ಟ್ರಾನ್ಸ್‌ಮಿಶನ್ ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕಕ್ಕೆ ಕಂಡ COVID-19
ಟ್ರಾನ್ಸ್‌ಮಿಶನ್ ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕಕ್ಕೆ ಕಂಡ COVID-19CDC/ Hannah A Bullock; Azaibi Tamin

ವೈರಸ್ ಲೇಖನ ವೈರಲ್ ಆದಾಗ!

ಮೊನ್ನೆ ಇದ್ದಕ್ಕಿದ್ದ ಹಾಗೆ ವಾಟ್ಸಾಪಿನಲ್ಲಿ ಬಂದು ಇಣುಕಿದ ಫೋಟೋ ಹಿಂದಿನ ಕತೆ ಇದು

ಮೊನ್ನೆ ಇದ್ದಕ್ಕಿದ್ದ ಹಾಗೆ ನನ್ನ ವಾಟ್ಸಾಪಿನಲ್ಲಿ ಒಂದು ಪೇಪರ್ ತುಣುಕಿನ ಫೋಟೋ ಎಲ್ಲ ಗ್ರೂಪುಗಳಿಂದಲೂ ಬಂದು ಇಣುಕಿತ್ತು ೧೯೮೯ರಲ್ಲಿಯೇ ಕೊರೊನ ವೈರಸ್ ಬಗ್ಗೆ ತಿಳಿದಿತ್ತು. ಈ ಬಗ್ಗೆ ತರಂಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅಂತ ಆ ಫೋಟೋ ಜೊತೆಗೆ ಒಕ್ಕಣೆಯೂ ಇತ್ತು. ಸ್ವಲ್ಪ ಸಮಯದ ನಂತರ ತರಂಗದ ಸಂಪಾದಕಿ ಶ್ರೀಮತಿ ರಾಜಲಕ್ಷ್ಮಿಯವರು ಫೋನು ಮಾಡಿ, ಆ ತುಣುಕು ನಾನು ಬರೆದಿದ್ದ ಒಂದು ಲೇಖನದ್ದೆಂದೂ, ಆ ಸಂಚಿಕೆಯ ಪ್ರತಿ ಸಿಗುತ್ತಿಲ್ಲವೆಂದೂ, ನನ್ನ ಬಳಿ ಇದೆಯೇ ಎಂದು ಕೇಳಿದರು. ನನ್ನ ಬಳಿಯೂ ಅದು ಇರಲಿಲ್ಲ. ನೆಗಡಿ-ನಗಬೇಡಿ ಎನ್ನುವ ಲೇಖನದ್ದು ಇರಬೇಕು ಎನ್ನುವ ನೆನಪು ಮಾತ್ರ ಇತ್ತು. ಇದು ಮೊದಲ ಪಾಠ. ನಾನು ಇದುವರೆವಿಗೂ ಎರಡೂವರೆ ಸಾವಿರಕ್ಕೂ ಮಿಗಿಲಾದ ಲೇಖನಗಳನ್ನು ಬರೆದಿದ್ದೇನೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಬರೆದ ಎಲ್ಲ ಲೇಖನಗಳ ಸಾಫ್ಟ್ ಪ್ರತಿಗಳು ಹುಡುಕಿದರೆ ಸಿಗಬಲ್ಲುವು. ಆದರೆ ಅದಕ್ಕೂ ಮುನ್ನ, ಕೈಬರೆಹದಲ್ಲಿ ಬರೆದು ಕಳಿಸಿದ್ದ ಲೇಖನಗಳ ಪ್ರತಿಗಳು ಸಾಫ್ಟೋ, ಹಾರ್ಡೋ ಎಲ್ಲಿಯೂ ಇಲ್ಲ. ಲೇಖಕರು ತಮ್ಮ ಲೇಖನಗಳನ್ನು ಹೀಗೆ ಸಂಗ್ರಹಿಸಿಟ್ಟುಕೊಳ್ಳುವ ಶಿಸ್ತು ಬೆಳೆಸಿಕೊಳ್ಳಬೇಕು ಎನ್ನುವ ಮೊದಲ ಪಾಠ ಇದು. ನಾನು ಇದನ್ನು ಪಾಲಿಸುತ್ತೇನೆಯೋ, ಇಲ್ಲವೋ ನನಗೆ ಗೊತ್ತಿಲ್ಲ.

ಎರಡನೆಯ ಪಾಠ. ಹಿರಿಯ ಲೇಖಕರೂ, ಮಿತ್ರರೂ ಆದ ನಾಗೇಶ ಹೆಗಡೆಯವರು ನೀವು ಬರೆದ ಲೇಖನಗಳನ್ನು ಒಟ್ಟು ಮಾಡಿ ಪುಸ್ತಕ ಮಾಡಿ ಎಂದು ಯಾವಾಗಲೂ ಸಲಹೆ ನೀಡುತ್ತಿರುತ್ತಾರೆ. ಆದರೆ ಆ ಬಗ್ಗೆ ನಾನು ತಲೆ ಕೆಡಿಸಿಕೊಂಡೇ ಇರಲಿಲ್ಲ. ಏಕೆಂದರೆ, ನಾನು ಬರೆದ ಬಹುತೇಕ ಲೇಖನಗಳು ಅಂದಂದಿನ ಸಂಶೋಧನೆಗಳನ್ನು ಕುರಿತಂಥವು. ಇವುಗಳ ತೀರ್ಮಾನ ಬದಲಾಗಬಹುದು. ಸಂಶೋಧನೆ ತಪ್ಪು ಎಂದೂ ಮುಂದೆ ಸಾಬೀತಾಗಬಹುದು. ಇಂಥವನ್ನು ಹೀಗೇ ಲೇಖನಗಳನ್ನಾಗಿಯೇ ಇಟ್ಟಿರುವುದು ಒಳ್ಳೆಯದು ಎನ್ನುವ ಅನಿಸಿಕೆ ನನ್ನದು. ಜೊತೆಗೆ ಹೊಸತನ್ನೇ ಬರೆಯಬೇಕೆನ್ನುವ ಹಠವೂ ಇರಬಹುದು. ಆದರೆ ೩೧ ವರ್ಷಗಳ ಹಿಂದೆ ಬರೆದಿದ್ದ “ನೆಗಡಿ-ನಗಬೇಡಿ” ಎನ್ನುವ ಲೇಖನ ವೈರಲ್ ಆಗಿದ್ದನ್ನು ಕಂಡಾಗ, ವಿಜ್ಞಾನದ ಸಂಗತಿಗಳು ಯಾವ ಕಾಲಕ್ಕೂ ಪ್ರಸ್ತುತವಿರಬಹುದು ಎನ್ನಿಸತೊಡಗಿದೆ. ಇನ್ನು ಮೇಲಾದರೂ ಲೇಖನಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಬೇಕು! ಹಿರಿಯರ ಮಾತಿಗೆ ಮನ್ನಣೆ ನೀಡಬೇಕು!

೧೯೮೯ರಲ್ಲಿ ಪ್ರಕಟವಾಗಿ, ಈಗ ವೈರಲ್ ಆಗಿದ್ದು ಇದೇ ಲೇಖನ!
೧೯೮೯ರಲ್ಲಿ ಪ್ರಕಟವಾಗಿ, ಈಗ ವೈರಲ್ ಆಗಿದ್ದು ಇದೇ ಲೇಖನ!ತರಂಗ

ಇನ್ನೊಂದು ವಿಷಯ. ವಿಷಯದ ಪ್ರಸ್ತುತತೆಗಿಂತಲೂ ಹೊಸ ಓದುಗ ಸಮುದಾಯ ಹುಟ್ಟಿಕೊಂಡಿರುತ್ತದೆ. ಅದು ಅಂದಿನ ಓದುಗರಷ್ಟೆ ಈ ವಿಷಯದಲ್ಲಿ ಅಜ್ಞಾನಿ ಎನ್ನುವದನ್ನು ಕಲಿತೆ. ಈ ತುಣುಕು ಬಂದ ನಂತರ ಉದಯವಾಣಿಯಲ್ಲಿ ಅದು ನಾನು ಬರೆದಿದ್ದ ಲೇಖನದ ತುಣುಕು ಎನ್ನುವ ಲೇಖನ ಪ್ರಕಟವಾಯಿತು. ಈ ಲೇಖನವನ್ನು ಓದಿದ ನನ್ನ ಯುವ ವೈದ್ಯ ಮಿತ್ರೆಯೊಬ್ಬರು, ಓಹ್. ಆಗಲೂ ಕೊರೊನಾ ವೈರಸ್ ಇತ್ತಾ? ಎಂದು ಕೇಳಿದಾಗ ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ. ನನ್ನ ಲೇಖನದಲ್ಲಿ ಆಗಲೇ ಇದು ಉಲ್ಲೇಖವಾಗಿತ್ತು ಎನ್ನುವ ಖುಷಿಗಿಂತಲೂ, ಇಷ್ಟು ಸರಳ, ಸಾಮಾನ್ಯ ವೈದ್ಯಕೀಯ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ನೀಡುತ್ತಿಲ್ಲವೇ ಎನ್ನುವ ಗಾಭರಿ ಆಯಿತು. ಅಂದ ಹಾಗೆ ಇದು ಕೇವಲ ಒಬ್ಬ ವೈದ್ಯರ ಅಭಿಪ್ರಾಯ. ವಿಜ್ಞಾನದಲ್ಲಿ ಹೀಗೆ ಒಂಟಿ ಸಾಕ್ಷಿಯನ್ನು ಯಾರೂ ಒಪ್ಪಲಾರರು. ಒಪ್ಪಬಾರದು.

ನೆಗಡಿ-ನಗಬೇಡಿಯಂತಹ ಲೇಖನಗಳನ್ನು ಬರೆಯಲು ಅಂದು ತರಂಗದ ಸಂಪಾದಕರಾಗಿದ್ದ ಶ್ರೀ ಸಂತೋಷಕುಮಾರ ಗುಲ್ವಾಡಿಯವರು ಪ್ರೇರಣೆ ಎಂದರೂ ತಪ್ಪಲ್ಲ. ಒಮ್ಮೆ ತರಂಗದಲ್ಲಿ ಅವಳಿಗಳ ಬಗ್ಗೆ ಬಂದಿದ್ದ ಲೇಖನವೊಂದರಲ್ಲಿದ್ದ ಹಲವು ಅವೈಜ್ಞಾನಿಕ ಅಂಶಗಳನ್ನು ಎತ್ತಿ ತೋರಿಸಿ ಪತ್ರ ಬರೆದಿದ್ದೆ. ಆಗ ನಾನು ಮಣಿಪಾಲದಲ್ಲೇ ಇದ್ದೆ. ನನ್ನ ಮಣಿಪಾಲದ ವಿಳಾಸ ನೋಡಿದ ಕೂಡಲೇ ಗುಲ್ವಾಡಿಯವರು ಫೋನು ಮಾಡಿ ಕಛೇರಿಗೆ ಬನ್ನಿ ಎಂದರು. ವಿಜ್ಞಾನ ಲೇಖನಗಳು, ವಿಜ್ಞಾನ ಸಾಹಿತ್ಯದ ಬಗ್ಗೆ ಚರ್ಚೆ ನಡೆಯಿತು. ಸರಳ ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಬರೆಯುವವರು ಇಲ್ಲ. ಜೊತೆಗೆ ಬಲು ವಿಜ್ಞಾನವೂ ಬಲು ಕಠಿಣವಾದ ವಿಷಯ. ನಿತ್ಯ ಬದುಕಿನಿಂದ ದೂರ ಎಂದು ವಿಜ್ಙಾನ ಲೇಖನಗಳ ಸಂಖ್ಯೆ ಕಡಿಮೆ ಇರುವುದಕ್ಕೆ ಕಾರಣಗಳನ್ನು ತಿಳಿಸಿದರು. ನಾನೂ ಪ್ರತಿವಾದಿಸಿದ್ದೆ. ಕೊನೆಗೆ ಅವರು ಒಂದು ಸವಾಲೊಡ್ಡಿದರು. ಸುಲಭವಾದ ಕನ್ನಡದಲ್ಲಿ ಲೇಖನಗಳನ್ನು ಬರೆದು ಕೊಡಬಹುದೇ? ಹರೆಯದ ಬಿಸಿರಕ್ತ. ನಾನೂ ಸವಾಲೊಡ್ಡಿದ್ದೆ. ಖಂಡಿತ. ಆದರೆ ಅದು ಚೆನ್ನಾಗಿದೆ ಎಂದರೆ ನೀವು ಒಂದು ಪದವನ್ನೂ ಬದಲಿಸಬಾರದು. ಕಿರಿಯನ ಮಾತನ್ನು ಅವರು ಒಪ್ಪಿದ್ದೂ ಅವರ ಹಿರಿತನ. ನೆಗಡಿ-ನಗಬೇಡಿ ಲೇಖನ ತಯಾರಾಗಿದ್ದು ಹೀಗೆ. ವಿವಿಧ ವಿಜ್ಞಾನ ಪತ್ರಿಕೆಗಳು, ಪಠ್ಯಪುಸ್ತಕಗಳಿಂದ ಹೆಕ್ಕಿದ ಮಾಹಿತಿಯನ್ನು ಒಟ್ಟಾಗಿಸಿ ರಮ್ಯವಾಗಿ ಕಥೆ ಹೇಳಿದ್ದೆ ಅಷ್ಟೆ. ನೆಗಡಿಯಂತಹ ಲಕ್ಷಣಗಳನ್ನು ತೋರುವ ಹಲವು ಸೋಂಕುಗಳು ಇವೆ ಎನ್ನುವಾಗ ರೈನೊ, ಕೊರೊನಾ, ಇಕೊ, ಪ್ಯಾರಾಇನ್ಫ್ಲುಯೆಂಜಾ ಮೊದಲಾದ ಇತರೆ ವೈರಸ್ಸು ಬಗೆಗಳ ಬಗ್ಗೆಯೂ ಉಲ್ಲೇಖಿಸಿದ್ದೆ. ವೈರಲ್ ಆಗಿದ್ದು ಲೇಖನದ ಈ ಭಾಗ.

ಇಲ್ಲೊಂದು ಸ್ವಾರಸ್ಯವಿದೆ. ಈ ತುಣುಕಿನ ಮೇಲ್ಭಾಗದಲ್ಲಿ ಕೊರೊನಾ ವೈರಸ್ ಎಂದಿದೆ. ಕೆಳಗೆ ಒಂದು ಪ್ಯಾರಾ ಪಾಠವಿದೆ. ಇವೆರಡಕ್ಕೂ ಮೂಲ ಲೇಖನದಲ್ಲಿ ಸಂಬಂಧವೇ ಇಲ್ಲ. ಆದರೆ ಈ ತುಣುಕನ್ನು ಮುಂದೂಡಿದ ಎಲ್ಲ ಸಂದೇಶಗಳೂ ಕೂಡ ಮೇಲಿನದ್ದು ಶೀರ್ಷಿಕೆ, ಕೆಳಗಿನದ್ದು ಅದರ ವಿವರಣೆ ಎಂದೇ ಬರೆದಿದ್ದುವು. ವಾಸ್ತವದಲ್ಲಿ ಕೊರೊನಾ ವೈರಸ್ ಎಂದು ಬರೆದಿದ್ದದ್ದು, ಅ ವೈರಸ್ಸಿನ ಚಿತ್ರದ ಅಡಿಬರೆಹ. ಪಾಠದ ತಲೆಬರೆಹವಲ್ಲ. ವಾಟ್ಸಾಪಿನಲ್ಲಿ ಹರಿದಾಡುವ ಹಲವಾರು ಮೆಸೇಜುಗಳನ್ನು ಜನರು ಓದದೆಯೇ ಮೇಲ್ನೋಟಕ್ಕೇ ನೋಡಿ ಫಾರ್ವಾರ್ಡು ಮಾಡುತ್ತಾರೆ ಎಂದು ಕೇಳಿದ್ದೆ. ಅದಕ್ಕೆ ಇದು ಪುರಾವೆ. ಅನಂತರ ರಾಜಲಕ್ಷ್ಮಿಯವರು ಮೂಲಲೇಖನವನ್ನು ಹುಡುಕಿ ಅದರ ಚಿತ್ರಗಳನ್ನು ಕಳಿಸಿದ್ದರು. ಇದೂ ಕೂಡ ಅನಂತರ ಸುತ್ತಾಡತೊಡಗಿತು. ಮೊದಲಿನ ತುಣುಕಿನೊಂದಿಗೆ ಇನ್ನೊಂದು ಒಕ್ಕಣೆ ಸೇರಿಕೊಂಡಿತ್ತು “ಮೂವತ್ತೊಂದು ವರ್ಷಗಳ ಹಿಂದೆಯೇ ಕೊರೊನಾ ವೈರಸ್ ಬಗ್ಗೆ ತಿಳಿದಿತ್ತು. ಅದರ ಮೂಲ ಲೇಖನ ಇಲ್ಲಿದೆ ನೋಡಿ.” ಅಂತ. ಇಂದು ನಾವು ಹತ್ತಿಕ್ಕಲು ಶ್ರಮಿಸುತ್ತಿರುವ ಕೊರೊನಾ ಪಂಗಡದ ಕೋವಿಡ್ ೧೯ ಎಂಬ ತಳಿಯ ವೈರಸ್ಸಿನ ಬಗ್ಗೆ ಆಗಲೇ ಊಹಿಸಲಾಗಿತ್ತು ಎನ್ನುವ ಅರ್ಥವನ್ನು ಇದು ನೀಡುತ್ತದೆ. ವಾಸ್ತವಕ್ಕೆ ಇದು ಬಹಳ ದೂರ. ಲೇಖನ ಅಂತಹ ಯಾವ ಊಹೆಯನ್ನಾಗಲಿ, ಭವಿಷ್ಯವನ್ನಾಗಲಿ ನುಡಿದಿರಲಿಲ್ಲ.

ಕೆಲವು ವರ್ಷಗಳ ಹಿಂದೆ ಸುಪ್ರಸಿದ್ಧ ಪತ್ರಿಕೆಯ ಲೇಖಕರೊಬ್ಬರು ನನ್ನ ಅಂಕಣವನ್ನು ನಿಲ್ಲಿಸಿದ್ದರು. ಆಗ ಇನ್ಯಾರ ಜೊತೆಗೋ ಅವರ ಲೇಖನಗಳಲ್ಲಿ ಸ್ವಾರಸ್ಯ ಇರುವುದಿಲ್ಲ. ಬರವಣಿಗೆ ನೀರಸ ಎಂದಿದ್ದರಂತೆ. ನಾನೂ ನಂಬಿಕೊಂಡಿದ್ದೆ. ವಿಜ್ಞಾನ ಲೇಖನಗಳು ಲೇಖಕನ ಪೂರ್ವಾಗ್ರಹಗಳನ್ನು ಓದುಗನಿಗೆ ದಾಟಿಸದೆಯೇ ಕೇವಲ ವಿಜ್ಞಾನದ ವಾಸ್ತವಾಂಶಗಳನ್ನಷ್ಟೆ ದಾಟಿಸಬೇಕು ಎನ್ನುವುದು ನನ್ನ ವಾದ. ನನ್ನ ನಂಬಿಕೆ. ಹೀಗಾಗಿಯೇ ವಿಜ್ಞಾನ ಮತ್ತು ಸಮಾಜದ ನಡುವಣ ತಾಕಲಾಟಗಳ ಬಗ್ಗೆ ನಾನು ಹೆಚ್ಚಿಗೆ ಬರೆಯಲು ಹೋಗಲಿಲ್ಲ. ಇಂತಹ ನೀರಸವಾದ ಲೇಖನವೂ ಇಷ್ಟು ವೈರಲ್ ಆಗುವುದೆಂದರೆ ಅಚ್ಚರಿಯಾಗುತ್ತದೆ.

ಈ ವೈರಲ್ ಲೇಖನದ ಬೆಂಬತ್ತಿದ ಕೆಲವರು ನನಗೆ ಕೇಳಿದ ಪ್ರಶ್ನೆ. ಹಾಗಿದ್ದರೆ ಈಗಿನ ಕೊರೊನಾ ಬೇರೆ ಎನ್ನುತ್ತೀರಾ? ಹೌದು. ಅದು ಬೇರೆ. ಅದರಿಂದ ಅಪಾಯ ಇಲ್ಲ ಎನ್ನುತ್ತೀರಾ? ಹಾಗೇನಿಲ್ಲ ಅಪಾಯ ಇದೆ. ಆದರೆ ನಾವು ಈಗಲೇ ಮೂಗು ಮುಚ್ಚಿಕೊಂಡು ಓಡಾಡುವಷ್ಟು ಆತಂಕ ಪಡಬೇಕಿಲ್ಲ. ಚೀನಾದಲ್ಲಿ ಆದಂತೆ ನಮ್ಮ ದೇಶದಲ್ಲಿಯೂ ಇದು ತುಂಬಾ ಹರಡಬಹುದೇ? ಮೂಲತಃ ಇಂತಹ ವೈರಸ್ಸುಗಳು ಶೀತ ವಾತಾವರಣದಲ್ಲಿ ಹೆಚ್ಚು ಕಾಟ ಕೊಡುತ್ತವೆ. ಉಷ್ಣಪ್ರದೇಶದಲ್ಲಿರುವ ದಕ್ಷಿಣ ಭಾರತದಲ್ಲಿ ಇವುಗಳ ಹಾವಳಿ ಅಷ್ಟಿರಲಿಕ್ಕಿಲ್ಲ ಎಂದು ಊಹಿಸಬಹುದು. ಆದರೆ ಮೊನ್ನೆ ಈ ಬಗ್ಗೆ ನಡೆದ ಸಂಶೋಧನೆಯೊಂದು ಹೊಸ ಸ್ವಾರಸ್ಯವನ್ನು ಬಿಚ್ಚಿಟ್ಟಿದೆ. ಸೀನಿದಾಗ ಮೂಗಿನಿಂದ ಚಿಮ್ಮುವ ಹನಿಗಳ ಮೂಲಕ ಕೆಲವು ವೈರಸ್ಸುಗಳು ಹರಡುತ್ತವಷ್ಟೆ. (ಕೊರೊನಾ ವೈರಸ್ಸು ಹೀಗೆ ಹರಡುವುದಿಲ್ಲ ಎಂದು ಸಾಬೀತಾಗಿದೆ.) ಅಂತಹ ನೆಗಡಿಯ ವೈರಸ್ಸುಗಳು ಉಷ್ಣಪ್ರದೇಶದಲ್ಲಿ ಹರಡುವುದು ಹೆಚ್ಚು. ಏಕೆಂದರೆ ಉಷ್ಣತೆ ಹೆಚ್ಚಿದ್ದಾಗ ಚಿಮ್ಮಿದ ಹನಿಗಳು ಇನ್ನೂ ಪುಟ್ಟದಾಗಿ ಒಡೆದು ಪಸರಿಸುವ ಸಾಧ್ಯತೆ ಹೆಚ್ಚು ಎಂದು ಕೆಲವು ಭೌತವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ಮಾತನ್ನು ನಾವು ನೆನಪಿಡಬೇಕು. ಕೆಲವು ವರ್ಷಗಳ ಹಿಂದೆ ಎಚ್೧ಎನ್೧ ಎನ್ನುವ ಸೋಂಕಿನ ಭೀತಿ ಉಂಟಾಗಿತ್ತು. ಇಂದು ಕೂಡ ಅದು ಬೆಂಗಳೂರಿನಲ್ಲಿ ಕೆಲವರಲ್ಲಿ ಕಾಣಿಸಿಕೊಳ್ಳುತ್ತಿದೆ. ಹೊಸ ವೈರಸ್ಸುಗಳು ಅಥವಾ ಸೋಂಕು ಕಾಣಿಸಿಕೊಂಡಾಗ ಹೀಗಾಗುವುದು ಸಾಮಾನ್ಯ. ಆರಂಭದಲ್ಲಿ ಅದು ಹೊಸದಾಗಿದ್ದರಿಂದ ಬಲು ಶೀಘ್ರವಾಗಿ ಹರಡಿ ತೊಂದರೆ ಕೊಡುತ್ತದೆ. ಕ್ರಮೇಣ ಒಂದು ಮಟ್ಟ ತಲುಪಿದ ನಂತರ, ಅದರ ಹರಡುವಿಕೆ, ತೊಂದರೆ ಎರಡೂ ಕಡಿಮೆಯಾಗುತ್ತವೆ. ಸದ್ಯಕ್ಕೆ ಕೊರೊನಾ ಮೊದಲ ಹಂತದಲ್ಲಿ ಇದೆ. ಇದು ಹರಡಬಾರದು ಎಂದೇ ಶತಪ್ರಯತ್ನಗಳು ನಡೆಯುತ್ತಿವೆ. ತದನಂತರ ಇದು ತನ್ನಂತಾನೇ ಕ್ಷೀಣಿಸಬಹುದು. ಅದುವರೆವಿಗೂ ಇದು ಎಷ್ಟು ಸಾವುನೋವನ್ನುಂಟು ಮಾಡಬಹುದು ಎನ್ನುವುದು ಕೇವಲ ಊಹೆಯಾಗಬಹುದಷ್ಟೆ. ಏಕೆಂದರೆ ನಮ್ಮ ನಿತ್ಯದ ಪ್ರಯಾಣ, ಜನದಟ್ಟಣೆ, ಇತರರ ಜೊತೆಗಿನ ಒಡನಾಟ ಹಿಂದಿನಂತಿಲ್ಲ. ಹೀಗಾಗಿ ವೈರಸ್ ಹರಡುವ ಎಲ್ಲ ಮಾರ್ಗಗಳಿಗೂ ಸಾಕಷ್ಟು ಅವಕಾಶಗಳು ಒದಗುತ್ತವೆ. ಹರಡುವುದು ಸುಲಭ. ಹೀಗಾಗಿ ಸರ್ಕಾರಗಳ ಎಚ್ಚರಿಕೆಯೇ ಹೊರತು ಈ ವೈರಸ್ ಬಂದ ತಕ್ಷಣ ವ್ಯಕ್ತಿಗೆ ಸಾವು ಗ್ಯಾರಂಟಿ ಅಂತಲ್ಲ!

Author Kollegala Sharma had written a Kannada article in 1989 about Corona virus, and a piece of it went viral recently in the context of COVID-19. What does the author say about this experience? Read this post!

Related Stories

No stories found.
logo
ಇಜ್ಞಾನ Ejnana
www.ejnana.com