತ್ರಜ್ಞ ಅಲ್ಲಿ ಈತನ ಸಂದೇಶವನ್ನು ನಿರೀಕ್ಷಿಸುತ್ತಿದ್ದ.

ಕ್ಯಾಲಿಫೋರ್ನಿಯಾ ವಿವಿಯಲ್ಲಿ ಈ ಪ್ರಯೋಗಕ್ಕೆ ಬಳಕೆಯಾಗಿದ್ದು ಸಿಗ್ಮಾ ೭ ಎಂಬ ಮೈನ್‌ಫ್ರೇಮ್ ಕಂಪ್ಯೂಟರ್. ೧೨೮ ಕೆಬಿ ಮೆಮೊರಿ ಹಾಗೂ ೨೪ ಎಂಬಿ ಶೇಖರಣಾ ಸಾಮರ್ಥ್ಯ ಇದ್ದ ಈ ಕೋಣೆಗಾತ್ರದ ಕಂಪ್ಯೂಟರಿನಿಂದ ಚಾರ್ಲಿ ಕಳಿಸಲು ಬಯಸಿದ್ದ ಸಂದೇಶದಲ್ಲಿ ಇದ್ದದ್ದು ಐದೇ ಅಕ್ಷರ - 'login'.

ಆದರೆ ಮೊದಲೆರಡು ಅಕ್ಷರ ಕಳುಹಿಸುವಷ್ಟರಲ್ಲೇ ಆ ಬದಿಯ ಕಂಪ್ಯೂಟರು ಕ್ರ್ಯಾಶ್ ಆಯಿತು. ಹೀಗಾಗಿ ಚಾರ್ಲಿಯ ಸಂದೇಶದಲ್ಲಿ ಸ್ಟಾನ್‌ಫರ್ಡ್ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ಕಂಪ್ಯೂಟರಿಗೆ ತಲುಪಿದ್ದು 'lo' ಎಂಬ ಅಕ್ಷರಗಳು ಮಾತ್ರ.

ನೀವು ಅದನ್ನು ಕನ್ನಡದ 'ಲೋ' ಎಂದಾದರೂ ಓದಿಕೊಳ್ಳಿ, ಇಂಗ್ಲಿಷಿನ 'lo and behold'ನ ಪೂರ್ವಾರ್ಧವೆಂದಾದರೂ ಅಂದುಕೊಳ್ಳಿ, ಮೆಸೇಜ್ ಭಾಷೆಯಲ್ಲಿ 'lol'ನ ಒಂದು ಭಾಗ ಎಂದಾದರೂ ಕೀಟಲೆ ಮಾಡಿ, ಅಂತರಜಾಲದ ಮೂಲಕ ಕಳಿಸಲಾದ ಮೊತ್ತಮೊದಲ ಸಂದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಎರಡೇ ಅಕ್ಷರಗಳ ಈ ಅಪೂರ್ಣ ಪದ!

ಅಂತರಜಾಲದ ಮೂಲಕ ಮೊದಲ ಮೆಸೇಜನ್ನು ಕಳಿಸಲಾಗಿದ್ದು ೧೯೬೯ರಲ್ಲಿ!
ಮೊದಲ ಮೆಸೇಜಿಗೆ ಐವತ್ತು ವರ್ಷ!

Related Stories

No stories found.
logo
ಇಜ್ಞಾನ Ejnana
www.ejnana.com