ಮಾನವ ಇತಿಹಾಸದ ಅತ್ಯಂತ ದೊಡ್ಡ ಹಂತಕ ಒಂದು ಸಾಂಕ್ರಾಮಿಕ ಕಾಯಿಲೆ!
ಮಾನವ ಇತಿಹಾಸದ ಅತ್ಯಂತ ದೊಡ್ಡ ಹಂತಕ ಒಂದು ಸಾಂಕ್ರಾಮಿಕ ಕಾಯಿಲೆ!|Image by 41330 from Pixabay

ಜಗತ್ತಿನ ಅತೀ ದೊಡ್ಡ ಹಂತಕ ಯಾರು ಗೊತ್ತೇ?

ಈ ಪ್ರಶ್ನೆಗೆ ಉತ್ತರ ಕೋವಿಡ್-೧೯ ಅಂತೂ ಖಂಡಿತ ಅಲ್ಲ!

ಸೊಳ್ಳೆಗಳಿಂದ ರಕ್ಷಣೆ ಪಡೆದರೆ ಮಲೇರಿಯಾ ಬಾರದಂತೆ ಕಾಪಾಡಿಕೊಳ್ಳಬಹುದು
Credits: who.int
ಸೊಳ್ಳೆಗಳಿಂದ ರಕ್ಷಣೆ ಪಡೆದರೆ ಮಲೇರಿಯಾ ಬಾರದಂತೆ ಕಾಪಾಡಿಕೊಳ್ಳಬಹುದು

ಜಗತ್ತಿನಲ್ಲಿ ಇದುವರೆಗೆ ಅತ್ಯಂತ ಹೆಚ್ಚು ಮನುಷ್ಯರನ್ನು ಹತ್ಯೆ ಮಾಡಿರುವವರು ಯಾರು? ಮಾನವ ಇತಿಹಾಸದ ಅತ್ಯಂತ ದೊಡ್ಡ ಹಂತಕ ಒಂದು ಸಾಂಕ್ರಾಮಿಕ ಕಾಯಿಲೆ! ಕೆಲವು ಲೆಕ್ಕಾಚಾರ ಪಂಡಿತರು “ಜಗತ್ತಿನಲ್ಲಿ ಇದುವರೆಗೆ ಬದುಕಿದ್ದ ಜನರ ಪೈಕಿ ಅರ್ಧದಷ್ಟು ಜನರನ್ನು ಇದೊಂದೇ ಕಾಯಿಲೆ ಕೊಂದಿದೆ” ಎಂದು ವಾದಿಸುತ್ತಾರೆ. ಅವರು ನೀಡುವ ಬೃಹತ್ ಸಂಖ್ಯೆಯನ್ನು ತಾರ್ಕಿಕವಾಗಿ ಒಪ್ಪಲು ಸಾಧ್ಯವಿಲ್ಲದಿರಬಹುದು. ಆದರೆ, ಆ ಕಾಯಿಲೆಯಿಂದ ಇದುವರೆಗೆ ಮರಣ ಹೊಂದಿದವವರನ್ನು ಗಣಿಸಿದರೆ, ಅದೊಂದು ಬೃಹತ್ ಸಂಖ್ಯೆಯೇ ಸರಿ. ಮಾನವ ಇತಿಹಾಸದ ಅತ್ಯಂತ ದೊಡ್ಡ ಕೊಲೆಗಾರ “ಮಲೇರಿಯಾ” ಎಂಬ ಕಾಯಿಲೆ! ಇಂದಿಗೂ ಬೇರೆ ಯಾವುದೇ ಕಾಯಿಲೆಗಿಂತಲೂ ಮಲೇರಿಯಾ ಕಾರಣಕ್ಕೆ ಸಾಯುವವರ ಸಂಖ್ಯೆ ಜಗತ್ತಿನಲ್ಲಿ ಹೆಚ್ಚು.

ಮಲೇರಿಯಾಗೆ ಸುಮಾರು 5000 ವರ್ಷಗಳ ಲಿಖಿತ ಇತಿಹಾಸವಿದೆ! ಇದು ಸುಮಾರು 50,000 ವರ್ಷಗಳಿಂದ ಮಾನವನ ಪೂರ್ವಜರ ಪ್ರಭೇದಗಳನ್ನು ಕಾಡುತ್ತಿದೆ ಎಂದು ಅಭಿಪ್ರಾಯ ಪಡುವವರಿದ್ದಾರೆ! ನಾಗರಿಕತೆ ಬೆಳೆದು ಕಾಯಿಲೆಗಳನ್ನು ಅಲ್ಪಸ್ವಲ್ಪ ಅರ್ಥ ಮಾಡಿಕೊಳ್ಳುವ ಹಂತಕ್ಕೆ ಬಂದಾಗ ಈ ಸಾಂಕ್ರಾಮಿಕ ಕಾಯಿಲೆಗಳು ಕೆಟ್ಟ-ಗಾಳಿಯಿಂದ ಬರುತ್ತವೆಂದು ಭಾವಿಸಲಾಗಿತ್ತು. ಈ ಭಾವನೆಗೆ ಮೂಲ ಕಾರಣ ಅತ್ಯಂತ ಹೆಚ್ಚಿನ ವಿನಾಶಕಾರಿಯಾಗಿದ್ದ ಮಲೇರಿಯಾ ಕಾಯಿಲೆಯೇ! ಮಲೇರಿಯಾ ಎಂಬ ಪದದ ಮೂಲ ಇಟಾಲಿಯನ್ ಭಾಷೆಯ ಮಲ್-ಅರಿಯ. ಅದರ ಅರ್ಥ ಕೆಟ್ಟ-ಗಾಳಿ! ಹೀಗೆ, ಸಾಂಕ್ರಾಮಿಕ ಕಾಯಿಲೆಯ ಕಾರಣವನ್ನು ಸಂಕೇತಿಸುವ ಹೆಸರನ್ನು ಒಂದು ಕಾಯಿಲೆಗೆ ಇಟ್ಟಿದ್ದರು ಎಂದರೆ, ಅಂದಿನ ಕಾಲದ ಜನರ ಮೇಲೆ ಆ ಕಾಯಿಲೆಯ ಘೋರ ಪರಿಣಾಮದ ಪ್ರಭಾವ ತಿಳಿಯುತ್ತದೆ.

ಫ್ರೆಂಚ್ ವೈದ್ಯ ಮತ್ತು ರೋಗಶಾಸ್ತ್ರಜ್ಞ ಡಾ. ಚಾರ್ಲ್ಸ್ ಅಲ್ಫೋನ್ಸ್ ಲವೆರಾನ್ ಅವರಿಗೆ ಈ ಕೆಟ್ಟ-ಗಾಳಿಯ ತರ್ಕ ಸಮಂಜಸ ಎನಿಸಲಿಲ್ಲ. ಡಾ. ಲವೆರಾನ್ ಫ್ರೆಂಚ್ ಸೈನ್ಯಾಧಿಕಾರಿಯಾಗಿ, ಅಲ್ಜೀರಿಯಾದಲ್ಲಿ ನಿಯುಕ್ತರಾಗಿದ್ದರು. ಮಲೇರಿಯಾ ಅವರ ವಿಶೇಷ ಅಧ್ಯಯನದ ವಿಷಯವಾಗಿತ್ತು. ಮಲೇರಿಯಾದಿಂದ ಮರಣಿಸಿದ ರೋಗಿಗಳ ಗುಲ್ಮದಲ್ಲಿ (spleen) ಒಂದು ರೀತಿಯ ಸಾಂದ್ರವಾದ ಬಣ್ಣ ಇರುತ್ತಿತ್ತು. ಗುಲ್ಮದ ಮುಖ್ಯ ಕೆಲಸ ವಯಸ್ಸಾದ / ರೋಗಪೀಡಿತ ಕೆಂಪು ರಕ್ತಕಣಗಳನ್ನು ರಕ್ತಪರಿಚಲನೆಯಿಂದ ತೆಗೆದು ಹಾಕುವುದು. ಮಲೇರಿಯಾ ಕಾಯಿಲೆಯಲ್ಲಿ ಗುಲ್ಮ ವಿಪರೀತವಾಗಿ ಊದಿ ದೊಡ್ಡದಾಗುತ್ತಿತ್ತು. ಹಾಗಾಗಿ, ಮಲೇರಿಯಾ ರೋಗಿಗಳ ಗುಲ್ಮದಲ್ಲಿ ಕಾಣುವ ಸಾಂದ್ರವಾದ ಬಣ್ಣದ ಮೂಲ ಕೆಂಪು ರಕ್ತಕಣಗಳೇ ಆಗಿರಬೇಕು ಎಂದು ಡಾ. ಲವೆರಾನ್ ಅವರ ತರ್ಕ. ಮಲೇರಿಯಾ ರೋಗಿಯ ಕೆಂಪು ರಕ್ತಕಣಗಳಲ್ಲಿ ಈ ರೀತಿಯ ಬಣ್ಣದ ಕೆಲವು ಅಂಶಗಳು ಇರಬೇಕು ಎಂಬ ನಂಬಿಕೆಯಿಂದ ಡಾ. ಲವೆರಾನ್ ಸೂಕ್ಷ್ಮದರ್ಶಕದ ಮೂಲಕ ಕೆಂಪು ರಕ್ತಕಣಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದರು.

ಸುಮಾರು 200 ಮಲೇರಿಯಾ ರೋಗಿಗಳ ರಕ್ತವನ್ನು ಪರೀಕ್ಷೆ ಮಾಡಿದ ಡಾ. ಲವೆರಾನ್, ಅವರ ಪೈಕಿ 148 ರೋಗಿಗಳಲ್ಲಿ ಒಂದು ರೀತಿಯ ಸೂಕ್ಷ್ಮಜೀವಿಗಳನ್ನು ಪತ್ತೆ ಮಾಡಿದರು. ಇಂತಹ ಕೆಲವು ರೋಗಿಗಳ ರಕ್ತದಲ್ಲಿ ಕೆಂಪು ರಕ್ತಕಣಗಳ ತುಂಬಾ ಈ ರೀತಿಯ ಸೂಕ್ಷ್ಮಜೀವಿಗಳು ತುಂಬಿಕೊಂಡು ಆ ರಕ್ತಕಣ ಒಡೆದುಹೋಗುವುದನ್ನೂ, ಅದರಿಂದ ಆ ಸೂಕ್ಷ್ಮಜೀವಿಗಳು ರಕ್ತದಲ್ಲಿ ಪಸರಿಸುವುದನ್ನೂ ಕಂಡರು. ಜೊತೆಗೆ, ಮಲೇರಿಯಾ ರೋಗದ ಯಾವುದೇ ಲಕ್ಷಣ ಇಲ್ಲದ 100 ಜನರ ರಕ್ತವನ್ನು ಇದೇ ರೀತಿ ಪರೀಕ್ಷೆ ಮಾಡಿದರು. ಅವರಲ್ಲಿ ಯಾರೊಬ್ಬರಲ್ಲೂ ಈ ರೀತಿಯ ಸೂಕ್ಷ್ಮಜೀವಿಗಳು ಕಾಣಲಿಲ್ಲ. ಯಾವ್ಯಾವ ರೋಗಿಯಲ್ಲಿ ಈ ಸೂಕ್ಷ್ಮಜೀವಿಗಳು ಪತ್ತೆ ಆಗಿದ್ದವೋ, ಅಂತಹ ಕೆಲವರಿಗೆ ಕ್ವಿನೀನ್ ಔಷಧ ನೀಡಿ ಪುನಃ ಅವರ ರಕ್ತವನ್ನು ಪರೀಕ್ಷೆ ಮಾಡಿದರು. ಅಂತಹವರ ರಕ್ತದಲ್ಲಿ ಈ ಸೂಕ್ಷ್ಮಜೀವಿಗಳ ಸಂಖ್ಯೆ ಬಹಳ ಕ್ಷೀಣವಾಗಿತ್ತು. ಕೆಲವರಲ್ಲಂತೂ ಆ ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ನಿರ್ನಾಮವಾಗಿದ್ದವು. ಕ್ವಿನೀನ್ ಔಷಧ ಪಡೆಯದೇ ಇದ್ದ ರೋಗಿಗಳ ರಕ್ತದಲ್ಲಿ ಈ ಸೂಕ್ಷ್ಮಜೀವಿಗಳು ತಪ್ಪದೇ ಕಾಣುತ್ತಿದ್ದವು. 1885 ರಲ್ಲಿ ಇಟಲಿಯ ಸೂಕ್ಷ್ಮಜೀವಿ ತಜ್ಞರ ತಂಡದ ಮಾರ್ಚಿಯಫವ ಮತ್ತು ಸೆಲ್ಲಿ ಅವರು ಈ ಜೀವ ಪ್ರಭೇದವನ್ನು “ಪ್ಲಾಸ್ಮೋಡಿಯಂ” ಎಂದು ಕರೆದರು.

ಮಲೇರಿಯಾಕಾರಕ ಜೀವಿ ಯಾವುದೆಂದು ಪತ್ತೆ ಆಯಿತು. ಮಲೇರಿಯಾ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆ ಎಂದೂ ತಿಳಿದಿತ್ತು. ಆದರೆ, ಕೆಂಪು ರಕ್ತಕಣಗಳನ್ನು ಆಕ್ರಮಿಸುವ ಈ ಸೂಕ್ಷ್ಮಜೀವಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತವೆ? ಮಲೇರಿಯಾ ಹರಡುವಿಕೆಯನ್ನು ಪತ್ತೆ ಮಾಡಿದ ಕತೆ ಬಹಳ ರೋಚಕ. ಆ ಪ್ರಸಂಗದ ಕೇಂದ್ರ ಭಾರತ. ಇದು ನಡೆದದ್ದು 19 ನೆಯ ಶತಮಾನದ ಕಡೆಯ ವರ್ಷಗಳಲ್ಲಿ. ಕತೆಯ ನಾಯಕ ಡಾ. ರೊನಾಲ್ಡ್ ರಾಸ್ ಎಂಬ ವೈದ್ಯ. ಈ ಸಂಶೋಧನೆಯಲ್ಲಿ ಡಾ ರಾಸ್ ಅವರ ಮಾರ್ಗದರ್ಶಕರಾಗಿದ್ದು ಅಂದಿನ ಕಾಲದ ಸಾಂಕ್ರಾಮಿಕ ರೋಗಗಳ ಅಪ್ರತಿಮ ತಜ್ಞ ಎಂದು ಹೆಸರಾಗಿದ್ದ ಸರ್ ಪ್ಯಾಟ್ರಿಕ್ ಮ್ಯಾನ್ಸನ್.

1883 ರಲ್ಲಿ ಅಮೆರಿಕೆಯ ವೈದ್ಯ ಡಾ ಆಲ್ಬರ್ಟ್ ಕಿಂಗ್, ಮಲೇರಿಯಾ ಮತ್ತು ಸೊಳ್ಳೆಗಳ ನಡುವಣ ಸಂಬಂಧವಿದೆ ಎಂದು ಅನುಮಾನ ಪಟ್ಟಿದ್ದರು. ಆ ಆಧಾರದ ಮೇಲೆ ಡಾ. ರಾಸ್ ಕೈಗೆ ಸಿಕ್ಕ ಸಾವಿರಾರು ಸೊಳ್ಳೆಗಳನ್ನು ಪರೀಕ್ಷಿಸಿದರು. ಆದರೆ, ಅವರಿಗೆ ಯಾವುದೇ ಯಶಸ್ಸೂ ಸಿಗಲಿಲ್ಲ. ಆಗ ಡಾ. ಮ್ಯಾನ್ಸನ್ “ಪ್ಲಾಸ್ಮೋಡಿಯಂನ ಹೊರಮೈ ಮೇಲಿನ ಕೂದಲಿನಂತಹ ರಚನೆಯನ್ನು ಹಿಂಬಾಲಿಸಬಹುದು” ಎಂಬ ಸೂಚನೆ ನೀಡಿದರು. ಸೊಳ್ಳೆಗಳಲ್ಲಿ ಹಲವಾರು ಪ್ರಭೇದಗಳಿವೆ ಎಂಬುದನ್ನು ಮೊದಲ ಬಾರಿಗೆ ಕಂಡುಕೊಂಡ ಡಾ. ರಾಸ್ ಅವನ್ನು “ಕಂದು ಬಣ್ಣದ ಸೊಳ್ಳೆ”; “ಕರಿಯ ಹೊಟ್ಟೆಯ ಸೊಳ್ಳೆ”; “ಕಟ್ಟು ಸೊಳ್ಳೆ”; “ಚುಕ್ಕೆ ರೆಕ್ಕೆಯ ಸೊಳ್ಳೆ” ಎಂದೆಲ್ಲಾ ವರ್ಗೀಕರಣ ಮಾಡಿದರು! ಇವುಗಳ ಪೈಕಿ ಚುಕ್ಕೆ ರೆಕ್ಕೆಯ ಸೊಳ್ಳೆಗಳು ಮಲೇರಿಯಾ ರೋಗಿಯನ್ನು ಕಚ್ಚಿದ ಮೇಲೆ ಅವುಗಳ ಹೊಟ್ಟೆಯಲ್ಲಿ ತಾವು ಅಲ್ಲಿಯವರೆಗೆ ಹುಡುಕುತ್ತಿದ್ದ ಸೂಕ್ಷ್ಮಜೀವಿಗಳನ್ನು ಡಾ. ರಾಸ್ ಪತ್ತೆ ಮಾಡಿದರು. ಹೀಗೆ ಮಲೇರಿಯಾ- ಪ್ಲಾಸ್ಮೋಡಿಯಂ- ಸೊಳ್ಳೆ- ಮನುಷ್ಯರ ಸಂಬಂಧ ಸ್ಪಷ್ಟವಾಯಿತು. ಮಾನವ ಇತಿಹಾಸದ ಅತ್ಯಂತ ದೊಡ್ಡ ಕೊಲೆಗಡುಕ ರೋಗದ ಚಿತ್ರಣ ದೊರೆತಿತ್ತು! 1902 ರಲ್ಲಿ ಡಾ. ರಾಸ್ ಅವರಿಗೆ ಈ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ಲಭಿಸಿತು. ಮುಂದೆ 1907 ರಲ್ಲಿ ಡಾ. ಲವೆರಾನ್ ಅವರಿಗೆ ಕೂಡ ಮಲೇರಿಯಾಕಾರಕ ಸೂಕ್ಷ್ಮಜೀವಿಯನ್ನು ಪತ್ತೆ ಮಾಡಿದ ಗೌರವಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಯಿತು.

ಈ ಸುದ್ದಿ ವಿಶ್ವದ ಮೂಲೆಮೂಲೆಗಳಲ್ಲಿ ಸಂಚಲನ ಮೂಡಿಸಿತು. “ಸೊಳ್ಳೆಗಳಿಂದ ರಕ್ಷಣೆ ಪಡೆದರೆ ಮಲೇರಿಯಾ ಬಾರದಂತೆ ಕಾಪಾಡಿಕೊಳ್ಳಬಹುದು” ಎಂಬ ಸುದ್ದಿ ಹೊಸ ಆಶೆ ತಂದಿತ್ತು. ಸೊಳ್ಳೆಗಳನ್ನು ನಾಶ ಮಾಡುವ ಹೊಸ ವಿಧಾನಗಳ ಪತ್ತೆ ಆರಂಭವಾಯಿತು. ಸೊಳ್ಳೆ ಪರದೆಗಳು ವಿಜೃಂಭಿಸಿದವು! ಸೊಳ್ಳೆಗಳು ಬೆಳೆಯುವ ನೀರಿನಲ್ಲಿ ಎಣ್ಣೆ ಹಾಕುವುದು, ಅಂತಹ ನೀರಿನಲ್ಲಿ ಸೊಳ್ಳೆಗಳ ಮೊಟ್ಟೆ / ಮರಿಗಳನ್ನು ತಿನ್ನುವ ಮೀನು ಬೆಳೆಸುವುದು, ನೀರು ನಿಲ್ಲದಂತೆ ಇಳಿಜಾರು ಮಾಡುವುದು, ಒಳಚರಂಡಿ ವ್ಯವಸ್ಥೆ, ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವ ಕಾಲುವೆಗಳು – ಹೀಗೆ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಬಲ್ಲ ವಿಧಾನಗಳು ಜಾರಿಯಾದವು.

ಮಲೇರಿಯಾ ಸುಲಭವಾಗಿ ಬಗ್ಗುವ ಕಾಯಿಲೆ ಅಲ್ಲ. ಒಮ್ಮೆ ಮಲೇರಿಯಾ ಮತ್ತು ಸೊಳ್ಳೆಗಳ ನಡುವಿನ ಸಂಬಂಧ ತಿಳಿದ ಕೂಡಲೇ ಮುಂದುವರೆದ ದೇಶಗಳು ಜಾಗೃತವಾದವು. ಸೊಳ್ಳೆಗಳ ನಿಯಂತ್ರಣದಿಂದ ಮಲೇರಿಯಾ ಚಕ್ರವನ್ನು ಮುರಿದವು. ಆದರೆ, ಇಂತಹ ಅನುಕೂಲ ಇಲ್ಲದ ತೃತೀಯ ವಿಶ್ವದ ದೇಶಗಳಲ್ಲಿ ಮಲೇರಿಯಾ ಇಂದು ಕೂಡ ಬಹು ದೊಡ್ಡ ಆರೋಗ್ಯ ಪಿಡುಗಾಗಿಯೇ ಇದೆ. ಮಲೇರಿಯಾ ಚಕ್ರದ ಪತ್ತೆಯಾಗಿ ನೂರು ವರ್ಷ ಕಳೆದರೂ ಮಲೇರಿಯಾ ವಿರುದ್ಧದ ಲಸಿಕೆ ತಯಾರಾಗಿಲ್ಲ. ಜೊತೆಗೆ, ಮಲೇರಿಯಾ ಎದುರಿಸುವ ಹೊಸ ಔಷಧಗಳೂ ಅಷ್ಟಾಗಿ ಅಭಿವೃದ್ಧಿ ಆಗಿಲ್ಲ. ಜಗತ್ತಿನ ಅತೀ ದೊಡ್ಡ ಹಂತಕ ಇಂದೂ ನಮ್ಮ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ನಿಂತಿರುವುದು ಖೇದದ ಸಂಗತಿ. ಮಲೇರಿಯಾ ಪ್ರಪಂಚದ ಆರೋಗ್ಯ ವ್ಯವಸ್ಥೆಗೆ ಕನ್ನಡಿ ಹಿಡಿದಿರುವ ಕಾಯಿಲೆ. ಇದನ್ನು ಸರಿಯಾಗಿ ನಿರ್ವಹಿಸುವುದೇ ಜಾಗತಿಕ ಆರೋಗ್ಯ ಸಂವರ್ಧನೆಗೆ ಪ್ರತಿಯೊಂದು ದೇಶವೂ ನೀಡಬಲ್ಲ ಅತೀ ದೊಡ್ಡ ಕಾಣಿಕೆ.

ಇಜ್ಞಾನ Ejnana
www.ejnana.com