2020ರ ವಿಶ್ವ ಆವಾಸ ದಿನ ಕೋವಿಡ್-19ರ ದೃಷ್ಟಿಯಿಂದಲೂ ಬಹಳ ಮಹತ್ವದ್ದು.
2020ರ ವಿಶ್ವ ಆವಾಸ ದಿನ ಕೋವಿಡ್-19ರ ದೃಷ್ಟಿಯಿಂದಲೂ ಬಹಳ ಮಹತ್ವದ್ದು.Image by Alexas_Fotos from Pixabay

ಕೋವಿಡ್ ಕಾಲದಲ್ಲಿ ಮನೆಯೇ ಮಂತ್ರಾಲಯ!

ಈಗಂತೂ ಮನೆ ಕೇವಲ ಮನೆಯಾಗಿ ಉಳಿದಿಲ್ಲ. ಅದು ಕಚೇರಿಯೂ ಆಗಿದೆ; ಶಾಲೆಯೂ ಆಗಿದೆ. ಅಂತೆಯೇ, ಹೊರಗೆ ಹೋಗಬೇಕೆಂಬ ತುಡಿತ ಮೊದಲಿಗಿಂತಲೂ ಪ್ರಬಲವಾಗಿದೆ. ಸುರಕ್ಷತೆ ಮತ್ತು ವಾಂಛೆಗಳ ಹಗ್ಗ-ಜಗ್ಗಾಟದಲ್ಲಿ ಸುರಕ್ಷತೆ ಗೆಲ್ಲುವುದು ಅನಿವಾರ್ಯ!

ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವಸಂಸ್ಥೆ 'ವಿಶ್ವ ಆವಾಸ ದಿನ' ಎಂದು ಆಚರಿಸುತ್ತದೆ. 2020ರ ವಿಶ್ವ ಆವಾಸ ದಿನ ಕೋವಿಡ್-19ರ ದೃಷ್ಟಿಯಿಂದಲೂ ಬಹಳ ಮಹತ್ವದ್ದು.

ಪ್ರವಾಸ, ಪ್ರಯಾಣ, ಜಗತ್ಸಂಚಾರಗಳ ಆಶಯ ಹೊತ್ತ, ಆ ಆಶಯಕ್ಕೆ ಆರ್ಥಿಕವಾಗಿ ಸಬಲವಾದ ಪೀಳಿಗೆಯನ್ನು ಜಾಗತಿಕ ಕಾಯಿಲೆಯೊಂದು ಒತ್ತಾಯಪೂರ್ವಕವಾಗಿ ಮನೆಯಲ್ಲೇ ಉಳಿಯುವಂತೆ ಮಾಡಿದ್ದು ನಮ್ಮ ಕಾಲದ ವಿಡಂಬನೆ. ಈಗಂತೂ ಮನೆ ಕೇವಲ ಮನೆಯಾಗಿ ಉಳಿದಿಲ್ಲ. ಅದು ಕಚೇರಿಯೂ ಆಗಿದೆ; ಶಾಲೆಯೂ ಆಗಿದೆ. ಅಂತೆಯೇ, ಹೊರಗೆ ಹೋಗಬೇಕೆಂಬ ತುಡಿತ ಮೊದಲಿಗಿಂತಲೂ ಪ್ರಬಲವಾಗಿದೆ. ಸುರಕ್ಷತೆ ಮತ್ತು ವಾಂಛೆಗಳ ಹಗ್ಗ-ಜಗ್ಗಾಟದಲ್ಲಿ ಸುರಕ್ಷತೆ ಗೆಲ್ಲುವುದು ಅನಿವಾರ್ಯ! ಕೋವಿಡ್-19 ನಮ್ಮ ದೇಶದಲ್ಲಿ ಈಗಾಗಲೇ ಸಮುದಾಯ ಹರಡುವಿಕೆಯ ಹಂತ ತಲುಪಿದೆ. ಹಿಂದೆಂದಿಗಿಂತಲೂ ಕಾಯಿಲೆ ತಗಲುವ ಅಪಾಯ ಈ ಹಂತದಲ್ಲಿ ಹೆಚ್ಚು. ಈ ಹಂತದಲ್ಲಿ ಎಚ್ಚರಿಕೆ ಅಗತ್ಯ.

ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವ ಆವಾಸ ದಿನವೆಂದು ಆಚರಿಸುವಂತೆ ವಿಶ್ವಸಂಸ್ಥೆ 1985ರಲ್ಲಿ ಗೊತ್ತುಪಡಿಸಿತು.
ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಸೋಮವಾರವನ್ನು ವಿಶ್ವ ಆವಾಸ ದಿನವೆಂದು ಆಚರಿಸುವಂತೆ ವಿಶ್ವಸಂಸ್ಥೆ 1985ರಲ್ಲಿ ಗೊತ್ತುಪಡಿಸಿತು.https://www.un.org/en/observances/habitat-day

ಮಹಾನಗರಗಳಲ್ಲಿ ಈ ಸಮಸ್ಯೆಯ ಮುಖಗಳು ಹೆಚ್ಚು. ಬಹಳ ಮಟ್ಟಿಗೆ ಮನೆಗಳು ಚಿಕ್ಕವು. ಹೊರಗೆ ಜನಸಾಂದ್ರತೆ ಹೆಚ್ಚು. ಹೀಗೇಗಿ, ಮನೆಯ ಒಳಗೆ ಇಕ್ಕಟ್ಟಿನ ಭಾವ; ಮನೆಯ ಹೊರಗೆ ಕಾಯಿಲೆಯ ಅಪಾಯ. ಇಂತಹ ಸಂದರ್ಭಗಳಲ್ಲಿ ಮಾನಸಿಕ ವಿಹ್ವಲತೆ ಕೂಡ ಸಾಮಾನ್ಯ. ಆರೋಗ್ಯದ ದೃಷ್ಟಿಯಿಂದ ಕೆಲವು ಸೂತ್ರಗಳನ್ನು ಪಾಲಿಸಬಹುದು.

  • ಅನಗತ್ಯ ಸಂಚಾರ ಕೂಡದು. ಅಗತ್ಯದ ಕೆಲಸಗಳನ್ನು ಪಟ್ಟಿ ಮಾಡಿಕೊಂಡು, ಹೋಗಬೇಕಾದ ದಾರಿಯನ್ನು ಮೊದಲೇ ನಿಗದಿಪಡಿಸಿ, ಅತೀ ಹೆಚ್ಚು ಕೆಲಸಗಳು ಸಾಧ್ಯವಾಗುವ, ಅತ್ಯಂತ ಕಡಿಮೆ ಪ್ರಯಾಣದ ಆಯ್ಕೆಯನ್ನು ಮಾಡಬೇಕು. ಇಂತಹ ಯೋಜನಾಬದ್ಧ ಕೆಲಸದಿಂದ ಸುರಕ್ಷತೆಯೂ ಹೆಚ್ಚು; ಬುದ್ಧಿಗೆ ಆಗಾಗ ಸಾಣೆಯೂ ಆಯಿತು!

  • ಹೊರಗೆ ಹೋಗದೆ ಕೆಲಸ ಆಗುವ ಸಾಧ್ಯತೆ ಇದ್ದಾಗ, ಅಂತಹ ಆಯ್ಕೆಗಳೇ ಸೂಕ್ತ. ಆವಶ್ಯಕ ವಸ್ತುಗಳು ಮನೆಬಾಗಿಲಿಗೆ ತಲುಪುವ ಅವಕಾಶ ಇದ್ದಾಗ, ಅನಗತ್ಯ ಬಾಹ್ಯ ಸಂಚಾರ ತಪ್ಪುತ್ತದೆ.

  • ಮನೆಯನ್ನು ಚೊಕ್ಕಟಗೊಳಿಸುವ ಸುಸಂದರ್ಭ ಇದು! ಮನೆಯನ್ನು ಅಧಿಕ ಕೆಲಸಗಳಿಗೆ ವಿನಿಯೋಗ ಮಾಡಬೇಕಾದ ಅಗತ್ಯ ಇರುವುದರಿಂದ ವರ್ಷಗಳಿಂದ ಗುಡ್ಡೆ ಹಾಕಿಕೊಂಡಿದ್ದ ಅನಗತ್ಯ ವಸ್ತುಗಳಿಗೆ ಗೇಟ್-ಪಾಸ್ ನೀಡಬಹುದು.

  • ಮನೆಯಲ್ಲಿನ ಪ್ರತೀ ಭಾಗದ ಉಪಯುಕ್ತತೆಯನ್ನು ಮನಗಾಣುವ ಅವಕಾಶವಿದೆ. ಇದರಿಂದ, ಬಹಳ ಕಾಲ ಮನೆಯ ಮೂಲೆಯಲ್ಲಿ ಸೇರ್ಪಡೆಯಾಗಿರುವ ಅನುಪಯುಕ್ತ ವಸ್ತುಗಳು, ಅದರಲ್ಲಿನ ಕೀಟಗಳು, ಧೂಳು, ಪಾಚಿ ಎಲ್ಲವೂ ಶುಚಿಯಾಗಿ, ಆರೋಗ್ಯಕ್ಕೆ ಮತ್ತಷ್ಟು ದಾರಿ ಮಾಡಿಕೊಡುತ್ತವೆ.

  • ಮನೆಯ ಒಳಗೆ ಕುಂಡಗಳಲ್ಲಿ ಗಿಡಗಳನ್ನು ಬೆಳಸಿ, ಮನೆಯ ಸೌಂದರ್ಯವನ್ನು ಮತ್ತು ಆರೋಗ್ಯವನ್ನು ವರ್ಧಿಸಬಹುದು. ಮನೆಯಲ್ಲಿನ ಹಲವು ಅನುಪಯುಕ್ತ ವಸ್ತುಗಳನ್ನೇ ಕುಂಡಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಲವಾರು ಜಾಲತಾಣಗಳು ಉಚಿತ ಸಲಹೆ, ಸಹಕಾರ ನೀಡುತ್ತಿವೆ.

  • ಮನೆಯ ತ್ಯಾಜ್ಯ ನಿರ್ವಹಣೆಯ ಬಗ್ಗೆ ವಿಶೇಷ ಗಮನ ಕೊಡಬಹುದು. ಈ ತ್ಯಾಜ್ಯವನ್ನು ಮನೆಯೊಳಗಿನ ಗಿಡಗಳ ಬೆಳವಣಿಗೆಗೆ ಬಳಸಬಹುದು.

  • ಮನೆಯ ಯಾರೊಬ್ಬರಿಗೆ ಕೋವಿಡ್ ಸೋಂಕು ತಗುಲಿದರೂ ಮನೆಯ ಇತರ ಸದಸ್ಯರಿಗೆ ಹರಡುವ ಸಾಧ್ಯತೆ ಬಹಳ ಹೆಚ್ಚು. ಹೀಗಾಗಿ, ಹೊರಗೆ ಹೋಗಿ ಬಂದ ಕೂಡಲೇ ಧರಿಸಿದ ಬಟ್ಟೆಗಳನ್ನು ಚೆನ್ನಾಗಿ ಗಾಳಿಯಾಡುವ ಜಾಗದಲ್ಲಿ ಕೆಲಗಂಟೆಗಳ ಕಾಲ ನೇತು ಹಾಕಬೇಕು. ಹೊರಗೆ ಹೋಗುವಾಗ ಧರಿಸದ್ದ ಮಾಸ್ಕ್ ಅನ್ನು ಇತರರಿಗೆ ಸೋಕದಂತೆ ಪ್ರತ್ಯೇಕಿಸಬೇಕು. ಇತರರ ಬಳಿ ಮಾತನಾಡುವ ಮುನ್ನ ಚೆನ್ನಾಗಿ ಕೈ, ಕಾಲು, ಮುಖಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಅನುಕೂಲವಿದ್ದರೆ ಸ್ನಾನ ಮಾಡುವುದು ಉತ್ತಮ.

  • ಸೋಂಕಿನ ಯಾವುದೇ ಲಕ್ಷಣಗಳನ್ನೂ ನಿರ್ಲಕ್ಷ್ಯ ಮಾಡಬಾರದು. ಲಕ್ಷಣಗಳು ಕಂಡ ಕೂಡಲೇ ವೈದ್ಯರ ಸಲಹೆ ಪಡೆಯಬೇಕು.

  • ನೂರಕ್ಕೆ 98 ಮಂದಿಗೆ ಕೋವಿಡ್-19 ಸೋಂಕು ಪ್ರಾಣಾಪಾಯ ಮಾಡುವುದಿಲ್ಲ. ಆದರೆ, ಹಿರಿಯ ನಾಗರಿಕರು, ದೀರ್ಘಕಾಲೀನ ರೋಗಪೀಡಿತರು, ಶ್ವಾಸಕೋಶದ ಸಮಸ್ಯೆ ಇರುವವರು ಮುಂತಾದವರಲ್ಲಿ ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚು. ಹೀಗಾಗಿ, ಮನೆಯಲ್ಲಿ ಇಂತಹ ಸಮಸ್ಯೆ ಉಳ್ಳವರು ಇದ್ದರೆ, ಆ ಮನೆಯ ಇತರ ಎಲ್ಲಾ ಸದಸ್ಯರ ಸಾಮಾಜಿಕ ಜವಾಬ್ದಾರಿ ಅಷ್ಟೇ ಹೆಚ್ಚು.

“ಮನೆಯಲ್ಲಿ ಇರುವುದು ಬೇಸರದ ಸಂಗತಿ” ಎನ್ನುವುದು ಒಂದು ಮನೋಭಾವ ಮಾತ್ರ. ಅದು ವಾಸ್ತವವಲ್ಲ. ಸಂತಸ ಎನ್ನುವುದು ಹೊರಗೆ ಅಲೆದಾಡಿದಾಗ ಮಾತ್ರ ಲಭಿಸುತ್ತದೆ ಎನ್ನುವ ಭ್ರಮೆ ಬೇಕಿಲ್ಲ. ಮನೆಯಲ್ಲೇ ಮಾಡುವಂತಹ ನೂರಾರು ಒಳಿತಿನ ಕೆಲಸಗಳಿವೆ. ಈ ಜಾಗತಿಕ ವಿಪತ್ತಿನಿಂದ ನಮ್ಮನ್ನು ಕಾಯುತ್ತಿರುವ ನಮ್ಮ ಮನೆಯ ಬಗ್ಗೆ ಕೃತಜ್ಞತೆಯಷ್ಟೇ ಅಲ್ಲದೆ, ಧನ್ಯತಾಭಾವವೂ ಇರಲಿ!

Related Stories

No stories found.
logo
ಇಜ್ಞಾನ Ejnana
www.ejnana.com