ತನ್ನ ಮೇಲಿನ ನೀರ ಹನಿಗಳನ್ನು ಎಷ್ಟೇ ಕೊಡವಿದರೂ ಅಂಟಿಸಿಟ್ಟುಕೊಳ್ಳುವ ಗುಣ ಗುಲಾಬಿ ಹೂವಿನ ಪಕಳೆಗಳದು
ತನ್ನ ಮೇಲಿನ ನೀರ ಹನಿಗಳನ್ನು ಎಷ್ಟೇ ಕೊಡವಿದರೂ ಅಂಟಿಸಿಟ್ಟುಕೊಳ್ಳುವ ಗುಣ ಗುಲಾಬಿ ಹೂವಿನ ಪಕಳೆಗಳದುImage by Светлана Бердник from Pixabay

ಹನಿ, ಹನಿ, ನೀರ ಹನಿಯೂ... ಗುಲಾಬಿಯೂ...

ಪದ್ಮ ಪತ್ರದ ಮೇಲೆ ನೀರ ಹನಿಗಳು ನಿಲ್ಲೋದಿಲ್ಲ. ಅದೇ ಗುಲಾಬಿ ಪಕಳೆಗಳ ಮೇಲೆ ನೀರ ಹನಿ ಬಿದ್ದರೆ ಒಂದನ್ನೊಂದು ಅವು ಬಿಡೋದೇ ಇಲ್ಲ! ಇದೇಕೆ ಹೀಗೆ? ಸುಧೀಂದ್ರ ಹಾಲ್ದೊಡ್ಡೇರಿಯವರ ಈ ಲೇಖನ ಓದಿ!
Published on

'ನೀವು ತುಂಬಾ ಸೆನ್ಸಿಟಿವ್ ಕಣ್ರಿ. ಸಣ್ಣ ಪುಟ್ಟದ್ದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡು ಕೊರಗ್ತೀರಿ' ಎಂಬ ಹಿತವಚನವನ್ನು ನೂರಾರು ಬಾರಿ ಕೇಳಿರುತ್ತೀರಿ, ಇಲ್ಲವೇ ಮತ್ತೊಬ್ಬರಿಗೆ ನೀವೇ ಹೇಳಿರುತ್ತೀರಿ. ಅಂಥ ಸಂದರ್ಭಗಳಲ್ಲಿ ಆ ಹಿತೈಷಿಗಳು ತಪ್ಪದೇ ಹೇಳುವ ಮತ್ತೊಂದು ಮಾತಿದೆ. ಯಾವತ್ತೂ ನೀವು `ಪದ್ಮಪತ್ರದ ಮೇಲಿನ ನೀರ ಹನಿಗಳಂತೆ ಇರಬೇಕು ರೀ. ಆಗ ಮನಸ್ಸಿಗೆ ಯಾವ ತೊಂದರೆಯೂ ಆಗೋದಿಲ್ಲ'. ತಾವರೆ ಎಲೆಯ ಮೇಲೆ ನೀರು ಏಕೆ ನಿಲ್ಲುವುದಿಲ್ಲ ಎಂಬುದು ನಿಮಗೆ ಗೊತ್ತಿರಬಹುದು. ಅದರ ಎಲೆಯ ಮೇಲ್ಮೈ ತರಿತರಿಯಾಗಿದ್ದು, ಮೇಲೆ ವಿಶಿಷ್ಟ ಮೇಣವೊಂದರ ಲೇಪನವಿರುವುದರಿಂದ ತಾವರೆ ಎಲೆಯು ತನ್ನ ಮೇಲೆ ಬಿದ್ದ ನೀರ ಹನಿಯನ್ನು ಮಣಿಯ ರೂಪದಲ್ಲಿರುವಂತೆ ಪ್ರೇರೇಪಿಸುತ್ತದೆ. ಆ ಹನಿಯು ಎಲೆಗೆ ಅಂಟಿಕೊಳ್ಳದೆಯೇ ಜಾರಿಹೋಗುವಂತೆ ಮಾಡುತ್ತದೆ.

ಇದರ ತದ್ವಿರುದ್ಧ ಗುಣ ಗುಲಾಬಿಯ ಪಕಳೆಗಳಿಗಿರುತ್ತವೆ. ಅಂದರೆ ತನ್ನ ಮೇಲಿನ ನೀರ ಹನಿಗಳನ್ನು ಎಷ್ಟೇ ಕೊಡವಿದರೂ ಅಂಟಿಸಿಟ್ಟುಕೊಳ್ಳುವ ಗುಣ ಗುಲಾಬಿ ಹೂವಿನ ಪಕಳೆಗಳದು.

ಪದ್ಮ ಪತ್ರದ ಮೇಲೆ ನೀರ ಹನಿಗಳು ನಿಲ್ಲೋದಿಲ್ಲ. ಅದೇ ಗುಲಾಬಿ ಪಕಳೆಗಳ ಮೇಲೆ ನೀರ ಹನಿ ಬಿದ್ದರೆ `ಪ್ಯಾರ್‌ಗೇ ಆಗ್ಬಿಟ್ಟೈತೆ, ನಮ್ದೂಕೆ ...' ಎನ್ನುತ್ತಾ ಒಂದನ್ನೊಂದು ಅವು ಬಿಡೋದೇ ಇಲ್ಲ!

ತಾವರೆ ಎಲೆಯ ಗುಣಗಳನ್ನು `ಜೈವಿಕ ಅಣಕು' (ಬಯೋ ಮಿಮಿಕ್ರಿ) ಮಾಡಿ, ಲೋಹಗಳಿಗೆ ಅಂಟುಕೊಳ್ಳದ ಗುಣ ನೀಡುವಂಥ ಲೇಪನಗಳನ್ನು ತಯಾರಿಸುತ್ತಿರುವ ಬಗ್ಗೆ ನೀವು ಕೇಳಿರಬಹುದು. ಇದೀಗ ಗುಲಾಬಿ ಹೂವಿನ ಪಕಳೆಗಳ ದ್ರವ-ಪ್ರಿಯ ಗುಣಕ್ಕೆ ಕಾರಣವೇನೆಂದು ಕಂಡು ಹಿಡಿದು, ಲೋಹವೂ ಸೇರಿದಂತೆ ಅನೇಕ ಎಂಜಿನೀರಿಂಗ್ ಸಾಮಗ್ರಿಗಳಿಗೆ ಹಚ್ಚುವಂಥ ವಿಶಿಷ್ಟ ಲೇಪನಗಳನ್ನು ಸೃಷ್ಟಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ, ಯಶಸ್ವಿಯೂ ಆಗಿವೆ.

ಗುಲಾಬಿ ಪಕಳೆಗಳು ನೀರ ಹನಿಗಳನ್ನು ತೀವ್ರವಾಗಿ ಅಂಟಿಸಿಕೊಳ್ಳುವುದೇಕೆಂದು ವಿಜ್ಞಾನಿಗಳು ಈಗಾಗಲೇ ಕಂಡುಕೊಂಡಿದ್ದಾರೆ. ಹಾಗೆಯೇ ಗುಲಾಬಿ ಪಕಳೆಗಳ ಮೇಲ್ಮೈ ರಚನೆಯ ಯಾವ ಬದಲಾವಣೆಗಳು ಅವನ್ನು ಹೀಗೆ ವರ್ತಿಸುವಂತೆ ಮಾಡುತ್ತವೆಂಬುದನ್ನೂ ಅರಿತಿದ್ದಾರೆ. ಈ ನಿಟ್ಟಿನಲ್ಲಿ ಅವರ ಗಮನಕ್ಕೆ ಬಂದಿರುವ ಪ್ರಧಾನ ಅಂಶಗಳನೆಂದರೆ ಗುಲಾಬಿ ಪಕಳೆಗಳ ಮೇಲ್ಮೈನಲ್ಲಿ ಅತ್ಯಂತ ಸೂಕ್ಷ್ಮವಾದ ಮಾಂಸಲ ರಚನೆಗಳು ಹಾಗೂ ನಿರ್ದಿಷ್ಟ ವಿನ್ಯಾಸದಲ್ಲಿ ಅವು ಜೋಡಣೆಯಾಗಿರುವ ಬಗೆ. ಇಂಥ ಉಬ್ಬಿನ ರಚನೆಗಳನ್ನು ವಿಜ್ಞಾನಿಗಳು `ಮೈಕ್ರೋಪ್ಯಾಪಿಲೆ' ಎಂದು ಗುರುತಿಸುತ್ತಾರೆ. ಈ `ಮೈಕ್ರೋಪ್ಯಾಪಿಲೆ'ಗಳಿಗೆ ತಮ್ಮ ನಡುವೆ ಸಿಕ್ಕ ನೀರಿನ ಹನಿಗಳನ್ನು ಬಂಧಿಯಾಗಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಹೀಗಾಗಿಯೇ ಗುಲಾಬಿ ಹೂವನ್ನು ತಲೆಕೆಳಗಾಗಿಸಿದಾಗಲೂ, ಸಣ್ಣ ಸಣ್ಣ ನೀರ ಹನಿಗಳು ಅದರ ಪಕಳೆಗಳಿಗೆ ಅಂಟಿಕೊಂಡೇ ಇರುತ್ತವೆ. ಗುಲಾಬಿಯನ್ನು ಎಷ್ಟೇ ಬಲವಾಗಿ ಕೊಡವಿದರೂ ಆ ಜಲ ಬಿಂದುಗಳು ಸುಲಭವಾಗಿ ಬೀಳುವುದಿಲ್ಲ.

ಇದನ್ನು ಅರಿತುಕೊಂಡ ವಿಜ್ಞಾನಿಗಳು ಗುಲಾಬಿಯ ಮೇಲ್ಮೈಯನ್ನು ಕೃತಕವಾಗಿ ರೂಪಿಸುವಲ್ಲಿ ಯಶಸ್ವಿಯಾದರು. ಗುಲಾಬಿ ಹೂವಿನ ಪಕಳೆಗಳಷ್ಟೇ ಮೃದು, ನಯ ಹಾಗೂ ನೀರಿನ ಹನಿಗಳನ್ನು ಹಿಡಿದಿಟ್ಟುಕೊಳ್ಳುವ ಗುಣಗಳನ್ನು ಈ ಸಾಮಗ್ರಿಗೆ ಅವರು ನೀಡಿದರು. ಇದರಿಂದಾಗಿ ತಮ್ಮ ಮೇಲ್ಮೈಯಲ್ಲಿ ಸದಾ ತೇವವಿರಬೇಕಾದ ಎಂಜಿನೀರಿಂಗ್ ಸಾಮಗ್ರಿಗಳನ್ನು ರೂಪಿಸುವುದು ಇಂದು ಸುಲಭವಾಗಿದೆ. ಆ ಮೂಲಕ ತಲೆಕೆಳಗಾಗಿಟ್ಟರೂ ತಮಗೆ ಅಂಟಿಕೊಂಡ ನೀರ ಹನಿಯನ್ನು ಬೀಳಿಸದಂಥ ಮೇಲ್ಮೈಗಳನ್ನು ತಯಾರಿಸಬಹುದಾಗಿದೆ. ಇಂಗಾಲದ ಪರಿಶುದ್ಧ ತೆಳುಹಾಳೆಗಳಾದ ಗ್ರಾಫೀನ್ ಸಾಮಗ್ರಿಯನ್ನು ಗುಲಾಬಿ ಪಕಳೆಗಳಂತೆ ವರ್ತಿಸುವಂತೆ ಅವರು ಮಾಡಿದ್ದಾರೆ. ಜೀವ ವಿಜ್ಞಾನ ಹಾಗೂ ಎಂಜಿನೀರಿಂಗ್ ತಂತ್ರಜ್ಞಾನ ಇವೆರಡೂ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ತರ ಸಂಶೋಧನೆಯಿದು. ಜೈವಿಕವಾಗಿ ಅಣಕ ಮಾಡಬಲ್ಲ ಕೆಲವೊಂದು ಪಾಲಿಮರ್‌ಗಳನ್ನು ಬಳಸಿಕೊಂಡು ತೆಳು 'ಗುಲಾಬಿ' ಹಾಳೆಗಳನ್ನು ತಯಾರಿಸುವತ್ತಲೂ ವಿಜ್ಞಾನಿಗಳು ತಮ್ಮ ಗಮನ ಹರಿಸಿದ್ದಾರೆ. ಇವರ ಗುರಿ - ಉತ್ತಮೋತ್ತಮ ಎಲೆಕ್ಟ್ರಾನಿಕ್ ಸಾಧನ ಸಲಕರಣೆಗಳನ್ನು ರೂಪಿಸಲು ಅಗತ್ಯ ಸಾಮಗ್ರಿಗಳನ್ನು ರೂಪಿಸುವುದು.

ಇಲ್ಲಿ ಮನದಟ್ಟು ಮಾಡಿಕೊಳ್ಳಬೇಕಾದ ಮತ್ತೊಂದು ಮುಖ್ಯ ಅಂಶವಿದೆ. ತಾವರೆ ಎಲೆಯ ಮೇಲ್ಮೈನಂತೆ ಸಾಮಗ್ರಿಯೊಂದನ್ನು ರೂಪಿಸಿದರೆ ಅಡೆತಡೆಗಳಿಲ್ಲದ ನುಣುಪಾದ ಜಾರು ಸಾಮಗ್ರಿಗಳನ್ನು ತಯಾರಿಸಬಹುದು. ಅಂತೆಯೇ ಗುಲಾಬಿ ಹೂವಿನ ಪಕಳೆಗಳ ಮೇಲ್ಮೈನಂತೆ ಸಾಮಗ್ರಿಯನ್ನು ರೂಪಿಸಿದರೆ ವಿಶಿಷ್ಟ ಬಗೆಯ ಅಂಟು ಪಟ್ಟಿಗಳನ್ನು, ಲೇಪನಗಳನ್ನು ಹಾಗೂ ಅರಿವೆಗಳನ್ನು ತಯಾರಿಸಬಹುದು. ವಿಜ್ಞಾನಿಗಳ ಚಿಂತನೆ ಇಷ್ಟಕ್ಕೇ ನಿಂತಿಲ್ಲ. ಅವರ ಗಮನಕ್ಕೆ ಬಂದಂತೆ ಕೆಲವೊಂದು ಬಗೆಯ ಗುಲಾಬಿ ಪಕಳೆಗಳು ನೀರ ಹನಿಗಳನ್ನು ಅಷ್ಟಾಗಿ ಹಿಡಿದಿಟ್ಟುಕೊಳ್ಳದೆ ಕೆಲವೊಮ್ಮೆ ಬೀಳಿಸಿಯೂ ಬಿಡುತ್ತವೆ. ನೀರನ್ನು ಬೇಕೆಂದಾಗ ಅಂಟಿಸಿಕೊಳ್ಳುವ, ಬೇಡವೆಂದಾಗ ದೂರೀಕರಿಸುವಂಥ ವಿಶಿಷ್ಟ ಸಾಮಗ್ರಿಯೊಂದನ್ನು ಸೃಷ್ಟಿಯತ್ತ ತಜ್ಞರು ಇದೀಗ ಕೆಲಸ ಮಾಡುತ್ತಿದ್ದಾರೆ. ನೀರ ಹನಿಗಳೊಂದಿಗೆ ಈ ಬಗೆಯ `ಲಿವಿಂಗ್ ಟುಗೆದರ್' ಸಂಬಂಧವಿಟ್ಟುಕೊಳ್ಳುವ ಸಾಮಗ್ರಿಗಳಿಗೆ ಇಂದು ಅತ್ಯುನ್ನತ ಬೇಡಿಕೆಯಿದೆ.

ಕೇವಲ ನೀರ ಹನಿಗಳನ್ನಷ್ಟೇ ಅಲ್ಲ, ಅನಾದಿ ಕಾಲದಿಂದಲೂ ಈ ಗುಲಾಬಿ ಹೂವುಗಳು `ಪ್ಯಾರ್ ಕರೋ ಅನ್ತೈತೆ ನಮ್ದೂಕೆ'.

೨೦೧೭ರ ತುಷಾರದಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

logo
ಇಜ್ಞಾನ Ejnana
www.ejnana.com