ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ!
ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ!Raghupathi Sringeri

ಪುಟಾಣಿ ಇಜ್ಞಾನ: ಕಸದ ಸಮಸ್ಯೆಗೆ ರುಚಿಕರ ಪರಿಹಾರ

"ತಿಂಡಿ ತಿನ್ನೋದಕ್ಕೂ ಅಂಥದ್ದೇ ಬಟ್ಟಲು - ಚಮಚ ಎಲ್ಲ ಇದ್ರೆ ಎಲ್ಲವನ್ನೂ ಒಟ್ಟಿಗೆ ತಿಂದು ಮುಗಿಸಿ ಎದ್ದು ಹೋಗಬಹುದು. ಕಸವೂ ಆಗಲ್ಲ, ತೊಳೆಯೋ ಯೋಚನೆಯೂ ಇಲ್ಲ!"

ಪುಟ್ಟಿಯ ನೆಂಟರ ಮನೆಯಲ್ಲಿ ಮದುವೆಯ ಸಂಭ್ರಮ. ಆ ಸಂಭ್ರಮದಲ್ಲಿ ಭಾಗಿಯಾಗಲು ಅಮ್ಮನ ಜೊತೆ ಪುಟ್ಟಿಯೂ ಹೋಗಿದ್ದಳು. ಬೆಳಗಿನ ಸಂಭ್ರಮವೆಲ್ಲ ಮುಗಿದು ಹೊಟ್ಟೆ ಹಸಿವು ಶುರುವಾದಾಗ ಅವರಿಬ್ಬರೂ ಊಟದ ಹಾಲ್ ಕಡೆ ಹೋದರು. ಊಟಕ್ಕೆ ತಾನೂ ಬರುವುದಾಗಿ ಹೇಳಿದ್ದ ಅಮ್ಮನ ಸ್ನೇಹಿತೆಗಾಗಿ ಕಾಯುತ್ತ ಅಲ್ಲೇ ಒಂದುಕಡೆ ನಿಂತಿದ್ದರು.

ಊಟದ ಪಂಕ್ತಿ ಆಗಲೇ ಶುರುವಾಗಿತ್ತು. ನೀರಿಗೆ ಒಂದು, ಸೂಪ್‌ಗೆ ಇನ್ನೊಂದು, ಸಿಹಿತಿಂಡಿಗೆ ಮತ್ತೊಂದು ಎಂದುಕೊಂಡು ಎಲ್ಲರ ಎಲೆಯ ಮುಂದೆಯೂ ಪೇಪರ್ ಕಪ್‌ಗಳನ್ನು ಇಡಲಾಗುತ್ತಿತ್ತು. ಸೂಪ್ ಹಾಗೂ ಸಿಹಿತಿಂಡಿಯ ಬಟ್ಟಲುಗಳ ಜೊತೆಗೆ ಪ್ಲಾಸ್ಟಿಕ್ಕಿನ ಚಮಚಗಳೂ ಇದ್ದವು.

"ಎಷ್ಟು ಕಸ ಅಲ್ವಾ?" ಇವರ ಗಮನ ಎಲ್ಲಿದೆಯೆಂದು ನೋಡಿದ ಅಮ್ಮನ ಗೆಳತಿ ಅಮ್ಮನನ್ನು ಕೇಳಿದರು. "ಹೌದು ನೋಡು, ಪೇಪರ್ ಬಟ್ಟಲಲ್ಲೂ ಪ್ಲಾಸ್ಟಿಕ್ಕಿನದೊಂದು ಪದರ ಇರುತ್ತೆ. ಇನ್ನು ಚಮಚ ಅಂತೂ ಪೂರ್ತಿ ಪ್ಲಾಸ್ಟಿಕ್ಕಿನದೇ!" ಅಮ್ಮ ಉತ್ತರಿಸಿದರು.

"ಇದರ ಬದಲು ಸ್ಟೀಲಿನ ಬಟ್ಟಲು - ಚಮಚಗಳನ್ನೇ ಉಪಯೋಗಿಸಬಹುದು. ಅವನ್ನು ಅಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಇಟ್ಟುಕೊಳ್ಳಲು ಕಷ್ಟ ಅಂತಲೋ ತೊಳೆಯುವುದು ತಲೆಬಿಸಿ ಅಂತಲೋ ಎಲ್ಲರಿಗೂ ಪ್ಲಾಸ್ಟಿಕ್ಕೇ ಇಷ್ಟ!" ಅಮ್ಮನ ಗೆಳತಿ ಹೇಳಿದರು, "ಅವತ್ತು ನಿಮ್ಮ ಮನೆ ಕಾರ್ಯಕ್ರಮಕ್ಕೆ ಪ್ಲೇಟ್ ಬ್ಯಾಂಕಿಂದ ತಟ್ಟೆ ಲೋಟ ಎಲ್ಲ ತಂದಿದ್ರಲ್ಲ, ಎಲ್ಲ ಕಡೆಯೂ ಅಂತಹ ವ್ಯವಸ್ಥೆ ಇದ್ದರೆ ಚೆನ್ನಾಗಿರುತ್ತೆ."

"ಅದೇನೋ ಸರಿ. ಒಂದೋ ಅಂತಹ ವ್ಯವಸ್ಥೆ ಆಗಬೇಕು, ಇಲ್ಲದಿದ್ದರೆ ಪ್ಲಾಸ್ಟಿಕ್ ಬದಲು ಬಳಸಲು ಸುಲಭದ ಪರ್ಯಾಯ ಸಿಗಬೇಕು" ಅಮ್ಮ ಹೇಳಿದರು, "ಅಡಕೆ ಹಾಳೆಯ ಬಟ್ಟಲು, ಮರದ ಚಮಚ - ಇವೆಲ್ಲ ಬಳಸೋದಕ್ಕೆ ಮಾತ್ರವೇ ಅಲ್ಲ, ನೋಡೋದಕ್ಕೂ ಚೆಂದ!"

"ಬಳಸಿ ಆದಮೇಲೆ ಅದನ್ನೂ ಎಸೀಬೇಕು ತಾನೇ?" ಪುಟ್ಟಿ ಕೇಳಿದಳು. "ಅದನ್ನೆಲ್ಲ ಬೇರೆಮಾಡಿ ಒಂದುಕಡೆ ಹಾಕಿ, ಅದೆಲ್ಲ ಕೊಳೆತು ಮಣ್ಣಾಗುವುದಕ್ಕೆ ಸುಮಾರು ಸಮಯ ಬೇಕು. ಇದರ ಬದಲು ನನ್ನ ಹತ್ರ ಬೇರೆಯದೇ ಐಡಿಯಾ ಇದೆ!"

"ಏನಪ್ಪಾ ಅದು ಅಂಥಾ ಐಡಿಯಾ?" ಅಮ್ಮನ ಗೆಳತಿ ಕೇಳಿದರು.

"ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಅಲ್ಲಿ ಐಸ್ ಕ್ರೀಮನ್ನು ಕೋನ್ ಒಳಗೆ ಹಾಕಿ ಕೊಟ್ಟಿದ್ರು. ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ. ತಿಂಡಿ ತಿನ್ನೋದಕ್ಕೂ ಅಂಥದ್ದೇ ಬಟ್ಟಲು - ಚಮಚ ಎಲ್ಲ ಇದ್ರೆ ಎಲ್ಲವನ್ನೂ ಒಟ್ಟಿಗೆ ತಿಂದು ಮುಗಿಸಿ ಎದ್ದು ಹೋಗಬಹುದು. ಕಸವೂ ಆಗಲ್ಲ, ತೊಳೆಯೋ ಯೋಚನೆಯೂ ಇಲ್ಲ!" ಪುಟ್ಟಿ ತನ್ನ ಆಲೋಚನೆಯನ್ನು ವಿವರಿಸಿದಳು.

ಪುಟ್ಟಿಯ ಮಾತು ಕೇಳಿದ ಅಮ್ಮ ಮತ್ತವರ ಗೆಳತಿ ಜೋರಾಗಿ ನಕ್ಕರು. "ನಿನಗೆ ಯಾವಾಗಲೂ ಐಸ್‌ಕ್ರೀಮಿನದೇ ಯೋಚನೆ. ಬಾ, ಊಟ ಮಾಡೋಣ. ಆಮೇಲೆ ಯಾವ ಫ್ಲೇವರಿನ ಐಸ್ ಕ್ರೀಮ್ ಕೊಡ್ತಾರೋ ನೋಡ್ತೀಯಂತೆ" ಎನ್ನುತ್ತ ಪುಟ್ಟಿಯನ್ನು ಕರೆದುಕೊಂಡು ಖಾಲಿಯಿದ್ದ ಮೇಜಿನ ಕಡೆಗೆ ಹೊರಟರು.

ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ!
ನಿನ್ನೆ ಸಂಜೆ ಐಸ್ ಕ್ರೀಮ್ ತಿನ್ನಕ್ಕೆ ಹೋಗಿದ್ವಲ್ಲ, ಐಸ್ ಕ್ರೀಮ್ ಜೊತೆ ನಾನು ಆ ಕೋನನ್ನೂ ತಿಂದುಬಿಟ್ಟೆ!Raghupathi Sringeri

ಊಟ-ತಿಂಡಿಗಳ ಸೇವನೆಗಾಗಿ ಬಳಸಲಾಗುವ ಪ್ಲಾಸ್ಟಿಕ್ ಚಮಚ, ಫೋರ್ಕ್ ಮುಂತಾದ ಸಾಧನಗಳು (ಕಟ್ಲೆರಿ) ಆನಂತರ ಕಸಕ್ಕೆ ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಈ ಬಗ್ಗೆ ಗೂಗಲ್ ಮಾಡಿದಾಗ ದೊರಕುವ ಮಾಹಿತಿಯ ಪ್ರಕಾರ, ಅಮೆರಿಕಾ ದೇಶವೊಂದರಲ್ಲೇ ಪ್ರತಿ ದಿನವೂ ಬಳಕೆಯಾಗುವ ಪ್ಲಾಸ್ಟಿಕ್ ಪಾತ್ರೆ ಪಡಗಗಳ ಒಟ್ಟು ಸಂಖ್ಯೆ ಸುಮಾರು ಹತ್ತು ಕೋಟಿಯ ಆಸುಪಾಸಿನಲ್ಲಿದೆಯಂತೆ. ಈ ಪೈಕಿ ದೊಡ್ಡದೊಂದು ಪಾಲು ಪ್ಲಾಸ್ಟಿಕ್ ಕಟ್ಲೆರಿಯದು.

ನಮ್ಮಲ್ಲೂ ಈ ಸಾಧನಗಳ ಬಳಕೆ ವ್ಯಾಪಕವಾಗಿದೆ. ಅಲ್ಲದೆ ಇವು ಮರುಬಳಕೆ ಅಥವಾ ಮರುಸಂಸ್ಕರಣೆಯಾಗುವ ಪ್ರಮಾಣವೂ ಬಹಳ ಕಡಿಮೆಯೇ. ಪ್ಲಾಸ್ಟಿಕ್ ಕಟ್ಲೆರಿ ಬಳಸದಂತೆ ತಿಳಿಹೇಳುವ, ಏಕಬಳಕೆ ಪ್ಲಾಸ್ಟಿಕ್ ಮೇಲೆ ನಿರ್ಬಂಧ ಹೇರುವ ಪ್ರಯತ್ನಗಳು ಅಲ್ಲಲ್ಲಿ ನಡೆದಿದ್ದರೂ ಇವುಗಳ ಬಳಕೆ ಮಾತ್ರ ಇನ್ನೂ ಪೂರ್ತಿಯಾಗಿ ನಿಂತಿಲ್ಲ.

ಐಸ್ ಕ್ರೀಮ್ ಹಾಗೂ ಕೆಲವು ಬಗೆಯ ಚಾಟ್ ಗಳನ್ನು ತಿನ್ನಬಹುದಾದ ಬಟ್ಟಲಿನಲ್ಲಿ ಹಾಕಿಕೊಡುವುದು ನಮಗೆ ಗೊತ್ತೇ ಇದೆ. ಇದೇ ರೀತಿಯಲ್ಲಿ ಚಮಚ ಹಾಗೂ ಫೋರ್ಕ್ ಗಳನ್ನೂ ತಿನ್ನಲಾಗುವ ಪದಾರ್ಥಗಳಿಂದ ರೂಪಿಸಿ ಪ್ಲಾಸ್ಟಿಕ್ ಕಟ್ಲೆರಿಗೆ ಪರ್ಯಾಯವಾಗಿ ಬಳಸುವ, ಕಸದ ಸಮಸ್ಯೆ ಕಡಿಮೆಮಾಡುವ ಆಲೋಚನೆ ಇದೀಗ ಜನಪ್ರಿಯತೆ ಗಳಿಸಿಕೊಳ್ಳುತ್ತಿದೆ.

'ಎಡಿಬಲ್ ಕಟ್ಲೆರಿ' ಎಂದು ಕರೆಸಿಕೊಳ್ಳುವ ಈ ಸಾಧನಗಳನ್ನು ಜೋಳ, ಗೋಧಿ, ಅಕ್ಕಿ ಮುಂತಾದ ಧಾನ್ಯಗಳ ಹಿಟ್ಟಿನಿಂದ ತಯಾರಿಸಲಾಗುತ್ತಿದ್ದು, ಹಲವು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೂ ಪರಿಚಯಿಸಿವೆ. ಯಾವ ಬಗೆಯ ಖಾದ್ಯದೊಡನೆ ಅವು ಬಳಕೆಯಾಗುತ್ತವೆ ಎನ್ನುವುದನ್ನು ಅವಲಂಬಿಸಿ ಈ ಚಮಚಗಳಿಗೆ ಮಸಾಲೆ ಅಥವಾ ಸಿಹಿಯ ರುಚಿಯನ್ನೂ ಸೇರಿಸುವ ಪ್ರಯತ್ನ ಕೂಡ ನಡೆದಿದೆ. ಎಡಿಬಲ್ ಕಟ್ಲೆರಿ ಬಳಸಿದವರು ಒಂದೊಮ್ಮೆ ಅದನ್ನು ತಿನ್ನದೆ ಹಾಗೆಯೇ ಎಸೆದರೂ ಅದು ಇತರೆಲ್ಲ ಆಹಾರ ಪದಾರ್ಥಗಳ ಹಾಗೆ ಸುಲಭವಾಗಿ ಕರಗಿಹೋಗುತ್ತದೆ ಎನ್ನುವುದು ಗಮನಾರ್ಹ.

ಹೋದ ಕಡೆಗೆ ನಮ್ಮದೇ ಸ್ಟೀಲ್ ಕಟ್ಲೆರಿ ಕೊಂಡೊಯ್ಯುವುದು ಬೇರೆಲ್ಲ ಪರ್ಯಾಯಗಳಿಗಿಂತ ಹೆಚ್ಚು ಪರಿಣಾಮಕಾರಿ. ಆ ಅಭ್ಯಾಸ ವ್ಯಾಪಕವಾಗಿ ಬೆಳೆಯುವವರೆಗೆ, ಅಥವಾ ಅದು ಸಾಧ್ಯವಾಗದ ಅನಿವಾರ್ಯ ಸನ್ನಿವೇಶಗಳಲ್ಲಿ ಎಡಿಬಲ್ ಕಟ್ಲೆರಿ ನಮಗೆ ಕಡಿಮೆ ಹಾನಿಕರವಾದ ಮಧ್ಯಮ ಮಾರ್ಗವನ್ನು ಒದಗಿಸಲಿದೆ ಎನ್ನುವುದು ಸದ್ಯದ ನಿರೀಕ್ಷೆ.

ಡಿಸೆಂಬರ್ ೨೦೧೯ರ ಹಸಿರುವಾಸಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com