ದಶಕದ ಹಿಂದಿನ (೨೦೧೧) ಕಾರ್ಯಕ್ರಮವೊಂದರಲ್ಲಿ ಶ್ರೀ ಸುಧೀಂದ್ರ, ಮತ್ತೋರ್ವ ಹಿರಿಯ ಸಂವಹನಕಾರ ಶ್ರೀ ಕೈವಾರ ಗೋಪೀನಾಥರ ಜೊತೆ
ದಶಕದ ಹಿಂದಿನ (೨೦೧೧) ಕಾರ್ಯಕ್ರಮವೊಂದರಲ್ಲಿ ಶ್ರೀ ಸುಧೀಂದ್ರ, ಮತ್ತೋರ್ವ ಹಿರಿಯ ಸಂವಹನಕಾರ ಶ್ರೀ ಕೈವಾರ ಗೋಪೀನಾಥರ ಜೊತೆsrinidhi.net.in

ಸುಧೀಂದ್ರರಿಗೆ ಫೋನ್ ಮಾಡಲು ಅವತ್ತು ಹಲವು ಕಾರಣಗಳಿದ್ದವು!

ಅಸಂಖ್ಯ ಓದುಗರಿಗೆ ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ ಒಬ್ಬ ಉತ್ತಮ ಲೇಖಕ, ಹಿರಿಯ ವಿಜ್ಞಾನಿ. ಕನ್ನಡ ವಿಜ್ಞಾನ ಸಂವಹನಕಾರರ ಪುಟ್ಟ ಬಳಗದಲ್ಲಿ ಅವರು ನಮಗೆಲ್ಲ ಉತ್ತಮ ಮಿತ್ರರೂ ಆಗಿದ್ದರು.

ಕಳೆದ ಶುಕ್ರವಾರ ಮಧ್ಯಾಹ್ನ (ಜುಲೈ ೨), ಏನೋ ಓದುತ್ತಿದ್ದಾಗ ಜೋರಾದ ಸದ್ದು ಕೇಳಿಸಿತು, ಕಿಟಕಿಯೆಲ್ಲ ಅಲ್ಲಾಡಿದ್ದೂ ಗಮನಕ್ಕೆ ಬಂತು. ಸ್ವಲ್ಪಹೊತ್ತು ಬಿಟ್ಟು ಟ್ವಿಟರ್‌ನಲ್ಲಿ ಇಣುಕಿದರೆ ಅದರಲ್ಲಿ ಆ ಸದ್ದಿನದೇ ಸದ್ದು! ಅದೇ ಸಾಲಿನ ಇನ್ನೊಂದು ಪೋಸ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳು ಪ್ರಕಟವಾದ ಸುದ್ದಿ ಇತ್ತು.

ಮಾಮೂಲಿ ದಿನವಾಗಿದ್ದರೆ ಸಂಜೆಯೊಳಗೆ ಸುಧೀಂದ್ರರಿಗೆ ಫೋನ್ ಮಾಡಿ, ಕಿಟಕಿ ಅಲುಗಾಡಿದ್ದಕ್ಕೆ ಕಾರಣ ಏನಿರಬಹುದು ಎಂದು ವಿಚಾರಿಸಿ, ಪ್ರಶಸ್ತಿ ಬಂದಿದ್ದಕ್ಕೆ ಟ್ರೀಟು ಯಾವಾಗ ಕೊಡಿಸ್ತೀರಿ ಅಂತ ಕೇಳಿ, ಸಾಕಷ್ಟು ವಿಷಯ ಮಾತನಾಡಲು ಒಳ್ಳೆಯ ಅವಕಾಶ ಆಗಿರುತ್ತಿತ್ತು. ಆದರೆ ಫೋನು ಮಾಡಲು ಅಂದು ಸಂಜೆಯ ಹೊತ್ತಿಗೆ ಅವರೇ ಇರಲಿಲ್ಲ ಎನ್ನುವುದನ್ನು ನಂಬುವುದು ಇನ್ನೂ ಕಷ್ಟವೇ.

ನನ್ನ-ಸುಧೀಂದ್ರರ ಪರಿಚಯಕ್ಕೆ ಸುಮಾರು ೧೫ ವರ್ಷಗಳೇ ಆಗಿರಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ನಮ್ಮ ಒಡನಾಟ ಜಾಸ್ತಿಯಾಗಿತ್ತು. ಹಲವು ಸಭೆ-ಸಮಾರಂಭಗಳಲ್ಲಿ, ಸಮ್ಮೇಳನಗಳಲ್ಲಿ, ಸಮಿತಿಗಳಲ್ಲಿ, ಆನ್‌ಲೈನ್ ಮೀಟಿಂಗುಗಳಲ್ಲಿ ನಾವು ಒಟ್ಟಾಗಿ ಪಾಲ್ಗೊಳ್ಳುತ್ತಿದ್ದೆವು. ಧಾರವಾಡದ ವಿಜ್ಞಾನ ಸಮ್ಮೇಳನ, ಕಲಬುರಗಿಯ ಸಾಹಿತ್ಯ ಸಮ್ಮೇಳನಗಳಿಗೆ ಒಟ್ಟಿಗೆ ಹೋಗಿದ್ದೆವು. ವಿಟಿಯು ಪ್ರಸಾರಾಂಗದ ಸಮಿತಿಯಲ್ಲಿ ಒಟ್ಟಿಗೆಯೇ ಸದಸ್ಯರಾಗಿದ್ದೆವು. ಅವರಿಗಿಂತ ಕಿರಿಯನಾದರೂ ನನ್ನನ್ನು ಅವರ ಜೊತೆಯವನಂತೆಯೇ ನೋಡುತ್ತಿದ್ದದ್ದು ಸುಧೀಂದ್ರರ ದೊಡ್ಡಗುಣ. ಪದೇಪದೇ ಆಕ್ಷೇಪಿಸಿದ ಮೇಲೆ, ಈಚೆಗಷ್ಟೇ, ಅವರು ನನ್ನನ್ನು ಬಹುವಚನದಲ್ಲಿ ಸಂಬೋಧಿಸುವುದನ್ನು ನಿಲ್ಲಿಸಿದ್ದರು.

ಅಸಂಖ್ಯ ಓದುಗರಿಗೆ ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ ಒಬ್ಬ ಉತ್ತಮ ಲೇಖಕ, ಹಿರಿಯ ವಿಜ್ಞಾನಿ. ಕನ್ನಡ ವಿಜ್ಞಾನ ಸಂವಹನಕಾರರ ಪುಟ್ಟ ಬಳಗದಲ್ಲಿ ಅವರು ನಮಗೆಲ್ಲ ಉತ್ತಮ ಮಿತ್ರರೂ ಆಗಿದ್ದರು. ಮೈಸೂರುಪಾಕಿನಿಂದ ಮಸಾಲೆ ದೋಸೆಯವರೆಗೆ, ಗ್ಯಾಜೆಟ್‌ಗಳಿಂದ ಗ್ರೀನ್ ಟೀಯವರೆಗೆ ನಾವು ಅನೇಕ ವಿಷಯಗಳ ಬಗ್ಗೆ ಆಪ್ತವಾಗಿ ಮಾತನಾಡುತ್ತಿದ್ದೆವು. ಅವರ ಜೊತೆ ಮಾತು ಎಂದರೆ ಜೋಕು, ಕಾಲೆಳೆತಗಳಿಗೆ ಕೊರತೆಯೇ ಇಲ್ಲ! ಪತ್ರಿಕೆಗಳಲ್ಲಿ - ಟೀವಿ ಮಾಧ್ಯಮದಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ತಪ್ಪು ಮಾಹಿತಿ ಪ್ರಸಾರವಾದಾಗ ಅವರಿಗೆ ಬೇಸರವಾದರೂ ಅದರಲ್ಲೂ ಹಾಸ್ಯ ಕಂಡು ನಗುತ್ತಿದ್ದರು, ನಮ್ಮನ್ನೂ ನಗಿಸುತ್ತಿದ್ದರು. ಪ್ರತಿ ಬಾರಿ ಕರೆ ಮಾಡಿದಾಗಲೂ ಹೊಸ ವಿಷಯಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದರು. ಹೀಗೆ, ಹಿರಿಯ ಗೆಳೆಯರಂತೆಯೇ ಇದ್ದ ಸುಧೀಂದ್ರರಿಗೆ ೬೦ ತುಂಬಿತ್ತು ಎಂದು ಗೊತ್ತಾಗಿದ್ದೇ ಅವರಿಗೆ ಹುಷಾರಿಲ್ಲದ ಸುದ್ದಿ ಕೇಳಿದಾಗ!

ದಶಕದ ಹಿಂದಿನ (೨೦೧೧) ಕಾರ್ಯಕ್ರಮವೊಂದರಲ್ಲಿ ಶ್ರೀ ಸುಧೀಂದ್ರ, ಮತ್ತೋರ್ವ ಹಿರಿಯ ಸಂವಹನಕಾರ ಶ್ರೀ ಕೈವಾರ ಗೋಪೀನಾಥರ ಜೊತೆ
ಹನಿ, ಹನಿ, ನೀರ ಹನಿಯೂ... ಗುಲಾಬಿಯೂ...

ಅವರ ಬರಹಗಳನ್ನು, ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡುತ್ತಿದ್ದ ಹೊಸ ಪ್ರಯತ್ನಗಳನ್ನು ಮೆಚ್ಚಿಕೊಂಡಾಗ ಸಂತೋಷಪಡುತ್ತಿದ್ದ ಅವರು, ಹೀಗೂ ಮಾಡಬಹುದಿತ್ತಲ್ಲ ಸರ್ ಎಂದು ಕೇಳುವ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಅವರ ಪರಿಣತಿಯ ವಿಷಯಗಳನ್ನು ಮನಮುಟ್ಟುವಂತೆ ಹೇಳಿಕೊಡುತ್ತಿದ್ದರು, ಅವರಿಗೆ ಗೊತ್ತಿಲ್ಲದ್ದು ಏನಾದರೂ ಇದೆ ಎನ್ನಿಸಿದರೆ ಬಹಳ ಆಸಕ್ತಿಯಿಂದ ಹೇಳಿಸಿಕೊಳ್ಳುತ್ತಲೂ ಇದ್ದರು. ಕಲಿತದ್ದನ್ನು ಪ್ರಯೋಗಿಸಿ ಅದರ ಫಲಿತಾಂಶಗಳನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದರು. ನನ್ನ ಬರಹಗಳನ್ನು ಹಂಚಿಕೊಂಡಾಗಲೂ ಅಷ್ಟೇ, ಪೂರ್ತಿಯಾಗಿ ಓದಿ, ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದರು. ಕಳೆದ ವರ್ಷದ ಸಾನಿಕ್ ಬೂಮ್ ಸಂದರ್ಭದಲ್ಲಿ ನಾವು ಮಾಡಿಕೊಂಡ ವಿಚಾರವಿನಿಮಯವನ್ನು ನಾನು ಇನ್ನೂ ಬಹಳ ಜೋಪಾನವಾಗಿ ಉಳಿಸಿಟ್ಟುಕೊಂಡಿದ್ದೇನೆ.

ನನ್ನ ಬರಹಗಳ, ಪುಸ್ತಕಗಳ ಬಗ್ಗೆ ಬಹಳ ಆಸಕ್ತಿಯಿಟ್ಟು ವಿಚಾರಿಸಿಕೊಳ್ಳುತ್ತಿದ್ದ ಸುಧೀಂದ್ರರು ಅವರ ಹಾಗೂ ಮೇಘನಾರ ಪುಸ್ತಕಗಳನ್ನೂ ನನಗೆ ಕಳುಹಿಸಿಕೊಟ್ಟಿದ್ದರು. ನನ್ನ ಟೆಕ್‌ಬುಕ್ (೨೦೧೬) ಕೃತಿಗೆ ಮುನ್ನುಡಿ ಕೇಳಿದಾಗ ಸಂತೋಷದಿಂದ ಬರೆದುಕೊಟ್ಟಿದ್ದರು, ಪುಸ್ತಕವನ್ನೂ ಬಹುವಾಗಿ ಮೆಚ್ಚಿಕೊಂಡಿದ್ದರು. ಈಚೆಗೆ (ಮಾರ್ಚ್ ೨೦೨೧) ಕೆಎಸ್‌ಟಿಎ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ, ನನ್ನ ಹೊಸ ಪುಸ್ತಕಗಳನ್ನು ಖುಷಿಯಿಂದ ಪಡೆದು ಜೊತೆಯಲ್ಲಿ ಫೋಟೋ ಕೂಡ ತೆಗೆಸಿಕೊಂಡಿದ್ದರು, ಅದನ್ನು ನನಗೂ ಕಳಿಸಿದ್ದರು.

ಶ್ರೀ ಸುಧೀಂದ್ರ  ಅವರೊಡನೆ ಲೇಖಕ ಟಿ. ಜಿ. ಶ್ರೀನಿಧಿ
ಶ್ರೀ ಸುಧೀಂದ್ರ ಅವರೊಡನೆ ಲೇಖಕ ಟಿ. ಜಿ. ಶ್ರೀನಿಧಿಖಾಸಗಿ ಸಂಗ್ರಹದಿಂದ

ನಮ್ಮ 'ಇಜ್ಞಾನ' ತಂಡದ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿದ್ದ ಅವರು ನ್ಯಾಶನಲ್ ಕಾಲೇಜಿನ ಬಿವಿಜೆ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಾವು ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಸಭಿಕರಾಗಿ ಬಂದು ಸಕ್ರಿಯವಾಗಿ ಭಾಗವಹಿಸಿದ್ದಂತೂ ಬಹುಕಾಲ ನೆನಪಿನಲ್ಲಿ ಉಳಿಯುವ ಸಂಗತಿ. ಹೆಸರಾಂತ ಸಾಹಿತಿ, ಹಿರಿಯ ವಿಜ್ಞಾನಿ, ಪ್ರಾಧ್ಯಾಪಕ ಎನ್ನುವ ಯಾವ ಅಹಂಭಾವವೂ ಅವರಲ್ಲಿ ಇರಲಿಲ್ಲ. ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಅವರ 'ಸದ್ದು! ಸಂಶೋಧನೆ ನಡೆಯುತ್ತಿದೆ...' ಕೃತಿಯ ಆಟೋಗ್ರಾಫ್ಡ್ ಪ್ರತಿ ಪಡೆದು, ಅದನ್ನು ಇಜ್ಞಾನದ ಓದುಗರಿಗೆ ಪರಿಚಯಿಸಿದ್ದು ನನ್ನ ಖುಷಿ.

ದಶಕದ ಹಿಂದಿನ (೨೦೧೧) ಕಾರ್ಯಕ್ರಮವೊಂದರಲ್ಲಿ ಶ್ರೀ ಸುಧೀಂದ್ರ, ಮತ್ತೋರ್ವ ಹಿರಿಯ ಸಂವಹನಕಾರ ಶ್ರೀ ಕೈವಾರ ಗೋಪೀನಾಥರ ಜೊತೆ
ಪುಸ್ತಕ ಪರಿಚಯ: ಸದ್ದು! ಸಂಶೋಧನೆ ನಡೆಯುತ್ತಿದೆ...

ಕಲಬುರಗಿ ಸಾಹಿತ್ಯ ಸಮ್ಮೇಳನ (೨೦೨೦) ಸಂದರ್ಭದಲ್ಲಿ ಗೋಷ್ಠಿಗೆ ಒಟ್ಟಾಗಿ ಸಿದ್ಧತೆ ಮಾಡಿಕೊಂಡಿದ್ದು, ವಾಟ್ಸಾಪ್‌ನಲ್ಲಿ ಪರಸ್ಪರರ ಕಾಲೆಳೆದದ್ದು, ಸಮ್ಮೇಳನದಲ್ಲಿ ಅವರೊಂದಿಗೆ ಇದ್ದದ್ದು, ಗೋಷ್ಠಿ ಪ್ರಾರಂಭದ ಸಮಯವಾದರೂ ಹೆಚ್ಚಿನ ಸಭಿಕರು ಬಾರದಿದ್ದನ್ನು ನೋಡಿ ನಮ್ಮನ್ನು ನಾವೇ ತಮಾಷೆ ಮಾಡಿಕೊಂಡು ನಕ್ಕಿದ್ದು, ಕಾರು ಚಾಲಕನ ಶಿಫಾರಸು ನೆಚ್ಚಿಕೊಂಡು ಅದ್ಯಾವುದೋ ಸ್ವೀಟ್ ಸ್ಟಾಲ್ ಹುಡುಕಿದ್ದು, ಚಾಟ್ ತಿನ್ನಲು ಹೋದದ್ದು, ಸ್ಮರಣಿಕೆ ನಮ್ಮ ಯಾವ ಬ್ಯಾಗಿನಲ್ಲೂ ಹಿಡಿಸದೆ ಪರದಾಡಿದ್ದು, ರೈಲಿಗೆ ಹೊರಡುವ ಮುನ್ನ ಒಟ್ಟಿಗೆ ಊಟ ಮಾಡಿದ್ದು - ಎಲ್ಲ ನಿನ್ನೆಮೊನ್ನೆಯ ಘಟನೆಗಳಂತೆಯೇ ನೆನಪಿನಲ್ಲಿವೆ.

ಇಜ್ಞಾನ ಜಾಲತಾಣಕ್ಕೆ ಒಂದು ಅಂಕಣ ಬರೆದುಕೊಡುವಂತೆ ನಾನು ಅವರನ್ನು ಕೇಳಿದ್ದೆ. ೨೦೨೧ರಲ್ಲಿ ಒಂದು ಒಳ್ಳೆಯ ಪುಸ್ತಕ ಅನುವಾದಿಸುವಂತೆ ಅವರು ನನಗೆ ಹೇಳಿದ್ದರು. ಕೆಲಸದ ಒತ್ತಡ ಕೊಂಚ ಕಡಿಮೆಯಾದ ನಂತರ ನನ್ನ ಹೊಸ ಪುಸ್ತಕಗಳನ್ನು ಓದುವುದಾಗಿಯೂ ಮೆಸೇಜ್ ಕಳಿಸಿದ್ದರು. ಹೀಗೆ ನಮ್ಮ ಮಾತುಕತೆ ನಡೆದಿತ್ತು.

ಆದರೆ, ಮೊಬೈಲಿನ ಕರೆ ಇದ್ದಕ್ಕಿದ್ದಂತೆ ಕಟ್ ಆದ ಹಾಗೆ, ನಮ್ಮ ಮಾತುಕತೆ ಅಪೂರ್ಣವಾಗಿಯೇ ಉಳಿದುಬಿಟ್ಟಿದೆ. ನೆಟ್‌ವರ್ಕ್ ಕವರೇಜ್ ಇನ್ನೆಂದೂ ಸಿಗದಂತೆ!

ಸುಧೀಂದ್ರ ಸರ್, ಬೇರೇನೂ ಹೇಳಲು ತೋಚುತ್ತಿಲ್ಲ, we will definitely miss you!

'ಕೆಂಡಸಂಪಿಗೆ' ಜಾಲಪತ್ರಿಕೆಯಲ್ಲಿ ಪ್ರಕಟವಾದ ಅನಿಸಿಕೆಯ ವಿಸ್ತೃತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com