ಭೂಮಿಯ ಸುತ್ತ ಸುತ್ತುವ ಉಪಗ್ರಹಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಳ ಉಪಯುಕ್ತ
ಭೂಮಿಯ ಸುತ್ತ ಸುತ್ತುವ ಉಪಗ್ರಹಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಳ ಉಪಯುಕ್ತImage by PIRO4D from Pixabay

ಬದುಕಿನ ಜಟಕಾ ಬಂಡಿ ಮತ್ತು ಸ್ಯಾಟಲೈಟಿನ ಕೊಂಡಿ

ಕೃತಕ ಉಪಗ್ರಹಗಳಿಂದ ನಮ್ಮ ನಿತ್ಯದ ಬದುಕಿಗೆ ಏನೆಲ್ಲ ಪ್ರಯೋಜನಗಳಿವೆ?

ಮನುಕುಲದ ಇತಿಹಾಸದಲ್ಲಿ ಅನೇಕ ಮಹತ್ವದ ದಿನಗಳು ಆಗಿಹೋಗಿವೆ. ಇಂತಹ ದಿನಗಳಲ್ಲಿ ೧೯೫೭ರ ಅಕ್ಟೋಬರ್ ೪ ಕೂಡ ಒಂದು.

ಅದು ಅಮೆರಿಕಾ ಹಾಗೂ ರಷ್ಯಾ ದೇಶಗಳ ನಡುವೆ ಶೀತಲ ಸಮರ (ಕೋಲ್ಡ್ ವಾರ್) ನಡೆಯುತ್ತಿದ್ದ ಕಾಲ. ಯಾವುದೇ ವಿಷಯ ತೆಗೆದುಕೊಂಡರೂ ಅದರಲ್ಲಿ ಈ ದೇಶಗಳ ನಡುವೆ ಸ್ಪರ್ಧೆ ಇರುತ್ತಿದ್ದದ್ದು ಸಾಮಾನ್ಯವಾಗಿತ್ತು. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿದ್ದ ಇಂಥದ್ದೇ ಸ್ಪರ್ಧೆಯಲ್ಲಿ ರಷ್ಯಾ ಪಾಲಿಗೆ ಮೊದಲ ಜಯ ಸಿಕ್ಕಿದ್ದು ೧೯೫೭ರ ಅಕ್ಟೋಬರ್ ೪ರಂದು. ಮೊತ್ತಮೊದಲ ಮಾನವನಿರ್ಮಿತ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿರುವ 'ಸ್ಪುಟ್ನಿಕ್-೧' ಅಂದು ಯಶಸ್ವಿಯಾಗಿ ಉಡಾವಣೆಗೊಂಡು ದಾಖಲೆ ನಿರ್ಮಿಸಿತು.

ಕೃತಕ ಉಪಗ್ರಹಗಳ ಪರಿಕಲ್ಪನೆ ಬಹಳ ಹಳೆಯದು. ಇಟ್ಟಿಗೆಯಿಂದ ನಿರ್ಮಿಸಿದ ಗೋಲವೊಂದನ್ನು ಆಕಾಶಕ್ಕೆ ಹಾರಿಬಿಡುವ ಪ್ರಯತ್ನ ಕುರಿತ 'ದ ಬ್ರಿಕ್ ಮೂನ್' ಎಂಬ ಕತೆ ೧೮೬೯ರಷ್ಟು ಹಿಂದೆಯೇ ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತಂತೆ. ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು, ಉಪಗ್ರಹವೊಂದನ್ನು ನಿಜವಾಗಿಯೂ ಅಂತರಿಕ್ಷಕ್ಕೆ ಸೇರಿಸಲು ಕೊಂಚ ಸಮಯ ಬೇಕಾಯಿತು ಅಷ್ಟೇ.

ರಷ್ಯಾ ಹಾರಿಬಿಟ್ಟ ಮೊದಲ ಉಪಗ್ರಹದ ಬೆನ್ನಲ್ಲೇ ಇತರ ರಾಷ್ಟ್ರಗಳೂ ತಂತಮ್ಮ ಉಪಗ್ರಹಗಳನ್ನು ಹಾರಿಬಿಡಲು ಶುರುಮಾಡಿದವು. ಅಮೆರಿಕಾದ ಮೊದಲ ಉಪಗ್ರಹ ೧೯೫೮ರಲ್ಲಿ ಅಂತರಿಕ್ಷ ಸೇರಿದರೆ, ಭಾರತದ ಮೊದಲ ಉಪಗ್ರಹ 'ಆರ್ಯಭಟ' ೧೯೭೫ರಲ್ಲಿ ರಷ್ಯಾದಿಂದ ಉಡಾವಣೆಯಾಯಿತು. ಈಗಂತೂ ಆಕಾಶದಲ್ಲಿ ಟ್ರಾಫಿಕ್ ಜಾಮ್ ಆಗುವಷ್ಟು ಸಂಖ್ಯೆಯ ಉಪಗ್ರಹಗಳಿವೆ.

ಆಕಾಶಕ್ಕೆ ಹಾರಿದ ಮೇಲೆ ಭೂಮಿಯ ಸುತ್ತ ಸುತ್ತುತ್ತಲೇ ಇರುವ ಉಪಗ್ರಹಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಳ ಉಪಯುಕ್ತ ಎಂದು ನಾವು ಕೇಳಿದ್ದೇವೆ. ಹವಾಮಾನ ಪರಿವೀಕ್ಷಣೆ, ಖನಿಜ ನಿಕ್ಷೇಪಗಳ ಅನ್ವೇಷಣೆ ಹಾಗೂ ಸೇನಾಪಡೆಗಳ ಹಲವು ಕೆಲಸಗಳಿಗೂ ಉಪಗ್ರಹಗಳು ಬಳಕೆಯಾಗುತ್ತವೆ. ಹವಾಮಾನ ಮುನ್ಸೂಚನೆ, ಪ್ರಕೃತಿ ವಿಕೋಪ ನಿರ್ವಹಣೆಯಂತಹ ಉದ್ದೇಶಗಳಿಗೂ ಉಪಗ್ರಹಗಳ ನೆರವು ಪಡೆಯಲಾಗುತ್ತದೆ.

ಭೂಮಿಯ ಸುತ್ತ ಮಾತ್ರವೇ ಅಲ್ಲ, ಇನ್ನಿತರ ಆಕಾಶಕಾಯಗಳನ್ನು ಸುತ್ತುಹಾಕುವ ಉಪಗ್ರಹಗಳೂ ಇವೆ. ಆ ಕಾಯಗಳ ಕುರಿತು ನಮ್ಮ ಅರಿವನ್ನು ವಿಸ್ತರಿಸುವಲ್ಲಿ ಈ ಉಪಗ್ರಹಗಳು ನೆರವಾಗುತ್ತಿವೆ. ಇಸ್ರೋ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದ 'ಮಂಗಳಯಾನ' ಇಂತಹ ಉಪಗ್ರಹಗಳಿಗೊಂದು ಉದಾಹರಣೆ. ಇದೇ ರೀತಿ ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರನ ಸುತ್ತ ಸುತ್ತುವ 'ಚಂದ್ರಯಾನ', ಉಪಗ್ರಹದ ಉಪಗ್ರಹ!

ಇವೆಲ್ಲವೂ ಮಹತ್ವದ ಉದ್ದೇಶಗಳು, ಸರಿ. ಇವು ಅಪರೋಕ್ಷವಾಗಿಯಾದರೂ ನಮ್ಮನ್ನು ಪ್ರಭಾವಿಸುತ್ತವೆ ಎನ್ನುವುದೂ ನಿಜವೇ. ಹಾಗಾದರೆ ಇಷ್ಟೆಲ್ಲ ಸಂಖ್ಯೆಯ ಉಪಗ್ರಹಗಳಿಂದ, ಬಾಹ್ಯಾಕಾಶ ತಂತ್ರಜ್ಞಾನದಿಂದ ನಮ್ಮ ನಿತ್ಯದ ಬದುಕಿಗೆ ಉಪಯೋಗವಾಗುವ ನೇರ ಪ್ರಯೋಜನ ಯಾವುದೂ ಇಲ್ಲವೇ?

ಖಂಡಿತಾ ಇದೆ. ಕ್ರಿಕೆಟ್ ಪಂದ್ಯವಿರಲಿ, ರಾಜಕೀಯ ಬೆಳವಣಿಗೆಗಳೇ ಇರಲಿ, ನಡೆಯುತ್ತಿರುವ ಜಾಗದಿಂದಲೇ ಅವನ್ನೆಲ್ಲ ನೇರಪ್ರಸಾರ ಮಾಡಲು ಸಾಧ್ಯವಾಗುವುದು ಉಪಗ್ರಹಗಳಿಂದಾಗಿಯೇ. ಇನ್ನು ಟೀವಿ ಕಾರ್ಯಕ್ರಮಗಳನ್ನು ಸೆಟ್ ಟಾಪ್ ಬಾಕ್ಸ್ ಮೂಲಕ ದಿವಾನಖಾನೆಯ ದೂರದರ್ಶನಕ್ಕೆ ತಂದುಕೊಡುವುದು ಕೂಡ ಕೃತಕ ಉಪಗ್ರಹಗಳದೇ ಕೆಲಸ. ಸ್ಯಾಟಲೈಟ್ ಫೋನ್ ಎಲ್ಲಿ ಬೇಕಾದರೂ ಕೆಲಸಮಾಡುತ್ತದೆ ಎನ್ನುತ್ತಾರಲ್ಲ, ಅದು ಸಾಧ್ಯವಾಗುವುದೂ ಉಪಗ್ರಹಗಳ ನೆರವಿನಿಂದಲೇ.

ಹೊರಗೆ ಹೊರಟಾಗ ಟ್ಯಾಕ್ಸಿ ಕರೆಸಲು, ಹೋಟಲಿನಿಂದ ಊಟವನ್ನು ಮನೆಗೇ ತರಿಸಲು ಬೇರೆಬೇರೆ ಆಪ್‌ಗಳನ್ನು ಬಳಸುವುದು ಇದೀಗ ಸಾಮಾನ್ಯವಾಗಿರುವ ಅಭ್ಯಾಸ. ಮನೆಗೆ ನೆಂಟರು ಬರುತ್ತಾರೆ ಎಂದಾಗ ಅಲ್ಲಿ ರೈಟು, ಇಲ್ಲಿ ಲೆಫ್ಟು ಎಂದೆಲ್ಲ ಹೇಳದೆ ಒಂದು ಮೆಸೇಜಿನಲ್ಲಿ ನಮ್ಮನೆಯ ಲೊಕೇಶನ್ ಕಳಿಸಿಬಿಡುವುದೂ ನಮಗೆ ಗೊತ್ತಿದೆ. ಹಾಗೆ ಮೆಸೇಜು ಪಡೆದವರೂ ಅಷ್ಟೇ, ಅವರಿವರನ್ನು ಕೇಳದೆ ತಮ್ಮ ಮೊಬೈಲ್ ಒಂದನ್ನೇ ನೆಚ್ಚಿಕೊಂಡು ನೇರವಾಗಿ ಮನೆಗೆ ಬಂದು ತಲುಪುತ್ತಾರೆ. ಈ ಎಲ್ಲ ಉದಾಹರಣೆಗಳಲ್ಲೂ ಬಳಕೆಯಾಗುವ ಜಿಪಿಎಸ್ ವ್ಯವಸ್ಥೆ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್) ಕೆಲಸಮಾಡುವುದು ಉಪಗ್ರಹಗಳ ಸಹಾಯದಿಂದಲೇ. ಇಂತಹುದೇ ಸೇವೆ ನೀಡಲಿರುವ ನಮ್ಮ ದೇಶದ ಐಆರ್‌ಎನ್‌ಎಸ್‌ಎಸ್ (ಇಂಡಿಯನ್ ರೀಜನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್) ವ್ಯವಸ್ಥೆಯ ಬೆನ್ನಿಗೂ ತನ್ನದೇ ಆದ ಉಪಗ್ರಹಗಳ ಜಾಲ ಇದೆ.

ಉಪಗ್ರಹಗಳ ಅಭಿವೃದ್ಧಿಗೆ ನೆರವು ನೀಡಿದ ಬಾಹ್ಯಾಕಾಶ ತಂತ್ರಜ್ಞಾನ, ಭೂಮಿಯ ಮೇಲೆ ಕುಳಿತ ನಮಗೂ ಹಲವು ಕೊಡುಗೆಗಳನ್ನು ಕೊಟ್ಟಿದೆ. ಸೋಲಾರ್ ಸೆಲ್ ತಂತ್ರಜ್ಞಾನದಲ್ಲಿ ಬಹಳಷ್ಟು ಬೆಳವಣಿಗೆಗಳಾಗಿದ್ದು ಬಾಹ್ಯಾಕಾಶದ ಉಪಯೋಗಗಳಿಗೆಂದೇ. ಇಂದು ನಾವು ಮೊಬೈಲ್ ಕ್ಯಾಮೆರಾ ಬಳಸಿ ಪಟಪಟನೆ ಫೋಟೋ ಕ್ಲಿಕ್ ಮಾಡುತ್ತಿರುತ್ತೇವೆ. ಅಷ್ಟೆಲ್ಲ ಚೆಂದದ ಚಿತ್ರಗಳನ್ನು ಸೆರೆಹಿಡಿಯುವ ಕ್ಯಾಮೆರಾವನ್ನು ಅಷ್ಟು ಕಡಿಮೆ ಸ್ಥಳಾವಕಾಶದಲ್ಲಿ ಅಡಕವಾಗಿರಿಸುವುದು ಸಾಧ್ಯವಾಗಿದ್ದು ಕೂಡ ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿಯೇ. ಉಪಗ್ರಹ ಹಾಗೂ ಇನ್ನಿತರ ಅಂತರಿಕ್ಷವಾಹನಗಳಲ್ಲಿ ಬಳಸಲೆಂದು ರೂಪುಗೊಂಡ ಪುಟಾಣಿ ಕ್ಯಾಮೆರಾ ತಂತ್ರಜ್ಞಾನ ಈಗ ನಮ್ಮ ಕೈಗೂ ಸಿಕ್ಕಿದೆ, ಅಷ್ಟೇ!

ಅಕ್ಟೋಬರ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಭೂಮಿಯ ಸುತ್ತ ಸುತ್ತುವ ಉಪಗ್ರಹಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಳ ಉಪಯುಕ್ತ
ಬಾಹ್ಯಾಕಾಶವೆಂಬ ಉದ್ಯಮ!

Related Stories

No stories found.
logo
ಇಜ್ಞಾನ Ejnana
www.ejnana.com