ಕಾಯಿಲೆ-ಮುಕ್ತ ಪ್ರಪಂಚ ಸಾಧ್ಯವೇ?
ಸುಖೀ ಪ್ರಪಂಚದ ಅಸ್ತಿತ್ವ ವಿಜ್ಞಾನವನ್ನು ಆರಾಧಿಸುವ ಶ್ರಮಜೀವಿಗಳ ಪ್ರಯತ್ನದಲ್ಲೇ ಇದೆImage by Steve Buissinne from Pixabay

ಕಾಯಿಲೆ-ಮುಕ್ತ ಪ್ರಪಂಚ ಸಾಧ್ಯವೇ?

ಕಾಯಿಲೆಯೊಂದು ಜಗತ್ತಿನಿಂದ ನಿರ್ಮೂಲವಾಗುವುದರ ಹಿಂದೆ ಸಾವಿರಾರು ಜನರ ದಶಕಗಳ ಶ್ರಮ ಇರುತ್ತದೆ

ಕಳೆದ ಅಕ್ಟೋಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ “ಪೋಲಿಯೋಗೆ ಕಾರಣವಾಗುವ ಮೂರು ವಿಧದ ವೈರಸ್ ಗಳ ಪೈಕಿ ಮೂರನೆಯದು ನಿರ್ಮೂಲನವಾಗಿದೆ” ಎಂಬ ಒಳ್ಳೆಯ ವಿಷಯ ತಿಳಿಸಿತು. ಈಗಾಗಲೇ 2015 ರಲ್ಲಿ ಪೋಲಿಯೋ ವೈರಸ್ ನ ಎರಡನೆಯ ಪ್ರಬೇಧ ಕೂಡ ನಿರ್ಮೂಲನವಾಗಿತ್ತು. ಅಂದರೆ ಈಗ ಪೋಲಿಯೋ ವೈರಸ್ ನ ಒಂದನೆಯ ಪ್ರಬೇಧ ಮಾತ್ರ ವಿಶ್ವದಲ್ಲಿ ಉಳಿದುಕೊಂಡಿದೆ. ಅದನ್ನು ನಿರ್ಮೂಲನ ಮಾಡಿದರೆ ಪ್ರಪಂಚ ಪೋಲಿಯೊ ಕಾಯಿಲೆಯಿಂದ ಮುಕ್ತವಾಗುತ್ತದೆ!

ಪೋಲಿಯೋ ಕಾಯಿಲೆಯಿಂದ ಮಾಂಸಖಂಡಗಳ ದೌರ್ಬಲ್ಯ, ಪಾರ್ಶ್ವವಾಯು, ಉಸಿರಾಟದ ಸ್ನಾಯುಗಳ ಸೆಳೆತ, ಕಡೆಗೆ ಮರಣ ಕೂಡ ಸಂಭವಿಸಬಹುದು. ಪ್ರಪಂಚವನ್ನು ಬಹುಕಾಲ ತಲ್ಲಣಗೊಳಿಸಿರುವ ವ್ಯಾಧಿಗಳಲ್ಲಿ ಪೋಲಿಯೋ ಒಂದು. ಪೋಲಿಯೊ ಲಸಿಕೆ ಚಾಲ್ತಿಗೆ ಬರುವ ಮುನ್ನ ಈ ಕಾಯಿಲೆ ಮಾಡಿದ ವಿನಾಶ ಅಷ್ಟಿಷ್ಟಲ್ಲ. ಪೋಲಿಯೋ ಲಸಿಕೆಗಳ ಸಾಮರ್ಥ್ಯ ಜಗತ್ತಿಗೆ ಅರಿವಾಗುತ್ತಿದ್ದಂತೆ ಪೋಲಿಯೋ-ಮುಕ್ತ-ವಿಶ್ವದ ಕನಸನ್ನು ವೈದ್ಯಪ್ರಪಂಚ ಕಾಣಲು ಆರಂಭಿಸಿತು. ಈ ಕನಸಿಗೆ ಇಂಬು ನೀಡಿದ್ದು 1980ರಲ್ಲಿ ನಿರ್ನಾಮವಾದ ಸಿಡುಬಿನ ಕಾಯಿಲೆ. ಪ್ರಪಂಚ ಕಂಡ ಸಿಡುಬಿನ ಕಾಯಿಲೆಯ ಕಡೆಯ ರೋಗಿ ಸೊಮಾಲಿಯಾ ದೇಶದ ಆಲಿ ಮಾಲಿನ್.

ಸಿಡುಬಿನ ನಿರ್ಮೂಲನದ ನಂತರ ಮುಂದಿನ ಗುರಿ ಪೋಲಿಯೋ ನಿರ್ಮೂಲನೆ. ಆದರೆ, ಅದು ಅಷ್ಟು ಸುಲಭವಲ್ಲ. ಕಳೆದ 31 ವರ್ಷಗಳಿಂದ ಪೋಲಿಯೊ ನಿರ್ಮೂಲನದ ಪ್ರಯತ್ನಗಳು ನಡೆಯುತ್ತಲೇ ಇವೆ. ಈಗ 2027ರ ವೇಳೆಗೆ ಪೋಲಿಯೊ ವೈರಸ್ ನ ಮೊದಲ ಪ್ರಬೇಧವನ್ನೂ ನಿರ್ಮೂಲನ ಮಾಡಬಹುದು ಎಂಬ ಆಶೆ ಕಾಣುತ್ತಿದೆ. ಇದೇ ದಾರಿಯಲ್ಲಿ ದಡಾರ (ಮೀಸಲ್ಸ್) ಮತ್ತು ಗಿನಿ-ಹುಳುವಿನ ರೋಗಗಳನ್ನು ಇಲ್ಲವಾಗಿಸುವ ಪ್ರಯತ್ನಗಳೂ ನಡೆಯುತ್ತಿವೆ.

1980ಕ್ಕೆ ಹೋಲಿಸಿದರೆ ವಿಜ್ಞಾನ ಮತ್ತಷ್ಟು ಬೆಳೆದಿದೆ. ಆ ಸಮಯದಲ್ಲೇ ಸಿಡುಬು ನಿರ್ಮೂಲನ ಸಾಧ್ಯವಾಯಿತು; ಈಗ ಬೇರೆ ಕಾಯಿಲೆ ಇಲ್ಲವಾಗಿಸುವುದು ಏಕೆ ಸಾಧ್ಯವಿಲ್ಲ ಎಂಬುದು ಕುತೂಹಲದ ಪ್ರಶ್ನೆ. ಇದು ವೈದ್ಯಪ್ರಪಂಚದ ಹಲವಾರು ಸಮಸ್ಯೆಗಳನ್ನು ಅನಾವರಣ ಮಾಡುವ ಪ್ರಶ್ನೆ ಕೂಡ.

ಯಾವುದೇ ಕಾಯಿಲೆಯನ್ನು ನಿರ್ಮೂಲನ ಮಾಡುವುದು ಎಂದರೇನು? ಕಾಯಿಲೆಗೆ ಮೂಲ ಒಂದು ರೋಗಕಾರಕ ಜೀವಿ. ಇದು ವೈರಸ್, ಬ್ಯಾಕ್ಟೀರಿಯಾ, ಶಿಲೀಂದ್ರ ಅಥವಾ ಮತ್ಯಾವುದೋ ಆಗಿರಬಹುದು. ಈ ರೋಗಕಾರಕ ಹೇಗೆ ಹರಡುತ್ತದೆ? ಅದು ಯಾವ ಜೀವಿಗಳಲ್ಲಿ ಕಾಯಿಲೆ ತರುತ್ತದೆ? ಇವನ್ನು ತಿಳಿದ ನಂತರ ಇಡೀ ಕಾಯಿಲೆಯ ಪ್ರಕ್ರಿಯೆಯನ್ನು ಯಾವ ಹಂತಗಳಲ್ಲಿ ಮಟ್ಟ ಹಾಕಬಹುದು ಎಂದು ನೋಡಬೇಕು.

ಸಿಡುಬಿನ ಉದಾಹರಣೆಯನ್ನೇ ನೋಡೋಣ: ಸಿಡುಬಿಗೆ ಕಾರಣ ಒಂದು ವೈರಸ್. ಈ ವೈರಸ್ ಕೇವಲ ಮನುಷ್ಯರಲ್ಲಿ ಮಾತ್ರ ಕಾಯಿಲೆ ತರುತ್ತಿತ್ತು. ಬೇರೆ ಯಾವುದೇ ಪ್ರಾಣಿಗೂ ಈ ನಿರ್ದಿಷ್ಟ ವೈರಸ್ ನಿಂದ ಸಿಡುಬು ಬರುತ್ತಿರಲಿಲ್ಲ. ಅಂದರೆ, ಮನುಷ್ಯರಲ್ಲಿ ಸಿಡುಬು ಬಾರದಂತೆ ಮಾಡಿದರೆ ಈ ವೈರಸ್ ಗೆ ಬೇರೆ ತಾಣವೇ ಇಲ್ಲ! ಸಿಡುಬಿನ ಮಚ್ಚೆಗಳ ಮಾದರಿಯ ಮಚ್ಚೆಗಳು ಬೇರೆ ಕಾಯಿಲೆಯಿಂದ ಬರುತ್ತಿರಲಿಲ್ಲ. ಆದ್ದರಿಂದ ಸಿಡುಬಿನ ರೋಗಿಯನ್ನು ನಿರ್ದಿಷ್ಟವಾಗಿ ಗುರುತಿಸುವುದು ಸಾಧ್ಯವಾಗುತ್ತಿತ್ತು. ಕೆಲವು ಕಾಯಿಲೆಗಳ ಸೋಂಕು ತಗುಲಿದರೂ ರೋಗ ಲಕ್ಷಣಗಳು ಹಲವರಲ್ಲಿ ಕಾಣುವುದೇ ಇಲ್ಲ. ಆದರೆ ಸಿಡುಬು ಹಾಗಲ್ಲ. ಅದು ಯಾರಿಗಾದರೂ ಬಂತೆಂದರೆ ಅವರಲ್ಲಿ ರೋಗ ಲಕ್ಷಣಗಳು ಸ್ಪಷ್ಟವಾಗಿ ತಿಳಿಯುತ್ತಿತ್ತು. ಜೊತೆಗೆ, ಸಿಡುಬಿನ ಲಸಿಕೆ ಬಹಳ ಪರಿಣಾಮಕಾರಿ ಆಗಿತ್ತು. ಜೀವಂತ ವೈರಸ್ ಮೂಲದಿಂದ ಮಾಡಿದ್ದ ಸಿಡುಬಿನ ಲಸಿಕೆ ಬಹಳ ಕಡಿಮೆ ಕಾಲದಲ್ಲೇ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿತ್ತು. ಈ ಪರಿಣಾಮ ಬಹಳ ಕಾಲ ಉಳಿಯುತ್ತಿತ್ತು. ಈ ಲಸಿಕೆಯ ವೇಗ ಎಷ್ಟಿತ್ತು ಎಂದರೆ, ಯಾರಿಗಾದರೂ ಸಿಡುಬು ಕಾಯಿಲೆ ತಗುಲಿದ ಆರಂಭದ ಹಂತದಲ್ಲಿ ಈ ಲಸಿಕೆ ನೀಡಿದರೆ, ಆಗಲೂ ಅದು ಸಿಡುಬಿನಿಂದ ರಕ್ಷಣೆ ನೀಡುತ್ತಿತ್ತು!

ಸಿಡುಬು ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಅದರ ಘಾತಕ ತೀವ್ರತೆ. ಜನರ ದೃಷ್ಟಿಯಲ್ಲಿ ಸಿಡುಬು ಮಹಾಮಾರಿ. ಅದು ಬಂತೆಂದರೆ ಸಾವು ಸುಳಿದಾಡಿದಂತೆ. ಸಾಯದೆಯೇ ಉಳಿದರೆ ಮೈ ಮೇಲೆ ಕೆಟ್ಟ ಮಚ್ಚೆಗಳು. ಹೇಗಾದರೂ ಸಿಡುಬಿನಿಂದ ತಪ್ಪಿಸಿಕೊಂಡರೆ ಸಾಕು ಎಂದು ಜನರು ಅವಸ್ಥೆ ಪಡುತ್ತಿದ್ದರು. ಹಾಗಾಗಿ ಸಿಡುಬಿನ ಲಸಿಕೆ ಎಲ್ಲರಿಗೂ ವರದಾನವಾಯಿತು. “ಮೈಲಿ ಹಾಕುವುದು” ಎಂದು ಕರೆಯುತ್ತಿದ್ದ ಈ ಲಸಿಕೆಯ ನೀಡುವಿಕೆ ಸಾಕಷ್ಟು ನೋವು ಕೊಡುತ್ತಿತ್ತು. ಆದರೆ, ಇದ್ಯಾವುದೂ ಸಿಡುಬಿನಿಂದ ತಪ್ಪಿಸಿಕೊಳ್ಳುವ ಜನರ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ! ಒಂದೆಡೆ ಸರ್ಕಾರದ ಪ್ರೋತ್ಸಾಹ; ಮತ್ತೊಂದೆಡೆ ಜನರ ಸ್ವಯಂಪ್ರೇರಿತ ಉತ್ಸಾಹ – ಇವೆರಡೂ ಸೇರಿ ಸಿಡುಬಿನ ಲಸಿಕೆಗೆ ಯಶಸ್ಸು ತಂದವು. ಸುಮಾರು ಹನ್ನೆರಡು ವರ್ಷಗಳ ಕಾಲ ಸಾವಿರಾರು ವೈದ್ಯಕೀಯ ಕಾರ್ಯಕರ್ತರ ತೀವ್ರ ಪ್ರಯತ್ನದ ನಂತರ ಪ್ರಪಂಚದಿಂದ ಸಿಡುಬು ಮರೆಯಾಯಿತು!

ಸಿಡುಬಿನಂತೆಯೇ ಪೋಲಿಯೊ ಕೂಡ ಕೇವಲ ಮನುಷ್ಯರಿಗೆ ಮಾತ್ರ ಬರುವ ವ್ಯಾಧಿ. ಪೋಲಿಯೊ ಲಸಿಕೆಗಳು ಕೂಡ ಬಹಳ ಪರಿಣಾಮಕಾರಿ. ಆದರೆ, ಕೆಲವು ವಿಷಯಗಳಲ್ಲಿ ಪೋಲಿಯೋ ಸಿಡುಬಿಗಿಂತ ಭಿನ್ನ. ಪೋಲಿಯೊ ವೈರಸ್ ತಗುಲಿದ ನೂರು ಮಂದಿಯಲ್ಲಿ 95 ಜನರಿಗೆ ರೋಗಲಕ್ಷಣಗಳು ಕಾಣುವುದೇ ಇಲ್ಲ! ಅಲ್ಲದೇ, ಪೋಲಿಯೋದ ಸೌಮ್ಯ ಲಕ್ಷಣಗಳು ಹಲವಾರು ಇತರ ವೈರಸ್ ಕಾಯಿಲೆಗಳಂತೆಯೇ ಇರುತ್ತವೆ. ಆ ಹಂತದಲ್ಲಿ ಅದು ಪೋಲಿಯೊ ಕಾಯಿಲೆಯೇ ಅಥವಾ ಬೇರೆ ವೈರಸ್ ಕಾಯಿಲೆಯೇ ಎಂದು ಹೇಳಲಾಗದು. ತೀವ್ರ ಪೋಲಿಯೊದ ಲಕ್ಷಣಗಳು ಕೂಡ ಕೆಲವು ಬೇರೆ ರೋಗಗಳ ಮಾದರಿಯಲ್ಲೇ ಇರುತ್ತವೆ. ಹೀಗಾಗಿ, ಯಾವ ಪ್ರದೇಶದಲ್ಲಿ ಪೋಲಿಯೊ ಸೋಂಕು ಹರಡಿದೆ; ಯಾವ ಪ್ರದೇಶಗಳಲ್ಲಿ ಪೋಲಿಯೊ ಲಸಿಕೆಯನ್ನು ವ್ಯಾಪಕವಾಗಿ ಹಾಕಬೇಕು ಎನ್ನುವ ಸೂಚನೆಗಳು ಸ್ಪಷ್ಟವಾಗಿ ಸಿಗುವುದೇ ಇಲ್ಲ. ಸದ್ಯಕ್ಕೆ, ಯಾವುದೇ ರೋಗಿಗೆ ತೀವ್ರ ಮಾದರಿಯ ಪೋಲಿಯೊ ಲಕ್ಷಣಗಳು ಕಂಡು ಬಂದರೆ ಅವರ ಮಲಪರೀಕ್ಷೆ ಮಾಡಿ ಅದು ಪೋಲಿಯೊ ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡುತ್ತಾರೆ. ಒಂದು ವೇಳೆ ಅದು ಪೋಲಿಯೊ ಆಗಿದ್ದಲ್ಲಿ ಕೂಡಲೇ ಆ ಇಡೀ ಪ್ರದೇಶದಲ್ಲಿ ಮತ್ತೊಂದು ಸುತ್ತಿನ ಪೋಲಿಯೊ ಲಸಿಕೆ ನೀಡಲಾಗುತ್ತದೆ. ಈ ಮಾದರಿ ಅಷ್ಟೇನೂ ನಿಖರವಲ್ಲ. ಆದರೆ ಬೇರೆ ಪರ್ಯಾಯವೇ ಇಲ್ಲ. ಇದೇ ಪ್ರಕ್ರಿಯೆ ಬಳಸಿ ಎರಡು ವಿಧದ ಪೋಲಿಯೊ ವೈರಸ್ ಗಳನ್ನು ನಿರ್ಮೂಲನ ಮಾಡಲಾಗಿದೆ. ಕಡೆಯ ಪ್ರಬೇಧದ ಪೋಲಿಯೊ ವೈರಸ್ ನಿರ್ಮೂಲನಕ್ಕೂ ಬೇರೆ ದಾರಿ ಇಲ್ಲ.

ಗಿನಿ-ಹುಳುವಿನ ಸೋಂಕು ಕೂಡ ಇಂತಹದ್ದೇ. ಗಿನಿ-ಹುಳು ರೋಗಿಯ ಶರೀರ ಸೇರಿದ ನಂತರ ಸುಮಾರು ಒಂದು ವರ್ಷ ಕಾಲ ಶರೀರದಲ್ಲೇ ಬೆಳೆದು ನಂತರ ರೋಗಿಯ ಕಾಲಿನ ಚರ್ಮವನ್ನು ಬಗೆದು ನಿಧಾನವಾಗಿ ಹೊರಗೆ ಬರುತ್ತದೆ. ಬಹಳ ದಾರುಣ ನೋವು ತರುವ ಈ ಸೋಂಕನ್ನು ಜಗತ್ತಿನಿಂದ ಇಲ್ಲವಾಗಿಸಬೇಕು ಎಂದು 1986 ರಲ್ಲಿ ನಿರ್ಧರಿಸಲಾಯಿತು. ಪರಿಣಾಮಕಾರಿ ಚಿಕಿತ್ಸೆ ಇದ್ದರೂ ಗಿನಿ-ಹುಳುವಿನ ಸೋಂಕನ್ನು ನಿರ್ಮೂಲನ ಮಾಡುವುದು ಸುಲಭವಲ್ಲ. ಕೇವಲ ಮನುಷ್ಯರೇ ಅಲ್ಲದೇ, ಗಿನಿ-ಹುಳು ನಾಯಿ, ಕಪ್ಪೆ, ಕೆಲವು ಮೀನುಗಳಲ್ಲೂ ಬೆಳೆಯಬಲ್ಲದು. ಈ ಪ್ರಾಣಿಗಳು ನೀರಿನ ಮೂಲಗಳನ್ನು ಕಲುಷಿತ ಮಾಡುತ್ತವೆ. ಆ ಮೂಲಕ ಯಾವುದೋ ಒಂದು ದಾರಿಯಲ್ಲಿ ಮತ್ತೆ ಮನುಷ್ಯರಿಗೆ ಸೋಂಕು ತಗಲುವ ಸಾಧ್ಯತೆ ಇದ್ದೇ ಇರುತ್ತದೆ. ಇಲ್ಲಿ ಕೇವಲ ಮನುಷ್ಯರಿಗೆ ಮಾತ್ರ ಚಿಕಿತ್ಸೆ ನೀಡಿದರೆ ಸಾಲದು. ನಮ್ಮ ನೀರಿನ ಮೂಲಗಳನ್ನು ಸ್ವಚ್ಚವಾಗಿ ಇಡುವ, ಕುಡಿಯುವ ನೀರಿನ ಶುದ್ಧತೆಯನ್ನು ಕಾಪಾಡಿಕೊಳ್ಳುವ, ವೈಯಕ್ತಿಕ ಸ್ವಚ್ಚತೆಗೆ ಇಂಬು ನೀಡುವ ನಿಸರ್ಗದ ಜೀವನಪಾಠಗಳನ್ನೂ ಪಾಲಿಸಬೇಕು. ಒಟ್ಟಾರೆ, ಗಿನಿ-ಹುಳುವಿನ ಕಾಯಿಲೆ ಇಲ್ಲವಾಗಬೇಕು ಎಂದಾದರೆ ಸ್ವಚ್ಛದೇಶದ ಅಭಿಯಾನ ಮುಖ್ಯ.

ಮುಂದಿನ ನಿರ್ಮೂಲನದ ಗುರಿ ದಡಾರ ಕಾಯಿಲೆಯದ್ದು. ಅದು ಕೂಡ ಮನುಷ್ಯರನ್ನು ಮಾತ್ರ ಕಾಡುವ ಕಾಯಿಲೆ. ರೋಗದ ಲಕ್ಷಣಗಳು ಸ್ಪಷ್ಟವಾಗಿ ಕಾಯಿಲೆಯ ಇರುವಿಕೆಯನ್ನು ಸೂಚಿಸುತ್ತವೆ. ಜೊತೆಗೆ, ದಡಾರದ ಲಸಿಕೆ ಬಹಳ ಪರಿಣಾಮಕಾರಿ. ಮುಂದುವರೆದ ಹಲವಾರು ದೇಶಗಳಲ್ಲಿ ದಡಾರ ಈಗಾಗಲೇ ಇಲ್ಲವಾಗಿದೆ. ಆದರೆ, ಸಿಡುಬಿಗೆ ಹೋಲಿಸಿದರೆ ಇದು ಸೌಮ್ಯವಾದ ಕಾಯಿಲೆ. ಈ ಕಾರಣಕ್ಕೇ ಜನರಿಗೆ ದಡಾರದ ಬಗ್ಗೆ ಭಯವಿಲ್ಲ. ಈಚೆಗೆ ಲಸಿಕೆಗಳನ್ನು ವಿರೋಧಿಸುವ ಜನರ ಪಂಗಡಗಳೂ ಬೆಳೆಯುತ್ತಿವೆ. ಕಾಯಿಲೆಯ ವೈರಸ್ ನ ಜೊತೆಗೆ ಲಸಿಕೆ-ವಿರೋಧಿಗಳ ತರ್ಕಹೀನ ಬುದ್ಧಿಯನ್ನು ಕೂಡ ನಿರ್ಮೂಲನ ಮಾಡಬೇಕಿದೆ!

“ಇಂತಹ ರೋಗ ಜಗತ್ತಿನಿಂದ ನಿರ್ಮೂಲನ ಆಗಿದೆ” ಎಂಬುದು ಪತ್ರಿಕೆಗಳ ಪುಟದಲ್ಲಿ ಒಂದು ಕಾಲಂ ಸುದ್ದಿ ಆಗಬಹುದು. ಆದರೆ, ಅದರ ಹಿಂದೆ ಸಾವಿರಾರು ಜನರ ದಶಕಗಳ ಶ್ರಮ ಇರುತ್ತದೆ. ವಿಜ್ಞಾನ ಜನರಿಗೆ ರೋಚಕ ಸುದ್ದಿ ನೀಡದೇ ಇರಬಹುದು. ಆದರೆ, ಸುಖೀ ಪ್ರಪಂಚದ ಅಸ್ತಿತ್ವ ವಿಜ್ಞಾನವನ್ನು ಆರಾಧಿಸುವ ಶ್ರಮಜೀವಿಗಳ ಪ್ರಯತ್ನದಲ್ಲೇ ಇದೆ ಎನ್ನುವುದು ಸತ್ಯ.

ಜನವರಿ 5, 2020ರ ವಿಶ್ವವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com