ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನ, ಪ್ರಚಾರ ಹಾಗೂ ವಿಸ್ತರಣೆ (SCoPE) ವಿಜ್ಞಾನ್ ಪ್ರಸಾರ್‌ನ ಧ್ಯೇಯ.
ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನ, ಪ್ರಚಾರ ಹಾಗೂ ವಿಸ್ತರಣೆ (SCoPE) ವಿಜ್ಞಾನ್ ಪ್ರಸಾರ್‌ನ ಧ್ಯೇಯ.vigyanprasar.gov.in

ವಿಜ್ಞಾನ ಪ್ರಸಾರದ ೩೩ ವರ್ಷ

ಪತ್ರಿಕೆಗಳ ವಿಜ್ಞಾನ ಪುಟಗಳು, ವಿಜ್ಞಾನ ಪತ್ರಿಕೆಗಳು ಇಂದು ಕಾಣೆಯಾಗುತ್ತಿವೆ. ಬದಲಾದ ಬೇಡಿಕೆಗಳಿಗೆ ಅನುಗುಣವಾಗಿ ನಾವು ಹೊಸ ಹಾದಿಗಳನ್ನು ಹುಡುಕಬೇಕಿದೆ. ಈ ಹಾದಿಯಲ್ಲಿ ಸುದೀರ್ಘ ಪಯಣ ಕೈಗೊಂಡಿರುವುದು ವಿಜ್ಞಾನ್ ಪ್ರಸಾರ್‌ನ ಹೆಚ್ಚುಗಾರಿಕೆ.

"ಜನರನ್ನು ತಲುಪದ ವಿಜ್ಞಾನದಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ," ಎನ್ನುವುದು ಅಮೆರಿಕಾದ ಸಂಶೋಧಕಿಯೊಬ್ಬರು ಹೇಳಿದ ಮಾತು. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜನರನ್ನು ತಲುಪುವುದರ ಮಹತ್ವವನ್ನು ಬಲ್ಲವರು ಬಹಳ ಹಿಂದಿನಿಂದಲೇ ವಿಜ್ಞಾನ ಸಂವಹನಕ್ಕೆ ಒತ್ತು ಕೊಡುತ್ತಾ ಬಂದಿದ್ದಾರೆ. "ಯಾವ ಜನರಲ್ಲಿ ಈ ನೂತನ ಜ್ಞಾನವು ಹೆಚ್ಚುತ್ತಿದೆಯೋ ಆ ಜನರು ದಿನೇ ದಿನೇ ಪ್ರಾಬಲ್ಯಕ್ಕೆ ಬರುವುದರಲ್ಲಿ ಸಂಶಯವಿಲ್ಲ," ಎಂದು ಭಾರತ ರತ್ನ ವಿಶ್ವೇಶ್ವರಯ್ಯನವರು ಕಳೆದ ಶತಮಾನದ ಪ್ರಾರಂಭದಲ್ಲೇ ಹೇಳಿದ್ದರು!

ವಿಜ್ಞಾನ ಸಂವಹನದ ಪ್ರಾಮುಖ್ಯವೇ ಅಂಥದ್ದು. ಹೀಗೊಂದು ಪ್ರತ್ಯೇಕ ಕ್ಷೇತ್ರವಿದೆ ಎಂದು ತಿಳಿಯದವರು ಕೂಡ ಅದರ ಪ್ರಯೋಜನವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪಡೆದುಕೊಳ್ಳುತ್ತಿರುತ್ತಾರೆ. ಸರಿಯಾದ ಹಾದಿಯಲ್ಲಿ ನಡೆಯುವ ವಿಜ್ಞಾನ ಸಂವಹನ ಹರಟೆ ಕಟ್ಟೆಗಳ ಸಂಭಾಷಣೆಯನ್ನು, ಸಮಾಜ ಜಾಲಗಳ ಫಾರ್ವರ್ಡುಗಳನ್ನೂ ಪ್ರಭಾವಿಸಬಲ್ಲದು.

ವಿಜ್ಞಾನ ಸಂವಹನ ಎಂದಮಾತ್ರಕ್ಕೆ ಅದು ಸಾರ್ವಜನಿಕ ಭಾಷಣ ಇಲ್ಲವೇ ಟೀವಿ ವಾಹಿನಿಗಳ ಅಬ್ಬರದ ಚರ್ಚೆಗಳ ರೂಪದಲ್ಲೇ ನಡೆಯಬೇಕು ಎಂದೇನೂ ಇಲ್ಲ. ಸುದೀರ್ಘ ಅವಧಿಯಲ್ಲಿ ಹೆಚ್ಚು ಗದ್ದಲವಿಲ್ಲದೆ ನಡೆಯುವ ಸಂವಹನವೂ ಗಮನಾರ್ಹ ಪ್ರಭಾವ ಬೀರಬಲ್ಲದು. ಗ್ರಹಣದಂತಹ ಸಂದರ್ಭಗಳನ್ನೂ ಕುತೂಹಲದಿಂದ ನೋಡುವ, ಮಾಹಿತಿ ತಂತ್ರಜ್ಞಾನದ ಹೊಚ್ಚಹೊಸ ಅನುಕೂಲಗಳನ್ನು ಪಡೆದುಕೊಳ್ಳುವ ಬಗ್ಗೆ ಜನಸಾಮಾನ್ಯರು ತೋರಿಸುತ್ತಿರುವ ಆಸಕ್ತಿಯ ಹಿನ್ನೆಲೆಯಲ್ಲಿ ಇಂತಹ ಸಂವಹನದ್ದೂ ಬಹುದೊಡ್ಡ ಪಾತ್ರ ಇದೆ.

ಸದ್ದು ಗದ್ದಲವಿಲ್ಲದ, ಆದರೆ ಸತ್ವಯುತವಾದ ವಿಜ್ಞಾನ ಸಂವಹನವನ್ನು ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಸ್ಥೆಗಳ ಸಾಲಿನಲ್ಲಿ 'ವಿಜ್ಞಾನ್ ಪ್ರಸಾರ್'ನದ್ದು ಪ್ರಮುಖ ಹೆಸರು. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕೆಲಸಮಾಡುತ್ತಿರುವ ವಿಜ್ಞಾನ್ ಪ್ರಸಾರ್ ಪ್ರಾರಂಭವಾಗಿ ಈಗಾಗಲೇ ೩೩ ವರ್ಷಗಳು ಪೂರ್ಣಗೊಂಡಿವೆ. ಪುಸ್ತಕ-ಪತ್ರಿಕೆಗಳಿಂದ ಆಟಿಕೆಗಳು ಹಾಗೂ ವೈಜ್ಞಾನಿಕ ಕಿಟ್ ಗಳವರೆಗೆ, ಆಕಾಶವಾಣಿ-ದೂರದರ್ಶನ ಕಾರ್ಯಕ್ರಮಗಳಿಂದ ವೆಬ್ಸೈಟ್ ಹಾಗೂ ಓಟಿಟಿಗಳವರೆಗೆ ವಿಜ್ಞಾನ್ ಪ್ರಸಾರ್ ಈ ಅವಧಿಯುದ್ದಕ್ಕೂ ವಿಜ್ಞಾನ ಸಂವಹನದ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನ, ಪ್ರಚಾರ ಹಾಗೂ ವಿಸ್ತರಣೆ (SCoPE) ವಿಜ್ಞಾನ್ ಪ್ರಸಾರ್‌ನ ಧ್ಯೇಯ. ೧೯೮೯ರ ಅಕ್ಟೋಬರ್ ೧೧ರಂದು ಈ ಸಂಸ್ಥೆ ಪ್ರಾರಂಭವಾದಾಗ ಅದರ ನೇತೃತ್ವ ವಹಿಸಿದ್ದವರು ಖ್ಯಾತ ವಿಜ್ಞಾನಿ ಹಾಗೂ ವಿಜ್ಞಾನ ಸಂವಹನಕಾರ ಡಾ. ನರೇಂದ್ರ ಸೆಹಗಲ್, ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಯುನೆಸ್ಕೋ ನೀಡುವ ಕಳಿಂಗ ಬಹುಮಾನ ಪಡೆದ ಸಾಧಕರು. ಅವರ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ ವಿಜ್ಞಾನ್ ಪ್ರಸಾರ್ ಬಹಳ ಬೇಗನೆ ತನ್ನ ಕಾರ್ಯಕ್ರಮಗಳಿಂದಾಗಿ ಜನರ ಗಮನವನ್ನು ಸೆಳೆಯಿತು. ವಿಜ್ಞಾನ್ ಪ್ರಸಾರ್‌ನ ಪ್ರಾರಂಭದ ವರ್ಷಗಳಲ್ಲಿ ಮೂಡಿಬಂದ 'ವಿಜ್ಞಾನ ವಿಧಿ' ಹಾಗೂ 'ಮಾನವ್ ಕಾ ವಿಕಾಸ್'ನಂತಹ ರೇಡಿಯೋ ಸರಣಿಗಳನ್ನು ಭಾರತದ ವಿಜ್ಞಾನ ಸಂವಹನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲುಗಳೆಂದೇ ಗುರುತಿಸಬಹುದು.

ನಂತರದ ವರ್ಷಗಳಲ್ಲೂ ವಿಜ್ಞಾನ್ ಪ್ರಸಾರ್ ಆಕಾಶವಾಣಿಯ ಸಹಯೋಗದಲ್ಲಿ ಹಲವಾರು ರೇಡಿಯೋ ಸರಣಿಗಳನ್ನು ರೂಪಿಸಿದೆ. ಬೆಂಗಳೂರು ಆಕಾಶವಾಣಿಯ ಜೊತೆಗೂಡಿ ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಕನ್ನಡದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಮೂಡಿಬರುವ ಇಂತಹ ಕಾರ್ಯಕ್ರಮಗಳ ಮೂಲಕ ದೇಶದೆಲ್ಲೆಡೆಯ ಕೇಳುಗರನ್ನು ತಲುಪಿರುವ ವಿಜ್ಞಾನ್ ಪ್ರಸಾರ್ ಈವರೆಗೆ ರೂಪಿಸಿರುವ ರೇಡಿಯೋ ಕಾರ್ಯಕ್ರಮಗಳ ಒಟ್ಟು ಅವಧಿ ಮೂರೂವರೆ ಸಾವಿರ ಗಂಟೆಗಳಿಗೂ ಹೆಚ್ಚು!

ವಿಜ್ಞಾನ್ ಪ್ರಸಾರ್ ಸಂಸ್ಥೆ ದೂರದರ್ಶನಕ್ಕೆಂದೂ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ದೂರದರ್ಶನದ ಹಲವು ವಾಹಿನಿಗಳ ಮೂಲಕ ವಿಜ್ಞಾನ್ ಪ್ರಸಾರ್ ಕಾರ್ಯಕ್ರಮಗಳು, ಕಾರ್ಯಕ್ರಮ ಸರಣಿಗಳು ಈಗಾಗಲೇ ಪ್ರಸಾರವಾಗಿದ್ದು ಸಾಕಷ್ಟು ಜನಪ್ರಿಯತೆ ಗಳಿಸಿವೆ. ದೂರದರ್ಶನದ 'ರಾಜ್ಯಸಭಾ ಟೀವಿ'ಯಲ್ಲಿ ವಿಜ್ಞಾನದ ಸುದ್ದಿಗಳನ್ನೂ ಪ್ರಸಾರ ಮಾಡುತ್ತಿರುವುದು ವಿಜ್ಞಾನ್ ಪ್ರಸಾರ್‌ನ ಇನ್ನೊಂದು ಸಾಧನೆ. ಪ್ರತಿಷ್ಠಿತ ವಿಜ್ಞಾನಿಗಳ ಸಂದರ್ಶನಗಳನ್ನೂ ಅದು ನಿಯತವಾಗಿ ಪ್ರಸಾರ ಮಾಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ಬಹಳ ಕ್ಷಿಪ್ರವಾಗಿ ಸ್ಪಂದಿಸುತ್ತಾ ಬಂದಿರುವ ವಿಜ್ಞಾನ್ ಪ್ರಸಾರ್‌ನ ಬಹುತೇಕ ಕಾರ್ಯಕ್ರಮಗಳು ಆನ್ಲೈನ್ ಮಾಧ್ಯಮದಲ್ಲಿ ಈಗಾಗಲೇ ಲಭ್ಯವಿವೆ. ಈಚಿನ ವರ್ಷಗಳಲ್ಲಿ ಓಟಿಟಿ ಸೇವೆಗಳು ಗಳಿಸಿರುವ ಜನಪ್ರಿಯತೆಯನ್ನು ಮನಗಂಡ ವಿಜ್ಞಾನ್ ಪ್ರಸಾರ್ ತನ್ನದೇ ಆದ 'ಇಂಡಿಯಾ ಸೈನ್ಸ್' ಎಂಬ ಓಟಿಟಿ ವಾಹಿನಿಯನ್ನು ಪ್ರಾರಂಭಿಸಿ ಅದರ ಮೂಲಕ ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸಾವಿರಾರು ವೀಡಿಯೊಗಳನ್ನು ಪ್ರಕಟಿಸಿದೆ. ನಾಲ್ಕು ಸಾವಿರಕ್ಕೂ ಮಿಗಿಲಾದ ವೀಡಿಯೋಗಳು ಈ ವಾಹಿನಿಯ ಮೂಲಕ ಮುಕ್ತವಾಗಿ ದೊರೆಯುತ್ತಿವೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಹೆಚ್ಚಿನ ವೀಡಿಯೊಗಳು ಇವೆ ಎನ್ನುವುದು ಕೊರತೆ ಎನ್ನಿಸಿದರೂ, ಭಾರತೀಯ ಭಾಷೆಗಳಲ್ಲಿ ಹೊಸ ವೀಡಿಯೊಗಳನ್ನು ತಯಾರಿಸಲು ಮುಂದೆಬರುವವರನ್ನು, ಈಗಾಗಲೇ ರೂಪಿಸಿರುವ ವೀಡಿಯೊಗಳ ಡಬ್ಬಿಂಗ್-ಸಬ್ ಟೈಟಲಿಂಗ್ ಮಾಡುವವರನ್ನೂ ನಾವು ಪ್ರೋತ್ಸಾಹಿಸುತ್ತೇವೆ ಎಂದು ವಿಜ್ಞಾನ್ ಪ್ರಸಾರ್‌ ನಿರ್ದೇಶಕ ಡಾ. ನಕುಲ್‌ ಪರಾಶರ್ ಹೇಳುತ್ತಾರೆ.

ಕೇವಲ ಸಂವಹನವಾದರೆ ಸಾಲದು. ಸಂವಹನಕಾರರನ್ನು ಸೃಷ್ಟಿಸುವುದೂ ಮುಖ್ಯ ಎನ್ನುವುದು ವಿಜ್ಞಾನ್ ಪ್ರಸಾರ್ ನಂಬಿಕೆ. ಇದರ ನಿಮಿತ್ತ ಸಂಸ್ಥೆ ವಿಜ್ಞಾನ ವೀಡಿಯೋ ಹಾಗೂ ಚಲನಚಿತ್ರಗಳ ತಯಾರಿಕೆಯ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ವಿಜ್ಞಾನ ಚಲನಚಿತ್ರೋತ್ಸವಗಳನ್ನು ನಡೆಸಿದೆ, ವಿಜ್ಞಾನ ನಾಟಕೋತ್ಸವದಂತಹ ವಿನೂತನ ಪ್ರಯತ್ನಗಳನ್ನೂ ಸಂಘಟಿಸಿದೆ. ಕನ್ನಡದಲ್ಲಿ ವಿಜ್ಞಾನ ನಾಟಕಗಳ ರಚನೆ ಹಾಗೂ ಪ್ರದರ್ಶನವನ್ನು ಪ್ರೋತ್ಸಾಹಿಸುವ ಮೂಲಕ ವಿಜ್ಞಾನ ನಾಟಕಗಳು ಶಾಲೆ, ಕಾಲೇಜುಗಳಲ್ಲಿ ಪ್ರದರ್ಶನಗೊಳ್ಳುವಂತೆ ಮಾಡಿ, ಹೊಸ ಪ್ರೇಕ್ಷಕರನ್ನು ನಾಟಕ ಕ್ಷೇತ್ರದತ್ತ ಕರೆತಂದಿದೆ.

ವಿಜ್ಞಾನಕ್ಕೆ ಸಂಬಂಧಪಟ್ಟ ಇಂತಹ ಸಂವಹನ ಚಟುವಟಿಕೆಗಳು ದೇಶದ ಮೂಲೆಮೂಲೆಗಳಲ್ಲೂ ನಡೆಯಬೇಕು ಎನ್ನುವುದು ವಿಜ್ಞಾನ್ ಪ್ರಸಾರ್‌ನ ಕನಸು. ಈ ಉದ್ದೇಶದಿಂದ ಅದು 'ವಿಪ್ ನೆಟ್ ಕ್ಲಬ್' ಎಂಬ ಸಂಘಗಳ ಸ್ಥಾಪನೆಯನ್ನು ಪ್ರೋತ್ಸಾಹಿಸುತ್ತಿದೆ. ಈಗಾಗಲೇ ಮೂರೂವರೆ ಸಾವಿರಕ್ಕೂ ಹೆಚ್ಚು ವಿಪ್ ನೆಟ್ ಕ್ಲಬ್‌ಗಳು ವಿಜ್ಞಾನ್ ಪ್ರಸಾರ್‌ನೊಡನೆ ನೋಂದಾಯಿಸಿಕೊಂಡಿದ್ದು, ವಿವಿಧ ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬೇಕಾದ ಪ್ರೋತ್ಸಾಹವನ್ನು ಪಡೆಯುತ್ತಿವೆ. "ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂಸ್ಥೆಗಳನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಅಭಿನಂದಿಸುವುದರ ಮೂಲಕ ವಿಜ್ಞಾನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲಾಗುತ್ತಿದೆ," ಎನ್ನುತ್ತಾರೆ ರಾಷ್ಟ್ರಮಟ್ಟದ ಅತ್ಯುತ್ತಮ ಕ್ಲಬ್‌ಗಳಲ್ಲೊಂದಾದ ಚಾಮರಾಜನಗರದ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್‌ನ ಅಭಿಷೇಕ್ ಎ. ಎಸ್. ವಿಜ್ಞಾನ ಕಲಿಕೆ ಎನ್ನುವುದು ಕೇವಲ ಶಾಲೆಗಳಿಗೆ ಸೀಮಿತವಾಗದೆ, ಅದರಾಚಿನ ಎಲ್ಲರಿಗೂ ಮುಟ್ಟಬೇಕಾದರೆ ಇಂತಹ ಚಟುವಟಿಕೆಗಳೂ ಅಗತ್ಯ.

ಭಾರತದ ವಿವಿಧ ರಾಜ್ಯಗಳಲ್ಲಿ ವಿಜ್ಞಾನ ಸಂವಹನದಲ್ಲಿ ತೊಡಗಿಕೊಂಡಿರುವ ಎಲ್ಲ ಸಂಸ್ಥೆಗಳಿಗೂ ವಿಜ್ಞಾನ್‌ ಪ್ರಸಾರ್‌ ಒಡನಾಡಿ ಎಂದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ರಾಷ್ಟ್ರೀಯ ಅನುವಾದ ಮಿಷನ್‌, ಹಲವು ಸರಕಾರೇತರ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳ ಜೊತೆಗೆ ವಿಜ್ಞಾನ್‌ ಪ್ರಸಾರ್‌‌ಗೆ ನಿರಂತರ ಒಡನಾಟವಿದೆ. ಇದರ ಫಲವಾಗಿ ವಿಜ್ಞಾನ್ ಪ್ರಸಾರ್‌ ಅನೇಕ ಸ್ವಾರಸ್ಯಕರ ಕಾರ್ಯಕ್ರಮಗಳನ್ನು ನಡೆಸಿದೆ. ೨೦೨೨ರ ಫೆಬ್ರವರಿಯಲ್ಲಿ ಅದು ಏಳು ದಿನಗಳ ಕಾಲ ದೇಶದ ಎಪ್ಪತ್ತೈದು ನಗರಗಳಲ್ಲಿ, ಎಲ್ಲ ರಾಜ್ಯಗಳನ್ನೂ ಒಳಗೊಂಡ ವಿಜ್ಞಾನ ಹಬ್ಬವನ್ನು ಹಮ್ಮಿಕೊಂಡಿತ್ತು.

ವಿಜ್ಞಾನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪುಸ್ತಕಗಳ ಪ್ರಕಟಣೆಯಲ್ಲೂ ವಿಜ್ಞಾನ್ ಪ್ರಸಾರ್ ಸಾಧನೆ ಗಮನಾರ್ಹವಾದದ್ದು. ಈವರೆಗೆ ಅದು ಮುನ್ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು, ಈ ಪುಸ್ತಕಗಳು ಕನ್ನಡ, ಇಂಗ್ಲಿಷ್, ಹಿಂದಿ ಮಾತ್ರವೇ ಅಲ್ಲದೆ ಇನ್ನೂ ಹನ್ನೆರಡು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವುದು ವಿಶೇಷ.

'ಡ್ರೀಮ್ ೨೦೪೭' ಎನ್ನುವುದು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ವಿಜ್ಞಾನ್ ಪ್ರಸಾರ್ ೧೯೯೮ರಿಂದ ಹೊರತರುತ್ತಿರುವ ಮಾಸಪತ್ರಿಕೆ. ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಆಕರಗಳೇ ಅಪರೂಪ ಎನ್ನುವಂತಹ ಪರಿಸ್ಥಿತಿಯಿದ್ದಾಗ ದೇಶದೆಲ್ಲೆಡೆಯ ಓದುಗರಿಗೆ ಪ್ರತಿ ತಿಂಗಳೂ ಸಮೃದ್ಧ ಮಾಹಿತಿಯನ್ನು ಉಚಿತವಾಗಿ ಒದಗಿಸಿದ್ದು ಈ ಪತ್ರಿಕೆಯ ಹೆಗ್ಗಳಿಕೆ. ಭಾರತದಲ್ಲಿ ವಿಜ್ಞಾನ ಬೆಳೆದು ಬಂದ ಹಾದಿಯನ್ನು ದಾಖಲಿಸುವ ಪತ್ರಿಕೆ ಇದು ಎಂದರೂ ತಪ್ಪಾಗಲಾರದು.

ಕೇಂದ್ರ ಸರಕಾರದ ಎಲ್ಲ ಕಾರ್ಯಕ್ರಮಗಳೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತವಾಗುತ್ತಿವೆ, ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವುದು ಆಗಿಂದಾಗ್ಗೆ ಕೇಳಿಬರುವ ಮಾತು. ಆದರೆ, ವಿಜ್ಞಾನ್ ಪ್ರಸಾರ್ ಸಂಸ್ಥೆ ಪ್ರಾದೇಶಿಕ ಭಾಷೆಗಳಲ್ಲಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನದ ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಸಿಕೊಂಡು ಬಂದಿದೆ.

ಕನ್ನಡ, ಗುಜರಾತಿ, ತೆಲುಗು, ಮರಾಠಿ, ಕಾಶ್ಮೀರಿ, ಕೊಂಕಣಿ, ಪಂಜಾಬಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ವಿಜ್ಞಾನ ಪತ್ರಿಕೆಗಳನ್ನು ಹೊರತರಲಾಗುತ್ತಿದೆ. ೨೦೨೧ರ ಫೆಬ್ರುವರಿಯಿಂದ ನಿರಂತರವಾಗಿ ಪ್ರಕಟವಾಗುತ್ತಿರುವ 'ಕುತೂಹಲಿ' ಕನ್ನಡ ಮಾಸಪತ್ರಿಕೆಯೂ ವಿಜ್ಞಾನ್ ಪ್ರಸಾರ್‌ನದ್ದೇ ಕೊಡುಗೆ. 'ಡ್ರೀಮ್ ೨೦೪೭' ಜೊತೆಗೆ ಈ ಎಲ್ಲ ಪತ್ರಿಕೆಗಳ ಡಿಜಿಟಲ್ ಆವೃತ್ತಿಗಳೂ ವಿಜ್ಞಾನ್ ಪ್ರಸಾರ್ ಜಾಲತಾಣದಲ್ಲಿ ಮುಕ್ತವಾಗಿ ಲಭ್ಯವಿವೆ. ಮುಂದಿನ ದಿನದಲ್ಲಿ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಪತ್ರಿಕೆ ಹಾಗೂ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ವಿಜ್ಞಾನ್ ಪ್ರಸಾರ್ ಸಂಸ್ಥೆಯದು.

ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಿಜ್ಞಾನ ಪುಟಗಳು, ವಿಜ್ಞಾನಕ್ಕೇ ಮೀಸಲಾದ ಪತ್ರಿಕೆಗಳು ಇಂದು ಕಾಣೆಯಾಗುತ್ತಿವೆ. ಬದಲಾದ ಸಮಯ ಹಾಗೂ ಬದಲಾದ ಬೇಡಿಕೆಗಳಿಗೆ ಅನುಗುಣವಾಗಿ ನಾವು ಹೊಸ ಹಾದಿಗಳನ್ನು ಹುಡುಕಬೇಕಿದೆ. ಇಂತಹ ಹುಡುಕಾಟದ ಹಾದಿಯಲ್ಲಿ ಸುದೀರ್ಘ ಪಯಣ ಕೈಗೊಂಡಿರುವುದು ವಿಜ್ಞಾನ್ ಪ್ರಸಾರ್ ಸಂಸ್ಥೆಯ ಹೆಚ್ಚುಗಾರಿಕೆ. ವಿಜ್ಞಾನ್ ಪ್ರಸಾರ್‌ನ ಪಯಣ ಹೀಗೆಯೇ ಮುಂದುವರಿಯಲಿ, ವಿಜ್ಞಾನ ಪ್ರಸಾರದ ಕೆಲಸ ನಿರಂತರವಾಗಿ ಸಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

ನವೆಂಬರ್ ೨೦೨೨ರ ಕುತೂಹಲಿಯಲ್ಲಿ ಪ್ರಕಟವಾದ ಲೇಖನ

ವಿಜ್ಞಾನ ಮತ್ತು ತಂತ್ರಜ್ಞಾನದ ಸಂವಹನ, ಪ್ರಚಾರ ಹಾಗೂ ವಿಸ್ತರಣೆ (SCoPE) ವಿಜ್ಞಾನ್ ಪ್ರಸಾರ್‌ನ ಧ್ಯೇಯ.
ಇಂಡಿಯಾ ಸೈನ್ಸ್: ವಿಜ್ಞಾನ ವೀಡಿಯೋಗಳಿಗೆ ಭಾರತದ್ದೇ ಓಟಿಟಿ!

Related Stories

No stories found.
logo
ಇಜ್ಞಾನ Ejnana
www.ejnana.com