ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಬಾಹ್ಯಾಕಾಶ ಉದ್ಯಮವೂ ಒಂದು
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಬಾಹ್ಯಾಕಾಶ ಉದ್ಯಮವೂ ಒಂದು
ವೈವಿಧ್ಯ

ಬಾಹ್ಯಾಕಾಶವೆಂಬ ಉದ್ಯಮ!

೨೦೪೦ರ ವೇಳೆಗೆ ವಿಶ್ವದ ಬಾಹ್ಯಾಕಾಶ ಉದ್ಯಮ ಒಂದು ಲಕ್ಷ ಕೋಟಿ ಡಾಲರ್ ವಹಿವಾಟು ನಡೆಸಲಿದೆಯಂತೆ!

ಉದಯ ಶಂಕರ ಪುರಾಣಿಕ

ಬಾಹ್ಯಾಕಾಶ ಉದ್ಯಮವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಉದ್ಯಮ ವರ್ಷ ೨೦೧೮ರಲ್ಲಿ ೩೬೦ ಬಿಲಿಯನ್ ಡಾಲರ್ ವಹಿವಾಟು ನಡೆಸಿದರೆ, ೨೦೨೬ರಲ್ಲಿ ೫೫೮ ಬಿಲಿಯನ್ ಡಾಲರ್ ವಹಿವಾಟು ಮತ್ತು ೨೦೪೦ರಲ್ಲಿ ಒಂದು ಸಾವಿರ ಬಿಲಿಯನ್ ಡಾಲರ್‌ಗೂ ಅಧಿಕ ವಹಿವಾಟು ನಡೆಯುವ ನಿರೀಕ್ಷೆ ಇದೆ.

ಬಾಹ್ಯಾಕಾಶ ಉದ್ಯಮವು ವರ್ಷ ೨೦೧೮ರಲ್ಲಿ ವಿಶ್ವಾದ್ಯಂತ ೩೬೦ ಬಿಲಿಯನ್ ಡಾಲರ್ ವಹಿವಾಟು ನಡೆಸಲು, ಕಾರಣಗಳು ಹೀಗಿವೆ:

೧) ಉಪಗ್ರಹ ಆಧಾರಿತ ಸೇವೆಗಳು : ೧೨೬.೫ ಬಿಲಿಯನ್ ಡಾಲರ್ ವಹಿವಾಟು

ಈ ಸೇವೆಗಳಲ್ಲಿ ಟೆಲಿವಿಷನ್, ರೇಡಿಯೋ, ಇಂಟರ್ನೆಟ್ ಬ್ರಾಡ್‌ಬ್ಯಾಂಡ್, ಸ್ಥಿರ ದೂರವಾಣಿ, ಮೊಬೈಲ್ ದೂರವಾಣಿ, ದೂರ ಸಂವೇದಿ ಸೇವೆಗಳು, ಇತ್ಯಾದಿಗಳು ಸೇರಿವೆ.

೨) ಭೂಮಿಯ ಮೇಲೆ ದೊರೆಯುವ ಸಾರ್ವಜನಿಕ ಸೇವೆಗಳು ( ಗ್ರೌಂಡ್ ಉಪಕರಣಗಳು) : ೧೨೫.೨ ಬಿಲಿಯನ್ ಡಾಲರ್ ವಹಿವಾಟು

ಈ ಸೇವೆಗಳಲ್ಲಿ, ವಾಣಿಜ್ಯ ಮತ್ತು ಗೃಹಬಳಕೆಯ ಉಪಕರಣಗಳು, ಜಿಪಿಎಸ್ ಸೌಲಭ್ಯ ಬಳಸುವ ಉಪಕರಣಗಳು, ಇಂಟರ್ನೆಟ್ ಗೇಟ್ವೇ ಮೊದಲಾದ ಸೇವೆಗಳನ್ನು ನೀಡಲು ಬಳಸುವ ನೆಟವರ್ಕ ಉಪಕರಣಗಳು ಸೇರಿವೆ.

೩) ಉಪಗ್ರಹ ಉಡಾವಣೆ ಸೇವೆಗಳು : ೬.೨ ಬಿಲಿಯನ್ ಡಾಲರ್ ವಹಿವಾಟು.

ಇದುವರೆಗೆ ಉಡಾವಣೆಯಾಗಿರುವ ಉಪಗ್ರಹಗಳಲ್ಲಿ ಶೇಕಡಾ ೩೭ರಷ್ಟು ಉಪಗ್ರಹಗಳು ಅಮೇರಿಕಾಗೆ ಸೇರಿದ್ದು, ಚೀನಾ, ಭಾರತ ಮೊದಲಾದ ದೇಶಗಳಿಗೆ ಸೇರಿದ ಉಪಗ್ರಹಗಳು ಶೇಕಡಾ ೬೩ರಷ್ಟು ಆಗಿವೆ.

೪) ಉಪಗ್ರಹ ವಿನ್ಯಾಸ ಮತ್ತು ನಿರ್ಮಾಣ : ೧೯.೫೮ ಬಿಲಿಯನ್ ಡಾಲರ್ ವಹಿವಾಟು

ನಿರ್ಮಾಣವಾದ ಉಪಗ್ರಹಗಳಲ್ಲಿ ೩೯ರಷ್ಟು ದೂರ ಸಂವೇದಿ ಉಪಗ್ರಹಗಳಾದರೆ, ಶೇಕಡಾ ೨೨ರಷ್ಟು ವಾಣಿಜ್ಯ ಕಮೂನಿಕೇಷನ್ ಉಪಗ್ರಹಗಳಾಗಿವೆ. ಸಂಶೋಧನೆಗಾಗಿ ಬಳಸುವ ಉಪಗ್ರಹಗಳು ಶೇಕಡಾ ೧೮ರಷ್ಟು, ನ್ಯಾವಿಗೇಷನ್ ಉಪಗ್ರಹಗಳು ಶೇಕಡಾ ೮ರಷ್ಟು ಆಗಿವೆ. ಉಳಿದ ಶೇಕಡಾ ೧೪ರಲ್ಲಿ ಮಿಲಿಟರಿ, ವಿಜ್ಞಾನ ಮತ್ತು ಸಾರ್ವಜನಿಕ ಸಂವಹನಕ್ಕಾಗಿ ಬಳಸುವ ಉಪಗ್ರಹಗಳು ಸೇರಿವೆ.

೫) ಸರ್ಕಾರ ಮತ್ತು ಖಾಸಗಿ ವಲಯದ ಬಾಹ್ಯಾಕಾಶ ಯೋಜನೆಗಳು : ೮೨.೫ ಬಿಲಿಯನ್ ಡಾಲರ್ ವಹಿವಾಟು

ನವೆಂಬರ್ ೨೦೧೮ರಲ್ಲಿ ಒಟ್ಟು ೧೯೫೦ ಉಪಗ್ರಹಗಳಿದ್ದರೆ, ೨೦೧೯ ಮಾರ್ಚನಲ್ಲಿ ಒಟ್ಟು ೨೦೬೨ ಉಪಗ್ರಹಗಳು ಕೆಲಸ ಮಾಡುತ್ತಿದ್ದವು. ಹೀಗೆ ಕೆಲಸ ಮಾಡುವ ಉಪಗ್ರಹಗಳಲ್ಲಿ ಶೇಕಡಾ ೬೩ರಷ್ಟು ಉಪಗ್ರಹಗಳು ವಾಣಿಜ್ಯ ಬಳಕೆ ಮತ್ತು ಸರ್ಕಾರದ ಇಲಾಖೆಗಳಿಗೆ ಸೇರಿವೆ. ಶೇಕಡಾ ೧೫ರಷ್ಟು ಉಪಗ್ರಹಗಳು ಮಾತ್ರ ಮಿಲಿಟರಿ ಬಳಕೆಗೆ ಮೀಸಲಾಗಿವೆ.

ವರ್ಷ ೨೦೪೦ರಲ್ಲಿ ವಿಶ್ವದ ಬಾಹ್ಯಾಕಾಶ ಉದ್ಯಮವು ೧೦೦೦ ಕೋಟಿ ಡಾಲರ್ ವಹಿವಾಟು ನಡೆಸಲಿರುವುದು ಹೇಗೆ ಎಂದು ವಿಶ್ವವಿಖ್ಯಾತ ಸಂಸ್ಥೆಗಳಲ್ಲಿ ಒಂದಾಗಿರುವ ಮೋರ್ಗನ್ ಸ್ಟಾನ್ಲಿ ಮತ್ತು ಸಹಯೋಗಿ ಸಂಸ್ಥೆಗಳು, ಬಾಹ್ಯಾಕಾಶ ಉದ್ಯಮ ಕುರಿತು ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಈ ಕೆಳಕಂಡ ಮಾಹಿತಿಯನ್ನು ನೀಡಿದ್ದಾರೆ.

೨೦೪೦ರಲ್ಲಿ ವಿಶ್ವದ ಬಾಹ್ಯಾಕಾಶ ಉದ್ಯಮ
೨೦೪೦ರಲ್ಲಿ ವಿಶ್ವದ ಬಾಹ್ಯಾಕಾಶ ಉದ್ಯಮ

ಬಾಹ್ಯಾಂತರಿಕ್ಷ ಮತ್ತು ಭಾರತ

ಇಸ್ರೋ ಮತ್ತು ಅಂಗಸಂಸ್ಥೆಗಳಿಗೆ ಪ್ರತಿವರ್ಷ ಸಾವಿರಾರು ಕೋಟಿ ಅನುದಾನವನ್ನು ಸರ್ಕಾರ ನೀಡುತ್ತಿದೆ ಆದರೆ ಜನಸಾಮಾನ್ಯರಿಗೆ ಅದರಿಂದೇನು ಪ್ರಯೋಜನ ಎಂದು ಕೆಲವರು ಕೇಳುತ್ತಾರೆ. ಮಂಗಳಯಾನ, ಚಂದ್ರಯಾನ ಮೊದಲಾದ ಯೋಜನೆಗಳಿಂದ ವಿಶ್ವದ ಬಾಹ್ಯಾಕಾಶ ಉದ್ಯಮದಲ್ಲಿ ಭಾರತಕ್ಕೆ ಮಹತ್ವದ ಸಾಧನೆ ದೊರೆಯುವುದರ ಜೊತೆಗೆ ಜನಸಾಮಾನ್ಯರಿಗೆ ಅನೇಕ ಸೇವೆ ಮತ್ತು ಸೌಲಭ್ಯಗಳನ್ನು ಇಸ್ರೋ ನೀಡುತ್ತಿದೆ. ಇವುಗಳಲ್ಲಿ ಕೆಲವು ಹೀಗಿವೆ :

೧) ಉಪಗ್ರಹ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ, ಉಪಗ್ರಹ ಉಡಾವಣೆ ರಾಕೆಟ್‌ಗಳಲ್ಲದೆ, ಇಸ್ರೋ ಮಂಗಳಗ್ರಹಯಾನದಂತಹ ಡೀಪ್ ಸ್ಪೇಸ್ ಯೋಜನೆಗಳಲ್ಲಿ ಯಶಸ್ವಿಯಾಗಿದೆ.

೨) ಬಾಹ್ಯಾಕಾಶದಲ್ಲಿರುವ ಭಾರತದ ಉಪಗ್ರಹಗಳ ಮೇಲೆ ಕ್ಷಿಪಣಿ ದಾಳಿಯಂತಹ ಯುದ್ಧಕ್ಕೆ ವೈರಿ ದೇಶಗಳು ಮುಂದಾದರೆ, ಅಂತಹ ದಾಳಿಗಳನ್ನು ವಿಫಲಗೊಳಿಸಲು ಎಸ್ಯಾಟ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಭಾರತ, ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೆಯ ದೇಶವಾಗಿದೆ.

೩) ಇಸ್ರೋದ ವಾಣಿಜ್ಯ ಸಂಸ್ಥೆ ಆನ್ಟ್ರಿಕ್ಸ್ ಕಳೆದ ಮೂರು ವರ್ಷಗಳಲ್ಲಿ ೨೩೯ ಉಪಗ್ರಹಗಳ ಉಡಾವಣೆಯಿಂದ ೬,೨೮೯ ಕೋಟಿ ರೂಪಾಯಿಗಳಿಸಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಆದಾಯವನ್ನು ಇಸ್ರೋ ಗಳಿಸುವ ವಿಶ್ವಾಸವನ್ನು ಹೊಂದಿದೆ.

೪) ಕಾರ್ಗಿಲ್ ಯುದ್ಧದಲ್ಲಿ ಆಕ್ರಮಣ ಮಾಡಿದ ಪಾಕಿಸ್ತಾನದ ಸೈನಿಕರು, ಹಿಮಾಲಯ ಪರ್ವತಗಳಲ್ಲಿ ಅಡಗಿ ಕುಳಿತಿರುವ ಸ್ಥಾನಗಳ ವಿವರ ( ಜಿಪಿಎಸ್ ಲೊಕೇಷನ್) ಲಭ್ಯವಿದ್ದರೂ, ಭಾರತಕ್ಕೆ ಅದನ್ನು ನೀಡಲು ಅಮೇರಿಕಾ ನಿರಾಕರಿಸಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಇಸ್ರೋ, ಭಾರತದ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳ ಬಳಕೆಗೆ ಗಗನ್ ಮತ್ತು ಅಮೇರಿಕಾದ ಜಿಪಿಎಸ್‌ಗಿಂತ ಹೆಚ್ಚು ನಿಖರತೆಯಿರುವ ಐಆರ್‌ಎನ್ಎಸ್ಎಸ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಈ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುವಂತೆ ಮಾಡಿದೆ.

೫) ಪ್ರವಾಹ, ಬರಗಾಲ, ಭೂಕಂಪ, ಸುನಾಮಿ, ಭೂಕುಸಿತ ಕಾಡ್ಗಿಚ್ಚುಗಳಂತಹ ವಿಕೋಪ ಪರಿಸ್ಥಿತಿಗಳನ್ನು ಗುರುತಿಸಿ, ಸೂಕ್ತ ಪರಿಹಾರ ಕೈಗೊಳ್ಳಲು ಸರ್ಕಾರಕ್ಕೆ ನೆರವಾಗಲು ಅಗತ್ಯವಾದ ರೇಡಾರ್, ಉಪಗ್ರಹ ಮತ್ತು ಸಂವಹನ ವ್ಯವಸ್ಥೆಯನ್ನು ಇಸ್ರೋ ಮತ್ತು ಅಂಗಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಕೇರಳ, ಕರ್ನಾಟಕ, ಅಸ್ಸಾಮ್, ಒಡಿಸ್ಸಾದಂತಹ ರಾಜ್ಯಗಳಲ್ಲಿ ಈ ವ್ಯವಸ್ಥೆಯ ಬಳಕೆಯಿಂದ ಲಕ್ಷಾಂತರ ಜನರ ಪ್ರಾಣ ಉಳಿಸಲು ಸಾಧ್ಯವಾಗಿದೆ.

೬) ಭಾರತದ ಗಡಿಪ್ರದೇಶ ಮತ್ತು ಸಮುದ್ರದ ರಕ್ಷಣೆಗಾಗಿ ರಕ್ಷಣಾ ಪಡೆಗಳಿಗೆ ಅಗತ್ಯವಾದ ಮಿಲಿಟರಿ ಉಪಗ್ರಹಗಳು ಕೆಲಸ ಮಾಡುತ್ತಿವೆ.

೭) ಹವಾಮಾನ ಮಾಹಿತಿ, ಟೆಲಿ ಮೆಡಿಸೀನ್, ದೂರ ಶಿಕ್ಷಣ, ಟಿವಿ, ರೇಡಿಯೋ, ಮೊಬೈಲ್ ಮತ್ತು ಸ್ಥಿರ ದೂರವಾಣಿ, ಇಂಟರ್ನೆಟ್ ಮೊದಲಾದ ಸೇವೆಗಳನ್ನು ಭಾರತಾದಂತ್ಯ ನೀಡಲು ಅಗತ್ಯವಾದ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಢಿ, ನಿರ್ವಹಿಸುತ್ತಿದೆ.

೮) ಭಾರತದ ಖಿನಿಜ ಸಂಪತ್ತು, ಅರಣ್ಯಪ್ರದೇಶ, ನದಿ ಮತ್ತು ಜಲಾಶಯಗಳು, ಅಂರ್ತಜಲ, ವಾಯು ಮಾಲಿನ್ಯ, ಕೃಷಿ ಮಾಹಿತಿ, ಕೀಟ ದಾಳಿ ಮೊದಲಾದ ಮಾಹಿತಿಯನ್ನು ನಿರಂತರವಾಗಿ ಪಡೆದು ಸಂಸ್ಕರಿಸುವ ಉಪಗ್ರಹಗಳು ಮತ್ತು ಮಾಹಿತಿ ಕೇಂದ್ರಗಳನ್ನು ಇಸ್ರೋ ನಡೆಸುತ್ತಿದೆ.

೯) ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾನವನ ಅದ್ಯ ಕರ್ತವ್ಯ ಮತ್ತು ಅವಶ್ಯಕತೆಯೂ ಆಗಿದೆ. ಇಸ್ರೋ ಪ್ರಾಯೋಜಿತ ಭುವನ ಇಪೋರ್ಟಲ್ ಮೂಲಕ ಜನಸಾಮಾನ್ಯರು ಕೂಡಾ ಜಲ ಮೂಲಗಳು ಮತ್ತು ನೈಸರ್ಗಿಕ ಸಂಪನ್ನ್ಮೂಲಗಳನ್ನು ಕುರಿತು ಮಾಹಿತಿ ಪಡೆಯ ಬಹುದಾಗಿದೆ.

೧೦) ಇಸ್ರೋ ಇದುವರೆಗೂ ೩೦೦ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಉಪಗ್ರಹಗಳಲ್ಲಿ ಬೇರೆ ದೇಶಗಳಿಗೆ ಸೇರಿರುವ ಉಪಗ್ರಹಗಳು ಇರುವುದು, ಇಸ್ರೋ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಬೇರೆ ದೇಶಗಳು ನೀಡುತ್ತಿರುವ ಗೌರವದ ಒಂದು ಉದಾಹರಣೆಯಾಗಿದೆ.

ಭಾರತ ಎದುರಿಸುತ್ತಿರುವ ಸವಾಲುಗಳು:

೧) ೨೦೧೮ರಲ್ಲಿ ೩೬೦ ಬಿಲಿಯನ್ ವ್ಯವಹಾರ ನಡೆಸಿದ ಜಾಗತಿಕ ಬಾಹ್ಯಾಂತರಿಕ್ಷ ಉದ್ಯಮದಲ್ಲಿ ಭಾರತಕ್ಕೆ ನೂರಾರು ಬಿಲಿಯನ್ ಡಾಲರ್ ವಹಿವಾಟು ಮತ್ತು ಸಾವಿರಾರು ಸಂಖ್ಯೆಯಲ್ಲಿ ಉದ್ಯಮಗಳು ಹಾಗೂ ಉದ್ಯೋಗಗಳನ್ನು ಪಡೆಯುವ ಸಾಮರ್ಥ್ಯವಿದೆ. ಆದರೆ ಈ ಕನಸು ಸಾಕಾರವಾಗಲು ಇಸ್ರೋ ಮತ್ತು ಅಂಗಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ಹೆಚ್ಚಾಗಬೇಕಾಗುತ್ತದೆ. ಪ್ರಮುಖ ಅಮೇರಿಕಾ, ಚೀನಾ, ರಷ್ಯಾದಂತಹ ದೇಶಗಳಲ್ಲಿ ಸರ್ಕಾರದಿಂದ ದೊರೆಯುವ ಅನುದಾನಕ್ಕೆ ಹೋಲಿಸಿದರೆ ಇಸ್ರೋಗೆ ದೊರೆಯುತ್ತಿರುವ ಅನುದಾನ ಬಹಳ ಕಡಿಮೆ ಇದೆ. ೨೦೧೯-೨೦ರ ಕೇಂದ್ರ ಅಯವ್ಯಯ ಪತ್ರದಲ್ಲಿ ಇಸ್ರೋಗಾಗಿ ೧೨, ೪೭೩.೨೬ ಕೋಟಿ ರೂಪಾಯಿಗಳ ಅನುದಾನ ನೀಡುವ ಪ್ರಸ್ತಾಪವಿದೆ. ಅದೇ ೨೦೧೯-೨೦ರಲ್ಲಿ ಅಮೇರಿಕಾ ನೀಡುವ ಅನುದಾನ ೧,೫೪,೧೬೩.೬ ಕೋಟಿ ರೂಪಾಯಿಗಳಷ್ಟಾಗಿದೆ.

೨) ಪುರ್ನಬಳಕೆ ಮಾಡಬಹುದಾದ ಉಪಗ್ರಹ ಉಡಾವಣೆ ರಾಕೆಟ್ಗಳ ನಿರ್ಮಾಣ ತಂತ್ರಜ್ಞಾನ ಬಳಸಿ ಉಪಗ್ರಹಗಳನ್ನು ಲೋ ಅರ್ಥ ಆರ್ಬಿಟ್ (ಎಲ್ಇಓ)ಗೆ ತಲುಪಿಸಲು, ವಿದೇಶಿ ಸಂಸ್ಥೆಗಳು ಮುಂದಾಗುತ್ತಿವೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಕೂಡಾ ಖಾಸಗಿ ಉದ್ಯಮಗಳು, ಇಸ್ರೋ ಸಹಭಾಗಿತ್ವದಲ್ಲಿ ಪಿಎಸ್ಎಲ್ವಿ ತಂತ್ರಜ್ಞಾನ ಬಳಸಿ ಎಲ್ಇಓ ತಲುಪುವ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆ ಮಾಡುವ ಸಾಮರ್ಥ್ಯವನ್ನು ಪಡೆಯಬೇಕಾಗಿದೆ.

೩) ಕ್ರಿಯೋಜೆನಿಕ್ ಇಂಜಿನ್ ತಂತ್ರಜ್ಞಾನ, ಈಗ ಲಭ್ಯವಿರುವ ಉಡಾವಣೆ ರಾಕೆಟ್ಗಳಿಗಿಂತ ಹಲವು ಪಟ್ಟು ಹೆಚ್ಚು ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಕೆಟ್ಗಳ ನಿರ್ಮಾಣ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಡೀಪ್ ಸ್ಪೇಸ್ ಯೋಜನೆಗಳು ಮೊದಲಾದ ಕ್ಷೇತ್ರಗಳಲ್ಲಿ ಇಸ್ರೋ ತನ್ನ ಸಾಮರ್ಥ್ಯವೃದ್ಧಿ ಮಾಡಿಕೊಳ್ಳುವುದು ಅಗತ್ಯವಿದೆ.

೪) ಇಸ್ರೋಗೆ ಬಿಡಿಭಾಗಗಳು ಮತ್ತು ಸೇವೆ ನೀಡುವ ಉದ್ಯಮಗಳಿಗೆ ಸೀಮಿತವಾಗದೆ, ತಂತ್ರಜ್ಞಾನ, ಉಪಗ್ರಹ ವಿನ್ಯಾಸ, ಉಡಾವಣೆ, ಮೌಲ್ಯಾಧಾರಿತ ಸೇವೆಗಳನ್ನು ನೀಡಲು ಖಾಸಗಿ ಉದ್ಯಮಿಗಳು ಮುಂದಾಗಬೇಕು. ಸರ್ಕಾರ, ಇಸ್ರೋ ಮತ್ತು ಖಾಸಗಿ ಉದ್ಯಮಗಳು ಸೇರಿ ಕೆಲಸ ಮಾಡಿದರೆ, ಮುಂಬರುವ ದಿನಗಳಲ್ಲಿ ಭಾರತಕ್ಕೆ ನೂರಾರು ಬಿಲಿಯನ್ ಡಾಲರ್ ವ್ಯವಹಾರ ದೊರೆಯಲಿದೆ.

೫) ಭಾರತದ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಮಹಾತ್ವಾಕಾಂಕ್ಷೆಯ ಯೋಜನೆಗೆ ಪೂರಕವಾಗಿ ಗಗನಯಾತ್ರಿಯಳಿಗೆ ತರಬೇತಿ ನೀಡುವ ಸೌಲಭ್ಯಗಳು ಭಾರತದಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ನಮ್ಮ ದೇಶದಲ್ಲಿ ಇಂತಹ ಸೌಲಭ್ಯಗಳು ಇಲ್ಲದಿರುವುದರಿಂದ, ಭಾರತದ ಗಗನಯಾತ್ರಿಗೆ ತರಬೇತಿಯನ್ನು ರಷ್ಯಾದಲ್ಲಿ ಹೆಚ್ಚು ಹಣ ಕೊಟ್ಟು ಪಡೆಯಬೇಕಾಗಿದೆ. ಮುಂಬರುವ ದಿನಗಳಲ್ಲಿ ವಿದೇಶಗಳಲ್ಲಿರುವ ಸಂಸ್ಥೆಗಳ ಮೇಲೆ ಅವಲಂಬನೆಯಾಗದೆ, ಭಾರತದಲ್ಲೇ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಹೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಹೆಚ್ಎಸ್ಎಫ್ಸಿ)ಯನ್ನು ಇಸ್ರೋ ಸ್ಥಾಪಿಸಿದೆ. ಈ ಸಂಸ್ಥೆಯ ಮೂಲಕ ಅಗತ್ಯವಾದ ಎಲ್ಲಾ ಸೌಲಭ್ಯಗಳು ಭಾರತದಲ್ಲಿ ದೊರೆಯುವಂತೆ ಮಾಢಲು ಅಗತ್ಯವಾದ ತಾಂತ್ರಿಕ ಸಹಯೋಗವನ್ನು ಭಾರತದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ನೀಡುವುದರ ಜೊತೆಗೆ, ಅಗತ್ಯವಾದ ಆರ್ಥಿಕ ನೆರವನ್ನು ಭಾರತ ಸರ್ಕಾರ ನೀಡುವುದು ಅಗತ್ಯವಿದೆ.

೬) ವೃತ್ತಿಪರ ಗಗನಯಾತ್ರಿಗಳು ಮಾತ್ರವಲ್ಲದೆ, ಜನಸಾಮಾನ್ಯರು ಕೂಡಾ ಬಾಹ್ಯಾಕಾಶಯಾನ ಮಾಡಲು ಉತ್ಸಾಹ ಹೊಂದಿದ್ದಾರೆ. ಭೂಮಿಯಿಂದ ಬಾಹ್ಯಾಕಾಶಕ್ಕೆ ಹೋಗಿ, ಕೆಲ ಸಮಯ ಕಳೆದು ಹಿಂತಿರುಗುವಂತಹ ಸ್ಪೇಸ್ ಪ್ರವಾಸ ಪ್ಯಾಕೇಜ್‌ಗಳು ಮುಂಬರುವ ದಿನಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗ ಬಹುದು. ಇಂತಹ ಬಾಹ್ಯಾಕಾಶ ಪ್ರವಾಸೋದ್ಯಮ ಅವಕಾಶಗಳನ್ನು ಭಾರತ ಕೂಡಾ ಪಡೆಯಲು, ಆಸಕ್ತ ಖಾಸಗಿ ಸಂಸ್ಥೆಗಳು ಇಸ್ರೋ ಸಹಾಯ ಪಡೆದು ಕೆಲಸ ಮಾಡಬೇಕಾಗುತ್ತದೆ.

೭) ಈ ಮೊದಲು ೪ ರಿಂದ ೬ ಟನ್ ತೂಕದ ಬಾಹ್ಯಾಕಾಶ ಉಪಗ್ರಹಗಳನ್ನು ನಿರ್ಮಿಸಲು ಹಲವಾರು ವರ್ಷಗಳು ಕೆಲಸ ಮಾಡಬೇಕಾಗುತ್ತಿತ್ತು. ಆದರೆ ಮೈಕ್ರೋ ಎಲ್ಕೆಟ್ರಾನಿಕ್ಸ್ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಮತ್ತು ಆವಿಷ್ಕಾರಗಳಿಂದಾಗಿ, ಇಂತಹ ಉಪಗ್ರಹಗಳನ್ನು ಕಡಿಮೆ ಸಮಯದಲ್ಲಿ ನಿರ್ಮಿಸಲು ಸಾಧ್ಯವಾಗುತ್ತಿದೆ. ಉಪಗ್ರಹ ಉಡಾವಣೆಯಲ್ಲಿ ಬಳಸಲಾಗುವ ಸಾಲಿಡ್ ಅಥವಾ ಲಿಕ್ವಿಡ್ ಪ್ರೋಪೆಲೆಂಟ್ಗಳ ಬದಲಾಗಿ ವಿದ್ಯುತ್ ಆಧಾರಿತ ಪ್ರೋಪೆಲ್ಷನ್ ವ್ಯವಸ್ಥೆಗಳನ್ನು ಬಳಸುವುದು ಜನಪ್ರಿಯವಾಗುತ್ತಿದೆ. ಇಂತಹ ಹೊಸ ತಂತ್ರಜ್ಞಾನ ಮತ್ತು ವಿಧಾನಗಳಲ್ಲಿ ಕೂಡಾ ಇಸ್ರೋ ತನಗಿರುವ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುವುದು ಅಗತ್ಯವಿದೆ.

೮) ಕಡಿಮೆ ತೂಕದ ಆದರೆ ಬಹುಪಯೋಗಿ ಉಪಗ್ರಹಗಳ ಉಡಾವಣೆಗೆ ಅನೇಕ ದೇಶಗಳಿಂದ ಹೆಚ್ಚು ಬೇಡಿಕೆ ಬರುತ್ರಿರುವುದರಿಂದ ೪೦೦ ಕೇಜಿ ತೂಕದ ಉಪಗ್ರಹಗಳ ಉಡಾವಣೆಗೆ ಇಂಡಿಯನ್ ಮಿನಿ ಸ್ಯಾಟಿಲೈಟ್ -೨ (ಐಎಮ್ಎಸ್-೨) ಮತ್ತು ೧೦೦ ಕೇಜಿ ತೂಕದ ಉಪಗ್ರಹಗಳ ಉಡಾವಣೆಗೆ ಐಎಮ್ಎಸ್-೧ ಹೆಸರಿನ ಉಡಾವಣೆ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ಧಿ ಪಡಿಸಿದೆ. ಇದೇ ರೀತಿ ಅನೇಕ ದೇಶಗಳು ೧೦೦ ಕೇಜಿಗಿಂತ ಕಡಿಮೆ ತೂಕವಿರುವ ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳ ಉಡಾವಣೆಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಇಂತಹ ಉಪಗ್ರಹಗಳ ಉಡಾವಣೆಗಾಗಿ ಸ್ಮಾಲ್ ಸೆಟಿಲೈಟ್ ಲಾಂಚ್ ವೆಹಿಕಲ್ (ಎಸ್ಎಸ್ಎಲ್ವಿ)ಯನ್ನು ಇಸ್ರೋ ಅಭಿವೃದ್ಧಿ ಪಡಿಸುತ್ತಿದೆ. ಇಂತಹ ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳ ಉಡಾವಣೆಗೆ ಶ್ರೀಹರಿಕೋಟಾ ಉಪಗ್ರಹ ಉಡಾವಣೆ ಕೇಂದ್ರದ ಬದಲು ಭಾರತದಲ್ಲಿ ಮತ್ತೊಂದು ಕಡೆ ಉಪಗ್ರಹ ಉಡಾವಣೆ ಕೇಂದ್ರವನ್ನು ಸ್ಥಾಪಿಸಲು ಇಸ್ರೋ ಯೋಚಿಸುತ್ತಿದೆ.

೯) ಭಾರತದ ಶಾಲಾಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಈ ಕ್ಷೇತ್ರದಲ್ಲಿ ಭಾರತ ಮಾಡಿರುವ ಸಾಧನೆಯನ್ನು ತಿಳಿಸಿಕೊಳ್ಳಲು ಬಾಲ ವಿಜ್ಞಾನಿಗಳೆಂದು ಯುವಿಕಾ-೨೦೧೯ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ೨ ವಾರಗಳ ಕಾಲ ಇಸ್ರೋದ ವಿವಿಧ ಕೇಂದ್ರಗಳಲ್ಲಿ ಈ ಶಾಲಾ ವಿದ್ಯಾರ್ಥಿಗಳು ವಾಸವಾಗಿದ್ದು, ಹಿರಿಯ ವಿಜ್ಞಾನಿಗಳಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ಭಾರತದ ಸಾಧನೆಯನ್ನು ಕುರಿತು ಕಲಿಯಲಿದ್ದಾರೆ. ಈ ಯೋಜನೆಯಲ್ಲದೆ, ಶಾಲಾ ವಿದ್ಯಾರ್ಥಿಗಳ ಜೊತೆ ಇಸ್ರೋ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳು ಸಂವಾದ ನಡೆಸಲು ಯುವಿಕಾ-ಸಂವಾದ ಹೆಸರಿನ ಕಾರ್ಯಕ್ರಮವನ್ನು ಇಸ್ರೋ ಪ್ರಾರಂಭಿಸಿದೆ. ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಶಾಲಾಮಕ್ಕಳನ್ನು ಆಯ್ಕೆ ಮಾಡಿಕೊಂಡು, ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಸ್ರೋ ಅನುವು ಮಾಡಿಕೊಟ್ಟಿದೆ. ಇದೇ ರೀತಿ ಕರ್ನಾಟಕದಲ್ಲಿರುವ ಪ್ರತಿಯೊಂದು ಶಾಲೆಗಳಲ್ಲಿರುವ ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಭಾರತದ ಸಾಧನೆಯನ್ನು ತಿಳಿಸಿಕೊಡಲು ಶಿಕ್ಷಕರು, ವಿಜ್ಞಾನ ಕ್ಲಬ್‌ಗಳ ಮೂಲಕ ಉಪನ್ಯಾಸ ಮೊದಲಾದ ಚಟುವಟಿಕೆಗಳನ್ನು ನಡೆಸಬಹುದಾಗಿದೆ.

ಬಾಹ್ಯಾಕಾಶ ಸಂಶೋಧನೆಗಾಗಿ ಹಲವಾರು ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಇಂತಹ ಬಾಹ್ಯಾಕಾಶ ತಂತ್ರಜ್ಞಾನಗಳಿಂದ ಜನಸಾಮಾನ್ಯರಿಗೆ ಹೇಗೆ ಪ್ರಯೋಜನವಾಗುತ್ತಿದೆ ಎಂದು ಕೆಲವು ಉದಾಹರಣೆಗಳೊಂದಿಗೆ ತಿಳಿದುಕೊಳ್ಳೋಣ.

  • ೧೯೬೦ರ ದಶಕದಲ್ಲಿ ಅಪೋಲೋ ಹೆಸರಿನ ಚಂದ್ರಯಾನ ಯೋಜನೆ ಯಶಸ್ವಿಯಾಗಲು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ಸೂಕ್ತವಾದ ಪ್ರದೇಶವನ್ನು ಗುರುತಿಸಬೇಕಾಗಿತ್ತು. ಆಗ ಬಳಕೆಯಲ್ಲಿದ್ದ ಉಪಗ್ರಹಗಳಿಂದ ದೊರೆತ ಚಂದ್ರನ ಚಿತ್ರಗಳನ್ನು ಸಂಸ್ಕರಿಸಿ, ಇಳಿಯಲು ಸೂಕ್ತವಾದ ಪ್ರದೇಶವನ್ನು ಗುರುತಿಸಲು, ನಾಸಾದ ವಿಜ್ಞಾನಿಗಳು ಡಿಜಿಟಲ್ ಸಿಗ್ನಲ್ ಪ್ರೋಸೆಸಿಂಗ್ (ಡಿಎಸ್ಪಿ) ಎನ್ನುವ ತಂತ್ರಜ್ಞಾನವನ್ನು ಬಳಸಿದರು. ಬಾಹ್ಯಾಕಾಶ ಯೋಜನೆಯಲ್ಲಿ ಬಳಕೆಯಾದ ಈ ಡಿಎಸ್ಪಿ ತಂತ್ರಜ್ಞಾನ, ಜನಸಾಮಾನ್ಯರ ಆರೋಗ್ಯ ತಪಾಸನೆಗೆ ಬಳಸಲಾಗುವ ಸಿಟಿ ಸ್ಕ್ಯಾನ್ ಮತ್ತು ಎಂ‌ಆರ್‌ಐಗಳಲ್ಲಿ ಬಳಕೆಯಾಗುತ್ತಿದೆ.

  • ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ಅವರಿಗೆ ಅಗತ್ಯವಾದ ನೀರನ್ನು ಒದಗಿಸುವುದು ಹೇಗೆ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಅತ್ಯಾಧುನಿಕ ಫಿಲ್ಟರಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಭೂಮಿಯಿಂದ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾತ್ರಿಗಳಿಗೆ ನೀರು ಪೂರೈಸುವುದು ಸಾಧ್ಯವಿಲ್ಲದಿರುವಾಗ, ಬಾಹ್ಯಾಕಾಶ ನೌಕೆಯಲ್ಲಿ ಬಳಸಿದ ನೀರನ್ನು ಶುದ್ಧೀಕರಿಸಿ, ಕುಡಿಯುವ ನೀರು ಆಗಿ ಪರಿವರ್ತಿಸಲು ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ವಿಶ್ವಾದ್ಯಂತ ತೀವ್ರ ತರಹದ ಮೂತ್ರಪಿಂಡ ಸಮಸ್ಯೆ ಎದುರಿಸುವ ರೋಗಿಗಳು ಬಳಸುವ ಡಯಾಲಿಸೀಸ್ ನಲ್ಲಿ ಕೂಡಾ ಈ ತಂತ್ರಜ್ಞಾನ ಬಳಸಲಾಗುತ್ತಿದೆ.

  • ಭೂಮಿಯಿಂದ ನೂರಾರು ಕೋಟಿ ದೂರದಲ್ಲಿರುವ ನಕ್ಷತ್ರಗಳು ಮತ್ತು ಗ್ರಹಗಳ ತಾಪಮಾನವನ್ನು ಅಳೆಯಲು ವಿಜ್ಞಾನಿಗಳು ಬಳಸುವ ಇನ್ಫ್ರಾರೆಡ್ ತಂತ್ರಜ್ಞಾನವನ್ನು ಬಳಸಿ, ೧೯೯೧ರಲ್ಲಿ ಕಿವಿಯಲ್ಲಿ ಇರಿಸಿ ಮಾನವನ ದೇಹದ ತಾಪಮಾನ ಅಳೆಯಲು ಬಳಸುವ ಥರ್ಮಾಮೀಟರ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಮತ್ತು ಹೆಚ್ಚು ನಿಖಿರವಾಗಿ ಫಲಿತಾಂಶ ನೀಡುವ ಕಿವಿಯಲ್ಲಿ ಇರಿಸಬಹುದಾದ ಥರ್ಮಾಮೀಟರ್ಗಳ ಬಳಕೆ ಜನಪ್ರಿಯವಾಗುತ್ತಿದೆ.

  • ನಾವು ಪ್ರಯಾಣ ಮಾಡುವಾಗ, ಯಾವ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಕಡಿಮೆ ಸಮಯದಲ್ಲಿ ಪ್ರಯಾಣ ಮಾಡಬಹುದು, ಯಾವ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ, ನಾವು ಪ್ರಯಾಣ ಮಾಡುವ ಮಾರ್ಗದಲ್ಲಿ ಎಲ್ಲಿ ಪೆಟ್ರೋಲ್ ಬಂಕ್, ಹೋಟಲ್, ಆಸ್ಪತ್ರೆ, ಪ್ರೇಕ್ಷಣೀಯ ಸ್ಥಳಗಳು, ಮನೋರಂಜನೆ ತಾಣಗಳು ದೊರೆಯುತ್ತವೆ ಎಂದು ಹತ್ತು ಹಲವಾರು ಮಾಹಿತಿಯನ್ನು ನೀಡುವ ಡಿಜಿಟಲ್ ನಕ್ಷೆಗಳು ಜನಪ್ರಿಯವಾಗುತ್ತಿವೆ. ನಗರ ಪ್ರದೇಶಗಳಲ್ಲಿ ಲಭ್ಯವಿರುವ ಓಲಾ, ಊಬರ್ ಗಳಂತಹ ಆಪ್ ಆಧಾರಿತ ಟ್ಯಾಕ್ಸಿ ಅಥವಾ ಆಟೋ ಸೇವೆಗಳಲ್ಲಿ ಕೂಡಾ ಇಂತಹ ಡಿಜಿಟಲ್ ನಕ್ಷೆಗಳನ್ನು ಬಳಸಲಾಗುತ್ತಿದೆ. ಈ ರೀತಿ ಡಿಜಿಟಲ್ ನಕ್ಷೆಗಳ ತಂತ್ರಜ್ಞಾನ ನಮಗೆ ದೊರೆತಿರುವುದು ಕೂಡಾ ಬಾಹ್ಯಾಕಾಶ ಯೋಜನೆಗಳಿಂದ.

  • ಲೇಸರ್ ಬಳಸಿ ಕಣ್ಣಿನ ಸರ್ಜರಿ ಮಾಡುವುದಿರಬಹುದು, ಜನಪ್ರಿಯವಾಗಿರುವ ಡಿಜಿಟಲ್ ಕ್ಯಾಮರಾಗಳಿರಬಹುದು, ಸೇತುವೆ ಮತ್ತು ಸ್ಮಾರಕಗಳು ಹವಾಮಾನ ವೈಪರಿತ್ಯ ಮತ್ತು ಮಾಲಿನ್ಯದಿಂದ ಜಂಗು ತಿಂದು ಹಾಳಾಗದಂತೆ ರಕ್ಷಿಸುವ ಲೇಪನಗಳಿರ ಬಹುದು, ಹೀಗೆ ಬಾಹ್ಯಾಕಾಶ ಸಂಶೋಧನೆಗಾಗಿ ಅಭಿವೃದ್ಧಿಪಡಿಸಲಾದ ಅನೇಕ ತಂತ್ರಜ್ಞಾನಗಳಿಂದ ಜನಸಾಮಾನ್ಯರಿಗೆ ಉಪಯೋಗವಾಗುತ್ತಿದೆ.

ಇಜ್ಞಾನ Ejnana
www.ejnana.com