ಹಲವಾರು ಅವಘಡಗಳು ಊಹಿಸಲಾಗದ ಸುಖಾಂತ್ಯಗಳನ್ನು ಕಂಡಿವೆ
ಹಲವಾರು ಅವಘಡಗಳು ಊಹಿಸಲಾಗದ ಸುಖಾಂತ್ಯಗಳನ್ನು ಕಂಡಿವೆImage by mohamed Hassan from Pixabay

Serendipity ಮತ್ತು ವೈದ್ಯವಿಜ್ಞಾನ

ಯಾವುದೋ ಅನಿರೀಕ್ಷಿತ ಬೆಳವಣಿಗೆ ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ ಆ ಸಂದರ್ಭವನ್ನು Serendipity ಎನ್ನಬಹುದು. ಮಾನವನ ಇತಿಹಾಸದ ಉದ್ದಕ್ಕೂ ಈ Serendipity ಸಾಕಷ್ಟು ಚಮತ್ಕಾರಗಳನ್ನು ತೋರಿದೆ!
Published on

ಇಂಗ್ಲೀಷಿನಲ್ಲಿ Serendipity ಎಂಬ ಸುಂದರ ಪದವಿದೆ. ಇತರ ಭಾಷೆಗಳಿಗೆ ಅನುವಾದ ಮಾಡಲು ಆಗದ ಇಂಗ್ಲೀಷ್ ಪದಗಳಲ್ಲಿ ಇದೂ ಒಂದು ಎನ್ನಲಾಗಿದೆ. ಈ ಚಂದದ ಪದದ ಹಿಂದೆ ಒಂದು ಚಂದದ ಕತೆ ಇದೆ - ಪ್ರಾಚೀನ ಶ್ರೀಲಂಕಾ ದೇಶದ ಮೂವರು ರಾಜಕುಮಾರರ ಕತೆ. ಬಹಳ ಜಾಣರಾಗಿದ್ದ ಆ ಮೂವರು ರಾಜಕುಮಾರರು ಅಷ್ಟೇ ಅದೃಷ್ಟವಂತರೂ ಹೌದು. ಅವರಿಗೆ ಯಾವುದೇ ಆಕಸ್ಮಿಕ ಅವಘಡ ಸಂಭವಿಸಿದರೂ ಅದು ಒಟ್ಟಾರೆ ಸುಖಾಂತ್ಯವೇ ಆಗುತ್ತಿತ್ತು. ಹೀಗೆ ಯಾವುದೋ ಅನಿರೀಕ್ಷಿತ ಬೆಳವಣಿಗೆ ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ ಆ ಸಂದರ್ಭವನ್ನು Serendipity ಎನ್ನಬಹುದು. ಪ್ರಾಚೀನ ಕಾಲದಲ್ಲಿ ಶ್ರೀಲಂಕಾವನ್ನು ಸಿಂಹಳದ್ವೀಪ ಎನುತ್ತಿದ್ದರು. ಅರಬ್ಬರ ಭಾಷೆಯಲ್ಲಿ ಅದು Serendip ಆಗಿತ್ತು. ಆ ಹೆಸರಿನಿಂದ ಬಂದ ಪದ Serendipity.

ಮಾನವನ ಇತಿಹಾಸದ ಉದ್ದಕ್ಕೂ ಈ Serendipity ಸಾಕಷ್ಟು ಚಮತ್ಕಾರಗಳನ್ನು ತೋರಿದೆ! ಆದಿಮಾನವನನ್ನು ಆಲೋಚನೆಯ ಹಾದಿಗೆ ಒಯ್ದದ್ದೂ ಇಂತಹ ಫಲಪ್ರದ ಅವಘಡಗಳೇ ಇರಬೇಕು! ಹೊಸತನ್ನು ಒಪ್ಪಿಕೊಳ್ಳುವ, ಕಷ್ಟಗಳನ್ನು ಕೂಡ ಅವಕಾಶಗಳ ನಿಟ್ಟಿನಿಂದ ನೋಡುವ, ಪ್ರತಿಯೊಂದು ಕಾರ್ಮೋಡದಲ್ಲೂ ಬೆಳ್ಳಿಗೆರೆಯನ್ನು ಹುಡುಕುವ ಮನಸ್ಥಿತಿಯನ್ನು ಮನುಷ್ಯನಲ್ಲಿ ಹುಟ್ಟಿಸಿದ್ದೇ ಇಂತಹ ಪ್ರಸಂಗಗಳು. ಇಂತಹ ಒಂದೆರಡು ಉದಾಹರಣೆಗಳನ್ನು ನೋಡಿದರೆ ಇವುಗಳ ಮಹತ್ವ ತಿಳಿಯಬಹುದು.

ಡಾ ಡೊನಾಲ್ಡ್ ರಾಸ್ ಎಂಬ ಪ್ರಖ್ಯಾತ ಹೃದಯ ಶಸ್ತ್ರಚಿಕಿತ್ಸಕರಿದ್ದರು. ಹೃದಯ ಶಸ್ತ್ರಚಿಕಿತ್ಸೆಯ ಈವರೆಗಿನ ಇತಿಹಾಸದಲ್ಲಿ ಹತ್ತು ಮಂದಿ ಮಹತ್ವಪೂರ್ಣ ಸರ್ಜನ್ ರನ್ನು ಪಟ್ಟಿ ಮಾಡಿದರೆ ಅದರಲ್ಲಿ ಡಾ ಡೊನಾಲ್ಡ್ ರಾಸ್ ಅವರ ಹೆಸರು ಖಾಯಂ! ಹೃದಯದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯೊಂದಕ್ಕೆ ಅವರ ಹೆಸರಿದೆ. ಇಂತಹ ಡಾ ಡೊನಾಲ್ಡ್ ರಾಸ್ ಅವರ ಜೀವನದಲ್ಲಿ ಒಮ್ಮೆ ಬಹಳ ಕ್ಲಿಷ್ಟಕರವಾದ ಸಂದರ್ಭ ಎದುರಾಗಿತ್ತು. ಏನದು?

ಮಾನವ ಹೃದಯದಲ್ಲಿ ನಾಲ್ಕು ಕವಾಟಗಳು (valves) ಇರುತ್ತವೆ. ವಯಸ್ಸಾಗುತ್ತಾ ಹೋದಂತೆ ಈ ಕವಾಟಗಳಲ್ಲಿ ಕ್ಯಾಲ್ಸಿಯಂ ಲವಣ ಶೇಖರವಾಗಿ ಕವಾಟಗಳು ಪೆಡಸಾಗುತ್ತವೆ. ಕೆಲವು ದಶಕಗಳ ಹಿಂದೆ ಈ ಪರಿಸ್ಥಿತಿಗೆ ಸುಲಭದ ಶಸ್ತ್ರಚಿಕಿತ್ಸೆ ಇರಲಿಲ್ಲ. ಆಗ ರೋಗಿಯನ್ನು ಅರಿವಳಿಕೆಯ ಮತ್ತಿನಲ್ಲಿ ಮಲಗಿಸಿ, ಕ್ಯಾಲ್ಸಿಯಂ ಲವಣವನ್ನು ಕರಗಿಸಬಲ್ಲ ದ್ರಾವಣವನ್ನು ಆ ಪೆಡಸು ಕವಾಟದ ಮೂಲಕ ಹರಿಸಿ ಆ ಕವಾಟವನ್ನು ಸಾಧ್ಯವಾದಷ್ಟೂ ಕ್ಯಾಲ್ಸಿಯಂ-ಮುಕ್ತಗೊಳಿಸಿ ರೋಗಿಯ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ಸುಧಾರಿಸಬಲ್ಲ ವಿಧಾನ ಚಾಲ್ತಿಯಲ್ಲಿತ್ತು.

ಡಾ ಡೊನಾಲ್ಡ್ ರಾಸ್ ಅವರು ಕೂಡ ಒಮ್ಮೆ ಒಂದು ರೋಗಿಗೆ ಇದೆ ರೀತಿಯ ಚಿಕಿತ್ಸೆ ಮಾಡುತ್ತಿದ್ದರು. ಆದರೆ ಅಂದು ಒಂದು ಅನೂಹ್ಯವಾದ ಘಟನೆ ನಡೆಯಿತು. ಆ ರೋಗಿಯ ಕವಾಟ ಎಷ್ಟು ಶಿಥಿಲವಾಗಿತ್ತೆಂದರೆ, ಆ ದ್ರಾವಣದ ಜೊತೆ ಕ್ಯಾಲ್ಸಿಯಂ ಮಾತ್ರವಲ್ಲದೇ ಇಡೀ ಕವಾಟವೇ ಕೊಚ್ಚಿಹೋಯಿತು! ಡಾ ರಾಸ್ ಅವರ ವೈದ್ಯಜೀವನದಲ್ಲಿ ಹಿಂದೆಂದೂ ಆ ರೀತಿಯ ಅವಘಡ ಘಟಿಸಿಯೇ ಇರಲಿಲ್ಲ. ಹೃದಯದ ಕವಾಟವೇ ಇಲ್ಲದ ಮೇಲೆ ರೋಗಿ ಬದುಕುವುದಾದರೂ ಹೇಗೆ? ಆಗೆಲ್ಲಾ ಲೋಹದ ಕೃತಕ ಕವಾಟಗಳನ್ನು ತರಿಸಲು ಸಮಯ ಹಿಡಿಯುತ್ತಿತ್ತು. ಆ ಹೊತ್ತಿಗೆ ತತ್ಕ್ಷಣದ ಪರಿಹಾರವೇನು? ಕೆಲವು ಕ್ಷಣ ದಿಕ್ಕುಗಾಣದೆ ಹೋಯಿತು!

ಆದರೆ ಡಾ ರಾಸ್ ಅವರ ತೀಕ್ಷ್ಣ ಬುದ್ಧಿಗೆ ಒಂದು ಪರಿಹಾರ ಹೊಳೆಯಿತು. ಕೆಲವು ಮೃತ ವ್ಯಕ್ತಿಗಳ ಹೃದಯವನ್ನು ಅಧ್ಯಯನ ಮಾಡಲು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಇಡಲಾಗಿತ್ತು. ಆ ಹೃದಯಗಳ ಕವಾಟಗಳನ್ನು ಪ್ರತ್ಯೇಕಿಸಿ ಶೈತ್ಯಾಗಾರದಲ್ಲಿ ಇಡಲಾಗಿತ್ತು. ಅದರಲ್ಲಿ ಒಂದು ಕವಾಟವನ್ನು ಈ ರೋಗಿಗೆ ತಾತ್ಕಾಲಿಕವಾಗಿ ಜೋಡಿಸಿ, ಆನಂತರ ಲೋಹದ ಕೃತಕ ಕವಾಟವನ್ನು ತರಿಸಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಜೋಡಿಸುವ ಆಲೋಚನೆ ಮಾಡಿದರು. ಅದರಂತೆಯೇ ನಡೆಯಿತು ಕೂಡ.

ಆದರೆ ಹೀಗೆ ಮೃತ ವ್ಯಕ್ತಿಯ ಕವಾಟವನ್ನು ಪಡೆದ ಆ ರೋಗಿ ಬಹಳ ಚೆನ್ನಾಗಿ ಚೇತರಿಸಿಕೊಂಡರು. ಲೋಹದ ಕವಾಟವನ್ನು ಪಡೆದ ರೋಗಿಗಳ ಚೇತರಿಕೆಗಿಂತ ಇವರ ಚೇತರಿಕೆ ಕ್ಷಿಪ್ರವಾಗಿಯೂ, ಸರಾಗವಾಗಿಯೂ ಇತ್ತು! ಮತ್ತೊಂದು ಶಸ್ತ್ರಚಿಕಿತ್ಸೆ ಮಾಡುವ ಪ್ರಮೇಯವೇ ಬರಲಿಲ್ಲ! ಮೂರು ವರ್ಷಗಳ ಕಾಲ ಅದೇ ಕವಾಟದ ಜೊತೆ ಚೆನ್ನಾಗಿ ಬದುಕಿದ ಆ ರೋಗಿ ಬೇರಾವುದೋ ಕಾರಣದಿಂದ ಮೃತರಾದರು! ಇದರೊಂದಿಗೇ ಹೃದಯ ಕವಾಟ ಬದಲೀ ಶಸ್ತ್ರಚಿಕಿತ್ಸೆಯಲ್ಲಿ ಹೊಸದೊಂದು ವಿಧಾನ ಅನಾವರಣಗೊಂಡಿತು!

ಹೀಗೆಯೇ ಹಲವಾರು ಅವಘಡಗಳು ಊಹಿಸಲಾಗದ ಸುಖಾಂತ್ಯಗಳನ್ನು ಕಂಡಿವೆ. ಹೃದಯದ ಬಡಿತದಲ್ಲಿ ಏರುಪೇರುಗಳನ್ನು ಅನುಭವಿಸುತ್ತಿದ್ದ ಹಾಲೆಂಡ್ ದೇಶದ ವರ್ತಕರೊಬ್ಬರು ವ್ಯಾಪಾರ ಸಂಬಂಧದಿಂದ ೧೯೧೨ರಲ್ಲಿ ಭಾರತಕ್ಕೆ ಬಂದಿದ್ದಾಗ ಮಲೇರಿಯಾ ಬಾಧಿತರಾದರು. ಅದಕ್ಕೆ ಚಿಕಿತ್ಸೆ ಎಂದು ಕ್ವಿನೀನ್ ಮಾತ್ರೆಗಳನ್ನೂ ಸೇವಿಸಿದರು. ಅದರಿಂದ ಮಲೇರಿಯಾ ಮಾತ್ರವಲ್ಲ, ಅವರ ಹೃದಯ ಬಡಿತದ ಏರುಪೇರು ಕೂಡ ಕೆಲವು ಕಾಲದವರೆಗೆ ಸರಿಯಾಯಿತು! ಇದುವರೆಗೂ ಯಾವ ವೈದ್ಯರಿಂದಲೂ ಗುಣಪಡಿಸಲಾಗದ ಹೃದಯ ಬಡಿತದ ಸಮಸ್ಯೆ ಅದಕ್ಕೆ ಸಂಬಂಧವೇ ಇಲ್ಲದ ಬೇರಾವುದೋ ಔಷಧದಿಂದ ತಹಬಂದಿಗೆ ಬಂದಿತ್ತು! ಮುಂದೆ ಯಾವಾಗಲಾದರೂ ಹೃದಯ ಬಡಿತದ ಸಮಸ್ಯೆಯಾದಾಗ ಆ ವರ್ತಕರು ಮತ್ತೆ ಕ್ವಿನೀನ್ ಔಷಧ ಸೇವಿಸಿ ಸರಿಹೋಗುತ್ತಿದ್ದರು. ಈ ಹೊಸ ಬೆಳವಣಿಗೆಯಿಂದ ಉತ್ತೇಜಿತರಾದ ಆ ವರ್ತಕರು ಒಮ್ಮೆ ತಮ್ಮ ವೈದ್ಯರ ಬಳಿ ಈ ವಿಷಯ ತಿಳಿಸಿದರು. (ಆ ಕಾಲದಲ್ಲಿ ರೋಗಿಗಳ ಮಾತನ್ನು ಗಮನವಿಟ್ಟು ಕೇಳುತ್ತಿದ್ದ ವೈದ್ಯರೂ ಇದ್ದರೆನ್ನಿ!) ಈ ಸಂಗತಿಯನ್ನು ಕೂಲಂಕಶವಾಗಿ ದಾಖಲಿಸಿದ ಆ ವೈದ್ಯರ ಕಾರಣದಿಂದ ಈ ವಿಷಯವಾಗಿ ಸಂಶೋಧನೆ ನಡೆದು ಹೃದಯ ಬಡಿತದ ಏರುಪೇರುಗಳ ಚಿಕಿತ್ಸೆಗೆ ಕ್ವಿನಿಡೀನ್ ಎಂಬ ನೂತನ ಔಷಧ ಅಭಿವೃದ್ಧಿಗೊಂಡಿತು!

ಆಕಸ್ಮಿಕಗಳನ್ನೂ, ಅವಘಡಗಳನ್ನೂ ಎದುರಿಸದ ಮನುಷ್ಯರೇ ಇಲ್ಲ! ಕಷ್ಟಗಳಿಗೆ ಅಂಜುವ, ದುಸ್ಥಿತಿಯ ಕಾಲದಲ್ಲಿ ಪಲಾಯನಗೈಯುವ, ತೊಂದರೆಗಳು ಬಂದಾಗ ದುಃಖಿಸುತ್ತಾ ಕೂಡುವವರಿಂದ ಇತಿಹಾಸ ನಿರ್ಮಾಣವಾಗುವುದಿಲ್ಲ. ಕಷ್ಟಕಾಲದಲ್ಲಿ ಅಧೀರರಾಗದೇ, ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳದೇ, ಪಕ್ವವಾಗಿ ಚಿಂತಿಸುವವರಿಗೆ ಮಾತ್ರ Serendipity ಸಂಭವಿಸುತ್ತದೆ.

logo
ಇಜ್ಞಾನ Ejnana
www.ejnana.com