ಮಕ್ಕಳ ಸಾಹಿತ್ಯ ಬರೆವಣಿಗೆಯಲ್ಲಿ ಇದೊಂದು ನವೀನ ಪ್ರಯೋಗವಾಗಿದೆ
ಮಕ್ಕಳ ಸಾಹಿತ್ಯ ಬರೆವಣಿಗೆಯಲ್ಲಿ ಇದೊಂದು ನವೀನ ಪ್ರಯೋಗವಾಗಿದೆejnana.com

ಇಜ್ಞಾನದ ಹೊಸ ಪ್ರಕಟಣೆ: ಪುಟ್ಟ-ಪುಟ್ಟಿಯ ಪರಿಸರ ಪಾಠಗಳು

ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಬರಹಗಳ ಹೊಸ ಸಂಕಲನ ಇದೀಗ ಇಜ್ಞಾನ ಟ್ರಸ್ಟ್‌ನಿಂದ ಪ್ರಕಟವಾಗಿದೆ. ಬಣ್ಣದ ಚಿತ್ರಗಳಿರುವ ಈ ಪುಟ್ಟ ಪುಸ್ತಕದಲ್ಲಿ ಏನಿದೆ? ಇದನ್ನು ನಾವು ಪ್ರಕಟಿಸಿದ್ದು ಏಕೆ? ಇಜ್ಞಾನ ಟ್ರಸ್ಟ್ ಅಧ್ಯಕ್ಷರ ಮಾತುಗಳು ಇಲ್ಲಿವೆ.

ಇತರ ಎಲ್ಲ ಜೀವಿಗಳಂತೆಯೇ ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದ ಮಾನವ ಆಧುನಿಕತೆಯ ಸುಳಿಗೆ ಸಿಲುಕಿ ತನ್ನ ಮೂಲಾಶ್ರಯವಾದ ಪ್ರಕೃತಿಯಿಂದ ದೂರಸರಿದು ಹಲವು ದಶಕಗಳೇ ಉರುಳಿವೆ. ವರ್ತಮಾನದ ವೈಜ್ಞಾನಿಕ-ತಾಂತ್ರಿಕ ಸೌಲಭ್ಯಗಳನ್ನು ಮುಂದಿಟ್ಟುಕೊಂಡು ತನ್ನ ಸಂಶೋಧನೆಗಳಿಗೆ ತಾನೇ ಬೆನ್ನುತಟ್ಟಿಕೊಳ್ಳುತ್ತಿರುವ ಮನುಷ್ಯನಿಗೆ ಇವೆಲ್ಲ ಸ್ವನಿರ್ಮಿತ ವ್ಯವಸ್ಥೆಗಳು ಸುಲಭಸೌಖ್ಯವನ್ನೂ ಶಾಶ್ವತ ಸಮಸ್ಯೆಗಳನ್ನೂ ಏಕಕಾಲಕ್ಕೆ ಅನುಗ್ರಹಿಸುತ್ತಿರುವುದು ಸ್ವಯಂವೇದ್ಯ. ಈ ಸೌಲಭ್ಯ-ಕಂಟಕಗಳೆಲ್ಲದರ ಮುಂದಿನ ಫಲಾನುಭವಿಗಳಾದ ಎಳೆಯ ಮಕ್ಕಳು ಹೊಸ ಬದುಕಿನ ಸೊಗಸಿಗೂ, ತಮ್ಮಿಂದ ದೂರವೇ ಉಳಿದಿರುವ ನಿಸರ್ಗದ ಅಚ್ಚರಿಗಳಿಗೂ ತೋರುವ ಪ್ರತಿಕ್ರಿಯೆಗಳೇ 'ಪುಟ್ಟ-ಪುಟ್ಟಿಯ ಪರಿಸರ ಪಾಠಗಳು' ಎಂಬ ಕಿರುಪುಸ್ತಕದ ಅಧ್ಯಾಯಗಳಾಗಿ ಮೂಡಿವೆ.

ಎಳೆಯ ಮಕ್ಕಳನ್ನು ಓದುಗರಾಗಿ ಎದುರಿಗೆ ಕೂರಿಸಿಕೊಂಡು ಶ್ರೀನಿಧಿ ಬರೆದಿರುವ ಈ ಕಿರುಹೊತ್ತಿಗೆಯಲ್ಲಿ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಹಂಬಲದಷ್ಟೇ ಪ್ರಾಕೃತಿಕ ಸಂಪರ್ಕದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಕಾಳಜಿಯೂ ಇದೆ. ಗೆದ್ದಲು ಹುತ್ತ, ಹಲ್ಲಿಯ ಪಾದ, ಅಂಟುಮುಳ್ಳು ಮೊದಲಾದ ನೈಸರ್ಗಿಕ ವಿಷಯಗಳು ಇಂದಿನ ಮಕ್ಕಳಿಗೆ ಅಚ್ಚರಿಯ ವಸ್ತುವಾಗಿರುವಂತೆ ವೈಜ್ಞಾನಿಕ ಸಂಶೋಧನೆಗಳಿಗೂ ವಸ್ತುವಾಗಿರುವುದನ್ನು ಲೇಖಕರು ಸರಳಭಾಷೆಯಲ್ಲಿ ವಿವರಿಸಿದ್ದಾರೆ. ಬೀಚಿನಲ್ಲಿ ಪ್ರವಾಸಿಗರು ಬಿಸಾಡಿಹೋದ ಪ್ಲಾಸ್ಟಿಕ್ ಬಾಟಲುಗಳು, ಮದುವೆ ಮನೆಯ ಊಟಕ್ಕೆ ತಂದಿಟ್ಟ ಪ್ಲಾಸ್ಟಿಕ್ ಲೋಟ ಬಟ್ಟಲುಗಳು, ವಾಯುಮಾಲಿನ್ಯ, ಇ-ತ್ಯಾಜ್ಯ ಎಲ್ಲವೂ ತಾವು ಸೃಷ್ಟಿಗೊಂಡಿರುವ ಈ ಜಗತ್ತನ್ನೇ ಹೇಗೆ ನರಕವಾಗಿಸಬಲ್ಲವು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವೂ ಇಲ್ಲಿಯ ಬರೆಹಗಳಲ್ಲಿ ಕಂಡುಬರುತ್ತವೆ.

ಬದಲಾವಣೆಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಸಾಮರ್ಥ್ಯ, ಸುತ್ತಲಿನ ಅಗತ್ಯವನ್ನು ಗ್ರಹಿಸುವ ಸೂಕ್ಷ್ಮತೆ, ಮಹತ್ತರವಾದುದನ್ನು ಸಾಧಿಸುವ ಛಲ, ಸಮಾಜಮುಖಿ ಚಿಂತನೆಯ ಕಳಕಳಿ, ಊಹೆಯನ್ನು ಮೀರಿದ ಪ್ರೌಢತೆ, ಆದರ್ಶ, ಕನಸು, ಕಾರ್ಯಕ್ಷಮತೆ ಎಲ್ಲವೂ ನಮ್ಮ ಮಕ್ಕಳಲ್ಲಿದೆ. ಅದನ್ನು ದೊಡ್ಡವರೂ ಅರಿಯಲಿ ಎಂಬ ಆಶಯದೊಂದಿಗೆ 'ಹಸಿರುವಾಸಿ'ಯಲ್ಲಿ 'ವೈಜ್ಞಾನಿ-ಕತೆ' ಎಂಬ ಮಕ್ಕಳ ಅಂಕಣ ಆರಂಭಿಸುವ ಬಗ್ಗೆ ಯೋಚಿಸಿದಾಗ ನೆನಪಿಗೆ ಬಂದ ಹೆಸರೇ ಟಿ.ಜಿ. ಶ್ರೀನಿಧಿಯವರದ್ದು. ಬಾಲರಿಗೆ ತಿಳಿಸಬಹುದಾದ ಯುಕ್ತ ಭಾಷೆಯಲ್ಲಿ ಅವರು ಮೌಲಿಕ ಸಂಗತಿಗಳನ್ನು ಅತ್ಯಂತ ಪ್ರೌಢವಾಗಿ ಪ್ರಸ್ತುತಪಡಿಸುತ್ತ ಬಂದರು. ಮಕ್ಕಳಷ್ಟೇ ಅಲ್ಲ, ಅವರ ಹೆತ್ತವರ ಕಣ್ಣನ್ನೂ ತೆರೆಸಿದ ಬರಹಗಳು ಇವು. ಅವುಗಳಲ್ಲಿ ಒಂದಷ್ಟು ಆಯ್ದು ಸಂಗ್ರಹರೂಪದಲ್ಲಿ ಮಕ್ಕಳಿಗಾಗಿ ಈ ಹೊತ್ತಗೆಯನ್ನು ಪ್ರಕಟಿಸಿರುವುದು ನಿಜಕ್ಕೂ ಸ್ತುತ್ಯರ್ಹ.

ರಾಧಾಕೃಷ್ಣ ಭಡ್ತಿ, ಸಂಪಾದಕರು, ಹಸಿರುವಾಸಿ

ಪ್ರತಿ ಪ್ರಸಂಗದ ಕೊನೆಯಲ್ಲಿ ಕೊಟ್ಟಿರುವ ಟಿಪ್ಪಣಿ, ಅಭ್ಯಾಸ ಸೂಚಿಗಳು ಪುಸ್ತಕಕ್ಕೆ ಅಧ್ಯಯನದ ಗಾಂಭೀರ್ಯವನ್ನೂ ತಂದುಕೊಟ್ಟಿವೆ. ಮಕ್ಕಳ ಸಾಹಿತ್ಯ ಬರೆವಣಿಗೆಯಲ್ಲಿ ಇದೊಂದು ನವೀನ ಪ್ರಯೋಗವಾಗಿದೆ. ವಿಜ್ಞಾನ ಸಾಹಿತ್ಯವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಲೇಖಕ ಶ್ರೀನಿಧಿಯ ಬರೆಹ ಮತ್ತು ಇಜ್ಞಾನ ಟ್ರಸ್ಟ್‌ನ ಈ ಪ್ರಕಾಶನ ಪ್ರಯತ್ನಗಳು ಸಾರ್ಥಕ ಪ್ರಯೋಗವೆನಿಸಲೆಂದು ಆಶಿಸುತ್ತೇನೆ.

'ನಾಗರತ್ನ ಸ್ಮಾರಕ ಅನುದಾನ'ದ ನೆರವಿನಿಂದ ಇಜ್ಞಾನ ಟ್ರಸ್ಟ್ ಈ ಪುಸ್ತಕವನ್ನು ಪ್ರಕಟಿಸಿದೆ. ತಮ್ಮ ತಾಯಿಯವರ ನೆನಪಿನಲ್ಲಿ ಉದಾರವಾಗಿ ನೀಡಿರುವ ಈ ಅನುದಾನಕ್ಕಾಗಿ ಶ್ರೀಯುತ ತೇಜೇಶ್ ಅವರಿಗೆ ಇಜ್ಞಾನ ಟ್ರಸ್ಟ್ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಪುಸ್ತಕವನ್ನು ಕ್ರಿಯೇಟಿವ್ ಕಾಮನ್ಸ್ ಮುಕ್ತ ಪರವಾನಗಿಯಡಿ ಪ್ರಕಟಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇ-ಪುಸ್ತಕ ರೂಪದಲ್ಲೂ ಪ್ರಕಟವಾಗಲಿದೆ.

ಪುಟ್ಟ-ಪುಟ್ಟಿಯ ಪರಿಸರ ಪಾಠಗಳು

ಲೇಖಕರು: ಟಿ. ಜಿ. ಶ್ರೀನಿಧಿ

ಪ್ರಕಾಶಕರು: ಇಜ್ಞಾನ ಟ್ರಸ್ಟ್, ಬೆಂಗಳೂರು

೪೦ ಪುಟಗಳು, ಬೆಲೆ: ರೂ. ೬೦

ಪುಸ್ತಕ ಕೊಳ್ಳಲು: navakarnatakaonline.com

ಓದಿ, ಓದಿಸಿ!
'ಪುಟ್ಟ-ಪುಟ್ಟಿಯ ಪರಿಸರ ಪಾಠಗಳು' ಪುಸ್ತಕದ ಪ್ರತಿಗಳನ್ನು ನವಕರ್ನಾಟಕ ಪ್ರಕಾಶನದ ಮೂಲಕ ಖರೀದಿಸಬಹುದು. ಅವರ ಆನ್‌ಲೈನ್ ಮಳಿಗೆಯಲ್ಲೂ ಈ ಕೃತಿ ಲಭ್ಯವಿದೆ. ಇದಲ್ಲದೆ ನಮ್ಮ ಹಿಂದಿನ ಪ್ರಕಟಣೆಗಳಂತೆಯೇ ಈ ಪುಸ್ತಕವೂ ಇಜ್ಞಾನ ಟ್ರಸ್ಟ್‌ನ 'ಕಲಿಕೆಗೆ ಕೊಡುಗೆ' ಕಾರ್ಯಕ್ರಮದ ಮೂಲಕ ರಾಜ್ಯದ ಹಲವೆಡೆ ವಿತರಣೆಯಾಗಲಿದೆ. ಅದರ ಜೊತೆಯಲ್ಲಿ ಇನ್ನಷ್ಟು ಮಕ್ಕಳಿಗೂ ಈ ಪುಸ್ತಕವನ್ನು ತಲುಪಿಸುವ ಆಸಕ್ತಿ ಇದ್ದವರು ಹೆಚ್ಚುವರಿ ಪ್ರತಿಗಳನ್ನು ಪ್ರಾಯೋಜಿಸುವ ಮೂಲಕ ನಮ್ಮ ಜೊತೆ ಸೇರಬಹುದು. ಹೆಚ್ಚಿನ ವಿವರಗಳಿಗೆ ಇಮೇಲ್ ಮಾಡಿ: ejnana.trust@gmail.com
ಮಕ್ಕಳ ಸಾಹಿತ್ಯ ಬರೆವಣಿಗೆಯಲ್ಲಿ ಇದೊಂದು ನವೀನ ಪ್ರಯೋಗವಾಗಿದೆ
ಪುಟಾಣಿ ಇಜ್ಞಾನ: ಕಸದ ಸಮಸ್ಯೆಗೆ ರುಚಿಕರ ಪರಿಹಾರ
logo
ಇಜ್ಞಾನ Ejnana
www.ejnana.com