ಹೆಚ್ಚಿನೆಲ್ಲ ವಸ್ತುಗಳನ್ನು ನೀರು ತನ್ನಲ್ಲಿ ಕರಗಿಸಿಕೊಳ್ಳುವುದರಿಂದ ಅದನ್ನು 'ಸಾರ್ವತ್ರಿಕ  ದ್ರಾವಕ' ಎನ್ನುವರು
ಹೆಚ್ಚಿನೆಲ್ಲ ವಸ್ತುಗಳನ್ನು ನೀರು ತನ್ನಲ್ಲಿ ಕರಗಿಸಿಕೊಳ್ಳುವುದರಿಂದ ಅದನ್ನು 'ಸಾರ್ವತ್ರಿಕ ದ್ರಾವಕ' ಎನ್ನುವರು
ವೈವಿಧ್ಯ

ನೀರು ಮತ್ತು ಗಾಳಿ ಬಗ್ಗೆ ನಿಮಗೆಷ್ಟು ಗೊತ್ತು?

ನೀರಿನಲ್ಲಿ ಕರಗುವ ಅನಿಲಗಳು ಕೆಲವೊಮ್ಮೆ ಮಾರಣಾಂತಿಕವಾಗಬಹುದು!

ವಿನಾಯಕ ಕಾಮತ್

ನೀರು, ಹೆಚ್ಚಿನೆಲ್ಲ ವಸ್ತುಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವುದರಿಂದ ಅದನ್ನು 'ಸಾರ್ವತ್ರಿಕ ದ್ರಾವಕ' ಎನ್ನುವುದು ನಿಮಗೆ ಗೊತ್ತಿರಬಹುದು. ಆದರೆ ನೀರಿನಲ್ಲಿ ಗಾಳಿ ಅಥವಾ ಅನಿಲ ಕರಗಬಹುದೆಂದು ಯಾವಾಗಲಾದರೂ ಯೋಚಿಸಿದ್ದೀರೇ? ಅಥವಾ ಈ ರೀತಿ ನೀರಿನಲ್ಲಿ ಕರಗಿದ ಅನಿಲಗಳು, ಕೆಲವೊಮ್ಮೆ ಮಾರಣಾಂತಿಕವಾಗಬಹುದೆಂದು ನಿಮಗೆ ಗೊತ್ತಿದೆಯೇ?

ನೀರಿನಲ್ಲಿ ಅನಿಲ ಕರಗುವುದಿಲ್ಲ ಎಂದೇ ಬಹುತೇಕರ ಅಭಿಪ್ರಾಯವಿರಬಹುದು. ಆದರೆ ವಾಸ್ತವದಲ್ಲಿ ನೀರು ಬಹಳಷ್ಟು ಅನಿಲಗಳಿಗೂ ಸಾರ್ವತ್ರಿಕ ದ್ರಾವಕ (ಇಂಗ್ಲಿಷಿನಲ್ಲಿ ಇದಕ್ಕೆ ಯೂನಿವರ್ಸಲ್ ಸಾಲ್ವೆಂಟ್ ಎನ್ನುತ್ತಾರೆ).

ಹೌದು. ಜಲಚರಗಳಿಗೆ ಉಸಿರಾಡಲು, ನೀರಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕರಗಿರುವ ಆಮ್ಲಜನಕವೇ ಪ್ರಾಣವಾಯು. ಅಂದರೆ ನೀರು ಸುಲಭವಾಗಿ ತನ್ನಲ್ಲಿ ವಿವಿಧ ಅನಿಲಗಳನ್ನು ಕರಗಿಸಿಕೊಳ್ಳಬಲ್ಲದು ಎಂದಾಯಿತು.

ಹೀಗೆ ನೀರಿನಲ್ಲಿ ಕರಗಬಹುದಾದ ಅನಿಲದ ಪ್ರಮಾಣವನ್ನು ನಿರ್ಧರಿಸುವ ಅಂಶಗಳನ್ನು ತಿಳಿದುಕೊಳ್ಳಲು, ಒಂದು ಸೋಡಾ ಬಾಟಲಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ‘ಸೋಡಾ’ ಎಂದರೆ ಇಂಗಾಲದ ಡೈ ಆಕ್ಸೈಡ್ ನ್ನು ಕರಗಿಸಿಕೊಂಡಿರುವ ನೀರು. ಸೋಡಾವನ್ನು ತಯಾರಿಸುವಾಗ, ಹೆಚ್ಚಿನ ಒತ್ತಡದಲ್ಲಿ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ನೀರಿನ ಮೂಲಕ ಹಾಯಿಸಲಾಗುತ್ತದೆ. ನಂತರ ಆ ಬಾಟಲಿಯನ್ನು ಗಟ್ಟಿಯಾಗಿ ಮುಚ್ಚಲಾಗುತ್ತದೆ. ಇದಕ್ಕೆ ವಿವರಣೆ ಅತ್ಯಂತ ಸುಲಭ. ಹೆಚ್ಚಿನ ಒತ್ತಡದಲ್ಲಿ ಅನಿಲಗಳು ಸುಲಭವಾಗಿ ನೀರಿನಲ್ಲಿ ವಿಲೀನಗೊಳ್ಳುತ್ತವೆಯಾದ್ದರಿಂದ, ಸೋಡಾ ತಯಾರಿಕೆಯಲ್ಲಿ ಹೆಚ್ಚಿನ ಒತ್ತಡ ಅನಿವಾರ್ಯ. ಹೀಗೆ ಹೆಚ್ಚಿನ ಒತ್ತಡದ ಕಾರಣದಿಂದ ನೀರಿನಲ್ಲಿ ಕರಗಿಕೊಂಡಿರುವ ಇಂಗಾಲದ ಡೈ ಆಕ್ಸೈಡ್, ಬಾಟಲಿಯ ಮುಚ್ಚಳ ತೆರೆದ ತಕ್ಷಣ ಹೊರಬರಲಾರಂಭಿಸುತ್ತದೆ. ಮುಚ್ಚಳ ತೆಗೆದ ತಕ್ಷಣ, ಒತ್ತಡ ಕಡಿಮೆಯಾಗಿ ನೀರಿನಲ್ಲಿ ಅನಿಲದ ಕರಗುವಿಕೆ ಕಡಿಮೆಯಾಗುವುದೇ ಇದಕ್ಕೆ ಕಾರಣ. ‘ಹೆಚ್ಚಿನ ಒತ್ತಡದಲ್ಲಿ ಹೆಚ್ಚು ಅನಿಲ ನೀರಿನಲ್ಲಿ ಕರಗುತ್ತದೆ’ ಎಂಬ ಸತ್ಯವನ್ನೇ, ವೈಜ್ಞಾನಿಕ ಪರಿಭಾಷೆಯಲ್ಲಿ 'ಹೆನ್ರಿಯ ನಿಯಮ' ಎಂದು ಕರೆಯುತ್ತಾರೆ.

ಒತ್ತಡ, ನೀರಿನಲ್ಲಿ ಅನಿಲದ ಕರಗುವಿಕೆಯನ್ನು ನಿರ್ಧರಿಸುವ ಒಂದಂಶ. ನೀರಿನಲ್ಲಿ ಅನಿಲಗಳ ಕರಗುವಿಕೆಯನ್ನು ನಿರ್ಧರಿಸುವ ಇನ್ನೂ ಒಂದು ಅಂಶವಿದೆ. ಅದೆಂದರೆ, ಉಷ್ಣತೆ. ಉಷ್ಣತೆ, ಅನಿಲಗಳ ಕರಗುವಿಕೆಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ನಾವು ದಿನ ನಿತ್ಯದ ಜೀವನದಲ್ಲಿ ನೋಡಿರುತ್ತೇವೆ. ಆದರೆ ಅದನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿರುವುದಿಲ್ಲ.

ಪುನಃ ಸೋಡಾ ಬಾಟಲಿಯ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಒಂದು ಸಣ್ಣ ಪ್ರಯೋಗವನ್ನು ಪರಿಗಣಿಸೋಣ. ಎರಡು ಒಂದೇ ತರಹದ ಸೋಡಾ ಬಾಟಲಿಗಳನ್ನು ತೆಗೆದುಕೊಂಡು, ಒಂದನ್ನು ಮಾತ್ರ ಫ್ರಿಡ್ಜ್ ನಲ್ಲಿಟ್ಟು ತಂಪುಗೊಳಿಸಲಾಗಿದೆ. ಇನ್ನೊಂದನ್ನು ಹಾಗೆಯೇ ಸಾಮಾನ್ಯ ವಾತಾವರಣದ್ಲಲಿ ಇಡಲಾಗಿದೆ. ಈಗ ಎರಡೂ ಬಾಟಲಿಗಳನ್ನು ತೆರೆದರೆ, ಯಾವುದರಿಂದ ಜೋರಾಗಿ ಗ್ಯಾಸ್ ಹೊರಬರಬಹುದು? ನೀವು ಸರಿಯಾಗಿ ಪರಿಶೀಲಿಸಿದ್ದೇ ಆಗಿದ್ದರೆ, ಸಾಮಾನ್ಯ ವಾತಾವರಣದಲ್ಲಿರುವ ಸೋಡಾ ಬಾಟಲಿಯಿಂದ ಹೆಚ್ಚು ಜೋರಾಗಿ ಗ್ಯಾಸ್ ಹೊರಹೋಗುತ್ತಿರುತ್ತದೆ. ಆದರೆ ತಂಪುಗೊಳಿಸಿದ ಬಾಟಲಿಯಿಂದ, ಸಾವಕಾಶವಾಗಿ ಗುಳ್ಳೆಗಳು ಹೊರಹೋಗುತ್ತಿರುತ್ತವೆ. ಇದಕ್ಕೂ ಕೂಡ ವಿವರಣೆ ಸುಲಭ. ಉಷ್ಣತೆ ಕಡಿಮೆಯಿದ್ದಾಗ, ನೀರಿನಲ್ಲಿ ಅನಿಲಗಳ ಕರಗುವಿಕೆ ಹೆಚ್ಚಾಗುತ್ತದೆ. ಆದ್ದರಿಂದಲೇ, ತಣ್ಣಗಿನ ಸೋಡಾ ಕುಡಿದಾಗ, ನಮಗೆ ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಒಳ ಸೇರಿದ ಅನುಭವವಾಗುವುದು! ಅದಿರಲಿ. ನೀರು ಕಾಸುವಾಗ, ನೀರು ಕುದಿಯುವ ಮೊದಲೇ ನೀರಿನಿಂದ ಗುಳ್ಳೆಗಳು ಹೊರಹೋಗುವುದು ಏಕೆಂದು ಈಗ ತಿಳಿಯಿತೇ?

ನೀರಿನಲ್ಲಿ ಕರಗುವ ಅನಿಲಗಳು ಕೆಲವೊಮ್ಮೆ ಮಾರಣಾಂತಿಕವಾಗಬಹುದು ಎಂದೆನಷ್ಟೇ? ಇದಕ್ಕೆ ನಾವೂ ನೀವೂ ಹೆದರಬೇಕಾಗಿಲ್ಲ. ಇದೇನಿದ್ದರೂ ಆಳ ಸಮುದ್ರಕ್ಕೆ ಮುಳಗು ಹಾಕುವವರು ಹೆದರಬೇಕಾದ ವಿಷಯ. ಈಜಾಡುವಾಗ, ನೀರಿನ ಆಳಕ್ಕೆ ಹೋದಂತೆಲ್ಲ ದೇಹದ ಮೇಲೆ ಒತ್ತಡ ಹೆಚ್ಚಾಗುವುದನ್ನು ನೀವು ಗಮನಿಸಿರಬಹುದು. ಕೆರೆ-ಕುಂಟೆಗಳ ಸ್ವಲ್ಪ ಆಳದಲ್ಲೇ ಅಷ್ಟು ಒತ್ತಡವಿರಬೇಕಾದರೆ, ಇನ್ನು ಸಮುದ್ರದ ಆಳದಲ್ಲಿ ಎಷ್ಟು ಒತ್ತಡವಿರಬೇಡ? ಮೊದಲೇ ಹೇಳಿದಂತೆ, ಒತ್ತಡ ಹೆಚ್ಚಾದಂತೆ ನೀರಿನಲ್ಲಿ ಅನಿಲಗಳ ಕರಗುವಿಕೆಯೂ ಹೆಚ್ಚಾಗುತ್ತದೆ. ಹೀಗಾಗಿ ಸಮುದ್ರದ ಆಳದಲ್ಲಿ, ಸಿಲಿಂಡರ್ ಗಳಲ್ಲಿ ತೆಗೆದುಕೊಂಡ ಹೋದ ಗಾಳಿಯನ್ನು ಉಸಿರಾಡುವಾಗ, ರಕ್ತದಲ್ಲಿ ವಿವಿಧ ಅನಿಲಗಳ ಕರಗುವಿಕೆಯೂ ಹೆಚ್ಚುತ್ತದೆ. ಮೊದಲೇ ಸಾರಜನಕ, ಆಮ್ಲಜನಕಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ನೀರಿನಲ್ಲಿ (ರಕ್ತದಲ್ಲಿ ಹೆಚ್ಚಿನಂಶ ನೀರೇ ಇರುವುದರಿಂದ, ರಕ್ತದಲ್ಲೂ ಕೂಡ) ಕರಗುವಂಥದ್ದು! ಇನ್ನು ಹೆಚ್ಚಿನ ಒತ್ತಡದಲ್ಲಿದ್ದಾಗ ಕೇಳಬೇಕೆ? ಸಾರಜನಕ ಹೆಚ್ಚಿನ ಪ್ರಮಾಣದಲ್ಲಿ ಮುಳುಗು ಹಾಕಿದವನ ರಕ್ತದಲ್ಲಿ ಕರಗಿಬಿಡುತ್ತದೆ. ಹೀಗೆ ಹೆಚ್ಚಿನ ಒತ್ತಡದಲ್ಲಿದ್ದಾಗ ಕರಗಿದ ಸ್ಥಿತಿಯಲ್ಲಿರುವ ಸಾರಜನಕ, ವ್ಯಕ್ತಿ ಸಮುದ್ರದಿಂದ ಮೇಲೇ ಕಡಿಮೆ ಒತ್ತಡದ ಪ್ರದೇಶಕ್ಕೆ ಬಂದಂತೆ, ರಕ್ತದಿಂದ ಹೊರಬರಲು ಪ್ರಾರಂಭಿಸುತ್ತದೆ. ಹೀಗೆ ರಕ್ತದಿಂದ ಹೊರಬಂದ ಸಾರಜನಕ, ಲೋಮ ರಕ್ತನಾಳಗಳಲ್ಲಿ ಸಿಕ್ಕಿಹಾಕಿಕೊಂಡು ಬಿಡುತ್ತದೆ. ಇದು ಸಂದುಗಳಲ್ಲಿ ವಿಪರೀತ ನೋವಿಗೆ ಕಾರಣವಾಗುತ್ತದೆ. ಪರಿಸ್ಥಿತಿ ಗಂಭೀರಗೊಂಡರೆ, ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗಿ ಸಾಯಲೂಬಹುದು. ಈ ಸ್ಥಿತಿಗೆ ವೈದ್ಯಕೀಯವಾಗಿ, 'ಡಿ ಕಂಪ್ರೆಷನ್ ಸಿಕ್ನೆಸ್' ಅಥವಾ 'ಬೆಂಡ್ಸ್' ಎಂದು ಕರೆಯುತ್ತಾರೆ. ಇದನ್ನು ತಪ್ಪಿಸಲು ಒಂದು ಸುಲಭ ಉಪಾಯವಿದೆ. ಅದೆಂದರೆ, ಉಸಿರಾಡಲು ಒಯ್ಯುವ ಗಾಳಿಯಲ್ಲಿ ಸಾರಜನಕದ ಜಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ 'ಹೀಲಿಯಮ್' ಎಂಬ ಜಡಾನಿಲವನ್ನು ಸೇರಿಸುವುದು. 'ಹೀಲಿಯಮ್' ನೀರಿನಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕರಗುವಂತಹ ಅನಿಲವಾಗಿರುವುದರಿಂದ, ಅದು ಹೆಚ್ಚಿನ ಸಾರಜನಕದ ಪ್ರಮಾಣದಿಂದಾಗುವ ದುಷ್ಪರಿಣಾಮಗಳನ್ನು ತಪ್ಪಿಸುತ್ತದೆ.

ಇದು ರಕ್ತದಲ್ಲಿ ಅನಿಲಗಳು ಹೆಚ್ಚಿನ ಪ್ರಮಾಣದಲ್ಲಿ ಕರಗುವುದರಿಂದ ಆಗಬಹುದಾದ ದುರ್ಘಟನೆ. ಆದರೆ, ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನಿಲಗಳು ಕರಗದಿದ್ದರೂ ತೊಂದರೆಯೇ! ಹೌದು. ಪರ್ವತಾರೋಹಿಗಳಿಗೆ ಈ ರೀತಿಯ ಸಮಸ್ಯೆ ಎದುರಾಗುತ್ತದೆ. ಎತ್ತರಕ್ಕೇರಿದಂತೆಲ್ಲ, ಒತ್ತಡ ಕಡಿಮೆಯಾಗುತ್ತದೆಯಷ್ಟೇ? ಆಗ ರಕ್ತದಲ್ಲಿ ಆಮ್ಲಜನಕದ ಕರಗುವಿಕೆಯೂ ಕಡಿಮೆಯಾಗುತ್ತದೆ. ಇದರಿಂದಾಗಿ ಸ್ನಾಯುಗಳಿಗೆ ಆಮ್ಲಜನಕದ ಪೂರೈಕೆ ಕುಂಠಿತಗೊಂಡು, 'ಅನೊಕ್ಸಿಯಾ' ಎಂಬ ಸಮಸ್ಯೆ ಉದ್ಭವಿಸಬಹುದು.

ಮಾರ್ಚ್ ೨, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಇಜ್ಞಾನ Ejnana
www.ejnana.com